ಆರ್ಥಿಕ ಬೆಳವಣಿಗೆಯಲ್ಲಿ ವಾಣಿಜ್ಯ ವಿದ್ಯಾರ್ಥಿಗಳ ಪಾತ್ರ ಹಿರಿದು: ಸಿ.ಎ.ಅತೀತ ಬ್ರಹ್ಮ
ನೆಲ್ಲಿಕಟ್ಟೆ ಅಂಬಿಕಾ ಪದವಿಪೂರ್ವ ವಿದ್ಯಾಲಯದಲ್ಲಿ ವಿಶೇಷ ಉಪನ್ಯಾಸ ಕಾರ್ಯಕ್ರಮ, ವಾಣಿಜ್ಯ ವಿಭಾಗವನ್ನು ಆಯ್ಕೆ ಮಾಡಿಕೊಂಡರೆ ರಾಷ್ಟ್ರಮಟ್ಟದಲ್ಲಿ ಅಪಾರ ಅವಕಾಶಗಳಿವೆ ಎಂಬ ಸಲಹೆ
ಪುತ್ತೂರು, ಜೂನ್ 19: ಪುತ್ತೂರಿನಲ್ಲಿರುವ ನಟ್ಟೋಜ ಫೌಂಡೇಶನ್ ಟ್ರಸ್ಟ್‌ನ ನೆಲ್ಲಿಕಟ್ಟೆ ಅಂಬಿಕಾ ಪದವಿ ಪೂರ್ವ ವಿದ್ಯಾಲಯದಲ್ಲಿ, ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳಿಗಾಗಿ 'ಪ್ರೇರಣಾ' ಎಂಬ ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಈ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾತನಾಡಿದ ಲೆಕ್ಕಪತ್ರ ಪರಿಶೋಧಕ (ಸಿ.ಎ.) ಅತೀತ ಬ್ರಹ್ಮ ಅವರು, "ದೇಶದ ಸಮೃದ್ಧಿ ಮತ್ತು ಸುಗಮ ಬೆಳವಣಿಗೆಗೆ ಹಣಕಾಸು ವ್ಯವಸ್ಥೆ ಅತ್ಯಂತ ಅವಶ್ಯಕ. ಬ್ಯಾಂಕಿಂಗ್ ಮತ್ತು ಹಣಕಾಸು ವಲಯದಲ್ಲಿ ಸಿ.ಎ. ಹುದ್ದೆಯು ದೇಶದ ಪ್ರಮುಖ ಹಾಗೂ ಉತ್ತಮ ವೇತನದಾಯಕ ಉದ್ಯೋಗಗಳಲ್ಲಿ ಒಂದಾಗಿದೆ" ಎಂದು ತಿಳಿಸಿದರು.
‘ಪಿಯು ಹಂತದಲ್ಲಿ ವಿಜ್ಞಾನ, ಕಲೆ ಮತ್ತು ವಾಣಿಜ್ಯ ಎಂಬ ಮೂರೂ ವಿಭಾಗಗಳು ಮಹತ್ವದ್ದಾಗಿವೆ. ಅದರಲ್ಲೂ ವಾಣಿಜ್ಯ ವಿಭಾಗವನ್ನು ಆಯ್ಕೆ ಮಾಡಿಕೊಂಡರೆ ರಾಷ್ಟ್ರಮಟ್ಟದಲ್ಲಿ ಅಪಾರ ಅವಕಾಶಗಳಿವೆ. ದೇಶದ ಆರ್ಥಿಕ ಪ್ರಗತಿಗೆ ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳ ಕೊಡುಗೆ ದಶಕಗಳಿಂದಲೂ ಗಮನಾರ್ಹವಾಗಿದೆ’ ಎಂದು ಅಭಿಪ್ರಾಯಪಟ್ಟರು.
ಅಲ್ಲದೆ, ವಿದ್ಯಾರ್ಥಿಗಳು ಪರೀಕ್ಷೆಗಾಗಿ ಸೂಕ್ತ ತಯಾರಿ ನಡೆಸುವಂತೆ ಕಿವಿಮಾತು ಹೇಳಿದ ಅವರು, ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳಿಗೆ ಸಿ.ಎ. ಮಾತ್ರವಲ್ಲದೆ ಅಕೌಂಟೆಂಟ್, ಆಡಿಟರ್, ಇಂಟರ್ನಲ್ ಆಡಿಟರ್, ಫೈನಾನ್ಸ್ ರಿಪೋರ್ಟರ್ ಮತ್ತು ಕನ್ಸಲ್ಟೆಂಟ್ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಅವಕಾಶಗಳಿದ್ದು, ಅವುಗಳನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಸಂಸ್ಥೆಯ ಪ್ರಾಂಶುಪಾಲರಾದ ಸತ್ಯಜಿತ್ ಉಪಾಧ್ಯಾಯ ಮತ್ತು ವಾಣಿಜ್ಯ ವಿಭಾಗದ ಮುಖ್ಯಸ್ಥೆ ಅಕ್ಷತಾ ಉಪಸ್ಥಿತರಿದ್ದರು. ವಿದ್ಯಾರ್ಥಿನಿ ವಿಭಾ ಕೆ.ಎಸ್. ಪ್ರಾರ್ಥಿಸಿದರು, ಮಂದಿರಾ ಕಜೆ ಸ್ವಾಗತಿಸಿದರು, ಅನಘಾ ವಿ ಕಾರ್ಯಕ್ರಮ ನಿರೂಪಿಸಿದರು ಮತ್ತು ಸಮನ್ವಿತಾ ಕೆ.ಎ. ವಂದನಾರ್ಪಣೆ ಮಾಡಿದರು.


