ಕ್ವಾಂಟಮ್ ತಂತ್ರಜ್ಞಾನ ಕ್ಷೇತ್ರಗಳಲ್ಲಿ ಇಸ್ರೇಲ್‌ನೊಂದಿಗೆ ಸಂಶೋಧನಾ ಸಹಭಾಗಿತ್ವಕ್ಕೆ ಕರ್ನಾಟಕ ಆಸಕ್ತಿ: ಡಾ.ಅಜಯ್ ಧರ್ಮಸಿಂಗ್
Dr.Ajay Dharmasingh: ಕ್ವಾಂಟಮ್ ತಂತ್ರಜ್ಞಾನ ಕ್ಷೇತ್ರಗಳಲ್ಲಿ ಇಸ್ರೇಲ್‌ನೊಂದಿಗೆ ಸಂಶೋಧನಾ ಸಹಭಾಗಿತ್ವಕ್ಕೆ ಕರ್ನಾಟಕ ಆಸಕ್ತಿ ವಹಿಸಿದೆ ಎಂದು ಸಂಚಿವ ಡಾ.ಅಜಯ್ ಧರ್ಮಸಿಂಗ್ ಹೇಳಿದರು.
ಬೆಂಗಳೂರು: ಕ್ವಾಂಟಮ್ ಕಂಪ್ಯೂಟಿಂಗ್ & ಸುಧಾರಿತ ಜಲ ನಿರ್ವಹಣೆ ಕ್ಷೇತ್ರಗಳಲ್ಲಿ ಇಸ್ರೇಲ್‌ನೊಂದಿಗೆ ಸಂಶೋಧನೆ ಹಾಗೂ ತಂತ್ರಜ್ಞಾನ ಸಹಭಾಗಿತ್ವವನ್ನು ಬಲಪಡಿಸಲು ಕರ್ನಾಟಕ ಆಸಕ್ತಿ ಹೊಂದಿದೆ ಎಂದು ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಡಾ.ಅಜಯ್ ಧರ್ಮಸಿಂಗ್ (Dr.Ajay Dharmasingh) ತಿಳಿಸಿದರು.
ಟೆಕ್ ಸಮ್ಮಿಟ್–2026ರ ಅಂಗವಾಗಿ ಇಸ್ರೇಲ್‌ನ ಡೀಪ್‌ಟೆಕ್ ಕ್ಷೇತ್ರದ ಪ್ರತಿನಿಧಿಗಳೊಂದಿಗೆ ನಡೆಸಿದ ಸಂವಾದದಲ್ಲಿ ಮಾತನಾಡಿದ ಅವರು, ಉಭಯ ದೇಶಗಳ ನಡುವಿನ ಸಂಶೋಧನಾ ಸಹಕಾರವನ್ನು ಮತ್ತಷ್ಟು ವಿಸ್ತರಿಸುವ ಅಗತ್ಯವಿದೆ ಎಂದು ಹೇಳಿದರು.
ಕ್ವಾಂಟಮ್ ತಂತ್ರಜ್ಞಾನ, ಕೃತಕ ಬುದ್ಧಿಮತ್ತೆ ಆಧಾರಿತ ಜಲ ನಿರ್ವಹಣೆಯಲ್ಲಿ ಜಂಟಿ ಸಂಶೋಧನೆ ಹಾಗೂ ತಂತ್ರಜ್ಞಾನ ಅಭಿವೃದ್ಧಿಗೆ ಹೆಚ್ಚಿನ ಅವಕಾಶಗಳಿವೆ. ಈ ನಿಟ್ಟಿನಲ್ಲಿ ಈಗಾಗಲೇ ಅಸ್ತಿತ್ವದಲ್ಲಿರುವ ಕರ್ನಾಟಕ-ಇಸ್ರೇಲ್ ಕೈಗಾರಿಕಾ ಸಂಶೋಧನೆ ಮತ್ತು ಅಭಿವೃದ್ಧಿ ಸಹಕಾರ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸುವ ಸಾಧ್ಯತೆಗಳನ್ನು ಪರಿಶೀಲಿಸಲಾಗುವುದು ಎಂದು ತಿಳಿಸಿದರು.

ಕರ್ನಾಟಕದಲ್ಲಿ ವಿಶ್ವದರ್ಜೆಯ ಸಂಶೋಧನಾ ಸಂಸ್ಥೆಗಳು, ಪ್ರತಿಭಾವಂತ ವಿಜ್ಞಾನಿಗಳು ಮತ್ತು ಬಲಿಷ್ಠ ತಂತ್ರಜ್ಞಾನ ವ್ಯವಸ್ಥೆಯಿದೆ. ಇಸ್ರೇಲ್ ಅತ್ಯಾಧುನಿಕ ತಂತ್ರಜ್ಞಾನ ಹಾಗೂ ಸಂಶೋಧನೆಯನ್ನು ಪ್ರಾಯೋಗಿಕ ಬಳಕೆಗೆ ತರುವಲ್ಲಿ ವಿಶೇಷ ಸಾಧನೆ ಮಾಡಿದೆ. ಎರಡೂ ಕಡೆಯ ಸಾಮರ್ಥ್ಯಗಳನ್ನು ಒಗ್ಗೂಡಿಸುವ ಮೂಲಕ, ಸಮಾಜದ ಸಮಸ್ಯೆಗಳಿಗೆ ಪರಿಣಾಮಕಾರಿ ತಂತ್ರಜ್ಞಾನ ಪರಿಹಾರಗಳನ್ನು ಕಂಡುಕೊಳ್ಳಬಹುದು ಎಂದು ಸಚಿವರು ಹೇಳಿದರು.
ರಾಜ್ಯದಲ್ಲಿ ಪ್ರಸ್ತಾಪಿತ ಕ್ವಾಂಟಮ್ ಸಿಟಿ ಯೋಜನೆ ಹಾಗೂ ಪ್ರತ್ಯೇಕ ಕ್ವಾಂಟಮ್ ತಂತ್ರಜ್ಞಾನ ನೀತಿ ರೂಪಿಸುವ ಪ್ರಕ್ರಿಯೆ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ಇಸ್ರೇಲ್‌ನ ಕ್ವಾಂಟಮ್ ತಂತ್ರಜ್ಞಾನ ಕಂಪನಿಗಳು ಮತ್ತು ಸಂಶೋಧನಾ ಸಂಸ್ಥೆಗಳು ಕರ್ನಾಟಕದ ವೈಜ್ಞಾನಿಕ ಸಂಸ್ಥೆಗಳೊಂದಿಗೆ ಜಂಟಿ ಸಂಶೋಧನೆ ಮತ್ತು ತಂತ್ರಜ್ಞಾನ ಅಭಿವೃದ್ಧಿಗೆ ಮುಂದಾಗಬೇಕು ಎಂದು ಆಹ್ವಾನಿಸಿದರು.

ಜಲ ಸಂರಕ್ಷಣೆ, ಅಂತರ್ಜಲ ಮರುಪೂರಣ ಮತ್ತು ನೀರಾವರಿ ನಿರ್ವಹಣೆಯಲ್ಲಿಯೂ ಆಧುನಿಕ ತಂತ್ರಜ್ಞಾನವನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳುವ ಅಗತ್ಯವಿದೆ ಎಂದು ಅವರು ಅಭಿಪ್ರಾಯಪಟ್ಟರು.
ವಿಜ್ಞಾನ ಹಾಗೂ ತಂತ್ರಜ್ಞಾನದ ಪ್ರಯೋಜನಗಳು ಜನಸಾಮಾನ್ಯರಿಗೆ ತಲುಪಬೇಕು ಎಂಬುದು ನಮ್ಮ ಉದ್ದೇಶ. ವಿಶೇಷವಾಗಿ ಬರಪೀಡಿತ ಪ್ರದೇಶಗಳಲ್ಲಿ ನೀರಿನ ಸಂರಕ್ಷಣೆ, ಅಂತರ್ಜಲ ಮರುಪೂರಣ ಮತ್ತು ನೀರಾವರಿ ದಕ್ಷತೆಯನ್ನು ಹೆಚ್ಚಿಸಲು ಆಧುನಿಕ ತಂತ್ರಜ್ಞಾನ ನೆರವಾಗಬೇಕು. ಈ ನಿಟ್ಟಿನಲ್ಲಿ ಸ್ಪಷ್ಟ ಫಲಿತಾಂಶ ನೀಡುವ ಸಂಶೋಧನಾ ಸಹಭಾಗಿತ್ವಗಳಿಗೆ ಆದ್ಯತೆ ನೀಡಲು ನಾವು ಬಯಸುತ್ತೇವೆ ಎಂದು ಡಾ. ಅಜಯ್ ಧರ್ಮಸಿಂಗ್ ಹೇಳಿದರು.
ಕರ್ನಾಟಕದ ವಿಶ್ವವಿದ್ಯಾಲಯಗಳು, ಸಂಶೋಧನಾ ಸಂಸ್ಥೆಗಳು ಮತ್ತು ಸ್ಟಾರ್ಟ್‌ಅಪ್‌ಗಳೊಂದಿಗೆ ಇಸ್ರೇಲ್‌ನ ತಂತ್ರಜ್ಞಾನ ಕಂಪನಿಗಳು ಸಹಯೋಗ ಸಾಧಿಸಲು ವಿಪುಲ ಅವಕಾಶಗಳಿವೆ ಎಂದು ತಿಳಿಸಿದರು.
ಅಲ್ಲದೆ, ಕರ್ನಾಟಕದ ಪ್ರಸ್ತಾಪಿತ ಕ್ವಾಂಟಮ್ ಸಿಟಿ ಯೋಜನೆಯೊಂದಿಗೆ ಸಹಭಾಗಿತ್ವದ ಸಾಧ್ಯತೆಗಳನ್ನು ಅನ್ವೇಷಿಸುವಂತೆ ಇಸ್ರೇಲ್‌ನ ಕಂಪನಿಗಳಿಗೆ ಆಹ್ವಾನ ನೀಡಿದರು. 2027ರಲ್ಲಿ ಆಯೋಜಿಸಲು ಉದ್ದೇಶಿಸಿರುವ ‘ಕ್ವಾಂಟಮ್ ಇಂಡಿಯಾ ಬೆಂಗಳೂರು’ ಅಂತಾರಾಷ್ಟ್ರೀಯ ಸಮ್ಮೇಳನದಲ್ಲಿ ಇಸ್ರೇಲ್‌ನ ಪ್ರಮುಖ ಸಂಶೋಧನಾ ಸಂಸ್ಥೆಗಳು ಮತ್ತು ಕ್ವಾಂಟಮ್ ತಂತ್ರಜ್ಞಾನ ಕಂಪನಿಗಳು ಭಾಗವಹಿಸುವಂತೆ ಆಹ್ವಾನಿಸಿದರು.
ಸಭೆಯಲ್ಲಿ ಇಸ್ರೇಲ್ ಇನ್ನೋವೇಶನ್ ಅಥಾರಿಟಿಯ ಅಧ್ಯಕ್ಷ ಅಲೋನ್ ಸ್ಟೋಪೆಲ್, ಉಪಾಧ್ಯಕ್ಷ ಹಾಗೂ ಅಂತಾರಾಷ್ಟ್ರೀಯ ಸಹಯೋಗ ವಿಭಾಗದ ಮುಖ್ಯಸ್ಥ ಶ್ಲೋಮಿ ಕೋಫ್‌ಮನ್ ಮತ್ತು ಭಾರತ–ಇಸ್ರೇಲ್ ಕೈಗಾರಿಕಾ ಸಂಶೋಧನೆ ಮತ್ತು ತಂತ್ರಜ್ಞಾನ ನಾವೀನ್ಯತಾ ನಿಧಿಯ ವ್ಯವಸ್ಥಾಪಕ ತಾಲ್ ಬೆನ್-ಅವ್ನರ್ ಭಾಗವಹಿಸಿದ್ದರು