ಪುತ್ತೂರಿನ ಹೆಸರಿಗೆ ಕಳಂಕ ಬೇಡ: ಟಿಕೆಟ್ ಹಂಚಿಕೆ ವಿವಾದದ ಸಮಗ್ರ ತನಿಖೆಗೆ ಅರುಣ್ ಕುಮಾರ್ ಪುತ್ತಿಲ ಒತ್ತಾಯ
Arun Kumar Puthila: ಪುತ್ತೂರಿನ ಹೆಸರಿಗೆ ಕಳಂಕ ಬೇಡ. ಟಿಕೆಟ್ ಹಂಚಿಕೆ ವಿವಾದದ ಸಮಗ್ರ ತನಿಖೆಗೆ ಅರುಣ್ ಕುಮಾರ್ ಪುತ್ತಿಲ ಒತ್ತಾಯಿಸಿದ್ದಾರೆ.
ಪುತ್ತೂರು: ದಕ್ಷಿಣ ಕನ್ನಡ ಜಿಲ್ಲೆಯ 'ಪುತ್ತೂರು' ವಿಧಾನಸಭಾ ಕ್ಷೇತ್ರಕ್ಕೆ ತನ್ನದೇಯಾದ ರಾಜಕೀಯ ಇತಿಹಾಸವಿದೆ. ಸ್ವಾಭಿಮಾನಿ ಮತದಾರರು, ರಾಜಕೀಯ ಜಾಗೃತಿ & ಹೋರಾಟದ ಪರಂಪರೆಯನ್ನು ಹೊಂದಿರುವ ಪುತ್ತೂರು ಇಂದು ಟಿಕೆಟ್ ಹಂಚಿಕೆಗೆ ಸಂಬಂಧಿಸಿದ ವಿವಾದದ ಹಿನ್ನೆಲೆ, ಸುದ್ದಿಯಾಗುತ್ತಿರುವುದು ಆತಂಕಕಾರಿ ಬೆಳವಣಿಗೆ. ಪುತ್ತೂರಿನ ರಾಜಕೀಯ ಘನತೆಗೆ ಧಕ್ಕೆ ತರುವಂತಹ ಯಾವುದೇ ಬೆಳವಣಿಗೆ ನಡೆದಿದ್ದರೆ, ಅದರ ಸತ್ಯಾಸತ್ಯತೆ ಜನರ ಮುಂದೆ ಬರಲೇಬೇಕು ಎಂದು ಪುತ್ತಿಲ ಪರಿವಾರದ ಮುಖಂಡ ಅರುಣ್ ಕುಮಾರ್ ಪುತ್ತಿಲ ಒತ್ತಾಯಿಸಿದ್ದಾರೆ.
ಪಕ್ಷದ ಟಿಕೆಟ್ ಪಡೆಯುವುದು ರಾಜಕೀಯ ಪಕ್ಷಗಳ ಆಂತರಿಕ ಪ್ರಕ್ರಿಯೆ. ಅದನ್ನು ಮೀರಿಯೂ ನಡೆಯುತ್ತದೆ. ಇದು ಪಕ್ಷಗಳ ಸೋಲಿಗೆ ಕಾರಣವು ಆಗಿರುತ್ತದೆ. ಆದರೆ, ಆ ಪ್ರಕ್ರಿಯೆಯ ಬಗ್ಗೆ ಗಂಭೀರ ಅನುಮಾನಗಳು ಮೂಡಿದಾಗ, ಅವುಗಳಿಗೆ ಸ್ಪಷ್ಟನೆ ನೀಡುವುದು ಸಂಬಂಧಪಟ್ಟವರ ಜವಾಬ್ದಾರಿ. ಕಾರ್ಯಕರ್ತರ ಬೆಂಬಲ, ಜನರ ವಿಶ್ವಾಸ ಮತ್ತು ಪಕ್ಷದ ಸಂಘಟನಾತ್ಮಕ ಶಕ್ತಿಗಿಂತ ಬೇರೆ ಯಾವುದಾದರೂ ಪ್ರಭಾವಗಳು ಟಿಕೆಟ್ ನಿರ್ಧಾರದಲ್ಲಿ ಪಾತ್ರವಹಿಸಿವೆಯೇ ಎಂಬ ಪ್ರಶ್ನೆಗಳಿಗೆ ಊಹಾಪೋಹಗಳ ಮೂಲಕವಲ್ಲ, ಪಾರದರ್ಶಕ ತನಿಖೆಯ ಮೂಲಕ ಉತ್ತರ ಸಿಗಬೇಕು ಎಂದು ಅವರು ಹೇಳಿದ್ದಾರೆ.
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹೆಸರನ್ನು ಒಳಗೊಂಡ ಸ್ಟಿಂಗ್ ಆಪರೇಷನ್ ಪ್ರಕರಣದ ಸುತ್ತ ಕೇಳಿಬರುತ್ತಿರುವ ಹೇಳಿಕೆಗಳು ಹಾಗೂ ಆರೋಪಗಳು ಪುತ್ತೂರಿನ ರಾಜಕೀಯದ ಬಗ್ಗೆಯೂ ಪ್ರಶ್ನೆಗಳನ್ನು ಹುಟ್ಟುಹಾಕಿವೆ. 2011ರಲ್ಲಿ ನಡೆದಿತ್ತು ಎನ್ನಲಾದ ಘಟನೆ ಮತ್ತು 2023ರ ವಿಧಾನಸಭಾ ಚುನಾವಣೆಯ ಟಿಕೆಟ್ ಹಂಚಿಕೆಯ ನಡುವೆ ಸಂಬಂಧವಿದೆ ಎಂಬ ಆರೋಪಗಳ ಸತ್ಯಾಸತ್ಯತೆ ಪರಿಶೀಲನೆಯಾಗಬೇಕು. ಪುತ್ತೂರಿನ ಹಾಲಿ ಶಾಸಕರಿಗೆ ಟಿಕೆಟ್ ದೊರೆತ ಪ್ರಕ್ರಿಯೆಯ ಬಗ್ಗೆಯೂ ಸಾರ್ವಜನಿಕ ವಲಯದಲ್ಲಿ ಪ್ರಶ್ನೆಗಳು ಮೂಡಿರುವುದರಿಂದ, ಈ ಎಲ್ಲ ವಿಚಾರಗಳಿಗೆ ಸ್ಪಷ್ಟತೆ ದೊರೆಯುವುದು ಅಗತ್ಯವಾಗಿದೆ ಎಂದು ತಿಳಿಸಿದ್ದಾರೆ.
ಇದು ಯಾವುದೇ ವ್ಯಕ್ತಿಯ ವಿರುದ್ಧ ವೈಯಕ್ತಿಕ ಆರೋಪ ಮಾಡುವುದಲ್ಲ. ರಾಜಕೀಯ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಇದೆಯೇ ಎಂಬುದು ಬಹಳ ಅಗತ್ಯವಾಗಿದೆ. ಈಗ ಇರುವ ಗಂಭೀರ ಆರೋಪಗಳನ್ನು ನಿರ್ಲಕ್ಷಿಸುವುದೂ ಸರಿಯಲ್ಲ. ಸಂಬಂಧಪಟ್ಟ ದಾಖಲೆಗಳು, ಲಭ್ಯವಿರುವ ಸಾಕ್ಷ್ಯಗಳು ಮತ್ತು ಎಲ್ಲರ ಹೇಳಿಕೆಗಳನ್ನು ಪರಿಶೀಲಿಸಿ, ನಿಷ್ಪಕ್ಷಪಾತ ತನಿಖೆಯ ಮೂಲಕ ಸತ್ಯವನ್ನು ಹೊರತರುವುದು ಅಗತ್ಯವಾಗಿದೆ. ರಾಜಕೀಯದಲ್ಲಿ ಭಿನ್ನಾಭಿಪ್ರಾಯಗಳು ಸಹಜ. ಪಕ್ಷಗಳ ನಡುವೆ ಸ್ಪರ್ಧೆಯೂ ಸಹಜ. ಆದರೆ, ರಾಜಕೀಯ ಲಾಭ-ನಷ್ಟಗಳ ಲೆಕ್ಕಾಚಾರದಲ್ಲಿ ಪುತ್ತೂರಿನ ಹೆಸರಿಗೆ ಅನಗತ್ಯ ಕಳಂಕ ತರುವ ಪರಿಸ್ಥಿತಿ ನಿರ್ಮಾಣವಾಗಬಾರದು. ಪುತ್ತೂರಿನ ಜನರು ತಮ್ಮ ಮತದಾನದ ಹಕ್ಕನ್ನು ಸ್ವಾಭಿಮಾನದಿಂದ ಚಲಾಯಿಸುವವರು. ಅವರ ತೀರ್ಮಾನವನ್ನು ಗೌರವಿಸುವುದು ಮತ್ತು ರಾಜಕೀಯ ನಿರ್ಧಾರಗಳ ಬಗ್ಗೆ ಅವರಿಗೆ ಸ್ಪಷ್ಟತೆ ದೊರೆಯುವಂತೆ ಮಾಡುವುದು ಪ್ರಜಾಪ್ರಭುತ್ವದ ಮೂಲ ಆಶಯವಾಗಿದೆ ಎಂದು ಪುತ್ತಿಲ ಹೇಳಿದ್ದಾರೆ.
ರಾಜಕೀಯದಲ್ಲಿ ಯಾರೂ ಪ್ರಶ್ನಾತೀತರಲ್ಲ. ಯಾರೂ ತನಿಖೆಗೂ ಮೀರಿದವರಲ್ಲ. ಆರೋಪಗಳು ಯಾರ ವಿರುದ್ಧ ಕೇಳಿಬಂದರೂ, ಅವರ ಸ್ಥಾನಮಾನ ಅಥವಾ ರಾಜಕೀಯ ಪ್ರಭಾವವನ್ನು ಲೆಕ್ಕಿಸದೆ ಸತ್ಯಾಸತ್ಯತೆ ಪರಿಶೀಲನೆಯಾಗಬೇಕು. ತಪ್ಪು ಸಾಬೀತಾದರೆ ಕಾನೂನಿನ ಪ್ರಕಾರ ಕ್ರಮ ಕೈಗೊಳ್ಳಬೇಕು. ಪುತ್ತೂರಿನ ರಾಜಕೀಯವನ್ನು ವೈಯಕ್ತಿಕ ಆರೋಪ-ಪ್ರತ್ಯಾರೋಪಗಳ ಮಟ್ಟಕ್ಕೆ ಇಳಿಸುವುದೂ ಉದ್ದೇಶವಲ್ಲ. ಜನರ ವಿಶ್ವಾಸವೇ ರಾಜಕೀಯದ ನಿಜವಾದ ಶಕ್ತಿ. ಆ ವಿಶ್ವಾಸಕ್ಕೆ ಧಕ್ಕೆ ತರುವಂತಹ ಅನುಮಾನಗಳು ಮೂಡಿದಾಗ ಸತ್ಯ ಹೊರಬರಬೇಕೆಂದು ಆಗ್ರಹಿಸುವುದು ಅಗತ್ಯವಾಗಿದೆ. ಹೀಗಾಗಿ ಈ ಬಗ್ಗೆ ಸಮಗ್ರ ತನಿಖೆಯಾಗಬೇಕು ಎಂದು ಸರ್ಕಾರವನ್ನು ಒತ್ತಾಯಿಸುತ್ತಿದ್ದೇನೆ ಎಂದಿದ್ದಾರೆ.
ಪುತ್ತೂರಿನ ಜನತೆಗೆ ಬೇಕಿರುವುದು ಸತ್ಯ, ಪಾರದರ್ಶಕತೆ ಮತ್ತು ನ್ಯಾಯ. ಈ ಪ್ರಕರಣದ ಸಂಪೂರ್ಣ ಸತ್ಯ ಜನರ ಮುಂದೆ ಬರಲಿ. ಪುತ್ತೂರಿನ ರಾಜಕೀಯ ಘನತೆಯನ್ನು ಕಾಪಾಡುವ ನಿಟ್ಟಿನಲ್ಲಿ ಸಂಬಂಧಪಟ್ಟವರು ಸ್ಪಷ್ಟನೆ ನೀಡಲಿ ಹಾಗೂ ಅಗತ್ಯ ತನಿಖೆಗೆ ಸಹಕರಿಸಲಿ ಎಂದು ಅರುಣ್ ಕುಮಾರ್ ಪುತ್ತಿಲ ಆಗ್ರಹಿಸಿದ್ದಾರೆ.