ಪುತ್ತೂರು: ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಪ್ರವರ್ತಿತ ಬಪ್ಪಳಿಗೆಯ ಅಂಬಿಕಾ ವಿದ್ಯಾಲಯದ ಸಿಬಿಎಸ್‌ಇ ಸಂಸ್ಥೆಯಲ್ಲಿ ಆರ್ಟ್ ಆಫ್ ಲಿವಿಂಗ್ ಪುತ್ತೂರು ಘಟಕದ ವತಿಯಿಂದ, 'ಸಹಜ ಸಮಾಧಿ ಧ್ಯಾನ ಯೋಗ' ಶಿಬಿರ ನಡೆಯಿತು.
ಅಷ್ಟಾಂಗ ಯೋಗದ ಅತ್ಯಂತ ಆಳವಾದ ಸ್ಥಿತಿಯಾದ 'ಸಮಾಧಿ'ಯನ್ನು ಸರಳವಾಗಿ ನಿತ್ಯ ಜೀವನದಲ್ಲಿ ಅನುಭವಿಸಲು ಸಹಕಾರಿಯಾಗುವ ಈ ಶಿಬಿರವನ್ನು ಆರ್ಟ್ ಆಫ್ ಲಿವಿಂಗ್‌ನ ಅಂತರರಾಷ್ಟ್ರೀಯ ಶಿಕ್ಷಕ ಯಾದವ ಜಿ ನಡೆಸಿಕೊಟ್ಟರು. ಶಿಬಿರದಲ್ಲಿ 88 ಮಂದಿ ಭಾಗವಹಿಸಿ ಧ್ಯಾನದ ವಿಧಾನಗಳನ್ನು ಕಲಿತುಕೊಂಡರು.
ಮಂಗಳೂರಿನ ರಜನಿ ರೈ ಸಹಾಯಕ ಶಿಕ್ಷಕಿಯಾಗಿ ಸಹಕರಿಸಿದರು. ಸಹಜ ಸಮಾಧಿ ಧ್ಯಾನ ಕಲಿಸಲು ತರಬೇತಿ ಪಡೆಯುತ್ತಿರುವ ಶರಾವತಿ, ರವಿ ನಾರಾಯಣ, ಆರ್ಟ್ ಆಫ್ ಲಿವಿಂಗ್ ಪುತ್ತೂರಿನ ಮುಖ್ಯಸ್ಥ ಕುಮಾರ ಸುಬ್ರಹ್ಮಣ್ಯ ಭಟ್, ಸತ್ಯವತಿ ಕೆ.ಎಸ್, ಸುಧಾ ಹೆಬ್ಬಾರ್, ಭಾರತಿ ಜಯರಾಮ್ ಹಾಗೂ ಸಂಸ್ಥೆಯ ಸ್ವಯಂಸೇವಕರು ಶಿಬಿರದ ಯಶಸ್ಸಿಗೆ ನೆರವಾದರು.
ಸಮಾರೋಪ ಸಮಾರಂಭದಲ್ಲಿ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಸುಬ್ರಹ್ಮಣ್ಯ ನಟ್ಟೋಜ ಭಾಗವಹಿಸಿ, ಶಿಬಿರಾರ್ಥಿಗಳಿಗೆ ಪ್ರೇರಣೆ ನೀಡಿದರು.