ಬಡಗನ್ನೂರು: ಪಡುಮಲೆ ದೈವಸ್ಥಾನಕ್ಕೆ ನೂತನ ಕೊಡಿಮರ ಮುಹೂರ್ತ

ಪ್ರಶ್ನಾ ಚಿಂತನೆಯಲ್ಲಿ ಚಂದುಕೂಡ್ಲು ಮನೆತನದ ಹಿರಿಯರನ್ನು ನೆನಪಿಸುವ ಕಾರ್ಯವಾಗಬೇಕು ಮತ್ತು ಅದೇ ಮನೆತನದಿಂದಲೇ ಕೊಡಿಮರ ಸಮರ್ಪಣೆಯಾಗಬೇಕು ಎಂಬ ದೈವಾಜ್ಞೆ ಕಂಡುಬಂದಿತ್ತು. ಅದರಂತೆ ಇಂದು ಕೊಡಿಮರವನ್ನು ಕಡಿದು, ಮೆರವಣಿಗೆಯ ಮೂಲಕ ದೈವಸ್ಥಾನಕ್ಕೆ ತರಲಾಗಿದೆ.

Jun 18, 2026 - 20:56
ಬಡಗನ್ನೂರು: ಪಡುಮಲೆ ದೈವಸ್ಥಾನಕ್ಕೆ ನೂತನ ಕೊಡಿಮರ ಮುಹೂರ್ತ

ಬಡಗನ್ನೂರು, ಜೂನ್‌ 18:  ಐತಿಹಾಸಿಕ ಹಿನ್ನೆಲೆಯುಳ್ಳ ಪಡುಮಲೆ ಶ್ರೀ ಪೂಮಾಣಿ ಕಿನ್ನಿಮಾಣಿ ಹಾಗೂ ಶ್ರೀ ವ್ಯಾಘ್ರ ಚಾಮುಂಡಿ (ರಾಜನ್ ದೈವ) ದೈವಸ್ಥಾನಕ್ಕೆ ನೂತನ ಕೊಡಿಮರಕ್ಕಾಗಿ ಮರ ಕಡಿಯುವ ಶುಭ ಮುಹೂರ್ತ ಹಾಗೂ ಭವ್ಯ ಮೆರವಣಿಗೆ ಗುರುವಾರ  ಶ್ರದ್ಧಾಭಕ್ತಿಗಳಿಂದ ನೆರವೇರಿತು. ಚಂದುಕೂಡ್ಲು ಶ್ರೀನಿವಾಸ ಭಟ್ ರವರ ತೋಟದ ಪರಿಸರದಲ್ಲಿ ಈ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು.

ಬೆಳಿಗ್ಗೆ ಕ್ಷೇತ್ರದ ತಂತ್ರಿಗಳಾದ ಬ್ರಹ್ಮಶ್ರೀ ವೇದಮೂರ್ತಿ ಕುಂಟಾರು ವಾಸುದೇವ ತಂತ್ರಿಗಳು ಆಗಮಿಸಿ, ವಿಶೇಷ ಪ್ರಾರ್ಥನೆ ಸಲ್ಲಿಸಿ ಶುಭ ಆಶೀರ್ವದಿಸಿದರು. ತದನಂತರ ವೇದಮೂರ್ತಿ ಬನ್ನೂರು ಗಣೇಶ ಭಟ್ ರವರ ಪೌರೋಹಿತ್ಯದಲ್ಲಿ ಭೂಮಿಪೂಜೆ ಮತ್ತು ವೃಕ್ಷ ಪೂಜೆ ನೆರವೇರಿತು. ವಿಶ್ವಕರ್ಮಿ ನಾರಾಯಣ ಆಚಾರ್ಯ ಮತ್ತು ಶಿಲ್ಪ ತಜ್ಞ ಗಂಗಾಧರ ಆಚಾರ್ಯ ಅವರ ನೇತೃತ್ವದಲ್ಲಿ ನೂತನ ಕೊಡಿಮರಕ್ಕೆ ಮರ ಕಡಿಯುವ ಶುಭ ಮುಹೂರ್ತ ಸಂಪನ್ನಗೊಂಡಿತು.

ಶ್ರೀನಿವಾಸ್ ಭಟ್ ದಂಪತಿಗಳಿಂದ ಮೆರವಣಿಗೆಗೆ ಚಾಲನೆ
ದೈವಸ್ಥಾನಕ್ಕೆ ಸಮರ್ಪಿಸಲಿರುವ ಕೊಡಿಮರವನ್ನು ಲಾರಿಯ ಮೇಲಿಟ್ಟು, ಹೂವಿನ ಮಾಲೆಗಳಿಂದ ಆಕರ್ಷಕವಾಗಿ ಅಲಂಕರಿಸಲಾಗಿತ್ತು. ಚಂದುಕೂಡ್ಲು ಶ್ರೀನಿವಾಸ್ ಭಟ್ ಅವರ ಮನೆಯಂಗಳದಲ್ಲಿ ಶ್ರೀನಿವಾಸ್ ಭಟ್ ಮತ್ತು ವೀಣಾ ಶ್ರೀನಿವಾಸ್ ಭಟ್ ದಂಪತಿಗಳು ಜಂಟಿಯಾಗಿ ಆರತಿ ಬೆಳಗಿ, ತೆಂಗಿನಕಾಯಿ ಹೊಡೆಯುವ ಮೂಲಕ ಕೊಡಿಮರದ ಭವ್ಯ ಮೆರವಣಿಗೆಗೆ ಅಧಿಕೃತ ಚಾಲನೆ ನೀಡಿದರು.

ಭಕ್ತ ಸಾಗರದ ನಡುವೆ ಭವ್ಯ ಮೆರವಣಿಗೆ
ಅಲಂಕೃತ ಲಾರಿಯಲ್ಲಿದ್ದ ಕೊಡಿಮರವನ್ನು ಬ್ಯಾಂಡ್ ವಾದ್ಯ ಹಾಗೂ ಜಯಘೋಷಗಳೊಂದಿಗೆ ಚಂದುಕೂಡ್ಲು ಶ್ರೀನಿವಾಸ್ ಭಟ್ ಅವರ ಮನೆಯಂಗಳದಿಂದ ತಲೆಂಜಿ, ಕೈಲ, ಮೈಂದನಡ್ಕ ಮಾರ್ಗವಾಗಿ ಪಡುಮಲೆ ಬದಿನಾರು ಶ್ರೀ ಪೂಮಾಣಿ-ಕಿನ್ನಿಮಾಣಿ ಹಾಗೂ ಶ್ರೀ ವ್ಯಾಘ್ರ ಚಾಮುಂಡಿ ದೈವಸ್ಥಾನಕ್ಕೆ ಭವ್ಯ ಮೆರವಣಿಗೆಯಲ್ಲಿ ತರಲಾಯಿತು.

ದೈವಸ್ಥಾನಕ್ಕೆ ಕೊಡಿಮರ ತಲುಪಿದ ಬಳಿಕ, ಕ್ಷೇತ್ರದ ಪ್ರಧಾನ ಅರ್ಚಕರಾದ ಮಹಾಲಿಂಗ ಭಟ್ ಅವರ ನೇತೃತ್ವದಲ್ಲಿ ಶ್ರೀ ದೈವಗಳಿಗೆ ವಿಶೇಷ ಮಂಗಳಾರತಿ ನೆರವೇರಿತು. ನೂತನ ಕೊಡಿಮರಕ್ಕೂ ಆರತಿ ಬೆಳಗಿ ವಿಶೇಷ ಪ್ರಾರ್ಥನೆ ಸಲ್ಲಿಸಿದ ನಂತರ, ಲಾರಿಯಿಂದ ಮರವನ್ನು ಇಳಿಸಿ ದೈವಸ್ಥಾನದ ಆವರಣದಲ್ಲಿ ಪ್ರಕಟಿಸಲಾಯಿತು. ಮುಂದಿನ ಕೆತ್ತನೆ ಕಾರ್ಯಗಳು ಶೀಘ್ರವಾಗಿ ನಡೆಯುವಂತೆ ಈ ಸಂದರ್ಭದಲ್ಲಿ ಪ್ರಾರ್ಥಿಸಲಾಯಿತು.

ಪ್ರಶ್ನಾ ಚಿಂತನೆಯಂತೆ ಚಂದುಕೂಡ್ಲು ಮನೆತನದಿಂದ ಸೇವೆ: "ಪೂರ್ವಕಾಲದಲ್ಲಿ ಚಂದುಕೂಡ್ಲು ಮನೆತನದವರಿಂದಲೇ ಕೊಡಿಮರ ಸಮರ್ಪಣೆ ನಡೆದಿತ್ತು. ದೈವಸಂಕಲ್ಪದಂತೆ ಕಳೆದ ಜಾತ್ರೋತ್ಸವದ ಸಂದರ್ಭದಲ್ಲಿ ಕೊಡಿಮರವು ಕೆಳಗೆ ಬಿದ್ದು ತುಂಡಾಗಿತ್ತು. ಬಳಿಕ ನಡೆಸಿದ ಪ್ರಶ್ನಾ ಚಿಂತನೆಯಲ್ಲಿ ಚಂದುಕೂಡ್ಲು ಮನೆತನದ ಹಿರಿಯರನ್ನು ನೆನಪಿಸುವ ಕಾರ್ಯವಾಗಬೇಕು ಮತ್ತು ಅದೇ ಮನೆತನದಿಂದಲೇ ಕೊಡಿಮರ ಸಮರ್ಪಣೆಯಾಗಬೇಕು ಎಂಬ ದೈವಾಜ್ಞೆ ಕಂಡುಬಂದಿತ್ತು. ಅದರಂತೆ ಇಂದು ಕೊಡಿಮರವನ್ನು ಕಡಿದು, ಮೆರವಣಿಗೆಯ ಮೂಲಕ ದೈವಸ್ಥಾನಕ್ಕೆ ತರಲಾಗಿದೆ. ಶೀಘ್ರದಲ್ಲೇ ಕೆತ್ತನೆ ಕೆಲಸ ಮುಗಿಸಿ ಮುಂದಿನ ಜಾತ್ರೋತ್ಸವಕ್ಕೆ ಸಮರ್ಪಿಸಲಾಗುವುದು," ಎಂದು ಶ್ರೀನಿವಾಸ್ ಭಟ್ ಸಿ. ಎಚ್. ತಿಳಿಸಿದರು.

ಗಣ್ಯರ ಉಪಸ್ಥಿತಿ
ಈ ಧಾರ್ಮಿಕ ಕಾರ್ಯಕ್ರಮದಲ್ಲಿ ಶ್ರೀ ಕೂವೆ ಶಾಸ್ತಾರ ವಿಷ್ಣು ಮೂರ್ತಿ ದೇವಸ್ಥಾನದ ಜೀರ್ಣೋದ್ದಾರ ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಶ್ರೀನಿವಾಸ್ ಭಟ್ ಚಂದುಕೂಡ್ಲು, ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಸತೀಶ್ ರೈ ಕಟ್ಟಾವು, ಮಾಜಿ ಅಧ್ಯಕ್ಷ ಮನೋಜ್ ರೈ ಪೇರಾಲು ಉಪಸ್ಥಿತರಿದ್ದರು.

ಪಡುಮಲೆ ದೈವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ರವಿರಾಜ್ ಶೆಟ್ಟಿ ಅಣಿಲೆ, ಸದಸ್ಯರಾದ ಮಹಾಲಿಂಗ ಭಟ್ ಬಿ., ಜನಾರ್ದನ ಪೂಜಾರಿ ಪದಡ್ಕ, ಶ್ರೀನಿವಾಸ್ ಗೌಡ ಕನ್ನಯ, ಪುರಂಧರ ರೈ ಕುದ್ಕಾಡಿ, ಉದಯ ಕುಮಾರ್ ಪಡುಮಲೆ, ಗೋಪಾಲ ನಾಯ್ಕ ದೊಡ್ಡಡ್ಕ, ರವಿರಾಜ ರೈ ಸಜಂಕಾಡಿ, ಅನಿಲ್ ಕುಮಾರ್ ಕನ್ನಡ್ಕ, ಗಣೇಶ್ ಭಟ್ ಈಶಮೂಲೆ, ರೋಹಿತ್ ಮುಡಿಪಿನಡ್ಕ, ದಯಾ ವಿ. ರೈ ಬೆಳ್ಳಿಪ್ಪಾಡಿ, ಶ್ರೀಧರ ನಾಯ್ಕ ನೇರ್ಲಂಪಾಡಿ, ಶಶಿಧರ ರೈ ಕತ್ಯಾಳ ಭಾಗವಹಿಸಿದ್ದರು.

ಪ್ರಗತಿಪರ ಕೃಷಿಕರಾದ ಜಯಂತ ರೈ ಕುದ್ಕಾಡಿ, ಕೃಷ್ಣ ರೈ ಕುದ್ಕಾಡಿ, ನಾಗರಾಜ್ ಭಟ್ ಅರ್ತಿಕೂಡ್ಲು, ಕೃಷ್ಣ ಭಟ್ ಬೀರಮೂಲೆ, ಶ್ರೀನಿವಾಸ್ ಭಟ್ ದೇವಸ್ಯ, ನಿತ್ಯಾನಂದ ಮರದಮೂಲೆ, ಗಣೇಶ್ ಭಟ್ ಪಾದಕರ್ಯ, ಶ್ರೀಪತಿ ಭಟ್ ಇಂದಾಜೆ, ಕೇಶವ ಭಟ್ ಇಂದಾಜೆ, ಉದ್ಯಮಿ ಸುಧಾಕರ ರೈ ಮಂಗಳಾದೇವಿ, ಜಯರಾಮ ಗೌಡ ಕನ್ನಡ್ಕ, ಪುರುಷೋತ್ತಮ ಗೌಡ, ಲಿಂಗಪ್ಪ, ಕುಂಬ್ರ ಶ್ರೀರಾಮ ಭಜನಾ ಮಂದಿರದ ಮಾಜಿ ಅಧ್ಯಕ್ಷ ಪದ್ಮನಾಭ ರೈ ಅರೆಪ್ಪಾಡಿ, ಪಡುಮಲೆ ಶ್ರೀ ಶಾಸ್ತಾರ ಸ್ಪೋರ್ಟ್ಸ್ ಕ್ಲಬ್ ಅಧ್ಯಕ್ಷ ಗಂಗಾಧರ ರೈ ಮೇಗಿನಮನೆ, ದೈವ ನರ್ತಕ ಡಾ. ರವೀಶ್ ಪಡುಮಲೆ ಸೇರಿದಂತೆ ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಹಾಗೂ ಊರ ಪರವೂರ ನೂರಾರು ಭಕ್ತಾದಿಗಳು ಪಾಲ್ಗೊಂಡಿದ್ದರು.