ಪುತ್ತೂರು: ಡಿ.12 & 13 ರಂದು ಐತಿಹಾಸಿಕ ಗಿರಿಜಾ ಕಲ್ಯಾಣೋತ್ಸವ

Puttur: ಪುತ್ತೂರಿನಲ್ಲಿ ಡಿ.12 ಹಾಗೂ 13 ರಂದು ಐತಿಹಾಸಿಕ ಗಿರಿಜಾ ಕಲ್ಯಾಣೋತ್ಸವ ನಡೆಯಲಿದೆ.

Nov 20, 2026 - 17:24
Nov 20, 2026 - 18:44
ಪುತ್ತೂರು: ಡಿ.12 & 13 ರಂದು ಐತಿಹಾಸಿಕ ಗಿರಿಜಾ ಕಲ್ಯಾಣೋತ್ಸವ

ಪುತ್ತೂರು: ಇಲ್ಲಿನ ಶ್ರೀ ಮಹತೋಭಾರ ಮಹಾಲಿಂಗೇಶ್ವರ ದೇವಸ್ಥಾನದ ದೇವರಮಾರು ಗದ್ದೆಯಲ್ಲಿ, ಡಿ.12 ಮತ್ತು 13 ರಂದು ಐತಿಹಾಸಿಕ ಗಿರಿಜಾ ಕಲ್ಯಾಣೋತ್ಸವವು ನಡೆಯಲಿದೆ. ಸಾಮೂಹಿಕ ವಿವಾಹ, ಲಕ್ಷ ಬಿಲ್ವಾರ್ಚನೆ, ಕೇಸರಿ ಸಂಗಮ ಸೇರಿದಂತೆ ಹಲವು ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿದೆ ಎಂದು ಪುತ್ತಿಲ ಪರಿವಾರ ಸೇವಾ ಟ್ರಸ್ಟ್‌ನ ಸಂಚಾಲಕ ಅರುಣ್ ಕುಮಾರ್ ಪುತ್ತಿಲ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ 3 ವರ್ಷಗಳಿಂದ ಶ್ರೀನಿವಾಸ ಕಲ್ಯಾಣೋತ್ಸವವನ್ನು ಶ್ರದ್ಧಾಭಕ್ತಿಯಿಂದ ಆಯೋಜಿಸಲಾಗುತ್ತಿತ್ತು. ಇದೀಗ, ಮೊದಲ ಬಾರಿಗೆ ಸಾರ್ವಜನಿಕ ಗಿರಿಜಾ ಕಲ್ಯಾಣೋತ್ಸವವನ್ನು ಏರ್ಪಡಿಸಲಾಗುತ್ತಿದೆ. ಇದು ಧಾರ್ಮಿಕ ಕ್ಷೇತ್ರದಲ್ಲಿ ವಿಶೇಷ ಮಹತ್ವ ಹೊಂದಿದೆ. ಹಿಂದೂ ಸಮಾಜದ ಧಾರ್ಮಿಕ ಶಕ್ತಿಯನ್ನು ಸಂಘಟಿಸುವುದು. ಸಾಮಾಜಿಕ ಒಗ್ಗಟ್ಟನ್ನು ಬಲಪಡಿಸುವುದು ಮತ್ತು ಸರಳ ವಿವಾಹಕ್ಕೆ ಉತ್ತೇಜನ ನೀಡುವುದು ಈ ಕಾರ್ಯಕ್ರಮದ ಪ್ರಮುಖ ಆಶಯವಾಗಿದೆ ಎಂದರು.

ಡಿ.11ರಂದು ಶೋಭಾಯಾತ್ರೆ:

ಅಂದು ಸಂಜೆ 4 ಗಂಟೆಗೆ ಪುತ್ತೂರಿನ ದರ್ಬೆ ವೃತ್ತದಿಂದ ಭವ್ಯ ಶೋಭಾಯಾತ್ರೆ ಆರಂಭವಾಗಿ, ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಸಂಪನ್ನಗೊಳ್ಳಲಿದೆ. ಎರಡು ದಿನಗಳ ಉತ್ಸವದಲ್ಲಿ ಲಕ್ಷಾಂತರ ಭಕ್ತರಿಗೆ ಅನ್ನಸಂತರ್ಪಣೆಯ ವ್ಯವಸ್ಥೆ ಮಾಡಲಾಗಿದೆ. ಕಳೆದ ವರ್ಷಗಳಂತೆ ಈ ಬಾರಿಯೂ ಪುತ್ತೂರಿನ ಜನತೆ ಗ್ರಾಮೀಣ ಪ್ರದೇಶಗಳಿಂದ ಅಕ್ಕಿ, ತರಕಾರಿ ಸೇರಿದಂತೆ ಅಗತ್ಯ ಸಾಮಗ್ರಿಗಳನ್ನು ನೀಡಿ, ಸಹಕಾರ ನೀಡುವ ನಿರೀಕ್ಷೆಯಿದೆ ಎಂದು ಹೇಳಿದರು.

ಡಿ.12 ರಂದು ಲಕ್ಷ ಬಿಲ್ವಾರ್ಚನೆ & ಕೇಸರಿ ಸಂಗಮ: 

ಬೆಳಗ್ಗೆ 6.30ಕ್ಕೆ ಗಣಹೋಮದೊಂದಿಗೆ ಧಾರ್ಮಿಕ ಕಾರ್ಯಕ್ರಮಗಳು ಆರಂಭವಾಗಲಿವೆ. ಭಜನಾ ಕಾರ್ಯಕ್ರಮಗಳ ಬಳಿಕ ಬೆಳಗ್ಗೆ 10.30ರ ಸುಮಾರಿಗೆ ಬ್ರಹ್ಮಶ್ರೀ ಕುಂಟಾರು ರವೀಶ ತಂತ್ರಿಗಳ ಉಪಸ್ಥಿತಿ ಮತ್ತು ಗುರುತಂತ್ರಿಗಳ ನೇತೃತ್ವದಲ್ಲಿ ಲಕ್ಷ ಬಿಲ್ವಾರ್ಚನೆ ನಡೆಯಲಿದೆ. ಆ ಬಳಿಕ ಮಹಾಪೂಜೆ, ಕಲಶಾಭಿಷೇಕ ಹಾಗೂ ಅನ್ನಸಂತರ್ಪಣೆ ಜರುಗಲಿವೆ. ಸಂಜೆ 4 ಗಂಟೆಯವರೆಗೆ ನಿರಂತರ ಭಜನಾ ಕಾರ್ಯಕ್ರಮಗಳು ನಡೆಯಲಿವೆ ಎಂದು ತಿಳಿಸಿದರು.

ಸಂಜೆ 4.30ಕ್ಕೆ ಬೋಳುವಾರಿನಿಂದ ಶಿವ-ಪಾರ್ವತಿಯರ ವಿಗ್ರಹದ ಭವ್ಯ ಶೋಭಾಯಾತ್ರೆ ಹೊರಟು, ದೇವಸ್ಥಾನದ ಮಂಟಪವನ್ನು ತಲುಪಲಿದೆ. ನಂತರ ಕೇಸರಿ ಸಂಗಮ ಕಾರ್ಯಕ್ರಮ ನಡೆಯಲಿದ್ದು, ಸುಮಾರು 12 ಮಂದಿ ಸಂತರ ಉಪಸ್ಥಿತಿಯಲ್ಲಿ ಧಾರ್ಮಿಕ ಸಭೆ ಮತ್ತು ಧರ್ಮ ಸಂದೇಶ ಕಾರ್ಯಕ್ರಮ ಜರುಗಲಿದೆ ಎಂದರು.

ಇದೇ ಸಂದರ್ಭದಲ್ಲಿ ಕೇರಳದ ಖ್ಯಾತ 'ಸಿಂಧು ಭೈರವಿ' ಭಜನಾ ತಂಡದಿಂದ ಪುತ್ತೂರಿನಲ್ಲಿ ಪ್ರಥಮ ಬಾರಿಗೆ ವಿಶೇಷ ಭಜನಾ ಕಾರ್ಯಕ್ರಮ ಆಯೋಜಿಸಲಾಗಿದೆ. ಕಾಶಿಯ ಗಂಗಾರತಿ ಮಾದರಿಯಲ್ಲಿ ವೈದಿಕರಿಂದ ಶಿವಾರತಿ ನಡೆಯಲಿದ್ದು, ಕಲ್ಯಾಣೋತ್ಸವಕ್ಕೆ ಪೂರಕವಾದ ವಿವಿಧ ಧಾರ್ಮಿಕ ವಿಧಿವಿಧಾನಗಳು ನೆರವೇರಲಿವೆ ಎಂದು ಹೇಳಿದರು.

ಡಿ.13ರಂದು ಸಾಮೂಹಿಕ ವಿವಾಹ & ಗಿರಿಜಾ ಕಲ್ಯಾಣೋತ್ಸವ: 

ಸರಳ ವಿವಾಹಕ್ಕೆ ಪ್ರೋತ್ಸಾಹ ನೀಡುವ ಉದ್ದೇಶದಿಂದ ಡಿ.13ರಂದು ಬೆಳಗ್ಗೆ 10.30ರಿಂದ ಮಧ್ಯಾಹ್ನ 12.30ರ ಶುಭಮುಹೂರ್ತದಲ್ಲಿ ಸಾಮೂಹಿಕ ವಿವಾಹ ನಡೆಯಲಿದೆ. ಈಗಾಗಲೇ 12 ಜೋಡಿಗಳು ನೋಂದಾಯಿಸಿಕೊಂಡಿದ್ದು, ನವೆಂಬರ್ 30ರವರೆಗೆ ನೋಂದಣಿಗೆ ಅವಕಾಶ ಕಲ್ಪಿಸಲಾಗಿದೆ ಎಂದು ತಿಳಿಸಿದರು.

ವಿವಾಹವಾಗುವ ಜೋಡಿಗಳಿಗೆ ಮಾಂಗಲ್ಯ, ಕಾಲುಂಗುರ, ವಸ್ತ್ರ ಸೇರಿದಂತೆ ಅಗತ್ಯ ವಿವಾಹ ಸಾಮಗ್ರಿಗಳನ್ನು ಸಮಿತಿಯ ವತಿಯಿಂದ ಒದಗಿಸುವ ವ್ಯವಸ್ಥೆ ಮಾಡಲಾಗಿದೆ. ವಿವಾಹದ ಪೂರ್ವಭಾವಿಯಾಗಿ ನಿಶ್ಚಿತಾರ್ಥ ಕಾರ್ಯಕ್ರಮವೂ ನಡೆಯಲಿದ್ದು, ವಧು-ವರರ ಎರಡೂ ಕಡೆಯ ಕುಟುಂಬಸ್ಥರು ಭಾಗವಹಿಸಲು ಅವಕಾಶ ಕಲ್ಪಿಸಲಾಗಿದೆ ಎಂದರು.

ಮಧ್ಯಾಹ್ನ ಮಹಾಪೂಜೆ ಹಾಗೂ ಅನ್ನಸಂತರ್ಪಣೆಯ ಬಳಿಕ, ಮಧ್ಯಾಹ್ನ 2 ಗಂಟೆಯಿಂದ 200ಕ್ಕೂ ಅಧಿಕ ಭಜನಾ ಮತ್ತು ಕುಣಿತ ಭಜನಾ ತಂಡಗಳ ಪಾಲ್ಗೊಳ್ಳುವಿಕೆಯಲ್ಲಿ ಭಜನೋತ್ಸವ ನಡೆಯಲಿದೆ. ಸಂಜೆ 4.30 ರಿಂದ ಗಿರಿಜಾ ಕಲ್ಯಾಣೋತ್ಸವದ ಪ್ರಮುಖ ಧಾರ್ಮಿಕ ಕಾರ್ಯಕ್ರಮಗಳು ಆರಂಭವಾಗಲಿದ್ದು, ರಾತ್ರಿ 8.30ರ ಸುಮಾರಿಗೆ ಶಿವಾರತಿ ಹಾಗೂ ಸುಡುಮದ್ದು ಪ್ರದರ್ಶನದೊಂದಿಗೆ ಕಾರ್ಯಕ್ರಮ ಸಂಪನ್ನಗೊಳ್ಳಲಿದೆ. ಆ ಬಳಿಕ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಲಿದೆ ಎಂದು ಹೇಳಿದರು. 

ಪಕ್ಷಾತೀತವಾಗಿ, ಜಾತ್ಯತೀತವಾಗಿ ಸಮಾಜದ ಒಗ್ಗಟ್ಟಿಗೆ ಒತ್ತು: 

ಧಾರ್ಮಿಕ ಕಾರ್ಯಕ್ರಮಗಳ ಮೂಲಕ ಸಮಾಜವನ್ನು ಒಗ್ಗೂಡಿಸುವ ಪ್ರಯತ್ನ ಇದಾಗಿದೆ. ಪಕ್ಷಾತೀತವಾಗಿ ಹಾಗೂ ಜಾತ್ಯತೀತವಾಗಿ ಇಡೀ ಹಿಂದೂ ಸಮಾಜಕ್ಕೆ ಹೊಸ ಚೈತನ್ಯ ನೀಡುವ ಉದ್ದೇಶದಿಂದ ಉತ್ಸವವನ್ನು ರೂಪಿಸಲಾಗಿದೆ. ಧಾರ್ಮಿಕ ಆಚರಣೆಗಳ ಮಹತ್ವವನ್ನು ಜೀವನದಲ್ಲಿ ಅಳವಡಿಸಿಕೊಳ್ಳುವ ಜೊತೆಗೆ, ಸಮಾಜದ ಸವಾಲುಗಳನ್ನು ಒಗ್ಗಟ್ಟಿನಿಂದ ಎದುರಿಸುವ ಸಂಕಲ್ಪವನ್ನು ಬೆಳೆಸಿಕೊಳ್ಳಬೇಕು. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಬೇಕು ಎಂದು ಅರುಣ್ ಕುಮಾರ್ ಪುತ್ತಿಲ ಮನವಿ ಮಾಡಿದರು.

ಕಳೆದ ಮೂರು ವರ್ಷಗಳಲ್ಲಿ ಮಾಧ್ಯಮಗಳು ನೀಡಿದ ಸಹಕಾರ ಕಾರ್ಯಕ್ರಮಗಳ ಯಶಸ್ಸಿಗೆ ಪ್ರಮುಖ ಪ್ರೇರಣೆಯಾಗಿದೆ. ಮುಂದಿನ ದಿನಗಳಲ್ಲಿಯೂ ಟ್ರಸ್ಟ್ ವತಿಯಿಂದ ನಡೆಯುವ ಸಾಮಾಜಿಕ ಹಾಗೂ ಧಾರ್ಮಿಕ ಚಟುವಟಿಕೆಗಳಿಗೆ ಮಾಧ್ಯಮಗಳು ಬೆಂಬಲ ನೀಡಬೇಕು ಎಂದು ಅವರು ವಿನಂತಿಸಿದರು.

ಈ ವೇಳೆ ಗಿರಿಜಾ ಕಲ್ಯಾಣೋತ್ಸವ ಸಮಿತಿಯ ಗೌರವಾಧ್ಯಕ್ಷ ಮೋನಪ್ಪ ಪುರುಷ ಮುಗೆರಡ್ಕ, ಅಧ್ಯಕ್ಷ ಡಾ.ಅಖಿಲೇಶ್ ಪಾಣಾಜೆ, ಕಾರ್ಯಾಧ್ಯಕ್ಷ ಅನಿಲ್ ಕುಮಾರ್ ಕಣ್ಣಾರ್ನೋಜಿ, ಪ್ರಧಾನ ಕಾರ್ಯದರ್ಶಿ ಅನಿಲ್ ಕುಮಾರ್ ತೆಂಕಿಲ, ಪುತ್ತಿಲ ಪರಿವಾರ ಸೇವಾ ಟ್ರಸ್ಟ್‌ನ ಅಧ್ಯಕ್ಷ ಶ್ರೀರಾಮ್ ಭಟ್ ಪಾತಾಳ, ಸೀತಾ ಪರಿವಾರದ ಅಧ್ಯಕ್ಷ ಪ್ರೇಮ ಹಾಗೂ ಆಮಂತ್ರಣ ಸಮಿತಿ ಸಂಚಾಲಕ ರವಿ ಕುಮಾರ್ ರೈ ಉಪಸ್ಥಿತರಿದ್ದರು.

ಡೇ2ಡೇ ನ್ಯೂಸ್ ಬ್ಯೂರೋ Day2day News ನವ ಮಾಧ್ಯಮದ ವೃತ್ತಿಪರ ಡಿಜಿಟಲ್‌ ಮಾಧ್ಯಮ ಸಂಸ್ಥೆ. ವೆಬ್‌ ನ್ಯೂಸ್‌ ಪೋರ್ಟಲ್‌ನಿಂದ ಹಿಡಿದು ಇನ್‌ಸ್ಟಾ, ಎಕ್ಸ್, ಫೇಸ್‌ಬುಕ್‌, ಯೂಟ್ಯೂಬ್‌, ನ್ಯೂಸ್‌ ಆಪ್‌ವರೆಗೆ ಎಲ್ಲ ಡಿಜಿಟಲ್‌ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ - ಮಾಹಿತಿಯನ್ನು ಸರಳ, ಸಂಕ್ಷಿಪ್ತವಾಗಿ ನೀಡುತ್ತದೆ. ಜತೆಗೆ Day2day Short News ಕರ್ನಾಟಕದ ಮೊದಲ ಶಾರ್ಟ್‌ ಆಪ್‌. Swipe ಮಾಡಿ ಸುದ್ದಿ ಓದಿ. ನಮ್ಮ ಎಲ್ಲ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ & ಜಾಹೀರಾತು ನೀಡಲು 7070708646ಗೆ ಸಂಪರ್ಕಿಸಿ.