ಮಂಗಳೂರು: ತುಳುನಾಡಿನ ನಂಬಿಕೆ, ಪ್ರಕೃತಿ ಮತ್ತು ಸಂಸ್ಕೃತಿಯ ಸೊಗಡನ್ನು ಸಸ್ಪೆನ್ಸ್ ಕಥಾನಕದ ಮೂಲಕ ತೆರೆದಿಡುವ 'ಬನ' ತುಳು ಚಲನಚಿತ್ರ ಅಕ್ಟೋಬರ್ 23ರಂದು ಕರಾವಳಿಯಾದ್ಯಂತ ತೆರೆಕಾಣಲಿದೆ.
ಈಶಿ ಪ್ರೊಡಕ್ಷನ್ ಲಾಂಛನದಲ್ಲಿ ಮನೋಹರ್ ರೈ ವೆಹಾಲ ನಿರ್ಮಿಸಿರುವ ಈ ಚಿತ್ರಕ್ಕೆ ನಿತಿನ್ ರೈ ಕುಕ್ಕುವಳ್ಳಿ ನುಳಿಯಾಲು ನಿರ್ದೇಶನವಿದೆ. ಈ ಸಿನಿಮಾದ ಬಿಡುಗಡೆ ಕುರಿತು ನಿರ್ಮಾಪಕ ಮನೋಹರ್ ರೈ ಹಾಗೂ ನಿರ್ದೇಶಕ ನಿತಿನ್ ರೈ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಮಂಗಳೂರು, ಸುರತ್ಕಲ್, ಪಡುಬಿದ್ರೆ, ಉಡುಪಿ, ಮಣಿಪಾಲ, ಕಾರ್ಕಳ, ದೇರಳಕಟ್ಟೆ, ಪುತ್ತೂರು, ಸುಳ್ಯ ಮತ್ತು ಬೆಳ್ತಂಗಡಿ ಸೇರಿದಂತೆ ಕರಾವಳಿಯ ವಿವಿಧ ಕೇಂದ್ರಗಳಲ್ಲಿ ಈ ಚಿತ್ರವು ಬಿಡುಗಡೆಯಾಗಲಿದೆ. ಈಗಾಗಲೇ ಮುಂಬೈ ಮತ್ತು ಪುತ್ತೂರಿನಲ್ಲಿ ನಡೆದ ಪ್ರೀಮಿಯರ್ ಪ್ರದರ್ಶನಗಳಿಗೆ ಪ್ರೇಕ್ಷಕರಿಂದ ಮೆಚ್ಚುಗೆ ವ್ಯಕ್ತವಾಗಿದೆ.
ನಾಗಬನದ ನಿಗೂಢತೆಯ ಸುತ್ತ ಕಥೆ:
'ನಮ್ಮ ಮಣ್ಣ ಕಥೆ' ಎಂಬ ಟ್ಯಾಗ್‌ಲೈನ್ ಹೊಂದಿರುವ 'ಬನ' ಚಿತ್ರವು ತುಳುನಾಡಿನ ನಂಬಿಕೆ ಮತ್ತು ನಾಗಬನದ ಮಹತ್ವವನ್ನು ವಿಭಿನ್ನವಾಗಿ ಪರಿಚಯಿಸಲಿದೆ. ಕಾಡಿನ ನಿಗೂಢತೆ, ಕಾಡಿನಲ್ಲಿ ಕಂಡುಬಂದ ಮಗುವಿನ ಹಿನ್ನೆಲೆ, ಮನೆಯ ಮುಂದೆ ಹಾವು ಕಾಣಿಸಿಕೊಳ್ಳುವ ಘಟನೆ ಹಾಗೂ ಬನಕ್ಕೆ ಹಾನಿ ಮಾಡಿದವರನ್ನು ಕಾಡಲು ನಾಗರಾಜನೇ ಬಂದನೇ ಎಂಬ ಕುತೂಹಲಕಾರಿ ಪ್ರಶ್ನೆಗಳು ಚಿತ್ರದ ಕಥನಕ್ಕೆ ಸಸ್ಪೆನ್ಸ್‌ನ ಸ್ಪರ್ಶ ನೀಡಿವೆ.
ಆ್ಯಕ್ಷನ್, ಥ್ರಿಲ್ಲರ್, ಸಸ್ಪೆನ್ಸ್ ಮತ್ತು ರೊಮ್ಯಾನ್ಸ್ ಜತೆಗೆ ಹಾಸ್ಯ, ಪ್ರೀತಿ, ಸಿಡುಕು, ಭಾವನಾತ್ಮಕ ಸನ್ನಿವೇಶಗಳು ಹಾಗೂ ಸಾಮಾಜಿಕ ಸಂದೇಶವೂ ಚಿತ್ರದಲ್ಲಿದೆ. ಚಿತ್ರದ ಟ್ರೇಲರ್ ಪ್ರೇಕ್ಷಕರಲ್ಲಿ ನಿರೀಕ್ಷೆ ಮತ್ತು ಕುತೂಹಲ ಮೂಡಿಸಿದೆ.
ಈ ಹಿಂದೆ ಧರ್ಮಚಾವಡಿ, ಧರ್ಮದೈವ ಮೊದಲಾದ ಚಿತ್ರಗಳನ್ನು ನಿರ್ದೇಶಿಸಿರುವ ನಿತಿನ್ ರೈ ಕುಕ್ಕುವಳ್ಳಿ, ವಿಭಿನ್ನ ಕಥಾವಸ್ತುವಿನ ಮೂಲಕ ಪ್ರೇಕ್ಷಕರನ್ನು ಸೆಳೆಯುವ ಪ್ರಯತ್ನ ಮಾಡಿದ್ದಾರೆ. ನಾಗಬನದ ಕುರಿತಾದ ಕಥೆಯನ್ನು ತೆರೆಗೆ ತರಲು ಸುಮಾರು ಒಂದು ವರ್ಷದ ಸಿದ್ಧತೆ ನಡೆಸಲಾಗಿದೆ ಎಂದು ಚಿತ್ರತಂಡ ತಿಳಿಸಿದೆ.
ಅನುಭವಿ ಕಲಾವಿದರ ತಾರಾಗಣ:
ಖ್ಯಾತ ಪತ್ರಕರ್ತ ಜಯಪ್ರಕಾಶ್ ಶೆಟ್ಟಿ ಉಪ್ಪಳ ಮತ್ತು ರಾಷ್ಟ್ರಪ್ರಶಸ್ತಿ ಪುರಸ್ಕೃತೆ ರೂಪ ವರ್ಕಾಡಿ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಜಯಪ್ರಕಾಶ್ ಶೆಟ್ಟಿ ಅವರ ಖಡಕ್ ಸಂಭಾಷಣೆಗಳು ಚಿತ್ರದ ವಿಶೇಷ ಆಕರ್ಷಣೆಗಳಲ್ಲೊಂದಾಗಿವೆ. ನಿಹಾಲ್ ರೈ ನಾಯಕನಾಗಿ ನಟಿಸಿದ್ದು, ಕೃತಿ ಶ್ರೀನಿವಾಸ್ ಪೂಜಾರಿ ನಾಯಕಿಯಾಗಿ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ್ದಾರೆ.
ಉಳಿದಂತೆ ಶರತ್ ಆಳ್ವ, ಪ್ರಿಯಾ ಶೆಟ್ಟಿ, ವಿಜಯಹರಿ ರೈ, ವಿಕಾಸ್ ಪುತ್ರನ್, ನಿಜರೂಪ ಶೆಟ್ಟಿ, ಸವಿತಾ ಅಂಚನ್, ಧನ್ಯ ಪೂಜಾರಿ ಮತ್ತು ಪ್ರವೀಣ್ ಕೊಡಕ್ಕಲ್ ಸೇರಿದಂತೆ ಹಲವು ಕಲಾವಿದರು ಅಭಿನಯಿಸಿದ್ದಾರೆ.
ಪ್ರತಿಭಾವಂತ ತಾಂತ್ರಿಕ ತಂಡ:
ಚಿತ್ರಕ್ಕೆ ಅರುಣ್ ರೈ ಪುತ್ತೂರು ಛಾಯಾಗ್ರಹಣ, ನವೀನ್ ನೇರಳ್ಕಟ್ಟೆ ಸಂಕಲನ ಹಾಗೂ ಖ್ಯಾತ ಸಂಗೀತ ನಿರ್ದೇಶಕ ಜಯಕಾರ್ತಿಕ್ ಸಂಗೀತ ನೀಡಿದ್ದಾರೆ. ಹಿನ್ನೆಲೆ ಸಂಗೀತವೂ ಚಿತ್ರದ ಕಥೆಯ ತೀವ್ರತೆ ಮತ್ತು ಕುತೂಹಲವನ್ನು ಹೆಚ್ಚಿಸುವಲ್ಲಿ ಪ್ರಮುಖ ಪಾತ್ರ ವಹಿಸಲಿದೆ ಎಂದು ಚಿತ್ರತಂಡ ವಿಶ್ವಾಸ ವ್ಯಕ್ತಪಡಿಸಿದೆ.
ಸುದ್ದಿಗೋಷ್ಠಿಯಲ್ಲಿ ಜಯಪ್ರಕಾಶ್ ಶೆಟ್ಟಿ ಉಪ್ಪಳ, ಅರುಣ್ ರೈ ಪುತ್ತೂರು, ಕೃತಿ ಶ್ರೀನಿವಾಸ್ ಪೂಜಾರಿ, ನಿಹಾಲ್ ರೈ, ಸವಿತಾ ಅಂಚನ್ ಮತ್ತು ಭವ್ಯಶ್ರೀ ಪೂಜಾರಿ ಉಪಸ್ಥಿತರಿದ್ದರು.