UGNEET-26: ವೈದ್ಯಕೀಯ ಮತ್ತು ದಂತ ವೈದ್ಯಕೀಯ ಕೋರ್ಸ್‌ನ ಸ್ಟ್ರೇ ವೇಕೆನ್ಸಿ-4 ಸುತ್ತಿನ ಸೀಟು ಹಂಚಿಕೆ ಫಲಿತಾಂಶ ಪ್ರಕಟ
UGNEET-26: ಯುಜಿನೀಟ್-26ರ ವೈದ್ಯಕೀಯ ಮತ್ತು ದಂತ ವೈದ್ಯಕೀಯ ಪದವಿ ಕೋರ್ಸ್‌ನ ಸ್ಟ್ರೇ ವೇಕೆನ್ಸಿ-4 ಸುತ್ತಿನ ಸೀಟು ಹಂಚಿಕೆಯ ಫಲಿತಾಂಶವನ್ನು ಕೆಇಎ ಇಂದು ಪ್ರಕಟಿಸಿದೆ.
ಬೆಂಗಳೂರು: ಯುಜಿನೀಟ್-26ರ ವೈದ್ಯಕೀಯ ಮತ್ತು ದಂತ ವೈದ್ಯಕೀಯ ಪದವಿ ಕೋರ್ಸ್‌ನ ಸ್ಟ್ರೇ ವೇಕೆನ್ಸಿ-4 ಸುತ್ತಿನ ಸೀಟು ಹಂಚಿಕೆಯ ಫಲಿತಾಂಶವನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ಇಂದು ಪ್ರಕಟಿಸಿದೆ. ಏಳು ಸುತ್ತುಗಳ ಕೌನ್ಸೆಲಿಂಗ್ ನಂತರವು 191 ವೈದ್ಯಕೀಯ ಸೀಟು ಹಂಚಿಕೆಯಾಗದೆ ಉಳಿದಿವೆ.
ದಂತ ವೈದ್ಯಕೀಯ ಸೀಟು ಸಂಪೂರ್ಣ ಹಂಚಿಕೆಯಾಗಿದ್ದು, ಯಾವೊಂದು ಸೀಟು ಉಳಿಕೆಯಾಗಿಲ್ಲ.
ಈ ಮೂಲಕ 2026ನೇ ಸಾಲಿನ ವೈದ್ಯಕೀಯ/ದಂತ ವೈದ್ಯಕೀಯ ಕೋರ್ಸ್‌ಗಳ ಸೀಟು ಹಂಚಿಕೆ ಪ್ರಕ್ರಿಯೆ ಕೊನೆಯಾದಂತಾಗಿದೆ.
ಸ್ಟ್ರೇ ವೇಕೆನ್ಸಿ-2 ಸುತ್ತಿನ ನಂತರವು, ಭಾನುವಾರ ಒಟ್ಟು 273 ವೈದ್ಯಕೀಯ ಸೀಟು ಉಳಿದಿತ್ತು. ಆ ಬಳಿಕ ಆಪ್ಷನ್ಸ್ ಎಂಟ್ರಿ ದಾಖಲಿಸಲು ಕೊನೆ ಅವಕಾಶ ನೀಡಿ ಇಂದು ಎರಡು ಪ್ರತ್ಯೇಕ ಸ್ಟ್ರೇ ವೇಕೆನ್ಸಿ ಸುತ್ತಿನ ಕೌನ್ಸೆಲಿಂಗ್ ನಂತರ ಒಟ್ಟು 84 ವೈದ್ಯಕೀಯ ಸೀಟು ಹಂಚಿಕೆಯಾಗಿವೆ.
ಈ ವರ್ಷ ಒಟ್ಟಾರೆ ಏಳು ಸುತ್ತಿನ ಸೀಟು ಹಂಚಿಕೆ ಮಾಡಿ ದಾಖಲೆ ಬರೆದಂತಾಗಿದೆ. ಇತ್ತೀಚಿನ ವರ್ಷಗಳಲ್ಲಿ ಇಷ್ಟೊಂದು ಸಂಖ್ಯೆಯ ಸುತ್ತುಗಳಲ್ಲಿ ಸೀಟು ಹಂಚಿಕೆ ಮಾಡಿದ್ದು ಇದೇ ಮೊದಲು.
ಎಂಸಿಸಿ ಆದೇಶಾನುಸಾರ ವೈದ್ಯಕೀಯ ಮತ್ತು ದಂತ ವೈದ್ಯಕೀಯ ಕೋರ್ಸ್ ಪ್ರವೇಶಕ್ಕೆ ಇಂದು ಕೊನೆ ದಿನವಾದ ಕಾರಣ ಪೋಷಕರು/ಅಭ್ಯರ್ಥಿಗಳ ಕೋರಿಕೆ ಮೇರೆಗೆ ಒಂದೇ ದಿನ ಎರಡು ಪ್ರತ್ಯೇಕ ಸುತ್ತಿನ ಸೀಟು ಹಂಚಿಕೆ ಮಾಡಿ ಅಭ್ಯರ್ಥಿಗಳಿಗೆ ಅನುಕೂಲ ಮಾಡಲಾಯಿತು.
ಉಳಿಕೆ ಸೀಟುಗಳ ಹಂಚಿಕೆಗೆ ಎಂಸಿಸಿ ಮತ್ತೆ ಅವಕಾಶ ನೀಡಿದರೆ ಮುಂದುವರಿದ ಸುತ್ತುಗಳನ್ನು ಮಾಡಿ, ಸೀಟು ಹಂಚಿಕೆ ಮಾಡಲಾಗುವುದು ಎಂದು ಕೆಇಎ ತಿಳಿಸಿದೆ.