ಜಾಗತಿಕ ಎಐ ಸ್ಟಾರ್ಟ್‌ಅಪ್‌ನಲ್ಲಿ ಬೆಂಗಳೂರಿಗೆ 5ನೇ ಸ್ಥಾನಕ್ಕೇರುವ ಅವಕಾಶ: ರವಿ ನಾರಾಯಣ್
Bengaluru: ಜಾಗತಿಕ ಎಐ ಸ್ಟಾರ್ಟ್‌ಅಪ್‌ನಲ್ಲಿ ಬೆಂಗಳೂರಿಗೆ 5ನೇ ಸ್ಥಾನಕ್ಕೇರುವ ಅವಕಾಶವಿದೆ ಎಂದು 'ಟೆಕ್ ಸಮ್ಮಿಟ್'ನಲ್ಲಿ 'ಸ್ಟಾರ್ಟ್‌ಅಪ್ ಜೆನೋಮ್ ಹೈಪರ್ ಗ್ರೋಥ್' ಸಂಸ್ಥೆಯ ಅಧ್ಯಕ್ಷ ರವಿ ನಾರಾಯಣ್ ಹೇಳಿದ್ದಾರೆ.
ಬೆಂಗಳೂರು: ಜಾಗತಿಕ ಸ್ಟಾರ್ಟ್‌ಅಪ್ ವಾತಾವರಣ ನಿರ್ಮಾಣದಲ್ಲಿ ಬೆಂಗಳೂರು ಪ್ರಸ್ತುತ 14ನೇ ಸ್ಥಾನದಲ್ಲಿದೆ. ಅಗ್ರ ಐದು ಸ್ಥಾನದೊಳಗೆ ಬರುವ ಸಾಮರ್ಥ್ಯ ಹೊಂದಿದೆ ಎಂದು 'ಸ್ಟಾರ್ಟ್‌ಅಪ್ ಜೆನೋಮ್ ಹೈಪರ್ ಗ್ರೋಥ್' ಸಂಸ್ಥೆಯ ಅಧ್ಯಕ್ಷ ರವಿ ನಾರಾಯಣ್ ಹೇಳಿದ್ದಾರೆ.
'ಬೆಂಗಳೂರು ಟೆಕ್ ಸಮ್ಮಿಟ್'ನಲ್ಲಿ ಮೊದಲ ದಿನ 'ಎಐ ದೇಶೀಯ ಸ್ಟಾರ್ಟ್‌ಅಪ್ ವಾತಾವರಣ ನಿರ್ಮಾಣ' ಕುರಿತು ಉಪನ್ಯಾಸ ನೀಡಿದ ಅವರು, 2020-25ರ ಅವಧಿಯಲ್ಲಿ ಎಐ ದೇಶೀಯ ಹೂಡಿಕೆಯಲ್ಲಿ ಬೆಂಗಳೂರು ಅಗ್ರಸ್ಥಾನದಲ್ಲಿದ್ದು, ನಂತರದ ಸ್ಥಾನಗಳಲ್ಲಿ ದೆಹಲಿ ಹಾಗೂ ಮಂಬೈಯಿವೆ ಎಂದು ತಿಳಿಸಿದ್ದಾರೆ.
ತಾಂತ್ರಿಕ ಪ್ರತಿಭೆಗಳ ಆಕರ್ಷಕ ಕೇಂದ್ರವಾಗಿರುವ ಭಾರತಕ್ಕೆ, ಜಾಗತಿಕವಾಗಿ ಎಐ ಕಾರ್ಯಪರಿಸರ ನಿರ್ಮಾಣದಲ್ಲಿ ಮಂಚೂಣಿ ಸ್ಥಾನಕ್ಕೇರಲು ಹೆಚ್ಚಿನ ಅವಕಾಶಗಳಿವೆ. ಪ್ರಸ್ತುತ ಬಹುತೇಕ ಎಲ್ಲ ವಲಯಗಳಲ್ಲಿ ಎಐ ತಂತ್ರಜ್ಞಾನ ಮಹತ್ವದ ಪಾತ್ರ ವಹಿಸುತ್ತಿದೆ ಎಂದು ಹೇಳಿದ್ದಾರೆ.
ಉದ್ಯಮ ವಲಯದ ಹಲವು ಸಮಸ್ಯೆಗಳು ಎಐ ತಂತ್ರಜ್ಞಾನ ಪರಿಹಾರ ಒದಗಿಸಲಿದೆ. ಬೆಂಗಳೂರಿನಲ್ಲಿ ಎಐ ವಲಯದಲ್ಲಿ ಉತ್ಪಾದನೆಯಾಗುತ್ತಿರುವ ಶೇಕಡ 70 ರಷ್ಟು ಆದಾಯವು 'ಮಾಡೆಲ್ ಯೂಸರ್ಸ್'ಗೆ (ಮಾದರಿ ಬಳಕೆದಾರರಿಗೆ) ತಲುಪುತ್ತಿದೆ ಎಂದು ಅಂಕಿ-ಅಂಶ ಸಹಿತ ವಿವರಿಸಿದ್ದಾರೆ.
ಉದ್ಯಮ ವಲಯದಲ್ಲಿ ವಿಶ್ವಾಸಾರ್ಹತೆ ಹಾಗೂ ದತ್ತಾಂಶ ರಕ್ಷಣೆ ಅತಿ ಮುಖ್ಯ. ಉದ್ಯಮಿಗಳು ತಮ್ಮ ದತ್ತಾಂಶಗಳ ಮೇಲೆ ನಿಯಂತ್ರಣ ಮತ್ತು ಗೋಪ್ಯತೆ ಬಯಸುತ್ತಾರೆ. ಉದ್ಯಮ ಅಭಿವೃದ್ಧಿಯಲ್ಲಿ ಭದ್ರತೆ, ಸ್ಥಿತಿಸ್ಥಾಪಕತ್ವ ಹಾಗೂ ಲಭ್ಯತೆ ಮುಖ್ಯ ಅಂಶಗಳಾಗಿದ್ದು, ಈ ಬಗ್ಗೆ ಗಮನ ಹರಿಸುವುದು ಸೂಕ್ತ ಎಂದು ಹೇಳಿದ್ದಾರೆ.