ಮಂಗಳೂರು: ಸಂವಿಧಾನ ದಿನ, ಯುವ ಸಂವಾದ
Mangaluru: ಎಸ್‌ಡಿಎಂ ಕಾನೂನು ಕಾಲೇಜಿನಲ್ಲಿ ಗುರುವಾರ ಸಂವಿಧಾನ ದಿನದ ಅಂಗವಾಗಿ 'ವಿಕಸಿತ ಭಾರತ ಯುವ ಸಂವಾದ' ಕಾರ್ಯಕ್ರಮ ನಡೆಯಿತು.
ಮಂಗಳೂರು: ನಗರದ ಧರ್ಮಸ್ಥಳ ಮಂಜುನಾಥೇಶ್ವರ (ಎಸ್‌ಡಿಎಂ) ಕಾನೂನು ಕಾಲೇಜಿನಲ್ಲಿ ಗುರುವಾರ ಸಂವಿಧಾನ ದಿನದ ಅಂಗವಾಗಿ 'ವಿಕಸಿತ ಭಾರತ ಯುವ ಸಂವಾದ' ಕಾರ್ಯಕ್ರಮ ನಡೆಯಿತು. ಕ್ರೀಡಾ ಸಚಿವಾಲಯದ ಅಧೀನದಲ್ಲಿರುವ ‘ಮೈ ಭಾರತ್’ ದಕ್ಷಿಣ ಕನ್ನಡ ಘಟಕದ ಸಹಯೋಗದಲ್ಲಿ ಈ ಸಮಾರಂಭವನ್ನು ಏರ್ಪಡಿಸಲಾಗಿತ್ತು.
ಹಿರಿಯ ವಕೀಲ ಕೆ.ಪಿ.ವಾಸುದೇವ ರಾವ್ ಸಂವಿಧಾನ ದಿನದ ಕುರಿತು ವಿಶೇಷ ಉಪನ್ಯಾಸ ನೀಡಿ, ಭಾರತೀಯ ಸಂವಿಧಾನದ ಮಹತ್ವ ಹಾಗೂ 'ವಿಕಸಿತ ಭಾರತ' ನಿರ್ಮಾಣದಲ್ಲಿ ಪ್ರಜಾಪ್ರಭುತ್ವ ಮೌಲ್ಯಗಳು ಯುವಜನತೆಯನ್ನು ಸಶಕ್ತಗೊಳಿಸುವ ಕುರಿತು ಮೌಲ್ಯಯುತ ವಿಚಾರಗಳನ್ನು ಹಂಚಿಕೊಂಡರು.
ಪದ್ಮಶ್ರೀ ಪುರಸ್ಕೃತ 'ಅಕ್ಷರ ಸಂತ' ಹರೇಕಳ ಹಾಜಬ್ಬ ಮುಖ್ಯ ಅತಿಥಿಗಳಾಗಿ ಆಗಮಿಸಿ, ರಾಷ್ಟ್ರ ನಿರ್ಮಾಣದ ಪಯಣದಲ್ಲಿ ನಿಸ್ವಾರ್ಥ ಹಾಗೂ ಸಹಜ ನಾಯಕತ್ವವನ್ನು ಮೈಗೂಡಿಸಿಕೊಳ್ಳುವಂತೆ ವಿದ್ಯಾರ್ಥಿಗಳಿಗೆ ಪ್ರೇರಣೆ ನೀಡಿದರು.
ಯುವ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯದಿಂದ 'ಯೂತ್ ಐಕಾನ್' ಆಗಿ ನಾಮನಿರ್ದೇಶನಗೊಂಡಿರುವ ಡಾ.ಎಲ್.ಎಸ್.ರಾವ್ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು.
ಕಾಲೇಜಿನ ಹಿರಿಯ ಪ್ರಾಧ್ಯಾಪಕ ಮಹೇಶ್‍ಚಂದ್ರ ನಾಯಕ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. 'ಮೈ ಭಾರತ್' ದಕ್ಷಿಣ ಕನ್ನಡ ಘಟಕದ ಉಪನಿರ್ದೇಶಕ ಉಲ್ಲಾಸ್ ಕೆ.ಟಿ.ಕೆ ಅವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ, ರಾಷ್ಟ್ರೀಯ ಸೇವಾ ಯೋಜನೆಯ (ಎನ್ಎಸ್ಎಸ್) 'ಅತ್ಯುತ್ತಮ ಸ್ವಯಂಸೇವಕ ರಾಜ್ಯ ಪ್ರಶಸ್ತಿ'ಗೆ ಭಾಜನರಾದ ಎಸ್‌ಡಿಎಂ ಬ್ಯುಸಿನೆಸ್ ಮ್ಯಾನೇಜ್‍ಮೆಂಟ್ ಕಾಲೇಜಿನ ವಿದ್ಯಾರ್ಥಿ ಹೃಷಿಕೇಶ್ ಅವರನ್ನು ಸನ್ಮಾನಿಸಲಾಯಿತು.
ಅನಘಾ ಶೆಟ್ಟಿ ಸ್ವಾಗತಿಸಿದರು. ಹಿಯಾ ಬಿ ಹೆಗ್ಡೆ ವಂದಿಸಿದರು. ಈಡನ್ ರೆಬೆಕ್ಕಾ ಕಾರ್ಯಕ್ರಮವನ್ನು ನಿರೂಪಿಸಿದರು.