Pm Narendra Modi: ಗುಲಾಬಿ ಮಾರ್ಗದ ಮೆಟ್ರೋ ರೈಲಿಗೆ ಪ್ರಧಾನಿ ನರೇಂದ್ರ ಮೋದಿ ಚಾಲನೆ
PM Narendra Modi: ಪ್ರಧಾನಿ ನರೇಂದ್ರ ಮೋದಿ ಸದ್ದುಗುಂಟೆ ಪಾಳ್ಯದಿಂದ (ಎಸ್.ಜಿ.ಪಾಳ್ಯ) ಕಾಳೇನ ಅಗ್ರಹಾರದವರೆಗಿನ ಮಾರ್ಗದ ಮೆಟ್ರೋ ರೈಲಿಗೆ ಶುಕ್ರವಾರ ಚಾಲನೆ ನೀಡಿದರು.
ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ (Pm Narendra Modi) ಅವರು, ಸದ್ದುಗುಂಟೆ ಪಾಳ್ಯದಿಂದ (ಎಸ್.ಜಿ.ಪಾಳ್ಯ) ಕಾಳೇನ ಅಗ್ರಹಾರದವರೆಗಿನ ಮಾರ್ಗದ ಮೆಟ್ರೋ ರೈಲಿಗೆ ಶುಕ್ರವಾರ ಚಾಲನೆ ನೀಡಿದರು.
ನೂತನ ಮಾರ್ಗವನ್ನು ಲೋಕಾರ್ಪಣೆಗೊಳಿಸಿದ ಬಳಿಕ, ರಾಜ್ಯಪಾಲರಾದ ಡಾ.ಸುಧಾ ಯಾದವ್ ಮುಖ್ಯಮಂತ್ರಿ ಡಿ.ಕೆಶಿವಕುಮಾರ್, ಸಚಿವ ಕೃಷ್ಣ ಬೈರೇಗೌಡ ಹಾಗೂ ಸಂಸದ ತೇಜಸ್ವಿ ಸೂರ್ಯ ಅವರೊಂದಿಗೆ ಎಸ್.ಜಿ.ಪಾಳ್ಯ ಮೆಟ್ರೋ ನಿಲ್ದಾಣದಿಂದ ಬಿಳೇಕಹಳ್ಳಿ ಐಐಎಂ ಮೆಟ್ರೋ ನಿಲ್ದಾಣದವರೆಗೆ ಪ್ರಯಾಣಿಸಿದರು.
ಈ ಗುಲಾಬಿ ಮಾರ್ಗವು ಒಟ್ಟು 21.25 ಕಿ.ಮೀ ಉದ್ದವಿದ್ದು, 18 ನಿಲ್ದಾಣಗಳನ್ನು ಒಳಗೊಂಡಿದೆ. ಸುಮಾರು ರೂ.3,470 ಕೋಟಿ ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗಿದೆ.

ಐಐಎಂ ಆಡಿಟೋರಿಯಂನಲ್ಲಿ ಏರ್ಪಡಿಸಿದ್ದ ವೇದಿಕೆ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಮಾತನಾಡಿ, ಈ ದಿನ ಸಂಪರ್ಕ ವ್ಯವಸ್ಥೆ ಮತ್ತು ಇಂಧನ ಭದ್ರತೆಗೆ ಒತ್ತು ನೀಡುವ ರೂ.15,000 ಕೋಟಿಗೂ ಹೆಚ್ಚಿನ ಮೊತ್ತದ ಯೋಜನೆಗಳಿಗೆ ಚಾಲನೆ ನೀಡಲಾಗಿದೆ. ಮೆಟ್ರೋ ಹಾಗೂ ರೈಲ್ವೆಯಿಂದ ಹಿಡಿದು ಇಂಧನ ಭದ್ರತೆಯವರೆಗಿನ ಈ ಎಲ್ಲಾ ಯೋಜನೆಗಳು, ಕರ್ನಾಟಕದ ಮೂಲಸೌಕರ್ಯಕ್ಕೆ ಹೊಸ ಬಲವನ್ನು ತುಂಬಲಿವೆ ಎಂದು ಹೇಳಿದರು.
ಇಂದು ಪ್ರಾರಂಭಿಸಲಾದ ಯೋಜನೆಗಳು 'ವಿಕಸಿತ ಕರ್ನಾಟಕ'ಕ್ಕೆ ವೇಗ ನೀಡಲಿವೆ. ಇದು 'ವಿಕಸಿತ ಭಾರತ'ದ ನಿರ್ಮಾಣಕ್ಕೆ ದಾರಿ ಮಾಡಿಕೊಡಲಿದೆ. ಹೊಸ 'ಗುಲಾಬಿ ಮಾರ್ಗ'ವನ್ನು ಬೆಂಗಳೂರಿನ ಜನರಿಗೆ ಸಮರ್ಪಿಸಲಾಗಿದೆ. ಈ ಹೊಸ ಮಾರ್ಗದಿಂದ ಐಐಎಂ ಮತ್ತು ಇತರೆ ಸಂಸ್ಥೆಗಳಿಗೆ ಸಂಪರ್ಕ ಜಾಲವು ಸುಧಾರಿಸಲಿದೆ. ಅನೇಕ ವ್ಯಾಪಾರ ಹಾಗೂ ವಾಣಿಜ್ಯ ಕೇಂದ್ರಗಳು ಕೂಡ ಸಂಪರ್ಕಗೊಳ್ಳಲಿವೆ ಎಂದು ತಿಳಿಸಿದರು.
ದೆಹಲಿ ಎನ್‌ಸಿಆರ್ ಮತ್ತು ಮುಂಬೈ ಬಳಿಕ, ಮೆಟ್ರೋ ಜಾಲವು 100 ಕಿ.ಮೀ ವಿಸ್ತರಣೆಗೊಂಡಿರುವ ದೇಶದ ಮೂರನೇ ನಗರವಾಗಿ ಬೆಂಗಳೂರು ಹೊರಹೊಮ್ಮಿದೆ ಎಂದರು.
ನಮ್ಮ ಮೆಟ್ರೋದ ಯಶಸ್ಸು ಕೇವಲ ಒಂದು ಯೋಜನೆಗೆ ಸೀಮಿತವಾಗಿಲ್ಲ. ಇದು ಸುಲಭ ಜೀವನ ಹಾಗೂ ಸುಲಭ ಪ್ರಯಾಣಕ್ಕೆ ಸಂಬಂಧಿಸಿದಂತೆ ದೇಶದ ಹೊಸ ದೃಷ್ಟಿಕೋನದ ಫಲಿತಾಂಶವಾಗಿದೆ. ಮಧ್ಯಮ ವರ್ಗದ ಕುಟುಂಬಗಳ ಜೀವನವನ್ನು ಸುಧಾರಿಸುವ ನಿಟ್ಟಿನಲ್ಲಿ ದೇಶಕ್ಕಿರುವ ಬದ್ಧತೆಯ ಪ್ರತಿಫಲವಿದು ಎಂದು ತಿಳಿಸಿದರು.
ಭಾರತೀಯ ರೈಲ್ವೆ ಕೂಡ ಹಿಂದಿನ ಕಾಲದ ಹಳೆಯ ಮನಸ್ಥಿತಿಗಳನ್ನು ತೊಡೆದು ಹಾಕುತ್ತಿದೆ. ಈಗ ರೈಲ್ವೆಯು ಒಂದು ಹೊಸ ಪರಂಪರೆಯನ್ನು ರೂಪಿಸುತ್ತಿದೆ. ನಮ್ಮ ರೈಲು ನಿಲ್ದಾಣಗಳು, ಲೋಕೋಮೋಟಿವ್‌ಗಳು (ಎಂಜಿನ್‌ಗಳು) ಹಾಗೂ ರೈಲು ಬೋಗಿಗಳು ಭಾರತದ್ದೇ ಆದ ವಿಶಿಷ್ಟವಾದ ಗುರುತನ್ನು ಹೊಂದಿವೆ ಎಂದು ಹೇಳಿದರು.
'ವಂದೇ ಭಾರತ್' ರೈಲುಗಳಾಗಿರಲಿ ಅಥವಾ 'ಅಮೃತ್ ಭಾರತ್' ನಿಲ್ದಾಣಗಳಾಗಿರಲಿ, ಇವು 'ವಿಕಸಿತ ಭಾರತ'ದ ರೈಲು ಸೇವೆಗಳ ಒಂದು ಝಲಕ್ ನ್ನು ತೋರಿಸುತ್ತವೆ. ಕರ್ನಾಟಕದಲ್ಲೂ ಸಹ ಚಾಮರಾಜನಗರ, ಚಿಕ್ಕಮಗಳೂರು, ಸಕಲೇಶಪುರ ಹಾಗೂ ಸುಬ್ರಹ್ಮಣ್ಯ ರೋಡ್ ಸೇರಿದಂತೆ 60ಕ್ಕೂ ಹೆಚ್ಚು ರೈಲು ನಿಲ್ದಾಣಗಳು 'ಅಮೃತ್ ಭಾರತ್' ನಿಲ್ದಾಣಗಳಾಗಲು ಸಜ್ಜಾಗಿವೆ ತಿಳಿಸಿದರು.