ಸ್ಪಂದನಾ ಸೋಮಣ್ಣ ಮದುವೆ ಸಂಭ್ರಮ: ಹಳದಿ ಶಾಸ್ತ್ರದ ಸಡಗರ!

Spandana Somanna Wedding: ಕಿರುತೆರೆ ನಟಿ & ಬಿಗ್ ಬಾಸ್ ಮಾಜಿ ಸ್ಪರ್ಧಿ ಸ್ಪಂದನಾ ಸೋಮಣ್ಣ ಮದುವೆ ಸಂಭ್ರಮ ಜೋರಾಗಿದೆ. ದೀರ್ಘಕಾಲದ ಗೆಳೆಯ ವರುಣ್ ಮುನಿರಾಜು ಜೊತೆ ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ.

Nov 28, 2026 - 11:38
Nov 28, 2026 - 11:49
ಸ್ಪಂದನಾ ಸೋಮಣ್ಣ ಮದುವೆ ಸಂಭ್ರಮ: ಹಳದಿ ಶಾಸ್ತ್ರದ ಸಡಗರ!

Spandana Somanna Wedding: ಕಿರುತೆರೆ ನಟಿ ಹಾಗೂ ಬಿಗ್ ಬಾಸ್ ಮಾಜಿ ಸ್ಪರ್ಧಿ ಸ್ಪಂದನಾ ಸೋಮಣ್ಣ ಅವರ ಮದುವೆ ಸಂಭ್ರಮ ಜೋರಾಗಿದೆ. ದೀರ್ಘಕಾಲದ ಗೆಳೆಯ ವರುಣ್ ಮುನಿರಾಜು ಜೊತೆ ಸ್ಪಂದನಾ ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ. ಈಗಾಗಲೇ ಮದುವೆ ಪೂರ್ವ ಶಾಸ್ತ್ರಗಳು ಆರಂಭವಾಗಿದ್ದು, ಹಳದಿ ಶಾಸ್ತ್ರದ ಸುಂದರ ಕ್ಷಣಗಳ ವಿಡಿಯೋವನ್ನು ಸ್ಪಂದನಾ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಈ ವಿಡಿಯೋ ಅಭಿಮಾನಿಗಳ ಗಮನ ಸೆಳೆಯುತ್ತಿದೆ.

ಹಳದಿ ಶಾಸ್ತ್ರದಲ್ಲಿ ಮಿಂದೆದ್ದ ಸ್ಪಂದನಾ ಜೋಡಿ:

ಸ್ಪಂದನಾ ಅವರ ಮನೆಯಲ್ಲಿ ಕುಟುಂಬಸ್ಥರು ಹಾಗೂ ಆಪ್ತರ ಸಮ್ಮುಖದಲ್ಲಿ ಹಳದಿ ಶಾಸ್ತ್ರ ಅದ್ಧೂರಿಯಾಗಿ ನಡೆದಿದೆ. ಸ್ಪಂದನಾ ಮತ್ತು ವರುಣ್ ಪರಸ್ಪರ ಹಳದಿ ಹಚ್ಚಿಕೊಂಡು ಸಂಭ್ರಮಿಸಿದ್ದಾರೆ. ಶಾಸ್ತ್ರದ ನಡುವೆ ನಡೆದ ಆಟಗಳು ಹಾಗೂ ನವಜೋಡಿಯ ತುಂಟಾಟಗಳು ಸಮಾರಂಭಕ್ಕೆ ಮತ್ತಷ್ಟು ಕಳೆ ತಂದಿವೆ.

ಆರು ವರ್ಷಗಳ ಪ್ರೀತಿಗೆ ಮದುವೆಯ ಮುದ್ರೆ:

ಸ್ಪಂದನಾ ಮತ್ತು ವರುಣ್ ಕಳೆದ ಆರು ವರ್ಷಗಳಿಂದ ಪ್ರೀತಿಸುತ್ತಿದ್ದರು. ಕಳೆದ ಅಕ್ಟೋಬರ್‌ನಲ್ಲಿ ತಮ್ಮ ಪ್ರೀತಿಯ ವಿಚಾರವನ್ನು ಬಹಿರಂಗಪಡಿಸಿದ್ದ ಜೋಡಿ, ಪ್ಯಾರಿಸ್‌ನ ಐಫೆಲ್ ಟವರ್ ಎದುರು ವರುಣ್ ಪ್ರಪೋಸ್ ಮಾಡಿದ್ದ ಸುಂದರ ಕ್ಷಣಗಳ ಫೋಟೋಗಳನ್ನು ಹಂಚಿಕೊಂಡಿದ್ದರು. ಇದೀಗ ಮದುವೆಯ ಸಂಭ್ರಮದಲ್ಲಿರುವ ಜೋಡಿ ತಮ್ಮ ಪ್ರೀತಿಯ ಪಯಣವನ್ನು ನೆನಪಿಸಿಕೊಂಡು ಸಂತಸ ಹಂಚಿಕೊಂಡಿದ್ದಾರೆ.

ಸಂಗೀತ್ ಕಾರ್ಯಕ್ರಮದಲ್ಲೂ ಸಂಭ್ರಮ:

ಹಳದಿ ಶಾಸ್ತ್ರದ ಜೊತೆಗೆ ಸಂಗೀತ್ ಕಾರ್ಯಕ್ರಮವೂ ಅದ್ಧೂರಿಯಾಗಿ ನಡೆದಿದೆ. ವರುಣ್ ಜೊತೆ ಸ್ಪಂದನಾ ಹೆಜ್ಜೆ ಹಾಕಿದ್ದು, ಈ ವೇಳೆ ಭಾವುಕರಾಗಿದ್ದಾರೆ. ಮದುವೆಯ ಸಂಭ್ರಮದಲ್ಲಿರುವ ಈ ಜೋಡಿಗೆ ಅಭಿಮಾನಿಗಳು ಹಾಗೂ ಆಪ್ತರು ಸಾಮಾಜಿಕ ಜಾಲತಾಣಗಳ ಮೂಲಕ ಶುಭಾಶಯಗಳನ್ನು ತಿಳಿಸುತ್ತಿದ್ದಾರೆ.

ಅನುಶ್ರೀ ರೈ 'ಡೇ2ಡೇ ನ್ಯೂಸ್'ನಲ್ಲಿ ಕಳೆದ 2.5 ವರ್ಷದಿಂದ ಕಂಟೆಂಟ್ ರೈಟರ್ ಆಗಿ ಕಾರ್ಯನಿರ್ವಹಿಸುತ್ತಿರುವೆ.