ವಿವೇಕಾನಂದ ಎಂಜಿನಿಯರಿಂಗ್ ಕಾಲೇಜು: ನೂತನ ಪ್ರಾಂಶುಪಾಲರಾಗಿ ಡಾ.ಪುರುಷೋತ್ತಮ ಚಿಪ್ಪಾರ್ ಅಧಿಕಾರ ಸ್ವೀಕಾರ
Vivekananda Engineering College: ವಿವೇಕಾನಂದ ಎಂಜಿನಿಯರಿಂಗ್ ಕಾಲೇಜಿನ ನೂತನ ಪ್ರಾಂಶುಪಾಲರಾಗಿ ಡಾ.ಪುರುಷೋತ್ತಮ ಚಿಪ್ಪಾರ್ ಅಧಿಕಾರ ಸ್ವೀಕರಿಸಿದ್ದಾರೆ.
ಪುತ್ತೂರು: 'ವಿವೇಕಾನಂದ ವಿದ್ಯಾವರ್ಧಕ ಸಂಘ' ನಡೆಸಲ್ಪಡುವ 'ವಿವೇಕಾನಂದ ಕಾಲೇಜ್ ಆಫ್ ಎಂಜಿನಿಯರಿಂಗ್ & ಟೆಕ್ನಾಲಜಿಯ ನೂತನ ಪ್ರಾಂಶುಪಾಲರಾಗಿ ಡಾ.ಪುರುಷೋತ್ತಮ ಚಿಪ್ಪಾರ್ ಅಧಿಕಾರ ಸ್ವೀಕರಿಸಿದ್ದಾರೆ.
ಈ ವೇಳೆ, ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಕೃಷ್ಣ ಕುಮಾರ್ ಶೆಟ್ಟಿ, ಕಾರ್ಯದರ್ಶಿ ವಿಜಯನಾರಾಯಣ ಕೆ.ಎಂ, ಎಂಜಿನಿಯರಿಂಗ್ ಕಾಲೇಜು ಆಡಳಿತ ಮಂಡಳಿ ಅಧ್ಯಕ್ಷ ರವಿಕೃಷ್ಣ ಡಿ ಕಲ್ಲಾಜೆ ಮತ್ತು ಸಂಚಾಲಕ ಪ್ರಸನ್ನ ದರ್ಭೆ ನೂತನ ಪ್ರಾಂಶುಪಾಲರಿಗೆ ಶುಭ ಹಾರೈಸಿದ್ದಾರೆ.
ವಿವೇಕಾನಂದ ವಿದ್ಯಾವರ್ಧಕ ಸಂಘದ ನಿರ್ದೇಶಕ ರಮೇಶ್ಚಂದ್ರ, ಕಾರ್ಯನಿರ್ವಹಣಾಧಿಕಾರಿ ಲಕ್ಷ್ಮಿ ಪ್ರಸಾದ್, ಸಹ ಕಾರ್ಯನಿರ್ವಹಣಾಧಿಕಾರಿ ವೆಂಕಟ್ರಮಣ ಭಟ್, ವಿವೇಕಾನಂದ ಎಂಜಿನಿಯರಿಂಗ್ ಕಾಲೇಜು ಆಡಳಿತ ಮಂಡಳಿಯ ಕೋಶಾಧಿಕಾರಿ ಅರವಿಂದ ವಿ, ನಿರ್ದೇಶಕ ಮನೋಜ್ ಕುಮಾರ್, ಸುಜಿತ್ ಕುಮಾರ್ ಹಾಗೂ ರಕ್ಷಾ ಪ್ರಭು ವಿವಿಧ ವಿಭಾಗಗಳ ಮುಖ್ಯಸ್ಥರು ಉಪಸ್ಥಿತರಿದ್ದರು.

ಪ್ರಾಂಶುಪಾಲರ ಪರಿಚಯ: ಡಾ.ಪುರುಷೋತ್ತಮ ಚಿಪ್ಪಾರ್ ಅವರು ಉನ್ನತ ಶಿಕ್ಷಣ, ಉದ್ಯಮ ಕ್ಷೇತ್ರ ಹಾಗೂ ತಂತ್ರಜ್ಞಾನ ಕಾರ್ಯತಂತ್ರಗಳಲ್ಲಿ 15 ವರ್ಷಕ್ಕೂ ಹೆಚ್ಚು ಅನುಭವವನ್ನು ಹೊಂದಿರುವ ಶಿಕ್ಷಣ ತಜ್ಞರಾಗಿದ್ದಾರೆ. ದಕ್ಷಿಣ ಕೊರಿಯಾದ ಇನ್ಹಾ ವಿಶ್ವವಿದ್ಯಾನಿಲಯದಿಂದ ಮೆಕ್ಯಾನಿಕಲ್ ಎಂಜಿನಿಯರಿಂಗ್ ವಿಭಾಗದಲ್ಲಿ ಡಾಕ್ಟರೇಟ್ ಪದವಿ ಪಡೆದುಕೊಂಡಿದ್ದಾರೆ. ಸಂಶೋಧನೆ, ಶೈಕ್ಷಣಿಕ ಆಡಳಿತ, ಸಂಸ್ಥೆಯ ಅಭಿವೃದ್ಧಿ ಮತ್ತು ಉದ್ಯಮ ವಲಯದೊಂದಿಗಿನ ಸಹಯೋಗದಲ್ಲಿ ಅನುಭವವನ್ನು ಹೊಂದಿದ್ದಾರೆ.
ಮಂಗಳೂರಿನ ಸೈಂಟ್ ಜೋಸೆಫ್ ಎಂಜಿನಿಯರಿಂಗ್ ಕಾಲೇಜಿನಲ್ಲಿ ಉಪಪ್ರಾಂಶುಪಾಲ ಮತ್ತು ಸಂಶೋಧನೆ ಮತ್ತು ಅಭಿವೃದ್ಧಿ ವಿಭಾಗದ ಡೀನ್ ಆಗಿಯೂ ಕಾರ್ಯನಿರ್ವಹಿಸಿದ ಅನುಭವವನ್ನು ಹೊಂದಿದ್ದಾರೆ. ಅದಕ್ಕೂ ಮೊದಲು ಅದೇ ಸಂಸ್ಥೆಯಲ್ಲಿ ಮೆಕ್ಯಾನಿಕಲ್ ವಿಭಾಗ ಮುಖ್ಯಸ್ಥರಾಗಿ, ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ, ಶೈಕ್ಷಣಿಕ ಆಡಳಿತ, ಪಠ್ಯಕ್ರಮ ಅಭಿವೃದ್ಧಿ, ಸಂಶೋಧನೆಗೆ ಉತ್ತೇಜನ ಮತ್ತು ವಿದ್ಯಾರ್ಥಿಗಳ ಸಮಗ್ರ ಅಭಿವೃದ್ಧಿಗೆ ಮಹತ್ವದ ಕೊಡುಗೆ ನೀಡಿದ್ದಾರೆ.
ಹೈಡ್ರೀಜನ್ ಸಂಗ್ರಹಣೆ, ಇಂಧನ ಕೋಶಗಳು ಉಷ್ಣ ಮತ್ತು ದ್ರವ್ಯರಾಶಿ ವರ್ಗಾವಣೆ ಹಾಗೂ ಸುಸ್ಥಿರ ಇಂಧನ ವ್ಯವಸ್ಥೆಗಳ ಕ್ಷೇತ್ರದಲ್ಲಿ ಡಾ.ಚಿಪ್ಪಾರ್ ಗಮನಾರ್ಹ ಸಂಶೋಧನಾ ಸಾಧನೆಗಳನ್ನು ಮಾಡಿದ್ದಾರೆ. ಇವರ 35ಕ್ಕೂ ಹೆಚ್ಚು ಸಂಶೋಧನಾ ಪ್ರಬಂಧಗಳು ಮತ್ತು ಇತರೆ ಶೈಕ್ಷಣಿಕ ಪ್ರಕಟಣೆಗಳು ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ನಿಯತಕಾಲಿಕಗಳಲ್ಲಿ ಪ್ರಕಟಗೊಂಡಿವೆ.

ಅಲ್ಲದೆ ಅನೇಕ ಸಂಶೋಧನಾ ನಿರತರಿಗೆ ಮಾರ್ಗದರ್ಶನವನ್ನು ನೀಡಿದ್ದಾರೆ. ಇಂಧನ ವ್ಯವಸ್ಥೆಗಳ ಕಾರ್ಯಕ್ಷಮತೆಯನ್ನು ಸುಧಾರಿಸಲು ಆರ್ಟಿಫೀಶಿಯಲ್ ಇಂಟೆಲಿಜೆನ್ಸ್ & ಮೆಶಿನ್ ಲರ್ನಿಂಗ್ ತಂತ್ರಜ್ಞಾನವನ್ನು ಎಂಜಿನಿಯರಿಂಗ್ ವ್ಯವಸ್ಥೆಗಳೊಂದಿಗೆ ಸಂಯೋಜಿಸುವ ಸಂಶೋಧನೆಯಲ್ಲಿ ಅವರು ಆಸಕ್ತಿ ಹೊಂದಿದ್ದಾರೆ.
ಬೆಂಗಳೂರಿನ ಹನಿವೆಲ್ ಟೆಕ್ನಾಲಜಿ ಸೊಲ್ಯುಶನ್ ಪ್ರೈವೇಟ್ ಲಿಮಿಟೆಡ್ನಲ್ಲಿ ಕಾರ್ಯನಿರ್ವಹಿಸುವ ಅವಧಿಯಲ್ಲಿ ಅವರು, ತಂತ್ರಜ್ಞಾನ ಮೌಲ್ಯಮಾಪನ, ಪೇಟೆಂಟ್ ವಿಶ್ಲೇಷಣೆಯಲ್ಲಿ ಕೆಲಸ ಮಾಡಿದ್ದಾರೆ. ವಿಮಾನಯಾನ ಕ್ಷೇತ್ರದ ವಿಮಾನ ವ್ಯವಸ್ಥೆಗಳ ಮುನ್ಸೂಚನಾ ನಿರ್ವಹಣೆಗೆ ಸಂಬಂಧಿಸಿದ ಅಮೆರಿಕದ ಪೇಟೆಂಟ್ನಲ್ಲಿಯೂ ಕೊಡುಗೆ ನೀಡಿದ್ದಾರೆ. ಅಲ್ಲದೆ ಪ್ರಾಮಾಣೀಕೃತ ಪೇಟೆಂಟ್ ಮಾಹಿತಿ ತಜ್ಞರು ಆಗಿದ್ದಾರೆ.
ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿ 'ಐಡಿಯಾ ಲ್ಯಾಬ್' ಯೋಜನೆಯ ಪ್ರಧಾನ ಸಂಶೋಧಕರಾಗಿ ಅತ್ಯಾಧುನಿಕ ಮೂಲಮಾದರಿ ಅಭಿವೃದ್ಧಿ ಮತ್ತು ಹೊಸತನವನ್ನು ಸ್ಥಾಪಿಸುವಲ್ಲಿಯೂ ಪ್ರಮುಖ ಪಾತ್ರವನ್ನು ವಹಿಸಿದ್ದಾರೆ. ಈ ಮೂಲಕ ದಕ್ಷಿಣ ಕನ್ನಡದ ವಿದ್ಯಾರ್ಥಿಗಳಿಗೆ ಮತ್ತು ಶಿಕ್ಷಕರಿಗೆ ಪ್ರಾಯೋಗಿಕ ತಾಂತ್ರಿಕ ತರಬೇತಿ ಕಾರ್ಯಕ್ರಮದ ಮುಂದಾಳುತ್ವ ವಹಿಸಿದ್ದಾರೆ.
ಕರ್ನಾಟಕ ಸರ್ಕಾರದ ನ್ಯೂ ಏಜ್ ಇನ್ನೋವೇಶನ್ ನೆಟ್ವರ್ಕ್ ಯೋಜನೆಯಡಿ, ಮೂಲ ಸೌಕರ್ಯಗಳ ಸ್ಥಾಪನೆ ಹಾಗೂ ಅಭಿವೃದ್ದಿಯಲ್ಲಿ ಕೊಡುಗೆಯನ್ನು ನೀಡಿದ್ದಾರೆ. ಈ ವೇಳೆ ಹಲವು ಯೋಜನೆಯಡಿ ವಿಶೇಷ ಅನುದಾನವನ್ನು ತರಿಸುವಲ್ಲಿಯೂ ಶ್ರಮವಹಿಸಿದ್ದಾರೆ.
ರಾಷ್ಟ್ರೀಯ ಮಟ್ಟದ ನಾವೀನ್ಯತಾ ಸ್ಪರ್ಧೆಗಳಲ್ಲಿ, ವಿದ್ಯಾರ್ಥಿ ತಂಡಗಳು ಭಾಗವಹಿಸಲು ಮಾರ್ಗದರ್ಶನ ನೀಡುವುದರೊಂದಿಗೆ, ವಿದ್ಯಾರ್ಥಿಗಳಲ್ಲಿ ಸೃಜನಶೀಲತೆ, ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಸಾಮರ್ಥ್ಯ ಮತ್ತು ಉದ್ಯಮಶೀಲ ಮನೋಭಾವ ಬೆಳೆಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.