ಮಂಗಳೂರು-ಸುಬ್ರಹ್ಮಣ್ಯ ರೋಡ್ ರೈಲ್ವೆ ವಿಭಾಗದಲ್ಲಿ 16.38 ಲಕ್ಷ ಪ್ರಯಾಣಿಕರಿಂದ ಸಂಚಾರ.. 31.31 ಕೋಟಿ ವರಮಾನ!
Mangaluru-Subrahmanya Road: ಮಂಗಳೂರು-ಸುಬ್ರಹ್ಮಣ್ಯ ರೋಡ್ ರೈಲ್ವೆ ವಿಭಾಗದಲ್ಲಿ 16.38 ಲಕ್ಷ ಪ್ರಯಾಣಿಕರು ಸಂಚಾರ ಮಾಡಿದ್ದು, ರೂ.31.31 ಕೋಟಿ ವರಮಾನ ಸಂಗ್ರಹವಾಗಿದೆ.
ದಕ್ಷಿಣ ಕನ್ನಡ: ಕರಾವಳಿಯಲ್ಲಿ ರೈಲ್ವೆ ಪ್ರಯಾಣಿಕರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿದೆ. 2025ರ ಜನವರಿಯಿಂದ 2026ರ ಆಗಸ್ಟ್‌ವರೆಗೆ ಮಂಗಳೂರು ಮತ್ತು ಸುಬ್ರಹ್ಮಣ್ಯ ರೋಡ್ ನಡುವಿನ ಬಂಟ್ವಾಳ, ನೇರಳಕಟ್ಟೆ, ಕಬಕ ಪುತ್ತೂರು, ನರಿಮೊಗರು, ಕಾಣಿಯೂರು, ಎಡಮಂಗಲ, ಕೋಡಿಂಬಾಳ, ಬಜಕರೆ & ಸುಬ್ರಹ್ಮಣ್ಯ ರೋಡ್ ಸೇರಿದಂತೆ 9 ನಿಲ್ದಾಣಗಳಲ್ಲಿ ಬರೋಬ್ಬರಿ 16.38 ಲಕ್ಷ ಪ್ರಯಾಣಿಕರು ಸಂಚರಿಸಿದ್ದು, ರೂ.31.31 ಕೋಟಿ ಪ್ರಯಾಣಿಕ ವರಮಾನ ಸಂಗ್ರಹವಾಗಿದೆ ಎಂಬ ವಿವರಗಳು ಲಭ್ಯವಾಗಿವೆ.
ಸುಮಾರು 10.51 ಲಕ್ಷ ಟಿಕೆಟ್ ಕಾಯ್ದಿರಿಸದ ಹಾಗೂ 5.87 ಲಕ್ಷ ಟಿಕೆಟ್ ಕಾಯ್ದಿರಿಸಿದ ಪ್ರಯಾಣಿಕರಿದ್ದು, ಕ್ರಮವಾಗಿ ರೂ.7.55 ಕೋಟಿ ಮತ್ತು ರೂ.23.76 ಕೋಟಿ ಆದಾಯ ಬಂದಿದೆ. ಇದೇ ಅವಧಿಯಲ್ಲಿ ಸುಮಾರು 1.06 ಲಕ್ಷ ಪ್ಲಾಟ್‌ಫಾರ್ಮ್ ಟಿಕೆಟ್‌ಗಳು ಮಾರಾಟವಾಗಿವೆ.
ಅತ್ಯಧಿಕ ಪ್ರಯಾಣಿಕ ದಟ್ಟಣೆ ಕಂಡ ಸುಬ್ರಹ್ಮಣ್ಯ ರೋಡ್:
ಸುಬ್ರಹ್ಮಣ್ಯ ರೋಡ್ ಈ ವಿಭಾಗದ ಅತ್ಯಂತ ಜನನಿಬಿಡ ನಿಲ್ದಾಣವಾಗಿದೆ. 8.05 ಲಕ್ಷ ಪ್ರಯಾಣಿಕರು ಸಂಚರಿಸಿದ್ದಾರೆ. ಇದರಲ್ಲಿ 4.42 ಲಕ್ಷ ಕಾಯ್ದಿರಿಸದ ಹಾಗೂ 3.64 ಲಕ್ಷ ಕಾಯ್ದಿರಿಸಿದ ಪ್ರಯಾಣಿಕರಿದ್ದಾರೆ. ನಿಲ್ದಾಣವು ಒಟ್ಟು ರೂ.18.86 ಕೋಟಿ ಆದಾಯ ಗಳಿಸಿದ್ದು, ರೂ.4.70 ಕೋಟಿ ಕಾಯ್ದಿರಿಸದ ಮತ್ತು ರೂ.14.16 ಕೋಟಿ ಕಾಯ್ದಿರಿಸಿದ ಪ್ರಯಾಣಿಕರಿಂದ ಬಂದಿದೆ.
9 ನಿಲ್ದಾಣಗಳ ಒಟ್ಟು ಪ್ರಯಾಣಿಕ ದಟ್ಟಣೆಯ ಶೇಕಡ 49% ಹಾಗೂ ಪ್ರಯಾಣಿಕ ವರಮಾನದ ಶೇಕಡ 60% ಸುಬ್ರಹ್ಮಣ್ಯ ರೋಡ್ ಒಂದರಿಂದಲೇ ಬಂದಿದೆ. ಕುಕ್ಕೆ ಸುಬ್ರಹ್ಮಣ್ಯ ಮತ್ತು ಕ್ಷೇತ್ರ ಧರ್ಮಸ್ಥಳಕ್ಕೆ ಪ್ರಮುಖ ಸಂಪರ್ಕ ಕೊಂಡಿಯಾಗಿರುವ ಈ ನಿಲ್ದಾಣದಲ್ಲಿ ಜಾತ್ರೆ, ತೀರ್ಥಯಾತ್ರೆ ಹಾಗೂ ಹಬ್ಬಗಳ ಸಂದರ್ಭಗಳಲ್ಲಿ ಹೆಚ್ಚಿನ ಪ್ರಯಾಣಿಕ ಸಂಚಾರ ಕಂಡುಬರುತ್ತದೆ.
ಕಬಕ-ಪುತ್ತೂರು ರೈಲು ನಿಲ್ದಾಣದ ಮೂಲಕ 5 ಲಕ್ಷಕ್ಕೂ ಅಧಿಕ ಪ್ರಯಾಣಿಕರಿಂದ ಪ್ರಯಾಣ:
ಕಬಕ-ಪುತ್ತೂರು ನಿಲ್ದಾಣದ ಮೂಲಕ 5.04 ಲಕ್ಷ ಪ್ರಯಾಣಿಕರು ಸಂಚರಿಸಿದ್ದು, ಇವರಲ್ಲಿ 3.64 ಲಕ್ಷ ಟಿಕೆಟ್ ಕಾಯ್ದಿರಿಸದ ಮತ್ತು 1.39 ಲಕ್ಷ ಟಿಕೆಟ್ ಕಾಯ್ದಿರಿಸಿದ ಪ್ರಯಾಣಿಕರಿದ್ದಾರೆ. ಈ ನಿಲ್ದಾಣವು ರೂ.7.59 ಕೋಟಿ ವರಮಾನ ಗಳಿಸಿದ್ದು, ರೂ.1.64 ಕೋಟಿ ಕಾಯ್ದಿರಿಸದ ಹಾಗೂ ₹5.94 ಕೋಟಿ ಕಾಯ್ದಿರಿಸಿದ ಪ್ರಯಾಣಿಕರಿಂದ ಬಂದಿದೆ.
ಇಲ್ಲಿ ಸುಮಾರು 53,000 ಪ್ಲಾಟ್‌ಫಾರ್ಮ್ ಟಿಕೆಟ್‌ಗಳು ಮಾರಾಟವಾಗಿದ್ದು, 9 ನಿಲ್ದಾಣಗಳಲ್ಲೇ ಅತಿ ಹೆಚ್ಚು ಪ್ಲಾಟ್‌ಫಾರ್ಮ್ ಟಿಕೆಟ್ ಮಾರಾಟವಾಗಿದೆ. ಪ್ರಯಾಣಿಕರ ಸಂಖ್ಯೆ ಮತ್ತು ಆದಾಯದಲ್ಲಿ ಸುಬ್ರಹ್ಮಣ್ಯ ರೋಡ್ ನಂತರ ಕಬಕ ಪುತ್ತೂರು ಎರಡನೇ ಸ್ಥಾನದಲ್ಲಿದೆ.
ಬಂಟ್ವಾಳ ರೈಲು ನಿಲ್ದಾಣದ ಮೂಲಕ ಎರಡು ಲಕ್ಷಕ್ಕೂ ಹೆಚ್ಚು ಪ್ರಯಾಣಿಕರಿಂದ ಪ್ರಯಾಣ:
ಬಂಟ್ವಾಳ ನಿಲ್ದಾಣದ ಮೂಲಕ 2.15 ಲಕ್ಷ ಪ್ರಯಾಣಿಕರು ಸಂಚರಿಸಿದ್ದಾರೆ. 1.31 ಲಕ್ಷ ಟಿಕೆಟ್ ಕಾಯ್ದಿರಿಸದ ಹಾಗೂ 84,000 ಟಿಕೆಟ್ ಕಾಯ್ದಿರಿಸಿದ ಪ್ರಯಾಣಿಕರಿದ್ದು, ಕ್ರಮವಾಗಿ ರೂ.1.04 ಕೋಟಿ ಮತ್ತು ರೂ.3.65 ಕೋಟಿ ಸೇರಿದಂತೆ ಒಟ್ಟು ₹4.69 ಕೋಟಿ ಆದಾಯ ಬಂದಿದೆ.
ಇಲ್ಲಿ ಸುಮಾರು 37,180 ಪ್ಲಾಟ್‌ಫಾರ್ಮ್ ಟಿಕೆಟ್‌ಗಳು ಮಾರಾಟವಾಗಿದ್ದು, ಈ ವಿಭಾಗದಲ್ಲಿ ಕಬಕ ಪುತ್ತೂರು ನಂತರದ ಸ್ಥಾನದಲ್ಲಿದೆ.
ಸುಬ್ರಹ್ಮಣ್ಯ ರೋಡ್, ಕಬಕ ಪುತ್ತೂರು ಮತ್ತು ಬಂಟ್ವಾಳ ಈ ಮೂರು ನಿಲ್ದಾಣಗಳ ಮೂಲಕ ಒಟ್ಟಾರೆ ಸುಮಾರು 14.25 ಲಕ್ಷ ಪ್ರಯಾಣಿಕರು ಸಂಚರಿಸಿದ್ದು, ಇದು 9 ನಿಲ್ದಾಣಗಳ ಒಟ್ಟು ಪ್ರಯಾಣಿಕ ದಟ್ಟಣೆಯ ಶೇಕಡ 87%. ಈ ಮೂರು ನಿಲ್ದಾಣಗಳಿಂದ ಸುಮಾರು ರೂ.31.14 ಕೋಟಿ ಆದಾಯ ಸಂಗ್ರಹವಾಗಿದೆ.
ಗ್ರಾಮೀಣ ನಿಲ್ದಾಣಗಳ ಅಂಕಿಅಂಶಗಳು:
ಇನ್ನು ಗ್ರಾಮೀಣ ಭಾಗದ ರೈಲು ನಿಲ್ದಾಣಗಳ ಅಂಕಿಅಂಶದ ಕಡೆಗೆ ಗಮನಹರಿಸಿದರೆ ಈ 20 ತಿಂಗಳ ಅವಧಿಯಲ್ಲಿ ಕಾಣಿಯೂರು ರೈಲು ನಿಲ್ದಾಣದಿಂದ 31,700 ಪ್ರಯಾಣಿಕರು ಸಂಚರಿಸಿದ್ದು ರೂ.5.10 ಲಕ್ಷ ಆದಾಯ ಸಂಗ್ರಹವಾಗಿದೆ. ಕಡಬ ತಾಲೂಕು ಕೇಂದ್ರಕ್ಕೆ ಹತ್ತಿರದಲ್ಲಿರುವ ಕೋಡಿಂಬಾಳ ರೈಲು ನಿಲ್ದಾಣದಿಂದ 26,600 ಪ್ರಯಾಣಿಕರು ಓಡಾಟ ನಡೆಸಿದ್ದು, ರೂ.5.25 ಲಕ್ಷ ಆದಾಯ ಬಂದಿದೆ. ಎಡಮಂಗಲ ರೈಲು ನಿಲ್ದಾಣದಿಂದ 25,300 ಪ್ರಯಾಣಿಕರು ಸಂಚರಿಸಿದ್ದು ರೂ.3.20 ಲಕ್ಷ ಆದಾಯ ಸಂಗ್ರಹವಾಗಿದೆ.
ಉಳಿದಂತೆ ಬಜಕರೆ ರೈಲು ನಿಲ್ದಾಣದಿಂದ 11,100 ಪ್ರಯಾಣಿಕರು ಓಡಾಟ ಮಾಡಿದ್ದು, ರೂ.2 ಲಕ್ಷ ಆದಾಯ ಲಭಿಸಿದೆ. ನೇರಳಕಟ್ಟೆಯಿಂದ 10,100 ಪ್ರಯಾಣಿಕರು ಸಂಚರಿಸಿದ್ದು, ರೂ.63,000 ಆದಾಯ ಸಂಗ್ರಹವಾಗಿದೆ. ನರಿಮೊಗರು ರೈಲು ನಿಲ್ದಾಣದಿಂದ 9,100 ಪ್ರಯಾಣಿಕರು ಸಂಚಾರ ನಡೆಸಿದ್ದು, ರೂ.97,000 ಆದಾಯ ಸಂಗ್ರಹವಾಗಿದೆ.
ಪ್ಲಾಟ್‌ಫಾರ್ಮ್ ಟಿಕೆಟ್ ಹಾಗೂ ಇತರ ವರಮಾನ:
ಎಲ್ಲಾ 9 ನಿಲ್ದಾಣಗಳಲ್ಲಿ 1.06 ಲಕ್ಷ ಪ್ಲಾಟ್‌ಫಾರ್ಮ್ ಟಿಕೆಟ್‌ಗಳು ಮಾರಾಟವಾಗಿವೆ. ಕಬಕ ಪುತ್ತೂರಿನಲ್ಲಿ 53,000, ಬಂಟ್ವಾಳದಲ್ಲಿ 37,180 ಮತ್ತು ಸುಬ್ರಹ್ಮಣ್ಯ ರೋಡ್‌ನಲ್ಲಿ 15,730 ಟಿಕೆಟ್‌ಗಳು ಮಾರಾಟವಾಗಿವೆ.
ಬಂಟ್ವಾಳ ಮತ್ತು ಕಬಕ ಪುತ್ತೂರಿನ ಪಾರ್ಕಿಂಗ್ ಗುತ್ತಿಗೆಗಳಿಂದ ಜಿಎಸ್‌ಟಿ ಹೊರತುಪಡಿಸಿ ಕ್ರಮವಾಗಿ ಸುಮಾರು ರೂ.8,250 ಮತ್ತು ರೂ.7,520 ಆದಾಯ ಬಂದಿದೆ.
ದಕ್ಷಿಣ ಕನ್ನಡ ಜಿಲ್ಲಾ ರೈಲು ಬಳಕೆದಾರರ ಸಮಿತಿ