ನೂರು ಸರ್ಕಾರಿ ಶಾಲೆಗಳಿಗೆ ಪುಸ್ತಕ ವಿತರಣೆ: ನ.2 ರಂದು ಕಾರ್ಯಕ್ರಮ

Kumta: ನ.2 ರಂದು ನೂರು ಸರ್ಕಾರಿ ಪ್ರಾಥಮಿಕ ಶಾಲೆಗಳಿಗೆ ಪುಸ್ತಕ ವಿತರಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.

Oct 27, 2026 - 12:50
Oct 27, 2026 - 12:54
ನೂರು ಸರ್ಕಾರಿ ಶಾಲೆಗಳಿಗೆ ಪುಸ್ತಕ ವಿತರಣೆ: ನ.2 ರಂದು ಕಾರ್ಯಕ್ರಮ
ಗಣಪತಿ ಮ ಭಟ್ಟ

ಕುಮಟಾ: ಸರ್ಕಾರಿ ಶಾಲೆಗಳ ಗ್ರಂಥಾಲಯಗಳನ್ನು ಬಲಪಡಿಸಿ, ವಿದ್ಯಾರ್ಥಿಗಳಲ್ಲಿ ಓದುವ ಹವ್ಯಾಸ ಬೆಳೆಸುವ ಉದ್ದೇಶದಿಂದ ಮಹಾದೇವ ಮಾಸ್ತರ ಮದ್ಗುಣಿ ಸೇವಾ ಪ್ರತಿಷ್ಠಾನ, ಮದ್ಗುಣಿ ಮತ್ತು ಬೆಂಗಳೂರಿನ ಇಜ್ಞಾನ ಟ್ರಸ್ಟ್ ಸಹಯೋಗದಲ್ಲಿ ಕುಮಟಾ ತಾಲೂಕಿನ ನೂರು ಸರ್ಕಾರಿ ಪ್ರಾಥಮಿಕ ಶಾಲೆಗಳಿಗೆ ಪುಸ್ತಕ ವಿತರಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
 
ನ.2 ರಂದು ಮಧ್ಯಾಹ್ನ 3 ಗಂಟೆಗೆ ಕುಮಟಾ ತಾಲೂಕು ಪಂಚಾಯತಿ ಸಭಾಭವನದಲ್ಲಿ ಈ ಕಾರ್ಯಕ್ರಮ ನಡೆಯಲಿದೆ. ಕುಮಟಾ–ಹೊನ್ನಾವರ ಕ್ಷೇತ್ರದ ಶಾಸಕ ದಿನಕರ ಶೆಟ್ಟಿ ಅಧ್ಯಕ್ಷತೆ ವಹಿಸಲಿದ್ದಾರೆ. ತಾಲೂಕು ಪಂಚಾಯತಿ ಕಾರ್ಯನಿರ್ವಹಣಾಧಿಕಾರಿ ರಾಜೇಂದ್ರ ಎಲ್ ಭಟ್ಟ ಮತ್ತು ಕ್ಷೇತ್ರ ಶಿಕ್ಷಣಾಧಿಕಾರಿ ಉದಯ ನಾಯ್ಕ ವಿಶೇಷ ಆಹ್ವಾನಿತರಾಗಿ ಭಾಗವಹಿಸಲಿದ್ದಾರೆ.
 
ಕರಾವಳಿ ಚುಟುಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ರವೀಂದ್ರ ಭಟ್ಟ ಸೂರಿ, ಇಜ್ಞಾನ ಟ್ರಸ್ಟ್ ಅಧ್ಯಕ್ಷ ಹಾಗೂ ಖ್ಯಾತ ಲೇಖಕ ಟಿ.ಎಸ್.ಗೋಪಾಲ ಹಾಗೂ ಬಿಎಸ್‌ಎನ್‌ಎಲ್‌ನ ನಿವೃತ್ತ ಡಿಜಿಎಂ ಗಣಪತಿ ಮ ಭಟ್ಟ ಉಪಸ್ಥಿತರಿರಲಿದ್ದಾರೆ.
ಎಂಟು ವರ್ಷಗಳಿಂದ ನಿರಂತರ ಸಮಾಜಸೇವೆ: 
 
ಮಹಾದೇವ ಮಾಸ್ತರ ಮದ್ಗುಣಿ ಸೇವಾ ಪ್ರತಿಷ್ಠಾನವು ಕಳೆದ ಎಂಟು ವರ್ಷಗಳಿಂದ ವಿವಿಧ ಸಾಮಾಜಿಕ ಹಾಗೂ ಶೈಕ್ಷಣಿಕ ಸೇವಾ ಕಾರ್ಯಗಳನ್ನು ನಡೆಸಿಕೊಂಡು ಬರುತ್ತಿದೆ. ಈಗಾಗಲೇ ಕುಮಟಾ ತಾಲೂಕಿನ ನೂರು ಸರ್ಕಾರಿ ಶಾಲೆಗಳಿಗೆ ಸುಮಾರು ಒಂದೂವರೆ ಲಕ್ಷ ರೂಪಾಯಿಗೂ ಅಧಿಕ ಮೌಲ್ಯದ ಕನ್ನಡ ಕಲಿಕಾ ಪುಸ್ತಕಗಳನ್ನು ವಿತರಿಸಿದೆ.
 
ಇದೀಗ ಮೂರನೇ ಪುಸ್ತಕ ವಿತರಣಾ ಕಾರ್ಯಕ್ರಮದ ಅಂಗವಾಗಿ ನೂರು ಸರ್ಕಾರಿ ಶಾಲೆಗಳಿಗೆ ತಲಾ ಎಂಟು ಪುಸ್ತಕಗಳನ್ನು ವಿತರಿಸಲು ಉದ್ದೇಶಿಸಲಾಗಿದೆ. ಈ ಯೋಜನೆಗೆ ಸುಮಾರು ಒಂದು ಲಕ್ಷ ರೂಪಾಯಿ ವೆಚ್ಚವಾಗಲಿದೆ.
 
ಅಲ್ಲದೆ, ಹೆಚ್ಚಿನ ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ನಗದು ಬಹುಮಾನ ನೀಡಿ ಪ್ರೋತ್ಸಾಹಿಸುವುದು, ಕಲೆ ಮತ್ತು ಕಲಾವಿದರನ್ನು ಗೌರವಿಸುವುದು, ಬಡ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಆರ್ಥಿಕ ನೆರವು ನೀಡುವುದು ಹಾಗೂ ತುರ್ತು ಚಿಕಿತ್ಸೆಯ ಅಗತ್ಯವಿರುವ 20ಕ್ಕೂ ಹೆಚ್ಚು ಮಂದಿಗೆ ಹಣಕಾಸಿನ ಸಹಾಯ ಒದಗಿಸುವಂತಹ ಹಲವು ಜನಪರ ಕಾರ್ಯಗಳನ್ನು ಪ್ರತಿಷ್ಠಾನ ಕೈಗೊಂಡಿದೆ.
 
ಶಾಲೆಗಳ ಶೈಕ್ಷಣಿಕ ಮತ್ತು ಬೌದ್ಧಿಕ ಬೆಳವಣಿಗೆಗೆ ಪೂರಕವಾಗಿರುವ ಈ ಕಾರ್ಯಕ್ರಮದಲ್ಲಿ ಶಿಕ್ಷಕರು, ಹಿತೈಷಿಗಳು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸುವಂತೆ ಪ್ರತಿಷ್ಠಾನದ ಸಂಚಾಲಕರಾದ ಗಣಪತಿ ಮ ಭಟ್ಟ ಮನವಿ ಮಾಡಿದ್ದಾರೆ.

ಸಂಜಯ್ ಅಂಬೇಕರ್ ವಿವಿಧ ಮಾಧ್ಯಮ ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದು, 9 ವರ್ಷ ಅನುಭವವನ್ನು ಹೊಂದಿದ್ದೇನೆ. ಸದ್ಯ 'ಡೇ2ಡೇ ನ್ಯೂಸ್'ನಲ್ಲಿ ಕೆಲಸ ಮಾಡುತ್ತಿದ್ದೇನೆ.