ಈಶ್ವರಮಂಗಲ: ಮಾಂಡೋವಿ ಮೋಟಾರ್ಸ್‌ನ ಶಾಖೆಯ ಪ್ರಥಮ ವಾರ್ಷಿಕೋತ್ಸವ ಆಚರಣೆ

Ishwaramangala: ಇಲ್ಲಿನ ಮಾಂಡೋವಿ ಮೋಟಾರ್ಸ್‌ನ ಶಾಖೆಯ ಪ್ರಥಮ ವಾರ್ಷಿಕೋತ್ಸವ ಕಾರ್ಯಕ್ರಮವಿಂದು ಅದ್ದೂರಿಯಾಗಿ ನಡೆಯಿತು.

Sep 16, 2026 - 21:14
ಈಶ್ವರಮಂಗಲ: ಮಾಂಡೋವಿ ಮೋಟಾರ್ಸ್‌ನ ಶಾಖೆಯ ಪ್ರಥಮ ವಾರ್ಷಿಕೋತ್ಸವ ಆಚರಣೆ

ಪುತ್ತೂರು: 'ಮಾರುತಿ ಸುಜುಕಿ' ಸಂಸ್ಥೆಯ ಅಧಿಕೃತ ಮಾರಾಟಗಾರ ಸಂಸ್ಥೆಯಾದ 'ಮಾಂಡೋವಿ ಮೋಟಾರ್ಸ್'ನ ಈಶ್ವರಮಂಗಲ ಶಾಖೆಯ ಪ್ರಥಮ ವಾರ್ಷಿಕೋತ್ಸವ ಮತ್ತು 100 ಯಶಸ್ವಿ ಗ್ರಾಹಕರ ವಿಶ್ವಾಸೋತ್ಸವ ಕಾರ್ಯಕ್ರಮವು ಇಂದು ಅದ್ದೂರಿಯಾಗಿ ನಡೆಯಿತು. 

ತನ್ನ ಗುಣಮಟ್ಟದ ಸೇವೆ, ಪಾರದರ್ಶಕ ವ್ಯವಹಾರ ಹಾಗೂ ಗ್ರಾಹಕರ ಬೆಂಬಲದೊಂದಿಗೆ, ಅತ್ಯಲ್ಪ ಅವಧಿಯಲ್ಲಿ 100 ಸಂತುಷ್ಟ ಗ್ರಾಹಕರ ಮೈಲಿಗಲ್ಲನ್ನು ಸಾಧಿಸಲು ಈಶ್ವರಮಂಗಲ ಶಾಖೆ ಸಫಲವಾಗಿದೆ. ಗ್ರಾಹಕರು ಸಂಸ್ಥೆಯ ಮೇಲಿಟ್ಟಿರುವ ಅಪಾರ ವಿಶ್ವಾಸಕ್ಕೆ ಧನ್ಯವಾದ ಅರ್ಪಿಸುವ ನಿಟ್ಟಿನಲ್ಲಿ ಈ ವಿಶೇಷ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು. 

ಮುಖ್ಯ ಅಥಿತಿಯಾಗಿ ಆಗಮಿಸಿದ್ದ ಹನುಮಗಿರಿ ಕ್ಷೇತ್ರದ ಧರ್ಮದರ್ಶಿ ಶಿವರಾಮ ಪಿ ಮಾತನಾಡಿ, ಇಂದು ಅತ್ಯಂತ ಸಂತೋಷದ ದಿನ. ಒಂದೇ ವರ್ಷದಲ್ಲಿ 100  ಗ್ರಾಹಕರನ್ನು ಹೊಂದಿರುವುದು ಹೆಮ್ಮೆಯ ವಿಚಾರವಾಗಿದೆ. ಕೊನೆತೋಟ ಮನೆತನದವರು, ಹೊಸತನ ಕಾಣುವ ಎಲ್ಲಾ ವ್ಯವಸ್ಥೆಯನ್ನು ಈಶ್ವರಮಂಗಲಕ್ಕೆ ಕಲ್ಪಿಸಿಕೊಟ್ಟಿದ್ದಾರೆ. ನಮ್ಮಲ್ಲಿರುವ ಮಾಂಡೋವಿ ಮೋಟಾರ್ಸ್ ಊರಿನ ಘನತೆಯನ್ನು ಹೆಚ್ಚಿಸಿದೆ. ಸಿಬ್ಬಂದಿಗಳು ಉತ್ತಮ ಸೇವೆ ನೀಡಿ, ಜನರನ್ನು ಸೆಳೆಯುವ ಪ್ರಯತ್ನ ಮಾಡುತ್ತಿದ್ದಾರೆ' ಎಂದು ಹೇಳಿದರು.

ಪಂಚಲಿಂಗೇಶ್ವರ ಪ್ರೌಢಶಾಲೆಯ ನಿವೃತ್ತ ದೈಹಿಕ ಶಿಕ್ಷಕ ರಘುನಾಥ ರೈ ಮಾತನಾಡಿ, '2007 ರಿಂದ ನಾನು ಕೂಡ ಮಾಂಡೋವಿ ಮೋಟಾರ್ಸ್‌ನ ಗ್ರಾಹಕ. ಅವರ ಸೇವೆಯನ್ನು ಎಲ್ಲರೂ ಮೆಚ್ಚುವರು. ಶೀಘ್ರದಲ್ಲೇ ಇಲ್ಲಿಯೇ ಸರ್ವಿಸ್ ಸೆಂಟರ್‌ ಆರಂಭವಾಗಿ, ಗ್ರಾಹಕರಿಗೂ ಅದರ ಪ್ರಯೋಜನಗಳು ಲಭಿಸಲಿ. ಇನ್ನಷ್ಟು ಹೆಚ್ಚು ಖರೀದಿದಾರರನ್ನು ಹೊಂದುವುದರೊಂದಿಗೆ, ಸಂಸ್ಥೆಯು ಬೆಳೆಯಲಿ' ಎಂದು ತಿಳಿಸಿದರು. 

ಕರ್ನಾಟಕ ಬ್ಯಾಂಕ್‌ನ ಡಿಜಿಎಂ ವಿಶ್ವನಾಥ್ ಮಾತನಾಡಿ, 'ಮಾಂಡೋವಿ ಮೋಟಾರ್ಸ್ ಸಂಸ್ಥಾಪಕರು ಕರ್ನಾಟಕ ಬ್ಯಾಂಕ್‌ನ ನಿರ್ದೇಶಕರೂ ಆಗಿದ್ದರು. ಕಾರು ಖರೀದಿಗೆ ನಮ್ಮ ಬ್ಯಾಂಕ್‌ನಿಂದ ಉತ್ತಮ ಸಾಲ ಸೌಲಭ್ಯವಿದೆ. ಮಾಂಡೋವಿ ಮೋಟಾರ್ಸ್ ಬೆಳೆಯಲಿ, ಅದರೊಂದಿಗೆ ನಮ್ಮ ಬ್ಯಾಂಕ್‌ ಸಹ ಪ್ರಗತಿಯಾಗಲಿ' ಎಂದರು.

ಮಾಂಡೋವಿ ಮೋಟಾರ್ಸ್‌ನ ಸೇಲ್ಸ್ & ಮಾರ್ಕೆಟಿಂಗ್ ವಿಭಾಗದ ಜನರಲ್ ಮ್ಯಾನೇಜರ್ ಶಶಿಧರ್ ಕಾರಂತ್ ಮಾತನಾಡಿ, 'ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಅಭಿವೃದ್ಧಿ ಹೊಂದಲಿರುವ ಗ್ರಾಮೀಣ ಪ್ರದೇಶಗಳಲ್ಲಿ, ಶಾಖೆಗಳನ್ನು ಮಾಡುವ ಉದ್ದೇಶದಿಂದ ಈಶ್ವರಮಂಗಲದಲ್ಲೂ ಶುರು ಮಾಡಿದ್ದೇವೆ. ಕಂಪನಿಯ ಅಧಿಕೃತ ಆದೇಶ ಬರುವ ಮೊದಲೇ, ನಾವು ಕಳೆದ ವರ್ಷ ಸಂಸ್ಥೆ ಆರಂಭಿಸಿದ್ದೆವು. ಸಂಸ್ಥೆಯ ಮೇಲೆ ವಿಶ್ವಾಸವಿಟ್ಟು 100 ಗ್ರಾಹಕರು ಕಾರು ಖರೀದಿ ಮಾಡಿದ್ದಾರೆ. ಮುಂದೆಯೂ ಗ್ರಾಮೀಣ ಭಾಗದಲ್ಲಿ ನಮ್ಮ ಶಾಖೆ ವಿಸ್ತರಿಸುವ ಆಲೋಚನೆಯಿದೆ' ಎಂದು ಹೇಳಿದರು. 

ನಮ್ಮ ಕಟ್ಟಡದಲ್ಲಿಯೇ ಕರ್ನಾಟಕ ಬ್ಯಾಂಕ್ ಶಾಖೆ ಇರುವುದು ನಮಗೆ ಪ್ಲಸ್ ಪಾಯಿಂಟ್ ಆಗಿದೆ. ಬ್ಯಾಂಕ್‌ನ ಸಾಲ ಸೌಲಭ್ಯದಲ್ಲಿ ಕಾರು ಖರೀದಿಗೆ ಉತ್ತಮ ಅವಕಾಶವಿದೆ ಎಂದರು. ಶಾಖೆ ಪ್ರಾರಂಭಿಸಲು ಸಹಕಾರ ನೀಡಿದ ಮಹಾಬಲೇಶ್ವರ ಭಟ್‌ ಅವರಿಗೂ ಕೃತಜ್ಞತೆ ಸಲ್ಲಿಸಿದರು.

ಹೊಸ ಕಾರು ಖರೀದಿಸಿದ ಗ್ರಾಹಕರಿಗೆ ಕೀ ಹಸ್ತಾಂತರ:

ಇದೇ ವೇಳೆ ನೂತನವಾಗಿ ಕಾರು ಖರೀದಿಸಿದ ಗ್ರಾಹಕರಾದ ಶಿವರಾಮ ಭಟ್ ಪೆರ್ಲಂಪಾಡಿ  ರಫೀಕ್, ರಮೇಶ್ ಹಾಗೂ ಇಮಾಮುದ್ದೀನ್ ಅವರಿಗೆ 'ಕೀ'ಯನ್ನು ಹಸ್ತಾಂತರಿಸಲಾಯಿತು.
 
ಗೌರವ ಸಮರ್ಪಣೆ:

ನೆಟ್ಟಣಿಗೆ ಮುಡ್ನೂರು ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಮಹಮ್ಮದ್ ರಿಯಾಜ್ ಶುಭಹಾರೈಸಿದರು. ಕಾರ್ಯಕ್ರಮದಲ್ಲಿ ಮಾಂಡೋವಿ ಮೋಟಾರ್ಸ್ ಸಹಾಯಕ ಪ್ರಬಂಧಕ ಸುರೇಶ್ ಬಿ.ಜಿ, ಸಿಬ್ಬಂದಿಗಳಾದ ಅವಿನಾಶ್ ಜೈನ್, ಅಶ್ವಿತ್ ರೈ, ಸುದೇಶ್ ಜೈನ್, ಹರಿಕಿರಣ್ ಮತ್ತು ಕರ್ನಾಟಕ ಬ್ಯಾಂಕ್ ಈಶ್ವರಮಂಗಲ ಶಾಖೆ ಮ್ಯಾನೇಜರ್ ಶ್ರೀಕೃಷ್ಣ ಭಟ್, ಕ್ಲಸ್ಟರ್ ಹೆಡ್ ಪೂರ್ಣಚಂದ್ರ ಹಾಗೂ ಚಂದ್ರಶೇಖರ್ ಭಾಗವಹಿಸಿದ್ದರು. ಅವರನ್ನು ಗೌರವಿಸಲಾಯಿತು.

ಮಾಂಡೋವಿ ಮೋಟಾರ್ಸ್‌ನ ಸುಜಿತ್ ಸ್ವಾಗತಿಸಿದರು. ಸಂದೀಪ್ ಏರುಕೊಟ್ಯ ಕಾರ್ಯಕ್ರಮ ನಿರೂಪಿಸಿದರು. ಸೇಲ್ಸ್ ಮ್ಯಾನೇಜರ್ ಅಕ್ಷಯ್ ಧನ್ಯವಾದ ಅರ್ಪಿಸಿದರು.

ಸಂಜಯ್ ಅಂಬೇಕರ್ ಟಿಜಿ ವಿವಿಧ ಮಾಧ್ಯಮ ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದು, 9 ವರ್ಷ ಅನುಭವವನ್ನು ಹೊಂದಿದ್ದೇನೆ. ಸದ್ಯ 'ಡೇ2ಡೇ ನ್ಯೂಸ್'ನಲ್ಲಿ ಕೆಲಸ ಮಾಡುತ್ತಿದ್ದೇನೆ.