ವಿವೇಕಾನಂದ ಕಾಲೇಜಿನಲ್ಲಿ ಯಕ್ಷ ದೀಕ್ಷಾ ಪ್ರದಾನ & ಯಕ್ಷ ಗೌರವ ಸಮರ್ಪಣೆ

Vivekananda College: ವಿವೇಕಾನಂದ ಕಾಲೇಜಿನಲ್ಲಿ ಯಕ್ಷ ದೀಕ್ಷಾ ಪ್ರದಾನ ಮತ್ತು ಯಕ್ಷ ಗೌರವ ಸಮರ್ಪಣಾ ಕಾರ್ಯಕ್ರಮ ನಡೆಯಿತು.

Oct 28, 2026 - 15:56
ವಿವೇಕಾನಂದ ಕಾಲೇಜಿನಲ್ಲಿ ಯಕ್ಷ ದೀಕ್ಷಾ ಪ್ರದಾನ & ಯಕ್ಷ ಗೌರವ ಸಮರ್ಪಣೆ

ಪುತ್ತೂರು: 'ಯಕ್ಷಗಾನ ಕೇವಲ ಮನರಂಜನಾ ಕಲೆಯಲ್ಲ. ಅದು ಕನ್ನಡ ಭಾಷೆ ಹಾಗೂ ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಮಾಧ್ಯಮವಾಗಿದೆ. ಕರ್ನಾಟಕದಲ್ಲಿ ಕನ್ನಡವನ್ನು ಅತ್ಯಂತ ಶುದ್ಧವಾಗಿ ಪ್ರಕಟಪಡಿಸುವ ಕಾರ್ಯ ನಮ್ಮ ಕರಾವಳಿ ಭಾಗದಲ್ಲಿ ಯಕ್ಷಗಾನದಿಂದ ಆಗುತ್ತಿದೆ. ಒಬ್ಬ ಕಲಾವಿದನನ್ನು ಕೇಂದ್ರೀಕೃತ ಮಾಡುವುದೇ ಯಕ್ಷಗಾನದ ಕಲೆ ಎಂದು ಅಡಿಕೆ ಪತ್ರಿಕೆಯ ಸಹಾಯಕ ಸಂಪಾದಕ & ಯಕ್ಷಗಾನ ಕಲಾವಿದ ನಾ.ಕಾರಂತ ಪೆರಾಜೆ ಹೇಳಿದರು.

ವಿವೇಕಾನಂದ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಕಾಲೇಜಿನ ದೇರಾಜೆ ಸೀತಾರಾಮಯ್ಯ ಯಕ್ಷಗಾನ ಅಧ್ಯಯನ ಕೇಂದ್ರ, ಯಕ್ಷರಂಜಿನಿ ಮತ್ತು ಐಕ್ಯೂಎಸಿ ಸಹಯೋಗದಲ್ಲಿ ನಡೆದ ಯಕ್ಷ ದೀಕ್ಷಾ ಪ್ರದಾನ ಮತ್ತು ಯಕ್ಷ ಗೌರವ ಸಮರ್ಪಣಾ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ, ಭಾಗವಹಿಸಿ ಮಾತನಾಡಿದರು.

ಕಾಲೇಜು ಆಡಳಿತ ಮಂಡಳಿ ಅಧ್ಯಕ್ಷ ಡಾ.ಶ್ರೀಪತಿ ಕಲ್ಲೂರಾಯ ಮಾತನಾಡಿ, ವಿದ್ಯಾರ್ಥಿಗಳು ಯಕ್ಷಗಾನದಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುವುದರಿಂದ ಜೀವನದಲ್ಲಿ ಶಿಸ್ತು ರೂಪುಗೊಳ್ಳುತ್ತದೆ ಹಾಗೂ ಭವಿಷ್ಯದ ದಾರಿಯನ್ನು ರೂಪಿಸಿಕೊಳ್ಳಲು ಸಹಕಾರಿಯಾಗುತ್ತದೆ. ಹಿರಿಯರಿಂದ ಪ್ರಸಾದದ ರೂಪದಲ್ಲಿ ದೀಕ್ಷೆಯನ್ನು ಪಡೆದರೆ, ಆ ಕ್ಷೇತ್ರದಲ್ಲಿ ಒಬ್ಬ ಉತ್ತಮ ಕಲಾವಿದನಾಗಿ ಬೆಳೆಯುವುದಕ್ಕೆ ಸಾಧ್ಯವಾಗುತ್ತದೆ. ಆದ್ದರಿಂದ ಯಕ್ಷಗಾನದ ಮೂಲಭೂತ ವಿಷಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ತಿಳಿಸಿದರು.

ಕಾಲೇಜಿನ ಆಡಳಿತ ಮಂಡಳಿಯ ಸಂಚಾಲಕ ಮುರಳಿಕೃಷ್ಣ ಕೆ.ಎನ್ ಮಾತನಾಡಿ, ವಿವೇಕಾನಂದ ಕಾಲೇಜು ಯಕ್ಷಗಾನ, ಭರತನಾಟ್ಯ, ಸಂಗೀತ ಮುಂತಾದ ಕಲಾಪ್ರಕಾರಗಳಿಗೆ ಪ್ರೋತ್ಸಾಹ ನೀಡುತ್ತಾ ಬಂದಿದೆ. ಈ ಹಿನ್ನೆಲೆ ಸಮರ್ಥವಾದಂತಹ ಯಕ್ಷಗಾನ ಕಲೆಯನ್ನು ವಿದ್ಯಾರ್ಥಿಗಳು ತಿಳಿದುಕೊಳ್ಳುವ ನಿಟ್ಟಿನಲ್ಲಿ ಅದನ್ನು ಉಳಿಸುತ್ತಾ, ಬೆಳೆಸಿಕೊಂಡು ಹೋಗಬೇಕು ಎಂದು ಹೇಳಿದರು.

ಈ ಸಂದರ್ಭದಲ್ಲಿ ಅಡಿಕೆ ಪತ್ರಿಕೆಯ ಸಹಾಯಕ ಸಂಪಾದಕ ಹಾಗೂ ಯಕ್ಷಗಾನ ಕಲಾವಿದ ನಾ.ಕಾರಂತ ಪೆರಾಜೆಯವರಿಗೆ ಯಕ್ಷ ಗೌರವ ಪುರಸ್ಕಾರವನ್ನು ನೀಡಿ ಗೌರವಿಸಲಾಯಿತು.

ವೇದಿಕೆಯಲ್ಲಿ ಕಾಲೇಜಿನ ಪ್ರಾಂಶುಪಾಲ ಪ್ರೊ. ಶ್ರೀಕೃಷ್ಣ ಗಣರಾಜ್ ಭಟ್, ಕಾಲೇಜಿನ ವಿಶೇಷಾಧಿಕಾರಿ (ಆಡಳಿತ) ಹಾಗೂ ಕನ್ನಡ ವಿಭಾಗದ ಮುಖ್ಯಸ್ಥ ಡಾ.ಮನಮೋಹನ ಎಂ, ಸ್ನಾತಕೋತ್ತರ ವಿಭಾಗದ ಮುಖ್ಯಸ್ಥೆ ಡಾ.ವಿಜಯಸರಸ್ವತಿ ಉಪಸ್ಥಿತರಿದ್ದರು.

ಸಂಜಯ್ ಅಂಬೇಕರ್ ವಿವಿಧ ಮಾಧ್ಯಮ ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದು, 9 ವರ್ಷ ಅನುಭವವನ್ನು ಹೊಂದಿದ್ದೇನೆ. ಸದ್ಯ 'ಡೇ2ಡೇ ನ್ಯೂಸ್'ನಲ್ಲಿ ಕೆಲಸ ಮಾಡುತ್ತಿದ್ದೇನೆ.