ವಿಧಾನ ಪರಿಷತ್ ಚುನಾವಣೆ: ಕಾಂಗ್ರೆಸ್‌ನ ಎಲ್ಲಾ 5 ಮಂದಿಗೆ ಗೆಲುವು

ವಿಧಾನಸಭೆಯಿಂದ ವಿಧಾನಪರಿಷತ್‌ನ 7 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ  ಅಡ್ಡ ಮತದಾನ ಆಗಬಹುದು ಎಂಬ ಸಂಶಯ ನಿಜವಾಗಿದ್ದು, ಜೆಡಿಎಸ್ ಮತ್ತು ಬಿಜೆಪಿ ಪಾಳಯದಲ್ಲೇ ಅದು ನಡೆದಿದೆ. ಹೀಗಾಗಿ ಕಾಂಗ್ರೆಸ್‌ನ ಐದನೇ ಅಭ್ಯರ್ಥಿ ವಿನಯ್‌ ಕಾರ್ತಿಕ್‌ 32 ಮತ ಗಳಿಸಿ ಸುಲಭವಾಗಿ ಆಯ್ಕೆಯಾಗುವುದು ಸಾಧ್ಯವಾಗಿದೆ.

Jun 18, 2026 - 20:42
ವಿಧಾನ ಪರಿಷತ್ ಚುನಾವಣೆ: ಕಾಂಗ್ರೆಸ್‌ನ ಎಲ್ಲಾ 5 ಮಂದಿಗೆ ಗೆಲುವು

ಬೆಂಗಳೂರು, ಜೂನ್‌ 18: ತೀವ್ರ ಕುತೂಹಲ ಕೆರಳಿಸಿದ್ದ ವಿಧಾನ ಪರಿಷತ್ ಚುನಾವಣೆಯ ಫಲಿತಾಂಶ ಗುರುವಾರ ಸಂಜೆ ಹೊರಬಿದ್ದಿದ್ದು, ಕಾಂಗ್ರೆಸ್‌ನ ಎಲ್ಲಾ ಐವರು ಆಯ್ಕೆಯಾಗಿದ್ದರೆ. ಬಿಜೆಪಿಯ ಇಬ್ಬರು ಆಯ್ಕೆಯಾಗಿದ್ದರೆ, ಜೆಡಿಎಸ್‌ ಅಭ್ಯರ್ಥಿ ಪರಾಭವಗೊಂಡಿದ್ದಾರೆ.

ವಿಧಾನಸಭೆಯಿಂದ ವಿಧಾನಪರಿಷತ್‌ನ 7 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ  ಅಡ್ಡ ಮತದಾನ ಆಗಬಹುದು ಎಂಬ ಸಂಶಯ ನಿಜವಾಗಿದ್ದು, ಜೆಡಿಎಸ್ ಮತ್ತು ಬಿಜೆಪಿ ಪಾಳಯದಲ್ಲೇ ಅದು ನಡೆದಿದೆ. ಹೀಗಾಗಿ ಕಾಂಗ್ರೆಸ್‌ನ ಐದನೇ ಅಭ್ಯರ್ಥಿ ವಿನಯ್‌ ಕಾರ್ತಿಕ್‌ 32 ಮತ ಗಳಿಸಿ ಸುಲಭವಾಗಿ ಆಯ್ಕೆಯಾಗುವುದು ಸಾಧ್ಯವಾಗಿದೆ.

ಈ ಚುನಾವಣೆಯಲ್ಲಿ ಬಿಜೆಪಿಯ ಮೂವರು ಮತ್ತು ಜೆಡಿಎಸ್‌ನ ಏಳು ಮಂದಿ ಅಡ್ಡ ಮತದಾನ ಮಾಡಿದ್ದು, ಬಿಜೆಪಿಯ ಒಬ್ಬ ಶಾಸಕರ ಮತ ಅಸಿಂಧುವಾಗಿದೆ.

ಕಾಂಗ್ರೆಸ್‌ನ ಬಿ.ಕೆ.ಹರಿಪ್ರಸಾದ್ 30, ಪಿ.ವಿ.ಮೋಹನ್‌ 29, ಬಿ.ಎಸ್‌.ಶಿವಣ್ಣ 30, ತಿಪ್ಪಣಪ್ಪ ಕಮಕನೂರ 30 ಮತ್ತು ವಿನಯ್ ಕಾರ್ತಿಕ್‌ 32 ಮತಗಳನ್ನು ಗಳಿಸಿ ಗೆಲುವು ಸಾಧಿಸಿದ್ದಾರೆ. ಕಾಂಗ್ರೆಸ್‌ ಪಡೆದ ಒಟ್ಟು ಮತಗಳ ಸಂಖ್ಯೆ 151. ನಿಗದಿತ(140) ಮತಕ್ಕಿಂತ 11 ಹೆಚ್ಚು ಮತಗಳನ್ನು ಗಳಿಸಿದೆ.

ಬಿಜೆಪಿಯ ರಘು ಕೌಟಿಲ್ಯ 29 ಮತ್ತು ಲಿಂಗರಾಜ ಪಾಟೀಲ ಅವರು 27 ಮತಗಳಿಸಿ ಗೆಲುವು ಸಾಧಿಸಿದ್ದಾರೆ. ಒಬ್ಬ ಅಭ್ಯರ್ಥಿಯ ಗೆಲುವಿನ ಕೋಟ 27.63 ಮತಗಳನ್ನು ನಿಗದಿ ಮಾಡಲಾಗಿತ್ತು. ಆದರೆ, ಲಿಂಗರಾಜ ಪಾಟೀಲ ಅವರು ಆ ಕೋಟ ತಲುಪುವಲ್ಲಿ ವಿಫಲರಾದರು. ಎಲಿಮಿನೆಷನ್ ಸುತ್ತಿನಲ್ಲಿ ಗೆಲುವು ಸಾಧಿಸಿದರು. ರಘು  ಅವರಿಗೆ ಚಲಾಯಿಸಿದ ಮತಗಳ ಪೈಕಿ ಒಂದು ಮತ ಅಸಿಂಧುವಾಗಿದೆ.

ಜೆಡಿಎಸ್‌ನಿಂದ ಸ್ಪರ್ಧಿಸಿದ್ದ, ಗೋವಿಂದರಾಜು ಅವರು ಕೇವಲ 14 ಮತಗಳನ್ನು ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

ಕಾಂಗ್ರೆಸ್ ಕಾರ್ಯತಂತ್ರ ಯಶಸ್ವಿ: ತನ್ನ ಐವರೂ ಅಭ್ಯರ್ಥಿಗಳನ್ನು ಗೆಲ್ಲಿಸಬೇಕು ಎಂಬ ನಿಟ್ಟಿನಲ್ಲಿ ಕಾಂಗ್ರೆಸ್ ರೆಸಾರ್ಟ್‌ ರಾಜಕಾರಣಕ್ಕೆ ಇಳಿದಿತ್ತು. ಮೂರು ದಿನ ಬಿಡದಿ ಸಮೀಪದ ವಂಡರ್‌ಲಾ ರೆಸಾರ್ಟ್‌ನಲ್ಲೇ ತನ್ನೆಲ್ಲ ಶಾಸಕರನ್ನು ಇರಿಸಿದ್ದ ಕಾಂಗ್ರೆಸ್‌, ಮತ ಚಲಾವಣೆಯ ವೇಳೆ ಮತ ಅಸಿಂಧು ಆಗದಂತೆ ಎಚ್ಚರ ವಹಿಸಿತ್ತು. ಮೇಲಾಗಿ ಬಿಜೆಪಿ ಮತ್ತು ಜೆಡಿಎಸ್‌ ಮತಗಳನ್ನು ಗಳಿಸುವಲ್ಲಿ ಸಹ ತಂತ್ರ ರೂಪಿಸಿ ಅದರಲ್ಲೂ ಸಫಲವಾಗಿದೆ.