ಮಂಗಳೂರು: ಇಲ್ಲಿನ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸಮಗ್ರ ಅಣಕು ಕಾರ್ಯಾಚರಣೆ (Integrated Mock Exercise) ಶುಕ್ರವಾರ ಬೆಳಗ್ಗೆ 9:55 ರಿಂದ ಮಧ್ಯಾಹ್ನದವರೆಗೆ ನಡೆಯಲಿದೆ. ಈ ಬಾರಿ ವಿಮಾನ ನಿಲ್ದಾಣದ ಹೊರಭಾಗದಲ್ಲಿ ಸಂಭವಿಸುವ ವಿಮಾನ ಅಪಘಾತದ ಸನ್ನಿವೇಶವನ್ನು ಆಧರಿಸಿ, ಅಣಕು ಕಾರ್ಯಾಚರಣೆ ಜರುಗಲಿದೆ.
ಅಣಕು ಕಾರ್ಯಾಚರಣೆಯ ಭಾಗವಾಗಿ, ವಿಮಾನ ದುರಂತ ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ತುರ್ತು ಪರಿಹಾರ ಕಾರ್ಯಾಚರಣೆಯ ಪರಿಣಾಮಕಾರಿ ಅನುಷ್ಠಾನ ನಡೆಯಲಿದೆ.
ವಿಮಾನ ನಿಲ್ದಾಣದ ಆವರಣದೊಳಗಿನ ತುರ್ತು ಪರಿಸ್ಥಿತಿಗಿಂತ ಭಿನ್ನವಾಗಿ, ಈ ಬಾರಿ ವಿಮಾನ ನಿಲ್ದಾಣದ ಗಡಿಗೆ ಹೊಂದಿಕೊಂಡಿರುವ ಸಮತಟ್ಟಾದ ಹೊರ ಪ್ರದೇಶದಲ್ಲಿ ವಿಮಾನ ಅಪಘಾತ ಸಂಭವಿಸಿದ ಸನ್ನಿವೇಶವನ್ನು ಸೃಷ್ಟಿಸಲಾಗುತ್ತದೆ.
ಈ ಅಣಕು ಕಾರ್ಯಾಚರಣೆ ಭಾಗವಾಗಿ ವಿಮಾನ ನಿಲ್ದಾಣಕ್ಕೆ ಆಗಮಿಸುವ ರಸ್ತೆಗಳಲ್ಲಿ ಅಗ್ನಿಶಾಮಕ ದಳ, ಪೊಲೀಸ್, ಅಂಬ್ಯುಲೆನ್ಸ್‍ಗಳ ಓಡಾಟ ಇರಲಿದೆ. ಸಂತ್ರಸ್ತರನ್ನು, ಗಾಯಾಳುಗಳಿಗೆ ತುರ್ತು ಚಿಕಿತ್ಸೆ ನೀಡಲು ನಗರದ ಎಜೆ ಆಸ್ಪತ್ರೆ, ಫಾದರ್ ಮುಲ್ಲರ್ ಆಸ್ಪತ್ರೆ, ವೆನ್‍ಲಾಕ್ ಆಸ್ಪತ್ರೆಗಳಿಗೆ ಕರೆದೊಯ್ಯಲಾಗುವುದು.
ಈ ಸಂದರ್ಭದಲ್ಲಿ ವಿಮಾನ ನಿಲ್ದಾಣದಿಂದ ಈ ಆಸ್ಪತ್ರೆಗಳಿಗೆ ಹೋಗುವ ರಸ್ತೆಗಳನ್ನು ಗ್ರೀನ್ ಕಾರಿಡಾರ್ ಆಗಿ ಪರಿವರ್ತಿಸಿ, ವಾಹನ ಸಂಚಾರವನ್ನು ನಿರ್ಬಂಧಿಸಲಾಗುವುದು. ಇದರಿಂದ ರಾಷ್ಟ್ರೀಯ ಹೆದ್ದಾರಿ ಮತ್ತು ನಗರದ ಕೆಲವು ರಸ್ತೆಗಳಲ್ಲಿ ಸಂಚಾರದಲ್ಲಿ ವ್ಯತ್ಯಯವಾಗಲಿದೆ. ಸಾರ್ವಜನಿಕರು ಈ ಸಂದರ್ಭದಲ್ಲಿ ಸಹಕರಿಸಲು ಜಿಲ್ಲಾಡಳಿತದ ಪ್ರಕಟಣೆಯಲ್ಲಿ ತಿಳಿಸಿದೆ.