ಮಂಗಳೂರು: ವಿಜ್ಞಾನವು ಕೇವಲ ವಿಜ್ಞಾನಿಗಳಿಗೆ ಸೀಮಿತವಲ್ಲ. ಅದು ಸರಳ ಆಲೋಚನೆ ಮತ್ತು ಪ್ರಜ್ಞಾವಂತ ಜೀವನದ ಮಾರ್ಗವಾಗಿದೆ. ಜಾಗತೀಕರಣದ ಪರಿಣಾಮವಾಗಿ ಹೆಚ್ಚುತ್ತಿರುವ ಮಾಲಿನ್ಯ, ಅರಣ್ಯನಾಶ ಹಾಗೂ ಪ್ರಕೃತಿ ವಿಕೋಪಗಳಿಂದ ಪರಿಸರದ ಸಮತೋಲನ ಹದಗೆಡುತ್ತಿದೆ. ಆದ್ದರಿಂದ ಮುಂದಿನ ಪೀಳಿಗೆಯ ಹಿತದೃಷ್ಟಿಯಿಂದ ಜೀವವೈವಿಧ್ಯತೆ ಮತ್ತು ನೈಸರ್ಗಿಕ ಸಂಪನ್ಮೂಲಗಳನ್ನು ಸುಸ್ಥಿರವಾಗಿ ಸಂರಕ್ಷಿಸುವುದು ಅತ್ಯಗತ್ಯ ಎಂದು ಡಯಟ್ ಹಿರಿಯ ಉಪನ್ಯಾಸಕಿ ಡಾ.ತ್ರಿವೇಣಿ ಹೇಳಿದರು.
ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಮಂಡಳಿ, ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಸಹಯೋಗದಲ್ಲಿ ಪಿಲಿಕುಳ ಅಭಿವೃದ್ಧಿ ಪ್ರಾಧಿಕಾರದ ಪ್ರಾದೇಶಿಕ ವಿಜ್ಞಾನ ಕೇಂದ್ರದಲ್ಲಿ ನಡೆದ ಜಿಲ್ಲಾ ಮಟ್ಟದ ಮಕ್ಕಳ ವಿಜ್ಞಾನ ಸಮಾವೇಶ ಉದ್ಘಾಟಿಸಿ ಮಾತನಾಡಿದರು.
ತಂತ್ರಜ್ಞಾನವು ಮುಂದಿನ ಪೀಳಿಗೆಯ ಅಭಿವೃದ್ಧಿಗೆ ಪೂರಕವಾಗಿರಬೇಕೇ ಹೊರತು, ವಿನಾಶಕಾರಿಯಾಗಬಾರದು. ದೇಶದ ಸಾಂಪ್ರದಾಯಿಕ ಜ್ಞಾನ ಮತ್ತು ಸಾಂಸ್ಕೃತಿಕ ಆಚರಣೆಗಳ ಮಹತ್ವವನ್ನು ವಿಜ್ಞಾನದೊಂದಿಗೆ ಸಮನ್ವಯಗೊಳಿಸಿಕೊಳ್ಳಬೇಕು. ಶಿಕ್ಷಕರು ವಿದ್ಯಾರ್ಥಿಗಳಿಗೆ ಸಮಾಜದ ನೈಜ ಸಮಸ್ಯೆಗಳನ್ನು ಆಧರಿಸಿದ ಪ್ರಾಯೋಗಿಕ ಯೋಜನೆಗಳನ್ನು ನೀಡುವ ಮೂಲಕ ವೈಜ್ಞಾನಿಕ ಚಿಂತನೆಗೆ ಪ್ರೋತ್ಸಾಹಿಸಬೇಕು ಎಂದು ತಿಳಿಸಿದರು.
ಪಿಲಿಕುಳ ಪ್ರಾದೇಶಿಕ ವಿಜ್ಞಾನ ಕೇಂದ್ರದ ನಿರ್ದೇಶಕ ಡಾ.ಅಶೋಕ್ ಕೆ.ಆರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ವಿಜ್ಞಾನವನ್ನು ಬೆಳೆಸುವ ಜವಾಬ್ದಾರಿ ಎಲ್ಲರ ಮೇಲಿದೆ ಎಂದರು.
ಡಿಜಿಟಲ್ ಮಾಧ್ಯಮಗಳು ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನಕ್ಕೆ ಅಡ್ಡಿಯಾಗದಂತೆ, ಅವುಗಳನ್ನು ಸಕಾರಾತ್ಮಕವಾಗಿ ಮತ್ತು ಮಿತವಾಗಿ ಬಳಸುವ ಮೂಲಕ ಉತ್ತಮ ಡಿಜಿಟಲ್ ಹೈಜಿನ್ ಕಾಯ್ದುಕೊಳ್ಳಬೇಕು ಎಂದು ಕರೆ ನೀಡಿದರು.
ಸರ್ಕಾರಿ ಪ್ರೌಢಶಾಲೆ ಮಾನಿಲದ ಮುಖ್ಯ ಶಿಕ್ಷಕ ಕಿರಣ್‍ರಾಜ್, ಎನ್.ಸಿ.ಎಸ್.ಸಿ ಜಿಲ್ಲಾ ಅಕಾಡೆಮಿಕ್ ಸಂಯೋಜಕ ಪ್ರಕಾಶ್, ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಮಂಡಳಿಯ ಪರಿವೀಕ್ಷಕ ನವನೀತ್ ಉಪಸ್ಥಿತರಿದ್ದರು.
ಈ ಸಮಾವೇಶದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ಶಾಲೆಗಳ ಸುಮಾರು 300 ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಭಾಗವಹಿಸಿದ್ದು, 112 ವಿಜ್ಞಾನ ಮಾದರಿಗಳನ್ನು ಪ್ರದರ್ಶಿಸಿದ್ದರು.
ಕೇಂದ್ರದ ವೈಜ್ಞಾನಿಕಾಧಿಕಾರಿ ವಿಘ್ನೇಶ್ ಭಟ್ ಸ್ವಾಗತಿಸಿದರು. ಕಮ್ಯೂನಿಟಿ ಮೊಬಿಲೈಸರ್ ಶಿವರಾಮ್ ನಾಯ್ಕ್ ವಂದಿಸಿದರು. ಟೆಕ್ನೀಶಿಯನ್ ವಂದನಾ ನಿರೂಪಿಸಿದರು.