ಪುತ್ತೂರು: 'ದೀಪೋತ್ಸವ-2026' ಲೋಗೋ & ಆಮಂತ್ರಣ ಬಿಡುಗಡೆ
Puttur: ಡಿ.8 ರಂದು ಏರ್ಪಡಿಸಿರುವ 'ಪುತ್ತೂರು ದೀಪೋತ್ಸವ-2026'ರ ಲೋಗೋ & ಆಮಂತ್ರಣ ಪತ್ರಿಕೆ ಬಿಡುಗಡೆ ಸಮಾರಂಭವು ಇಂದು ಅದ್ದೂರಿಯಾಗಿ ನಡೆಯಿತು.
ಪುತ್ತೂರು: ಇಲ್ಲಿನ ಶ್ರೀ ಮಹಾಲಿಂಗೇಶ್ವರ ದೇಗುಲದ ಮುಂಭಾಗ ಪುತ್ತೂರು ದೀಪೋತ್ಸವ ಸಮಿತಿ ವತಿಯಿಂದ, ಡಿ.8 ರಂದು ಏರ್ಪಡಿಸಿರುವ 'ಪುತ್ತೂರು ದೀಪೋತ್ಸವ-2026'ರ ಲೋಗೋ & ಆಮಂತ್ರಣ ಪತ್ರಿಕೆ ಬಿಡುಗಡೆ ಸಮಾರಂಭವು ಇಂದು ಅದ್ದೂರಿಯಾಗಿ ನಡೆಯಿತು.
ಈ ಕಾರ್ಯಕ್ರಮವನ್ನು ಶಾಸಕ ಹಾಗೂ ದೀಪೋತ್ಸವದ ಗೌರವಾಧ್ಯಕ್ಷ ಅಶೋಕ್ ಕುಮಾರ್ ರೈ ಅವರು, ಉದ್ಘಾಟಿಸಿದರು. ಖ್ಯಾತ ಎಲುಬು ತಜ್ಞ ಡಾ. ಅಜಯ್ ದೀಪೋತ್ಸವದ ಲೋಗೋ ಅನಾವರಣಗೊಳಿಸಿ, ಶುಭ ಹಾರೈಸಿದರು. ಶಶಿಕುಮಾರ್ ರೈ ಬಾಲ್ಯೊಟು ಆಮಂತ್ರಣ ಪತ್ರಿಕೆಯನ್ನು ಹೊರತಂದರು.

ವರ್ಷವಿಡೀ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿ: ಅಶೋಕ್ ಕುಮಾರ್ ರೈ
ಶ್ರೀ ಮಹಾಲಿಂಗೇಶ್ವರ ದೇವಸ್ಥಾನವು ಅಭಿವೃದ್ಧಿಯ ಪಥದಲ್ಲಿ ಮುನ್ನಡೆಯುವುದರೊಂದಿಗೆ, ಧಾರ್ಮಿಕ ಹಾಗೂ ಸಾಂಸ್ಕೃತಿಕ ಕ್ಷೇತ್ರಗಳಲ್ಲಿಯೂ ವಿಶೇಷ ಗುರುತನ್ನು ಪಡೆದುಕೊಳ್ಳಬೇಕು ಎಂದರು.
ಪುತ್ತೂರಿನಲ್ಲಿ ಕೇವಲ ನಿರ್ದಿಷ್ಟ ದಿನಗಳಿಗೆ ಸೀಮಿತವಾಗದೆ, ವರ್ಷವಿಡೀ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುವಂತಾಗಬೇಕು. ಇಂತಹ ಕಾರ್ಯಕ್ರಮಗಳು ನಗರದ ಧಾರ್ಮಿಕ ಪರಂಪರೆ, ಸಾಂಸ್ಕೃತಿಕ ವೈಭವ ಮತ್ತು ಸಾಮಾಜಿಕ ಒಗ್ಗಟ್ಟನ್ನು ಬಲಪಡಿಸಲು ಸಹಕಾರಿಯಾಗುತ್ತವೆ ಎಂದು ಹೇಳಿದರು.
ಲಕ್ಷದೀಪೋತ್ಸವವು ಅತ್ಯಂತ ಯಶಸ್ವಿಯಾಗಿ ನಡೆಯಬೇಕು. ದಕ್ಷಿಣ ಕನ್ನಡ ಜಿಲ್ಲೆಯಲ್ಲಿಯೇ ವಿಶಿಷ್ಟ ಸ್ಥಾನ ಪಡೆದುಕೊಳ್ಳುವಂತಹ ದೊಡ್ಡ ಹಬ್ಬವಾಗಿ ಪುತ್ತೂರಿನ ಲಕ್ಷದೀಪೋತ್ಸವ ರೂಪುಗೊಳ್ಳಬೇಕು. ದೇವಸ್ಥಾನದ ಧಾರ್ಮಿಕ ಹಾಗೂ ಸಾಂಸ್ಕೃತಿಕ ಪರಂಪರೆಯನ್ನು ಇನ್ನಷ್ಟು ಜನರಿಗೆ ಪರಿಚಯಿಸುವಲ್ಲಿ ಇಂತಹ ಉತ್ಸವಗಳು ಮಹತ್ವದ ಪಾತ್ರ ವಹಿಸುತ್ತವೆ. ಸಾರ್ವಜನಿಕರು, ಭಕ್ತರು ಹಾಗೂ ಸಂಘ-ಸಂಸ್ಥೆಗಳು ಒಗ್ಗಟ್ಟಿನಿಂದ ಕೈಜೋಡಿಸಿ ಉತ್ಸವವನ್ನು ಯಶಸ್ವಿಗೊಳಿಸಬೇಕು ಎಂದು ಶಾಸಕರು ತಿಳಿಸಿದರು.

ಪುತ್ತೂರಿನ ಜನರ ಹಬ್ಬವಾಗಲಿ ಲಕ್ಷದೀಪೋತ್ಸವ: ಶಶಿಕುಮಾರ್ ರೈ
ಡಿ.8 ರಂದು ನಡೆಯಲಿರುವ ದೀಪೋತ್ಸವವು ಪುತ್ತೂರಿನ ಜನರಿಗೆ ಒಂದು ಹಬ್ಬವಾಗಲಿ ಎಂದು ಆಶಿಸಿದರು. ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ದೀಪೋತ್ಸವವು ಇಲ್ಲಿನ ಸಾಂಸ್ಕೃತಿಕ ವೈಭವ ಹಾಗೂ ಧಾರ್ಮಿಕ ನಂಬಿಕೆಗೆ ಸಾಕ್ಷಿಯಾಗಲಿ. ಎಲ್ಲರೂ ಒಗ್ಗಟ್ಟಿನಿಂದ ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು ಎಂದು ಹೇಳಿದರು.
ಉತ್ಸವ ಯಶಸ್ವಿಯಾಗಲಿ: ಗಣ್ಯರ ಹಾರೈಕೆ
ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಲಕ್ಷದೀಪೋತ್ಸವ ಸಮಿತಿ ಉಪಾಧ್ಯಕ್ಷ ಕರುಣಾಕರ ರೈ ದೇರ್ಲ ದೀಪೋತ್ಸವಕ್ಕೆ ಶುಭ ಹಾರೈಸಿದರು. ಸಮಿತಿಯ ಗೌರವಾಧ್ಯಕ್ಷ ಜಿ.ಎಲ್.ಬಲರಾಮ ಆಚಾರ್ಯ ಮಾತನಾಡಿ, ದೀಪೋತ್ಸವವು ಅತ್ಯಂತ ಯಶಸ್ವಿಯಾಗಿ ನಡೆಯಲಿ ಎಂದರು.
ದೀಪೋತ್ಸವ ಸಮಿತಿಯ ಪ್ರಧಾನ ಕಾರ್ಯದರ್ಶಿ ರವೀಶ್ ಪಡುಮಲೆ ದೀಪೋತ್ಸವದಂದು ನಡೆಯಲಿರುವ ವಿವಿಧ ಕಾರ್ಯಕ್ರಮಗಳ ಕುರಿತು ಸಮಗ್ರ ಮಾಹಿತಿ ನೀಡಿದರು. ಪದ್ಮಿನಿ ಪ್ರಾರ್ಥಿಸಿದರು. ದೀಪೋತ್ಸವ ಸಮಿತಿ ಅಧ್ಯಕ್ಷ ಎನ್.ರವೀಂದ್ರ ಶೆಟ್ಟಿ ನುಳಿಯಾಲು ಅತಿಥಿಗಳನ್ನು ಸ್ವಾಗತಿಸಿದರು.
ಈ ಕಾರ್ಯಕ್ರಮದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳದ ಯೋಜನಾಧಿಕಾರಿ ಶಶಿಧರ್, ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಸದಸ್ಯ ಮಹಾಬಲ ರೈ ಒಲತಡ್ಕ, ಗೌರಿ ಬನ್ನೂರು, ಸಮಿತಿಯ ಉಪಾಧ್ಯಕ್ಷ ಡಾ.ಹರೀಶ್ ಪಾಣಾಜೆ, ಸಂಚಾಲಕ ಸಂತೋಷ್ ಕುಮಾರ್ ರೈ ಗಾಡಿಗುಡ್ಡೆ, ಜಯಪ್ರಕಾಶ್ ರೈ ಚೆಲ್ಯಡ್ಕ, ಕೋಶಾಧಿಕಾರಿ ದಾಮೋದರ ಪಾಟಲಿ ಸೇರಿದಂತೆ ಸಮಿತಿಯ ಪದಾಧಿಕಾರಿಗಳು ಹಾಗೂ ಸದಸ್ಯರು ಉಪಸ್ಥಿತರಿದ್ದರು.