ಕಾಡಿನ ಬದುಕಿಗೆ ಸಜ್ಜಾದ ಸ್ಪರ್ಧಿಗಳು: ಅಕುಲ್ ಬಾಲಾಜಿ ನಿರೂಪಣೆಯಲ್ಲಿ ಜಂಗಲ್ ಪವರ್!

Jungle Power: ಕನ್ನಡ ಕಿರುತೆರೆಯಲ್ಲಿ ಹೊಸ ರಿಯಾಲಿಟಿ ಶೋ 'ಜಂಗಲ್ ಪವರ್' ಸದ್ದು ಮಾಡಲು ಸಜ್ಜಾಗಿದೆ.

Nov 28, 2026 - 13:03
Nov 28, 2026 - 13:21
ಕಾಡಿನ ಬದುಕಿಗೆ ಸಜ್ಜಾದ ಸ್ಪರ್ಧಿಗಳು: ಅಕುಲ್ ಬಾಲಾಜಿ ನಿರೂಪಣೆಯಲ್ಲಿ ಜಂಗಲ್ ಪವರ್!

Jungle Power: ಕನ್ನಡ ಕಿರುತೆರೆಯಲ್ಲಿ ಹೊಸ ರಿಯಾಲಿಟಿ ಶೋ ‘ಜಂಗಲ್ ಪವರ್’ ಸದ್ದು ಮಾಡಲು ಸಜ್ಜಾಗಿದೆ. ಬದುಕಿನ ನಿಯಮಗಳನ್ನೇ ಬದಲಿಸುವ ವಿಭಿನ್ನ ಪರಿಕಲ್ಪನೆಯ ಈ ಕಾರ್ಯಕ್ರಮದ ಪ್ರೋಮೋ ಬಿಡುಗಡೆಯಾಗಿದ್ದು, ವೀಕ್ಷಕರ ಗಮನ ಸೆಳೆಯುತ್ತಿದೆ. ನಟ ಹಾಗೂ ನಿರೂಪಕ ಅಕುಲ್ ಬಾಲಾಜಿ ಈ ಶೋವನ್ನು ತಮ್ಮದೇ ಖಡಕ್ ಶೈಲಿಯಲ್ಲಿ ನಿರೂಪಿಸಲಿದ್ದಾರೆ. ಶೀಘ್ರದಲ್ಲೇ ಜೀ ಕನ್ನಡ ಹಾಗೂ ಜೀ5ನಲ್ಲಿ ಕಾರ್ಯಕ್ರಮ ಪ್ರಸಾರವಾಗಲಿದೆ.

ಯಂತ್ರಗಳ ಜಗತ್ತಿನಿಂದ ಕಾಡಿನ ಬದುಕಿಗೆ:

ಪ್ರೋಮೋ ಆಧುನಿಕ ತಂತ್ರಜ್ಞಾನ ಮತ್ತು ರೊಬೊಟಿಕ್ ಜಗತ್ತಿನ ದೃಶ್ಯಗಳೊಂದಿಗೆ ಆರಂಭವಾಗುತ್ತದೆ. ಮನುಷ್ಯನ ದುರಾಸೆ ಹೇಗೆ ಬೆಳೆಯಿತು ಎಂಬುದನ್ನು ವಿವರಿಸುವ ಸಾಲುಗಳು ಕುತೂಹಲ ಮೂಡಿಸುತ್ತವೆ. ಮೆಟ್ರೋ ಸಾಲದೆ ಯಂತ್ರ ಬೇಕಾಯಿತು, ಭೂಮಿ ಸಾಲದೆ ಚಂದ್ರ ಬೇಕಾಯಿತು, ಕಾಲು ಸಾಲದೆ ಚಕ್ರ ಬೇಕಾಯಿತು ಎಂಬ ಮಾತುಗಳು ಗಮನ ಸೆಳೆಯುತ್ತವೆ.

ಪೂರ್ವಜರ ಬದುಕಿನ ಸವಾಲುಗಳೇ ಆಟ:

ಆಧುನಿಕ ಸೌಲಭ್ಯಗಳಿಗೆ ಒಗ್ಗಿಕೊಂಡಿರುವ ಮನುಷ್ಯನನ್ನು ಮತ್ತೆ ಪ್ರಕೃತಿಯ ಮಡಿಲಿಗೆ ಕರೆದೊಯ್ಯುವ ಪ್ರಯತ್ನವೇ ಈ ಶೋನ ವಿಶೇಷತೆ. ಬೇಟೆಯಾಡಿ ಆಹಾರ ಸಂಪಾದಿಸುವುದು, ಕಲ್ಲು ತಿಕ್ಕಿ ಬೆಂಕಿ ಹೊತ್ತಿಸುವುದು ಸೇರಿದಂತೆ ಪೂರ್ವಜರ ಜೀವನಶೈಲಿಯನ್ನು ನೆನಪಿಸುವ ಸವಾಲುಗಳು ಸ್ಪರ್ಧಿಗಳಿಗಾಗಿ ಕಾಯುತ್ತಿವೆ. ಆಟ ಬದಲಾಗಿಲ್ಲ, ಬದಲಾಗಿರುವುದು ಆಟಗಾರರು ಮಾತ್ರ ಎಂಬ ಸಂದೇಶ ಪ್ರೋಮೋದಲ್ಲಿದೆ.

ಸ್ಪರ್ಧಿಗಳ ಸಾಮರ್ಥ್ಯಕ್ಕೆ ಅಗ್ನಿಪರೀಕ್ಷೆ:

ದಟ್ಟ ಕಾಡು, ಬೆಟ್ಟಗುಡ್ಡಗಳು ಹಾಗೂ ಜಲಪಾತಗಳ ನಡುವೆ ನಡೆಯಲಿರುವ ಈ ಕಾರ್ಯಕ್ರಮದಲ್ಲಿ ಸ್ಪರ್ಧಿಗಳ ದೈಹಿಕ ಮತ್ತು ಮಾನಸಿಕ ಸಾಮರ್ಥ್ಯ ಪರೀಕ್ಷೆಗೆ ಒಳಪಡಲಿದೆ. ಕಂಫರ್ಟ್ ಝೋನ್ ತೊರೆದು ಕಾಡಿನ ಕಠಿಣ ಪರಿಸ್ಥಿತಿಗಳಿಗೆ ಹೊಂದಿಕೊಳ್ಳುವುದು ಸ್ಪರ್ಧಿಗಳಿಗೆ ದೊಡ್ಡ ಸವಾಲಾಗಲಿದೆ. ಜಲಪಾತದ ಹಿನ್ನೆಲೆಯಲ್ಲಿ ಅಕುಲ್ ಬಾಲಾಜಿ ಖಡಕ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದು, ಪ್ರೋಮೋಗೆ ಮತ್ತಷ್ಟು ಮೆರುಗು ನೀಡಿದ್ದಾರೆ.

ಜೀ ಕನ್ನಡ ಮತ್ತು ಜೀ5ನಲ್ಲಿ ಶೀಘ್ರದಲ್ಲೇ:

ಕನ್ನಡ ಕಿರುತೆರೆಯ ಅತಿದೊಡ್ಡ ರಿಯಾಲಿಟಿ ಶೋ ಎಂಬ ಪ್ರಚಾರದೊಂದಿಗೆ ‘ಜಂಗಲ್ ಪವರ್’ ಆಗಮಿಸುತ್ತಿದೆ. ‘ಹಳ್ಳಿ ಪವರ್ ರೀಲೋಡೆಡ್’ ಬಳಿಕ ಪ್ರಸಾರವಾಗಲಿರುವ ಈ ಕಾರ್ಯಕ್ರಮ ಯಾವ ರೀತಿಯ ಸವಾಲುಗಳನ್ನು ಒಳಗೊಂಡಿರಲಿದೆ ಎಂಬ ಕುತೂಹಲ ಮೂಡಿದೆ. ಶೀಘ್ರದಲ್ಲೇ ಜೀ ಕನ್ನಡ ಹಾಗೂ ಜೀ5ನಲ್ಲಿ ಈ ಶೋ ವೀಕ್ಷಕರ ಮುಂದೆ ಬರಲಿದೆ.

ಅನುಶ್ರೀ ರೈ 'ಡೇ2ಡೇ ನ್ಯೂಸ್'ನಲ್ಲಿ ಕಳೆದ 2.5 ವರ್ಷದಿಂದ ಕಂಟೆಂಟ್ ರೈಟರ್ ಆಗಿ ಕಾರ್ಯನಿರ್ವಹಿಸುತ್ತಿರುವೆ.