ಜೀವನದಲ್ಲಿ ಯಶಸ್ವಿಯಾಗಲು ಸ್ಪರ್ಧಾ ಮನೋಭಾವ ಅತ್ಯಗತ್ಯ: ಡಾ.ಗಿರಿಧರ ಕಜೆ
Bengaluru: ಹವ್ಯಕ ಭವನದಲ್ಲಿ ಭಾನುವಾರ 'ಪ್ರತಿಬಿಂಬ' ಸ್ಪರ್ಧಾ ಸೌರಭ ಸಮಾರೋಪ ಸಮಾರಂಭ ನಡೆಯಿತು.
ಬೆಂಗಳೂರು: ಜೀವನವೆಂಬ ಪರೀಕ್ಷೆಯನ್ನು ಎದುರಿಸಲು ನಮ್ಮನ್ನು ನಾವು ಸದಾ ಬಲಿಷ್ಠರಾಗಿರಿಸಿಕೊಳ್ಳಬೇಕು. ಜೀವನದಲ್ಲಿ ಸ್ಪರ್ಧಾ ಮನೋಭಾವವನ್ನು ಹೊಂದಿದ್ದರೆ, ಯಶಸ್ವಿಯಾಗಲು ಸಾಧ್ಯ ಎಂದು ಹವ್ಯಕ ಮಹಾಸಭೆಯ ಅಧ್ಯಕ್ಷ ಡಾ.ಗಿರಿಧರ ಕಜೆ ಹೇಳಿದರು.
ಹವ್ಯಕ ಭವನದಲ್ಲಿ ಭಾನುವಾರ ನಡೆದ ಪ್ರತಿಬಿಂಬ' ಸ್ಪರ್ಧಾ ಸೌರಭ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.
ಇಂದಿನ ಮಕ್ಕಳು ಎಲೆಕ್ಟ್ರಾನಿಕ್ ವಸ್ತುಗಳ ವ್ಯಸನಿಗಳಾಗುತ್ತಿದ್ದು, ಅದನ್ನು ಮೀರಿ ಸ್ಪರ್ಧಾ ಕಾರ್ಯಕ್ರಮದಲ್ಲಿ ಭಾಗವಹಿಸಲು ದೊಡ್ಡ ಸಂಖ್ಯೆಯಲ್ಲಿ ಬಂದಿರುವುದು ಆಶಾದಾಯಕವಾಗಿದೆ. ಮಕ್ಕಳಲ್ಲಿ ಸ್ಪರ್ಧಾ ಮನೋಭಾವವನ್ನು ಬೆಳೆಸಲು ಇಂತಹಾ ಕಾರ್ಯಕ್ರಮಗಳು ಅತ್ಯವಶ್ಯ ಎಂದರು.

ಇಂದು ಭಾರತೀಯರ ಸರಾಸರಿ ವಯಸ್ಸು 29.2 ವರ್ಷಗಳಾಗಿದ್ದು, ಇದನ್ನು ಗಂಭೀರತೆಯಿಂದ ಅರ್ಥೈಸಿಕೊಳ್ಳಬೇಕು. ಕರ್ನಾಟಕದಲ್ಲಿ 15 ರಿಂದ 29 ವರ್ಷದೊಳಗಿನ ಸುಮಾರು 2.1 ಕೋಟಿ ಜನರಿದ್ದಾರೆ. ಇಂದಿನ ಮಧ್ಯವಯಸ್ಕರು ತಮ್ಮ ಶಿಕ್ಷಣ, ವೃತ್ತಿ, ವ್ಯವಹಾರಗಳಲ್ಲಿ ಬಹಳಷ್ಟು ಪ್ರತಿಸ್ಪರ್ಧೆಯನ್ನು ಸಮಾನ ವಯಸ್ಕರಿಂದ ಎದುರಿಸುತ್ತಿದ್ದಾರೆ. ಇನ್ನು ಕೇವಲ ಹತ್ತು ವರ್ಷಗಳಲ್ಲಿ ಇಂದಿನ ಯುವ ಪೀಳಿಗೆ ಕನಿಷ್ಟ ನಾಲ್ಕೈದುಪಟ್ಟು ಹೆಚ್ಚಿನ ಪ್ರತಿಸ್ಪರ್ಧೆಯನ್ನು ತಮ್ಮದೇ ವಯಸ್ಸಿನವರಿಂದ ಎದುರಿಸಲಿದ್ದಾರೆ. ಭವಿಷ್ಯ ಎಂಬುದು ಸುಲಭದ ಹೂವಿನ ಹಾದಿಯಲ್ಲ, ತೀವ್ರಸ್ಪರ್ಧೆ ಕಟ್ಟಿಟ್ಟ ಬುತ್ತಿ. ಅದನ್ನು ಎದುರಿಸಲು ನಾವು ಸಿದ್ಧರಾಗಬೇಕು ಎಂದು ಕಿವಿಮಾತು ಹೇಳಿದರು.
ಡಿಸೆಂಬರ್ 20 ಕ್ಕೆ ಬೃಹತ್ ಮಾತೃ ಸಂಗಮ: ಮಹಿಳಾ ಸಂಘಟನೆಯೆಂದರೆ ಸಮಗ್ರ ಸಮಾಜವನ್ನು ಸಂಘಟಿಸಿದಂತೆ. ಈ ಹಿನ್ನೆಲೆಯಲ್ಲಿ ದೇಶ ವಿದೇಶಗಳ 83 ವಿವಿಧ ಪ್ರಾಂತ್ಯಗಳಲ್ಲಿ ಹವ್ಯಕ ಮಹಿಳಾ ವೇದಿಕೆಯ ರಚನೆ ನಡೆಯುತ್ತಿದ್ದು, ಡಿಸೆಂಬರ್ 20 ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ಬೃಹತ್ ಮಾತೃ ಸಂಗಮ ಕಾರ್ಯಕ್ರಮ ನಡೆಯಲಿದೆ. ಇದು ಮಹಿಳೆಯರ ಸಾಧನೆಯನ್ನು ಸಮಾಜವು ಸಂಭ್ರಮಿಸುವ ಕಾರ್ಯಕ್ರಮವಾಗಿದ್ದು, ಸ್ತ್ರೀ ಶಕ್ತಿಯನ್ನು ಗೌರವಿಸುವ ಅನೇಕ ವಿಶೇಷತೆಗಳು ಇಲ್ಲಿರಲಿವೆ ಎಂದು ಡಾ.ಕಜೆ ಹೇಳಿದರು.

ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ಮೌಲ್ಯಮಾಪನ ವಿಭಾಗದ ಕುಲಸಚಿವ ಡಾ.ರಾಮಕೃಷ್ಣ ಭಟ್ ಕೂಟೇಲು ಮಾತನಾಡಿ, ಬಿಂಬ-ಪ್ರತಿಬಿಂಬ ವಾದವು ಅದ್ವೈತ ವೇದಾಂತದ ಪ್ರಮುಖ ಸಿದ್ಧಾಂತಗಳಲ್ಲಿ ಒಂದಾಗಿದೆ. ಒಂದೇ ಒಂದು ಮೂಲ ಬ್ರಹ್ಮನು ಬೇರೆ ಬೇರೆಯಾಗಿ ಪ್ರತಿಬಿಂಬಗೊಂಡು ಅನೇಕ ಜೀವಿಗಳಾಗಿ ಕಾಣಿಸಿಕೊಳ್ಳುತ್ತಾನೆ ಎಂಬುದು ಈ ಸಿದ್ಧಾಂತವಾಗಿದೆ. ಹಾಗೆಯೇ ಮನುಷ್ಯನ ಹುಟ್ಟು ಸಾವುಗಳ ಬದುಕಿನ ಚಕ್ರವು ಭಗವಂತನ ಆಟ ಎಂಬುದಾಗಿ ಭಾರತೀಯ ತತ್ತ್ವಶಾಸ್ತ್ರಗಳು ಹೇಳುತ್ತವೆ. ಈ 'ಪ್ರತಿಬಿಂಬ' ಸ್ಪರ್ಧಾ ಕಾರ್ಯಕ್ರಮದ ಮೂಲಕವೂ ನಾವು ಭಗವಂತನನ್ನು ಸ್ಮರಿಸಬಹುದು. ಬದುಕಿನಲ್ಲಿ ಬರುವ ಸ್ಪರ್ಧೆಗಳಿಗೆ ಇಂತಹಾ ಸ್ಪರ್ಧೆಗಳು ಸ್ಪೂರ್ತಿಯನ್ನು ತುಂಬುತ್ತವೆ ಎಂದರು.
ರಾಜ್ಯ ಉಚ್ಚ ನ್ಯಾಯಾಲಯದ ಹಿರಿಯ ನ್ಯಾಯವಾದಿ ವಿಘ್ನೇಶ್ವರ ಶಾಸ್ತ್ರಿ ಮಾತನಾಡಿ, ಹವ್ಯಕ ಮಹಾಸಭೆ ಸಮಾಜ ಸಂಘಟನೆಗೆ ಕಳೆದ ಕೆಲವಾರು ವರ್ಷಗಳಿಂದ ವಿಶೇಷ ಒತ್ತು ನೀಡುತ್ತಿದೆ. ಸಮಾಜದಲ್ಲಿ ನಮ್ಮ ಸಂಸ್ಕಾರಗಳನ್ನು ಉಳಿಸಿ ಬೆಳೆಸುವ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದೆ. ಹಳೆ ಬೇರೆ ಹೊಸ ಚಿಗುರು ಸೇರಿದರೆ ಮರ ಸೊಗಸು ಎಂಬಂತೆ ಇಲ್ಲಿ ಹಿರಿಯರ ಜೊತೆಗೆ ಯುವಕರನ್ನು ದೊಡ್ಡ ಸಂಖ್ಯೆಯಲ್ಲಿ ಕಾಣಬಹುದು. ಇದು ಸಮಾಜದ ಭವಿಷ್ಯ ಉಜ್ವಲವಾಗಿದೆ ಎಂಬುದನ್ನು ಸೂಚಿಸುತ್ತದೆ ಎಂದು ತಿಳಿಸಿದರು.
ಇದೇ ವೇಳೆ ಬೆಂಗಳೂರು ನಗರದ 20 ಪ್ರಾಂತ್ಯಗಳ ಹವ್ಯಕ ಮಹಿಳಾ ವೇದಿಕೆಗಳನ್ನು ಉದ್ಘಾಟಿಸಲಾಯಿತು. ಶೈಕ್ಷಣಿಕವಾಗಿ ಸಾಧನೆ ಮಾಡಿದ ಮಕ್ಕಳಿಗೆ 'ಪಲ್ಲವ' ಪುರಸ್ಕಾರ ನೀಡಿ ಅಭಿನಂದಿಸಲಾಯಿತು. ವಿವಿಧ ವಯೋಮಾನಗಳ ವಿಭಾಗಗಳಲ್ಲಿ ನಡೆದ 'ಪ್ರತಿಬಿಂಬ' ಸಾಂಪ್ರದಾಯಿಕ ಸ್ಪರ್ಧೆಗಳಲ್ಲಿ ಬೃಹತ್ ಸಂಖ್ಯೆಯಲ್ಲಿ ಸ್ಪರ್ಧಿಗಳು ಭಾಗವಹಿಸಿದ್ದರು.
ಈ ಕಾರ್ಯಕ್ರಮದಲ್ಲಿ ಮಹಾಸಭೆಯ ಉಪಾಧ್ಯಕ್ಷ ಶ್ರೀಧರ ಜೆ ಭಟ್ಟ ಕೆಕ್ಕಾರು, ಪ್ರಧಾನ ಕಾರ್ಯದರ್ಶಿ ಸಿಎ ವೇಣುವಿಘ್ನೇಶ ಸಂಪ, ಕಾರ್ಯದರ್ಶಿಗಳಾದ ಪ್ರಶಾಂತ ಭಟ್ ಮಲವಳ್ಳಿ, ಆದಿತ್ಯ ಹೆಗಡೆ ಕಲಗಾರು, ಕೋಶಾಧಿಕಾರಿ ಕೃಷ್ಣಮೂರ್ತಿ ಭಟ್ ಯಲಹಂಕ, ದೀಪಕ ಹೆಗಡೆ ಗೋಳಿಕೈ, ಹರ್ಷ ಹೆಗಡೆ ಕೊಂಡದಕುಳಿ ಹಾಗೂ ಮಧುರಾ ಗಾಂವ್ಕಕರ್ ಪಾಲ್ಗೊಂಡಿದ್ದರು.