Helicopter Crash:ಉತ್ತರಾಖಂಡದ ಬದರಿನಾಥದಿಂದ 6 ಮಂದಿ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್‌ ಪತನ!

ಟ್ರಾನ್ಸ್ ಭಾರತ್ ಏವಿಯೇಷನ್‌ಗೆ ಸೇರಿದ ಈ ಹೆಲಿಕಾಪ್ಟರ್ ಬದರಿನಾಥದಿಂದ ಹಾರಾಟ ಆರಂಭಿಸಿದ ಬಳಿಕ ಜೋಶಿಮಠ ಕಣಿವೆಯ ಮೇಲ್ಭಾಗದಲ್ಲಿ ಹಾರಾಟ ನಡೆಸುತ್ತಿದ್ದಾಗ ಸಂಪರ್ಕ ಕಳೆದುಕೊಂಡಿದೆ. ಹೆಲಿಕಾಪ್ಟರ್‌ನ ಟ್ರ್ಯಾಕಿಂಗ್ ವ್ಯವಸ್ಥೆಯಿಂದಲೂ ಯಾವುದೇ ಮಾಹಿತಿ ಲಭ್ಯವಾಗದೆ ಹೋಗಿದೆ. ಇದರಿಂದ ಆತಂಕಗೊಂಡ ಅಧಿಕಾರಿಗಳು ತಕ್ಷಣವೇ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆ ಆರಂಭಿಸಿದ್ದಾರೆ.

Oct 30, 2026 - 16:21
Oct 30, 2026 - 16:27
Helicopter Crash:ಉತ್ತರಾಖಂಡದ ಬದರಿನಾಥದಿಂದ 6 ಮಂದಿ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್‌ ಪತನ!

 ಉತ್ತರಾಖಂಡ: ಉತ್ತರಾಖಂಡದ ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಬದರಿನಾಥದಿಂದ ಆರು ಮಂದಿಯನ್ನು ಹೊತ್ತೊಯ್ದಿದ್ದ ಹೆಲಿಕಾಪ್ಟರ್ ಶುಕ್ರವಾರ(ಅ.30) ಮಧ್ಯಾಹ್ನ ಪತನಗೊಂಡಿರುವ ಶಂಕೆ ವ್ಯಕ್ತವಾಗಿದೆ. ಹೆಲಿಕಾಪ್ಟರ್‌ನಲ್ಲಿ ಪೈಲಟ್ ಸೇರಿದಂತೆ ಒಟ್ಟು ಆರು ಮಂದಿ ಪ್ರಯಾಣಿಸುತ್ತಿದ್ದರು. ಹೆಲಿಕಾಪ್ಟರ್‌ನ ಅವಶೇಷಗಳು ಇನ್ನು ಕೂಡ ಪತ್ತೆಯಾಗಿಲ್ಲವಾಗಿದ್ದರೂ ಅದರಲ್ಲಿದ್ದ ಪ್ರಯಾಣಿಕರು ಮತ್ತು ಪೈಲಟ್‌ನ ಸ್ಥಿತಿಗತಿ ಕುರಿತು ಯಾವುದೇ ಸ್ಪಷ್ಟ ಮಾಹಿತಿ ಲಭ್ಯವಾಗಿಲ್ಲ.

ಟ್ರಾನ್ಸ್ ಭಾರತ್ ಏವಿಯೇಷನ್‌ಗೆ ಸೇರಿದ ಈ ಹೆಲಿಕಾಪ್ಟರ್ ಬದರಿನಾಥದಿಂದ ಹಾರಾಟ ಆರಂಭಿಸಿದ ಬಳಿಕ ಜೋಶಿಮಠ ಕಣಿವೆಯ ಮೇಲ್ಭಾಗದಲ್ಲಿ ಹಾರಾಟ ನಡೆಸುತ್ತಿದ್ದಾಗ ಸಂಪರ್ಕ ಕಳೆದುಕೊಂಡಿದೆ. ಹೆಲಿಕಾಪ್ಟರ್‌ನ ಟ್ರ್ಯಾಕಿಂಗ್ ವ್ಯವಸ್ಥೆಯಿಂದಲೂ ಯಾವುದೇ ಮಾಹಿತಿ ಲಭ್ಯವಾಗದೆ ಹೋಗಿದೆ. ಇದರಿಂದ ಆತಂಕಗೊಂಡ ಅಧಿಕಾರಿಗಳು ತಕ್ಷಣವೇ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆ ಆರಂಭಿಸಿದ್ದಾರೆ.

ಹೆಲಿಕಾಪ್ಟರ್ ಪತ್ತೆಗಾಗಿ ಹೆಚ್ಚುವರಿಯಾಗಿ ಎರಡು ಹೆಲಿಕಾಪ್ಟರ್‌ಗಳನ್ನು ಕಾರ್ಯಾಚರಣೆಗೆ ನಿಯೋಜಿಸಲಾಗಿದೆ. ಭಾರತೀಯ ಸೇನೆ, ಚಮೋಲಿ ಜಿಲ್ಲಾಡಳಿತ ಹಾಗೂ ರಾಜ್ಯ ವಿಪತ್ತು ನಿರ್ವಹಣಾ ಪಡೆ (SDRF) ತಂಡಗಳನ್ನು ಸ್ಥಳಕ್ಕೆ ರವಾನಿಸಲಾಗಿದ್ದು, ನಾಪತ್ತೆಯಾದ ಹೆಲಿಕಾಪ್ಟರ್ ಮತ್ತು ಅದರಲ್ಲಿದ್ದವರಿಗಾಗಿ ತೀವ್ರ ಶೋಧ ನಡೆಸಲಾಗುತ್ತಿದೆ. ಮುನ್ನೆಚ್ಚರಿಕಾ ಕ್ರಮವಾಗಿ ಟ್ರಾನ್ಸ್ ಭಾರತ್ ಏವಿಯೇಷನ್ ಸಂಸ್ಥೆಯ ಸಂಪೂರ್ಣ ಹೆಲಿಕಾಪ್ಟರ್‌ಗಳ ಹಾರಾಟವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.

ರಕ್ಷಣಾ ಕಾರ್ಯಾಚರಣೆ ಮೇಲ್ವಿಚಾರಣೆ ನಡೆಸುತ್ತಿರುವ ಸಿಎಂ

ಜೋಶಿಮಠ ಪ್ರದೇಶದ ಛಾಯಿ ಗ್ರಾಮದ ಸಮೀಪ ಹೆಲಿಕಾಪ್ಟರ್ ಪತನಗೊಂಡಿರುವ ಬಗ್ಗೆ ಮಾಹಿತಿ ಲಭಿಸಿದೆ ಎಂದು ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ತಿಳಿಸಿದ್ದಾರೆ. ಜಿಲ್ಲಾಡಳಿತ, ವಿಪತ್ತು ನಿರ್ವಹಣಾ ಇಲಾಖೆ ಹಾಗೂ ಎಸ್‌ಡಿಆರ್‌ಎಫ್ ತಂಡಗಳು ಜಂಟಿಯಾಗಿ ರಕ್ಷಣಾ ಕಾರ್ಯಾಚರಣೆ ನಡೆಸುತ್ತಿವೆ ಎಂದು ಅವರು ಹೇಳಿದ್ದಾರೆ.

ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಮಾಹಿತಿ ಹಂಚಿಕೊಂಡಿರುವ ಮುಖ್ಯಮಂತ್ರಿ ಧಾಮಿ, ಪರಿಸ್ಥಿತಿಯನ್ನು ನಿರಂತರವಾಗಿ ಗಮನಿಸುತ್ತಿರುವುದಾಗಿ ತಿಳಿಸಿದ್ದಾರೆ. ಅಲ್ಲದೆ, ಅಪಘಾತದಲ್ಲಿ ಯಾರಾದರೂ ಗಂಭೀರವಾಗಿ ಗಾಯಗೊಂಡಿದ್ದರೆ, ತಕ್ಷಣವೇ ಅವರನ್ನು ಉನ್ನತ ವೈದ್ಯಕೀಯ ಸೌಲಭ್ಯವಿರುವ ಆಸ್ಪತ್ರೆಗಳಿಗೆ ಏರ್‌ಲಿಫ್ಟ್ ಮಾಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಹೆಲಿಕಾಪ್ಟರ್‌ನ ನಿಖರ ಸ್ಥಳ, ಅಪಘಾತದ ಕಾರಣ ಹಾಗೂ ಅದರಲ್ಲಿದ್ದ ಆರು ಮಂದಿಯ ಸ್ಥಿತಿಗತಿ ಇನ್ನೂ ದೃಢಪಟ್ಟಿಲ್ಲ. ರಕ್ಷಣಾ ತಂಡಗಳು ಶೋಧ ಕಾರ್ಯಾಚರಣೆ ಮುಂದುವರಿಸಿವೆ.