ಪುತ್ತೂರು: ಅಂಬಿಕಾ ವಿದ್ಯಾಲಯದಲ್ಲಿ ಗುರುಪೂರ್ಣಿಮಾ ಆಚರಣೆ

Puttur Ambika Vidyalaya: ಅಂಬಿಕಾ ವಿದ್ಯಾಲಯ ಸಿಬಿಎಸ್ಇ ಸಂಸ್ಥೆಯಲ್ಲಿ ಈಚೆಗೆ ಆಯೋಜಿಸಿದ್ದ 'ವ್ಯಾಸ ಪೂರ್ಣಿಮಾ' ಆಚರಣೆಯಲ್ಲಿ ಬ್ರಹ್ಮಶ್ರೀ ಪುರೋಹಿತ ನಾಗರಾಜ ಭಟ್ ಅವರು ಮಾತನಾಡಿದರು.

Aug 3, 2026 - 14:31
ಪುತ್ತೂರು: ಅಂಬಿಕಾ ವಿದ್ಯಾಲಯದಲ್ಲಿ ಗುರುಪೂರ್ಣಿಮಾ ಆಚರಣೆ

ಪುತ್ತೂರು: 'ವ್ಯಾಸ ಪೂರ್ಣಿಮೆ'ಯು ಅಜ್ಞಾನದ ಕತ್ತಲೆ ದೂರ ಮಾಡಿ, ಜ್ಞಾನದ ದೀಪ ಬೆಳಗಿಸಿದ ಮಹರ್ಷಿ ವ್ಯಾಸರನ್ನು ಸ್ಮರಿಸುವ ಅತ್ಯಂತ ಶ್ರೇಷ್ಠ ದಿನವಾಗಿದೆ. ಉತ್ತಮ ವ್ಯಕ್ತಿತ್ವ ನಿರ್ಮಾಣಕ್ಕೆ ಶಿಕ್ಷಣದೊಂದಿಗೆ ಸಂಸ್ಕಾರವು ಅಗತ್ಯವಾಗಿದೆ. ಪ್ರತಿಯೊಬ್ಬರ ಜೀವನದಲ್ಲಿ ಗುರುವಿನ ಸ್ಥಾನ ಅತ್ಯುನ್ನತವಾಗಿದೆ ಎಂದು ಬ್ರಹ್ಮಶ್ರೀ ಪುರೋಹಿತ ನಾಗರಾಜ ಭಟ್ ಹೇಳಿದರು.

ನಟ್ಟೋಜ ಫೌಂಡೇಶನ್ ಟ್ರಸ್ಟ್ ಪ್ರವರ್ತಿತ ಬಪ್ಪಳಿಗೆಯ ಅಂಬಿಕಾ ವಿದ್ಯಾಲಯ ಸಿಬಿಎಸ್ಇ ಸಂಸ್ಥೆಯಲ್ಲಿ ಈಚೆಗೆ ಆಯೋಜಿಸಿದ್ದ 'ವ್ಯಾಸ ಪೂರ್ಣಿಮಾ' ಆಚರಣೆಯಲ್ಲಿ ಅವರು ಮಾತನಾಡಿದರು.

'ರಾಮದಾಸರು ಛತ್ರಪತಿ ಶಿವಾಜಿಗೆ ರಾಜಕೀಯ ಹಾಗೂ ಆಧ್ಯಾತ್ಮಿಕ ಜೀವನಕ್ಕೆ ಮಾರ್ಗದರ್ಶಕರಾಗಿದ್ದರು. ಹರಿಹರ - ಬುಕ್ಕರಾಯರಿಗೆ ವಿದ್ಯಾರಣ್ಯರು ಮಾರ್ಗದರ್ಶನ ನೀಡಿ, ಸಾಮ್ರಾಜ್ಯ ನಿರ್ಮಾಣಕ್ಕೆ ಪ್ರೇರಣೆಯಾಗಿದ್ದರು. ಶ್ರೀರಾಮಕೃಷ್ಣ ಪರಮಹಂಸರು ಸ್ವಾಮಿ ವಿವೇಕಾನಂದರ ಸಂಶಯಗಳನ್ನು ನಿವಾರಿಸಿ ಅವರನ್ನು ವಿಶ್ವಪ್ರಸಿದ್ಧ ಆಧ್ಯಾತ್ಮಿಕ ನಾಯಕನನ್ನಾಗಿ ರೂಪಿಸಿದರು. ಹೀಗೆ, ಪ್ರತಿಯೊಬ್ಬ ಮಹಾನ್ ವ್ಯಕ್ತಿಯ ಯಶಸ್ಸಿನ ಹಿಂದೆ ಒಬ್ಬ ಶ್ರೇಷ್ಠ ಗುರುವಿನ  ಶಿಕ್ಷಣವಿರುತ್ತದೆ' ಎಂದು ತಿಳಿಸಿದರು.

ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಆಡಳಿತಾಧಿಕಾರಿ ಗಣೇಶ್ ಪ್ರಸಾದ್ ಅಧ್ಯಕ್ಷತೆ ವಹಿಸಿ ಮಾತನಾಡಿ, 'ಭಾರತೀಯ ಸಂಸ್ಕೃತಿಯಲ್ಲಿ ಗುರುವಿಗೆ ದೇವರ ಸ್ಥಾನವಿದೆ. ಆಚಾರ್ಯ ದೇವೋಭವ ಎಂಬ ಸಂದೇಶವು ಗುರುವಿನ ಮಹತ್ವವನ್ನು ಸಾರುತ್ತದೆ. ಗುರುಭಕ್ತಿ, ನಿಷ್ಠೆ ಮತ್ತು ಶ್ರದ್ಧೆಯಿಂದ ವಿದ್ಯೆಯನ್ನು ಸಂಪಾದಿಸಿದಾಗ ಯಶಸ್ಸು ದೊರೆಯುತ್ತದೆ' ಎಂದು ಹೇಳಿದರು.

ಈ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಬ್ರಹ್ಮಶ್ರೀ ಪುರೋಹಿತ ನಾಗರಾಜ ಭಟ್ ಅವರ ಪಾದಪೂಜೆ ನೆರವೇರಿಸಿ, ಗುರುವಂದನೆ ನಡೆಸಿದರು. ಪ್ರಾಂಶುಪಾಲೆ ಮಾಲತಿ.ಡಿ ಮತ್ತು ಉಪಪ್ರಾಂಶುಪಾಲೆಯಾದ ಸುಜನಿ ಬೋರ್ಕರ್ ಉಪಸ್ಥಿತರಿದ್ದರು. 

ವಿದ್ಯಾರ್ಥಿಗಳು ಗುರುಸ್ತುತಿಯನ್ನು ಪಠಿಸಿದರು. ಗುರುವಿನ ಮಹತ್ವದ ಕುರಿತು ಕೆ.ಎಂ.ಶಮಿತ ಭಟ್ ಮಾತನಾಡಿದರು. ಶಿಕ್ಷಕಿ ಪ್ರಿಯಶ್ರೀ ಅತಿಥಿಗಳನ್ನು ಪರಿಚಯಿಸಿದರು. ಅನನ್ಯಾ.ಬಿ ಸ್ವಾಗತಿಸಿದರು. ಗುರುಪೂರ್ಣಿಮೆಯ ಬಗ್ಗೆ ಸುಧನ್ವ.ಕೆ ಪ್ರಸ್ತಾವನೆಗೈದರು. ಲಾವಣ್ಯ ಪಟ್ಟೆ ವಂದಿಸಿದರು, ಮನಸ್ವಿ.ಎಂ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದ ಅಂತ್ಯದಲ್ಲಿ ಮಹರ್ಷಿ ವ್ಯಾಸರ ಭಾವಚಿತ್ರಕ್ಕೆ ಆರತಿ ಬೆಳಗಿ, ಗೌರವ ಸಲ್ಲಿಸಲಾಯಿತು.

Day2day News ನವ ಮಾಧ್ಯಮದ ವೃತ್ತಿಪರ ಡಿಜಿಟಲ್‌ ಮಾಧ್ಯಮ ಸಂಸ್ಥೆ. ವೆಬ್‌ ನ್ಯೂಸ್‌ ಪೋರ್ಟಲ್‌ನಿಂದ ಹಿಡಿದು ಇನ್‌ಸ್ಟಾ, ಎಕ್ಸ್, ಫೇಸ್‌ಬುಕ್‌, ಯೂಟ್ಯೂಬ್‌, ನ್ಯೂಸ್‌ ಆಪ್‌ವರೆಗೆ ಎಲ್ಲ ಡಿಜಿಟಲ್‌ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ - ಮಾಹಿತಿಯನ್ನು ಸರಳ, ಸಂಕ್ಷಿಪ್ತವಾಗಿ ನೀಡುತ್ತದೆ. ಜತೆಗೆ Day2day Short News ಕರ್ನಾಟಕದ ಮೊದಲ ಶಾರ್ಟ್‌ ಆಪ್‌. Swipe ಮಾಡಿ ಸುದ್ದಿ ಓದಿ. ನಮ್ಮ ಎಲ್ಲ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ & ಜಾಹೀರಾತು ನೀಡಲು 7070708646ಗೆ ಸಂಪರ್ಕಿಸಿ.