ಬೆಂಗಳೂರು: ಕಳೆದ ಸೋಮವಾರ, ವಿಶ್ವದ ಬಹುತೇಕ ಎಲ್ಲಾ ಷೇರು ಮಾರುಕಟ್ಟೆಗಳಲ್ಲಿ ರಕ್ತದೋಕುಳಿಯಾಗಿತ್ತು. ಆದರೆ ಭಾರತದ ಷೇರು ಮಾರುಕಟ್ಟೆಯಲ್ಲಿ ಶುಕ್ರವಾರ ತನಕ, ಸೂಚ್ಯಂಕ ಏರು ಗತಿಯಲ್ಲಿ ಸಾಗಿತ್ತು. ಶುಕ್ರವಾರವಷ್ಟೇ ಮಾರಾಟದ ಒತ್ತಡ ಕಾಣಿಸಿಕೊಂಡಿತ್ತು. ಹಾಗಾದರೆ ಇದಕ್ಕೆ ಕಾರಣವೇನು?
ಉತ್ತರ ಸರಳ - ಭಾರತೀಯ ಷೇರು ಮಾರುಕಟ್ಟೆಯಲ್ಲಿ ವಿದೇಶಿ ಸಾಂಸ್ಥಿಕ ಹೂಡಿಕೆದಾರರು (ಎಫ್ಐಐ) ಮತ್ತೆ ಭರ್ಜರಿ ಖರೀದಿಗೆ ಮುಂದಾಗಿದ್ದು, ನವೆಂಬರ್ ತಿಂಗಳಿನಲ್ಲಿ ಇದುವರೆಗೆ ದಾಖಲೆಯ ರೂ.1.22 ಲಕ್ಷ ಕೋಟಿ ಹೂಡಿಕೆ ಮಾಡಿದ್ದಾರೆ. ತಿಂಗಳು ಪೂರ್ಣಗೊಳ್ಳುವ ಮುನ್ನವೇ ವಿದೇಶಿ ಬಂಡವಾಳ ಹೂಡಿಕೆ ಈ ಪ್ರಮಾಣ ತಲುಪಿರುವುದು ಮಾರುಕಟ್ಟೆಯಲ್ಲಿ ಹೊಸ ನಿರೀಕ್ಷೆ ಮೂಡಿಸಿದೆ. ಶುಕ್ರವಾರ ಪ್ರಾಫಿಟ್ ಬುಕ್ಕಿಂಗ್ ಇಲ್ಲವಾಗಿದ್ದರೆ, ಅಂದು ಕೂಡಾ ಸೂಚ್ಯಂಕ ಏರಿಕೆ ಕಾಣುತ್ತಿತ್ತು.
ತಜ್ಞರ ಪ್ರಕಾರ ಎಫ್ಐಐಗಳು ಈ ಬಾರಿ ಜಾಗೃತೆಯಿಂದ ಹೆಜ್ಜೆ ಇಡುತ್ತಿವೆ. ಸಾರಾಸಗಟು ಖರೀದಿ ಬದಲಿಗೆ, ಬ್ಯಾಂಕಿಂಗ್ ಮತ್ತು ಹಣಕಾಸು ಸೇವೆಗಳ ವಲಯವನ್ನು ಅವು ಆಯ್ಕೆಮಾಡಿಕೊಂಡಿವೆ. ನವೆಂಬರ್ ಮೊದಲ ಹದಿನೈದು ದಿನಗಳಲ್ಲಿ ಭಾರತೀಯ ಷೇರುಗಳಲ್ಲಿ ವಿದೇಶಿ ಹೂಡಿಕೆದಾರರು ಮಾಡಿರುವ ಒಟ್ಟು ನಿವ್ವಳ ಖರೀದಿಯಲ್ಲಿ ಸುಮಾರು ಶೇ.51 ರಷ್ಟು ಹಣ ಹಣಕಾಸು ಸೇವೆಗಳ ಕಂಪನಿಗಳಿಗೆ ಹರಿದುಬಂದಿದೆ.
ಈ ಅವಧಿಯಲ್ಲಿ ಹಣಕಾಸು ಸೇವೆಗಳ ಷೇರುಗಳಲ್ಲಿ ಸುಮಾರು ರೂ.43,102 ಕೋಟಿ ಹೂಡಿಕೆಯಾಗಿದೆ. ಇದೇ ಅವಧಿಯಲ್ಲಿ ಎಲ್ಲಾ ವಲಯಗಳಲ್ಲಿನ ಒಟ್ಟು ನಿವ್ವಳ ವಿದೇಶಿ ಷೇರು ಖರೀದಿ ರೂ.84,291 ಕೋಟಿ ಎಂದು ವೆಂಚುರಾ ಸೆಕ್ಯುರಿಟೀಸ್ನ ವರದಿ ತಿಳಿಸಿದೆ. ಗ್ರಾಹಕ ಉತ್ಪನ್ನಗಳು ಮತ್ತು ನಿರ್ಮಾಣ ವಲಯದ ಕಂಪನಿಗಳಲ್ಲಿಯೂ ವಿದೇಶಿ ಹೂಡಿಕೆದಾರರು ಆಸಕ್ತಿ ತೋರಿದ್ದಾರೆ.
ಭಾರತೀಯ ಕಂಪನಿಗಳ ಉತ್ತಮ ಹಣಕಾಸು ಫಲಿತಾಂಶಗಳು, ಜಾಗತಿಕ ಹೂಡಿಕೆದಾರರ ಆದ್ಯತೆಯಲ್ಲಿ ಆಗಿರುವ ಬದಲಾವಣೆ ಮತ್ತು ವಿವಿಧ ಮಾರುಕಟ್ಟೆಗಳ ಷೇರುಗಳ ಮೌಲ್ಯಮಾಪನದಲ್ಲಿನ ವ್ಯತ್ಯಾಸಗಳು ವಿದೇಶಿ ಬಂಡವಾಳದ ಮರುಹರಿವಿಗೆ ಪ್ರಮುಖ ಕಾರಣಗಳಾಗಿವೆ. ಕೃತಕ ಬುದ್ಧಿಮತ್ತೆ (ಎಐ) ಸಂಬಂಧಿತ ವೆಚ್ಚ ಮತ್ತು ತಂತ್ರಜ್ಞಾನ ಕಂಪನಿಗಳ ಮೌಲ್ಯಮಾಪನದ ಬಗ್ಗೆ ಜಾಗತಿಕ ಮಾರುಕಟ್ಟೆಯಲ್ಲಿ ಆತಂಕ ಹೆಚ್ಚಿರುವ ಹಿನ್ನೆಲೆಯಲ್ಲಿ ಹೂಡಿಕೆದಾರರು ತಮ್ಮ ಬಂಡವಾಳವನ್ನು ಮರುಹಂಚಿಕೆ ಮಾಡುತ್ತಿದ್ದಾರೆ.
ನವೆಂಬರ್ 26 ರಂದು ಭಾರತೀಯ ಷೇರು ಮಾರುಕಟ್ಟೆಯಲ್ಲಿಯೂ ಸಾಂಸ್ಥಿಕ ಹೂಡಿಕೆದಾರರ ಖರೀದಿ ಚುರುಕಾಗಿತ್ತು. ಅಂದು ಎಫ್ಐಐಗಳು ರೂ.5,843.33 ಕೋಟಿ ಹಾಗೂ ದೇಶೀಯ ಸಾಂಸ್ಥಿಕ ಹೂಡಿಕೆದಾರರು (ಡಿಐಐ) ರೂ.5,630.72 ಕೋಟಿ ಮೌಲ್ಯದ ಷೇರುಗಳನ್ನು ಖರೀದಿಸಿದ್ದಾರೆ. ಎರಡೂ ವಿಭಾಗಗಳ ಒಟ್ಟು ನಿವ್ವಳ ಖರೀದಿ ರೂ.11,474 ಕೋಟಿ ದಾಟಿದೆ.
ಕಚ್ಚಾ ತೈಲ ಬೆಲೆ ಏರಿಕೆ, ಅಮೆರಿಕದ ವ್ಯಾಪಾರ ನೀತಿಯಲ್ಲಿನ ಅನಿಶ್ಚಿತತೆ ಹಾಗೂ ಜಾಗತಿಕ ಬಡ್ಡಿದರಗಳಲ್ಲಿನ ಬದಲಾವಣೆಗಳು ಮುಂದಿನ ದಿನಗಳಲ್ಲಿ ವಿದೇಶಿ ಹೂಡಿಕೆಯ ಮೇಲೆ ಪರಿಣಾಮ ಬೀರಬಹುದು. ನವೆಂಬರ್ನಲ್ಲಿ ಕಂಡುಬಂದಿರುವ ಭರ್ಜರಿ ಹೂಡಿಕೆಯ ಪ್ರವಾಹ ಡಿಸೆಂಬರ್ನಲ್ಲಿಯೂ ಮುಂದುವರಿಯಲಿದೆಯೇ ಎಂಬುದು ಈಗಿರುವ ಪ್ರಶ್ನೆ.