ಅಕ್ವಾನ್ ಚಂಡಮಾರುತ: ಆಂಧ್ರ & ಒಡಿಶಾದಲ್ಲಿ ಭಾರೀ ಮಳೆ, 50,000 ಜನರ ಸ್ಥಳಾಂತರ!
Akwan Cyclone: ಭಾರತದ ಪೂರ್ವ ಕರಾವಳಿಯತ್ತ 'ಅಕ್ವಾನ್' ಚಂಡಮಾರುತ ಚಲಿಸುತ್ತಿದ್ದು, ಆಂಧ್ರಪ್ರದೇಶ ಮತ್ತು ಒಡಿಶಾದಲ್ಲಿ ಭಾರೀ ಮಳೆಯೊಂದಿಗೆ ಬಲವಾದ ಗಾಳಿ ಬೀಸುವ ನಿರೀಕ್ಷೆಯಿದೆ. ಈಗಾಗಲೇ, ಒಡಿಶಾದಲ್ಲಿ 50,000 ಜನರನ್ನು ಸ್ಥಳಾಂತರ ಮಾಡಲಾಗಿದೆ.
ಭುವನೇಶ್ವರ: ಭಾರತದ ಪೂರ್ವ ಕರಾವಳಿಯತ್ತ 'ಅಕ್ವಾನ್' (Akwan) ಚಂಡಮಾರುತ ಚಲಿಸುತ್ತಿದ್ದು, ಆಂಧ್ರಪ್ರದೇಶ ಮತ್ತು ಒಡಿಶಾದಲ್ಲಿ ಭಾರೀ ಮಳೆಯೊಂದಿಗೆ ಬಲವಾದ ಗಾಳಿ ಬೀಸುವ ಸಾಧ್ಯತೆಯಿದೆ.
ನವೆಂಬರ್ 19 ಮತ್ತು 20 ರಂದು ಆಂಧ್ರದ ಕರಾವಳಿ ಭಾಗದಲ್ಲಿ ಅತಿಹೆಚ್ಚು ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ಮುನ್ಸೂಚನೆ ನೀಡಿದೆ. ಪಶ್ಚಿಮ ಬಂಗಾಳ ಹಾಗೂ ಒಡಿಶಾದ ಕೆಲವು ಭಾಗಗಳಲ್ಲಿಯೂ ಧಾರಾಕಾರ ಮಳೆಯಾಗುವ ನಿರೀಕ್ಷೆಯಿದೆ.
ನವೆಂಬರ್ 20 ರಂದು ಮಧ್ಯಾಹ್ನದ ಸುಮಾರಿಗೆ ಆಂಧ್ರಪ್ರದೇಶದ ನರಸಾಪುರ ಮತ್ತು ಒಡಿಶಾದ ಪುರಿ ನಡುವೆ ಈ ಚಂಡಮಾರುತವು ಅಪ್ಪಳಿಸುವ ಸಂಭವವಿದ್ದು, 110 ಕಿ.ಮೀ ವೇಗದಲ್ಲಿ ಗಾಳಿ ಬೀಸಬಹುದು.
ಒಡಿಶಾದಲ್ಲಿ ಹೈಅಲರ್ಟ್:
ಚಂಡಮಾರುತದ ಹಿನ್ನೆಲೆ, ಒಡಿಶಾದಲ್ಲಿ ತೀವ್ರ ಕಟ್ಟೆಚ್ಚರ ವಹಿಸಲಾಗಿದೆ. ಮುಖ್ಯಮಂತ್ರಿ ಮೋಹನ್ ಚರಣ್ ಮಾಝಿ ಅವರ ನೇತೃತ್ವದಲ್ಲಿ ಉನ್ನತ ಮಟ್ಟದ ಪರಿಶೀಲನಾ ಸಭೆಯನ್ನು ಬುಧವಾರ ನಡೆಸಲಾಗಿದೆ.
ಈವರೆಗೆ ಸುಮಾರು 50,000 ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ ಎಂದು ಸಿಎಂ ಹೇಳಿದ್ದಾರೆ. ನಮ್ಮ ಗುರಿ ಶೂನ್ಯ ಸಾವುನೋವುಗಳನ್ನು ದಾಖಲಿಸುವುದು. ಹೀಗಾಗಿ ಬೃಹತ್ ಪ್ರಮಾಣದಲ್ಲಿ ಸ್ಥಳಾಂತರಿಸುವ ಕಾರ್ಯಾಚರಣೆಯನ್ನು ಪ್ರಾರಂಭಿಸಲಾಗಿದೆ ಎಂದು ತಿಳಿಸಿದ್ದಾರೆ.
ಗಂಜಾಂ, ಗಜಪತಿ, ಕಂಧಮಲ್, ರಾಯಗಡ, ಕೊರಾಪುಟ್ ಮತ್ತು ಮಲ್ಕಂಗಿರಿ ಜಿಲ್ಲೆಗಳ ಹಲವಾರು ಗ್ರಾಮಗಳಿಂದ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗುತ್ತಿದೆ. ರಾಜ್ಯ ಸರ್ಕಾರದ ವತಿಯಿಂದ 3,000 ಗಂಜಿ ಕೇಂದ್ರಗಳನ್ನು ತೆರೆಯಲಾಗಿದೆ. 448 ಕೇಂದ್ರಗಳು ಸದ್ಯ ಕಾರ್ಯನಿರ್ವಹಿಸುತ್ತಿವೆ. ಪರಿಹಾರ ಮತ್ತು ರಕ್ಷಣಾ ಕಾರ್ಯಾಚರಣೆ ಕೈಗೊಳ್ಳಲು 15 ಜಿಲ್ಲೆಗಳಿಗೆ ರೂ.20 ಕೋಟಿ ಹಂಚಿಕೆ ಮಾಡಲಾಗಿದೆ ಎಂದಿದ್ದಾರೆ.
ಮಲ್ಕಂಗಿರಿ, ಕೊರಾಪುಟ್, ರಾಯಗಡ, ಕಲಹಂಡಿ, ಗಜಪತಿ, ಗಂಜಾಂ, ಕಂಧಮಾಲ್, ಬೌಧ್, ಪುರಿ, ನಯಗಢ್ ಹಾಗೂ ಖುರ್ದಾ ಜಿಲ್ಲೆಗಳಲ್ಲಿ ಗುರುವಾರ ಮತ್ತು ಶುಕ್ರವಾರ ಅತಿಹೆಚ್ಚು ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ ಎಂದು ಅವರು ಹೇಳಿದ್ದಾರೆ.
ರಜೆ ಘೋಷಣೆ: ಒಡಿಶಾ ಸರ್ಕಾರವು ಗುರುವಾರದಿಂದ ಮೂರು ದಿನಗಳ ಕಾಲ ಗಂಜಾಂ, ಗಜಪತಿ, ಪುರಿ, ಜಗತ್ಸಿಂಗ್‌ಪುರ, ಕೇಂದ್ರಪಾರ ಮತ್ತು ಕಂಧಮಲ್ ಜಿಲ್ಲೆಗಳಲ್ಲಿ ಶಾಲೆಗಳಿಗೆ ರಜೆ ಘೋಷಿಸಿದೆ.