ಗುಜರಾತ್, ರಾಜಸ್ಥಾನದಲ್ಲಿ ಎರಡು ಪ್ರತ್ಯೇಕ ರಸ್ತೆ ಅಪಘಾತ: 16 ಸಾವು
Gujarat & Rajasthan Accidents: ಗುಜರಾತ್ ಹಾಗೂ ರಾಜಸ್ಥಾನದಲ್ಲಿ ಶನಿವಾರ ತಡರಾತ್ರಿ ಎರಡು ಪ್ರತ್ಯೇಕ ರಸ್ತೆ ಅಪಘಾತವಾಗಿದ್ದು, ಮಕ್ಕಳು ಸೇರಿದಂತೆ 16 ಮಂದಿ ಮೃತಪಟ್ಟಿದ್ದಾರೆ.
ನವದೆಹಲಿ: ಗುಜರಾತ್ ಹಾಗೂ ರಾಜಸ್ಥಾನದಲ್ಲಿ ಶನಿವಾರ ತಡರಾತ್ರಿ ಎರಡು ಪ್ರತ್ಯೇಕ ರಸ್ತೆ ಅಪಘಾತವಾಗಿದ್ದು, ಮಕ್ಕಳು ಸೇರಿದಂತೆ 16 ಮಂದಿ ಮೃತಪಟ್ಟಿದ್ದಾರೆ.
ಗುಜರಾತ್‌ನಲ್ಲಿ ಕಾರು-ಟ್ರಕ್ ಡಿಕ್ಕಿ: 7 ಸಾವು
ಕಚ್‌ನ 'ಭುಜ್-ಖಾವ್ಡಾ ರಾಷ್ಟ್ರೀಯ ಹೆದ್ದಾರಿ'ಯಲ್ಲಿ ಕಾರು ಮತ್ತು ಟ್ರಕ್ ನಡುವೆ ಡಿಕ್ಕಿಯಾಗಿದ್ದು, ಒಂದೇ ಕುಟುಂಬದ 7 ಮಂದಿ ಮೃತಪಟ್ಟಿದ್ದಾರೆ. ಇಬ್ಬರು ಪುರುಷರು, ಇಬ್ಬರು ಮಹಿಳೆಯರು ಮತ್ತು ಮೂವರು ಮಕ್ಕಳು ಕೊನೆಯುಸಿರೆಳೆದಿದ್ದಾರೆ.
ಮೃತರು ಉತ್ತರಾಖಂಡದ ಗರ್ವಾಲ್‌ನವರಾಗಿದ್ದು, ಭುಜ್‌ನಲ್ಲಿ ಕಾರ್ಯನಿರ್ವಹಿಸುತ್ತಿರುವ ಸೇನಾ ಸಿಬ್ಬಂದಿಯೋರ್ವರ ಕುಟುಂಬ ಸದಸ್ಯರಾಗಿದ್ದಾರೆ. ಘಟನೆಯ ನಂತರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಕಾಸ್ ಸುಂದಾ ಅಪಘಾತ ಸ್ಥಳ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.
ಇತ್ತೀಚಿನ ಮಾಹಿತಿಯ ಪ್ರಕಾರ, ಮೃತರನ್ನು ರಿಂಕಿ ನಿತಿನ್ ಗುಸೇನ್ (35), ಅವರ 4 ತಿಂಗಳ ಪುತ್ರಿ ವಾಮಿಕಾ, ಸೌರಭ್ ಸಿಂಗ್ ನೇಗಿ (30), ಅವರ ಪತ್ನಿ ಸವಿತಾ ಸೌರಭ್ ಸಿಂಗ್ ನೇಗಿ (30), 3 ತಿಂಗಳ ಪುತ್ರಿ ಶಿವಿಕಾ, ರಾಜೇಶ್ ರಾವತ್ (35) ಹಾಗೂ ಅವರ ಪುತ್ರಿ ರಕ್ಷಿತಾ (7) ಎಂದು ಗುರುತಿಸಲಾಗಿದೆ.
ರಾಜಸ್ಥಾನದಲ್ಲಿ ನಿಂತಿದ್ದ ಟ್ರಕ್‌ಗೆ ಕಾರು ಡಿಕ್ಕಿ: 9 ಜನ ಸಾವು
ಕೋಟಾದ 'ಕೋಟಾ-ಉದಯಪುರ ರಾಷ್ಟ್ರೀಯ ಹೆದ್ದಾರಿ'ಯಲ್ಲಿ ನಿಂತಿದ್ದ ಟ್ರಕ್‌ಗೆ ಕಾರು ಡಿಕ್ಕಿಯಾಗಿದ್ದು, ಒಂದೇ ಕುಟುಂಬದ 9 ಮಂದಿ ಸಾವನ್ನಪ್ಪಿದ್ದಾರೆ.
ಮಹಾರಾಷ್ಟ್ರದ ಈ ಕುಟುಂಬ ರಾಜಸ್ಥಾನದ ಖಾತು ಶ್ಯಾಮ್ ದೇವಸ್ಥಾನಕ್ಕೆ ಭೇಟಿ ನೀಡಿ ಹಿಂತಿರುಗುತ್ತಿತ್ತು. 8 ಜನ ಗಾಯಗೊಂಡಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.