NITK ಸುರತ್ಕಲ್ನ ಡೀನ್ ಪ್ರೊ.ಬಾಡೆಕಾಯಿ ರಾಮಚಂದ್ರ ಭಟ್ ರಾಯಲ್ ಸೊಸೈಟಿ ಆಫ್ ಕೆಮಿಸ್ಟ್ರಿಯ ಫೆಲೋ ಆಗಿ ಆಯ್ಕೆ
Prof.Badekai Ramachandra Bhat: ಎನ್ಐಟಿಕೆ ಸುರತ್ಕಲ್ನ ಡೀನ್ ಪ್ರೊ.ಬಾಡೆಕಾಯಿ ರಾಮಚಂದ್ರ ಭಟ್ ರಾಯಲ್ ಸೊಸೈಟಿ ಆಫ್ ಕೆಮಿಸ್ಟ್ರಿಯ ಫೆಲೋ ಆಗಿ ಆಯ್ಕೆಯಾಗಿದ್ದಾರೆ.
ಸುರತ್ಕಲ್: ಇಲ್ಲಿನ ರಾಷ್ಟ್ರೀಯ ತಂತ್ರಜ್ಞಾನ ಸಂಸ್ಥೆ (NITK), ರಸಾಯನಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಹಾಗೂ ಡೀನ್ (ಸಂಶೋಧನೆ ಮತ್ತು ನವೋದ್ಯಮ) ಆಗಿರುವ ಪ್ರೊ.ಬಾಡೆಕಾಯಿ ರಾಮಚಂದ್ರ ಭಟ್ ಅವರು, ಯುನೈಟೆಡ್ ಕಿಂಗ್ಡಮ್ನ ಪ್ರತಿಷ್ಠಿತ ರಾಯಲ್ ಸೊಸೈಟಿ ಆಫ್ ಕೆಮಿಸ್ಟ್ರಿ ಸಂಸ್ಥೆಯ 'ಫೆಲೋ ಆಫ್ ದಿ ರಾಯಲ್ ಸೊಸೈಟಿ ಆಫ್ ಕೆಮಿಸ್ಟ್ರಿ' (FRSC) ಆಗಿ ಸೇರ್ಪಡೆಯಾಗಿದ್ದಾರೆ.
2026ರ ಅ.20 ರಂದು ಸಂಸ್ಥೆಯ ಸದಸ್ಯತ್ವ ವಿಭಾಗವು ಈ ಗೌರವವನ್ನು ಅಧಿಕೃತವಾಗಿ ದೃಢಪಡಿಸಿತ್ತು. ಇದರೊಂದಿಗೆ ಅವರು, ತಮ್ಮ ಹೆಸರಿನ ಮುಂದೆ 'FRSC' ಎಂಬ ಗೌರವ ಸೂಚಕ ಅಕ್ಷರಗಳನ್ನು ಬಳಸುವ ಅರ್ಹತೆಯನ್ನು ಪಡೆದಿದ್ದಾರೆ.
ಕೇಂಬ್ರಿಡ್ಜ್ ಕೇಂದ್ರವಾಗಿರುವ ರಾಯಲ್ ಸೊಸೈಟಿ ಆಫ್ ಕೆಮಿಸ್ಟ್ರಿ ವಿಶ್ವದ ಪ್ರಮುಖ ರಸಾಯನ ವಿಜ್ಞಾನಿಗಳ ವೃತ್ತಿಪರ ಸಂಸ್ಥೆಗಳಲ್ಲಿ ಒಂದಾಗಿದೆ. ಫೆಲೋಗಳಿಗೆ ಸಂಸ್ಥೆಯ ಜರ್ನಲ್ಗಳ ಸಂಗ್ರಹ, ಕೆಮಿಸ್ಟ್ರಿ ವರ್ಲ್ಡ್ ನಿಯತಕಾಲಿಕೆ, ವಿವಿಧ ವಿಷಯಾಧಾರಿತ ಸಮುದಾಯಗಳು ಹಾಗೂ ಜಾಗತಿಕ ರಸಾಯನ ವಿಜ್ಞಾನಿಗಳ ಜಾಲತಾಣದ ಸೌಲಭ್ಯಗಳು ಲಭ್ಯವಾಗುತ್ತವೆ.
ಈ ಕುರಿತು ಪ್ರತಿಕ್ರಿಯಿಸಿದ ಪ್ರೊ.ಭಟ್, 'ಸಂಸ್ಥೆಗಾಗಿ ಪ್ರಾಮಾಣಿಕವಾಗಿ ದುಡಿಯುವ ಮತ್ತು ವಿಜ್ಞಾನ ಹಾಗೂ ರಸಾಯನಶಾಸ್ತ್ರವನ್ನು ತನ್ನ ಜೀವನದ ಆಸಕ್ತಿಯನ್ನಾಗಿ ಮಾಡಿಕೊಂಡಿರುವ ವ್ಯಕ್ತಿಗೆ ದೊರೆತ ಮಹತ್ವದ ಮಾನ್ಯತೆ ಇದಾಗಿದೆ. ಇದೆಲ್ಲವು ಎನ್ಐಟಿಕೆ ಆಡಳಿತದ ಬೆಂಬಲದಿಂದ ಸಾಧ್ಯವಾಗಿದೆ' ಎಂದು ಹೇಳಿದರು.
ತಮ್ಮ ಸಂಶೋಧನಾ ಕಾರ್ಯಗಳ ಕುರಿತು ಅವರು, 'ಪ್ರತಿದಿನ ನಾವು ಜೈವ ತ್ಯಾಜ್ಯವನ್ನು ಸಾಮಾನ್ಯವಾಗಿ ತ್ಯಜಿಸುವ ವಸ್ತುವೆಂದೇ ಪರಿಗಣಿಸುತ್ತೇವೆ. ಆದರೆ ಅದನ್ನೇ ಮೌಲ್ಯಯುತ ಸಂಪನ್ಮೂಲವನ್ನಾಗಿ ಪರಿವರ್ತಿಸಬಹುದಾದರೆ? ಅದುವೇ 'ವೇಸ್ಟ್ ಟು ವೆಲ್ತ್' ಪರಿಕಲ್ಪನೆಯ ಸಾರವಾಗಿದೆ' ಎಂದರು.
ಪ್ರೊ.ಭಟ್ ಅವರ ಸಂಶೋಧನಾ ತಂಡವು ಜೈವ ತ್ಯಾಜ್ಯದಿಂದ ಅಧಿಕ ಮೇಲ್ಮೈ ವಿಸ್ತೀರ್ಣ ಹೊಂದಿರುವ ರಂಧ್ರಯುಕ್ತ ಕಾರ್ಬನ್ ವಸ್ತುಗಳನ್ನು ಅಭಿವೃದ್ಧಿಪಡಿಸುತ್ತಿದ್ದು, ಇಂಧನ ಶೇಖರಣೆ, ಸಂವೇದಕಗಳು, ಹೈಡ್ರೋಜನ್ ಉತ್ಪಾದನೆ ಹಾಗೂ ವೇಗೋತ್ಪಾದಕಗಳ ಕ್ಷೇತ್ರಗಳಿಗೆ ಉಪಯುಕ್ತವಾಗುವ ನವೀನ ನ್ಯಾನೋ ವಸ್ತುಗಳ ಸಂಶೋಧನೆಯಲ್ಲಿ ತೊಡಗಿಕೊಂಡಿದೆ.
ಅವರ ತಂಡವು ಅಭಿವೃದ್ಧಿಪಡಿಸಿರುವ ಎನ್ಜೈಮ್ ರಹಿತ ಸಂವೇದಕಗಳು ಹೆಚ್ಚಿನ ಕಾರ್ಯಾವಧಿ ಹಾಗೂ ಸಂಗ್ರಹಾವಧಿಯನ್ನು ಹೊಂದಿವೆ. ಡೆಂಗ್ಯೂ ಸೋಂಕನ್ನು ಆರಂಭಿಕ ಹಂತದಲ್ಲಿಯೇ ಪತ್ತೆಹಚ್ಚುವ ಪೇಟೆಂಟ್ ಪಡೆದ ಸಂವೇದಕ ಹಾಗೂ ಕೊಲೆಸ್ಟ್ರಾಲ್ ಪತ್ತೆಗಾಗಿ ಅಭಿವೃದ್ಧಿಪಡಿಸಿರುವ ಪೇಟೆಂಟ್ ಪಡೆದ ಸಂವೇದಕವು ಅವರ ಪ್ರಮುಖ ಸಾಧನೆಗಳಲ್ಲಿ ಸೇರಿವೆ. ಇದರ ಜೊತೆಗೆ ಸೂಪರ್ಕ್ಯಾಪಾಸಿಟರ್ಗಳು ಮತ್ತು ನೀರಿನ ವಿಭಜನೆಯ ಮೂಲಕ ಹೈಡ್ರೋಜನ್ ಉತ್ಪಾದನೆಗೆ ಸಂಬಂಧಿಸಿದ ಪೇಟೆಂಟ್ ಪಡೆದ ಸಂಶೋಧನೆಗಳು ವೈಜ್ಞಾನಿಕ ಆವಿಷ್ಕಾರಗಳನ್ನು ಪ್ರಾಯೋಗಿಕ ಪರಿಹಾರಗಳಾಗಿ ಪರಿವರ್ತಿಸುವ ಅವರ ತಂಡದ ಸಾಮರ್ಥ್ಯವನ್ನು ತೋರಿಸುತ್ತವೆ.
ಪ್ರೊ.ಭಟ್ ಪರಾಮರ್ಶಿತ ಅಂತರರಾಷ್ಟ್ರೀಯ ವೈಜ್ಞಾನಿಕ ನಿಯತಕಾಲಿಕೆಗಳಲ್ಲಿ 180ಕ್ಕೂ ಹೆಚ್ಚು ಸಂಶೋಧನಾ ಲೇಖನಗಳನ್ನು ಪ್ರಕಟಿಸಿದ್ದು, 11 ಭಾರತೀಯ ಪೇಟೆಂಟ್ಗಳನ್ನು ಹೊಂದಿದ್ದಾರೆ. ಅವರ ಮಾರ್ಗದರ್ಶನದಲ್ಲಿ 22 ಸಂಶೋಧನಾ ವಿದ್ಯಾರ್ಥಿಗಳು ಪಿಎಚ್ಡಿ ಪದವಿಯನ್ನು ಪೂರ್ಣಗೊಳಿಸಿದ್ದು, ಪ್ರಸ್ತುತ ಮತ್ತೂ 6 ಮಂದಿ ಪಿಎಚ್ಡಿ ಸಂಶೋಧನೆಯಲ್ಲಿ ತೊಡಗಿದ್ದಾರೆ.
1998ರಲ್ಲಿ ಎನ್ಐಟಿಕೆಗೆ ಸೇರ್ಪಡೆಯಾದ ಅವರು 2026ರ ಸೆಪ್ಟೆಂಬರ್ನಲ್ಲಿ ಡೀನ್ (ಸಂಶೋಧನೆ ಮತ್ತು ನವೋದ್ಯಮ) ಆಗಿ ಅಧಿಕಾರ ವಹಿಸಿಕೊಂಡರು. ಈ ಕಚೇರಿಯು ಸಂಶೋಧನೆ ಹಾಗೂ ಸಲಹಾ ಸೇವೆಗಳಿಗಷ್ಟೇ ಸೀಮಿತವಾಗದೆ ನವೋದ್ಯಮಕ್ಕೂ ಹೆಚ್ಚಿನ ಆದ್ಯತೆ ನೀಡುತ್ತದೆ.