Ramayana: 'ರಾಮಾಯಣ: ರೈಸ್ ಆಫ್ ಎ ಲೆಜೆಂಡ್' ಸಿನಿಮಾದಲ್ಲಿ ಕಟ್ಟುಕಥೆಗಳನ್ನು ಸೇರಿಸಿ, ರಾವಣನನ್ನು ವೈಭವೀಕರಿಸಲಾಗಿದೆ ಎಂದು ವಿಶ್ವ ಹಿಂದೂ ಪರಿಷತ್ (ವಿಎಚ್‌ಪಿ) ಆರೋಪಿಸಿದೆ. ಚಿತ್ರದ ಸೆನ್ಸಾರ್ ಪ್ರಮಾಣಪತ್ರ ರದ್ದುಗೊಳಿಸಿ, ಪ್ರದರ್ಶನ ಸ್ಥಗಿತಗೊಳಿಸುವಂತೆ ಒತ್ತಾಯಿಸಿದೆ.
ವಿಎಚ್‌ಪಿ ಪ್ರಧಾನ ಕಾರ್ಯದರ್ಶಿ ಬಜರಂಗ್ ಲಾಲ್ ಬಾಗ್ರಾ ಅವರ ಪ್ರಕಾರ, ಚಿತ್ರ ನಿರ್ಮಾಪಕರು ಮಹರ್ಷಿ ವಾಲ್ಮೀಕಿಯ ಮೂಲ ರಾಮಾಯಣದ ಹಲವು ಘಟನೆಗಳನ್ನು ತಿರುಚಿದ್ದು, ಕಲ್ಪಿತ ಸನ್ನಿವೇಶಗಳನ್ನು ಸೇರಿಸಿ ಪ್ರಮುಖ ಪಾತ್ರಗಳನ್ನು ಕೈಬಿಟ್ಟಿದ್ದಾರೆ. ಅಹಲ್ಯೆಯ ವಿಮೋಚನೆ, ನಿಷಾದರಾಜ ಗುಹನ ಸ್ನೇಹ ಮತ್ತು ಕೇವತ್‌ನ ಭಕ್ತಿಯಂತಹ ಪ್ರಮುಖ ಪ್ರಸಂಗಗಳನ್ನು ಚಿತ್ರದಲ್ಲಿ ಉಲ್ಲೇಖಿಸಿಲ್ಲ ಎಂದು ಆಕ್ಷೇಪಿಸಿದ್ದಾರೆ.
ರಾಮನ ಧರ್ಮರಕ್ಷಣೆಯ ಮಹತ್ತರ ಉದ್ದೇಶವನ್ನು ಪತ್ನಿಯ ಅಪಹರಣಕ್ಕೆ ಪ್ರತೀಕಾರ ತೀರಿಸಿಕೊಳ್ಳುವ ವೈಯಕ್ತಿಕ ಹೋರಾಟವಾಗಿ ಚಿತ್ರಿಸಲಾಗಿದೆ. ಅಲ್ಲದೆ, ರಾವಣನನ್ನು ದಮನಿತರ ವಿಮೋಚಕನಂತೆ ಬಿಂಬಿಸುವ ಮೂಲಕ ಮೂಲ ಕಥೆಯ ಆಶಯವನ್ನು ಬದಲಿಸಲಾಗಿದೆ ಎಂದು ವಿಎಚ್‌ಪಿ ಟೀಕಿಸಿದೆ. ಈ ಬದಲಾವಣೆಗಳು ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ನೋವುಂಟುಮಾಡುತ್ತವೆ ಎಂದು ಬಾಗ್ರಾ ಹೇಳಿದ್ದಾರೆ.
ನಿತೇಶ್ ತಿವಾರಿ ನಿರ್ದೇಶನದ ಈ ಚಿತ್ರದಲ್ಲಿ ರಣಬೀರ್ ಕಪೂರ್ ರಾಮನಾಗಿ, ಸಾಯಿ ಪಲ್ಲವಿ ಸೀತೆಯಾಗಿ ಹಾಗೂ ಯಶ್ ರಾವಣನಾಗಿ ನಟಿಸಿದ್ದಾರೆ. ಸಿನಿಮಾ ಎರಡು ಭಾಗಗಳಲ್ಲಿ ಬಿಡುಗಡೆಯಾಗಲಿದೆ.