Rasadhana: ಶಿಲ್ಪ ಕಾವ್ಯಗಳಿಗೆ ನಾಟ್ಯ ಜೀವ: ನಿರುಪಮಾ ರಾಜೇಂದ್ರ 'ರಸಾರಾಧನೆ'

Rasadhana: ಸೆ.20 ರಂದು ಬೆಂಗಳೂರಿನ ದೊಡ್ಡಕಲ್ಲಸಂದ್ರದ ಮೀನಾಕ್ಷಿ ರಂಗಮಂಚದಲ್ಲಿ 'ರಸಾರಾಧನೆ' ಕಾರ್ಯಕ್ರಮವು ನಡೆಯಲಿದೆ.

Sep 16, 2026 - 17:35
Sep 16, 2026 - 18:25
Rasadhana: ಶಿಲ್ಪ ಕಾವ್ಯಗಳಿಗೆ ನಾಟ್ಯ ಜೀವ: ನಿರುಪಮಾ ರಾಜೇಂದ್ರ 'ರಸಾರಾಧನೆ'

ಬೆಂಗಳೂರು: ಪುರಾತನ ದೇವಾಲಯದ ಕಲ್ಲಿನ ಕಂಬಗಳಲ್ಲಿ ಕೆತ್ತಲಾದ ಶಿಲಾಬಾಲಿಕೆಯರು ದಿಢೀರನೆ ಜೀವ ಪಡೆದು, ರಂಗದ ಮೇಲೆ ಮೂಡಿಬಂದರೆ ಹೇಗಿರುತ್ತದೆ? ಇಂತಹದೊಂದು ಅಪರೂಪದ ಕಲ್ಪನೆಯನ್ನು ಪ್ರಯೋಗಕ್ಕೆ ತರಲಿದ್ದಾರೆ ಪ್ರಸಿದ್ಧ ನೃತ್ಯ ಕಲಾವಿದೆ, ಸಂಗೀತ ನಾಟಕ ಅಕಾಡೆಮಿ ಪುರಸ್ಕೃತೆ ನಿರೂಪಮಾ ರಾಜೇಂದ್ರ.

ಪದ್ಮಭೂಷಣ ಪುರಸ್ಕೃತ, ಶತಾವಧಾನಿ ಡಾ.ಆರ್.ಗಣೇಶ್ ಅವರ ಸಾಹಿತ್ಯ ಹಾಗೂ ಕಾವ್ಯವನ್ನು ರಂಗದ ಮೇಲೆ ಅಭಿನಯ & ನೃತ್ಯದ ಮೂಲಕ ಜೀವಂತಗೊಳಿಸುವ 'ರಸಾರಾಧನ' ಏಕವ್ಯಕ್ತಿ ಭರತನೃತ್ಯ ಪ್ರದರ್ಶನವು ಸೆಪ್ಟೆಂಬರ್ 20ರಂದು ನಗರದ ಮೀನಾಕ್ಷಿ ರಂಗಮಂಚದಲ್ಲಿ ನಡೆಯಲಿದೆ. ಡಾ.ಗಣೇಶ'ರ ಸಾಹಿತ್ಯಕ್ಕಾಗಿಯೇ ವಿಶೇಷವಾಗಿ ಸಂಗೀತ ಸಂಯೋಜನೆ ಮಾಡಲಾಗಿದೆ.

ಡಾ.ಪದ್ಮಾ ಸುಬ್ರಹ್ಮಣ್ಯಂ ಅವರು, ದೇವಾಲಯಗಳ ಕರಣಗಳನ್ನು ಆಧರಿಸಿ ಪುನರ್‌ ರೂಪಿಸಿದ ಮತ್ತು ಗುರು ಸುಂದರಿ ಸಂತಾನಂ ಅವರಿಂದ ಕಲಿತ 'ಭರತನಾಟ್ಯ' ಶೈಲಿಯಲ್ಲಿ ನಿರೂಪಮಾ ಈ ಪ್ರದರ್ಶನ ನೀಡಲಿದ್ದಾರೆ.

ಶಿಲೆ - ಕಲೆ -  ಕಾವ್ಯ:

ಈ ಪ್ರದರ್ಶನದಲ್ಲಿ ದಕ್ಷಿಣ ಭಾರತದ ದೇವಾಲಯಗಳ ಶಿಲ್ಪಕಲೆಗಳನ್ನು ನೃತ್ಯಕ್ಕೆ ಅಳವಡಿಸುವ ಪ್ರಯತ್ನ ನಡೆದಿದೆ. ಶಿಲ್ಪಗಳ ಆಧರಿತ ಕಥಾನಕಗಳತ್ತ ನೃತ್ಯ ಮುಂದೆ ಸಾಗುತ್ತದೆ. 

ಕಾಳಿದಾಸರ 'ಕುಮಾರಸಂಭವ' ಆಧಾರಿತ 'ಆತ್ಮ ಸೌಂದರ್ಯ' ರೂಪಕದಲ್ಲಿ ಪಾರ್ವತಿಯು ಬಾಹ್ಯ ಸೌಂದರ್ಯದಿಂದಲ್ಲ, ಬದಲಿಗೆ ತಪಸ್ಸು ಹಾಗೂ ಆಂತರಿಕ ಜ್ಞಾನದಿಂದ ಶಿವನನ್ನು ಒಲಿಸಿಕೊಳ್ಳುವ ಪ್ರಸಂಗ ಮೂಡಿಬರಲಿದೆ. ‘ಹರಿಹರ’ ಕೃತಿಯಲ್ಲಿ ವಿಷ್ಣು ಮತ್ತು ಶಿವನ ನಡುವಿನ ಪರಸ್ಪರ ಗೌರವ ಹಾಗೂ ದೈವಿಕ ಸಮಾನತೆಯನ್ನು ಬಿಂಬಿಸಲಾಗಿದೆ. ಇದರೊಂದಿಗೆ ಗೃಹಸ್ಥ ಜೀವನದ ಸಣ್ಣಪುಟ್ಟ ಭಿನ್ನಾಭಿಪ್ರಾಯಗಳ ನಡುವೆಯೂ ನಿಷ್ಠೆ ಕಾಯ್ದುಕೊಳ್ಳುವ ಪತ್ನಿ ಹಾಗೂ ಕಷ್ಟದ ಕಾಲದಲ್ಲೂ ಸಂಯಮ ಕಳೆದುಕೊಳ್ಳದ ಶ್ರೀರಾಮನ ಸ್ಥಿತಪ್ರಜ್ಞತೆಯನ್ನು ರಂಗದ ಮೇಲೆ ಪ್ರಸ್ತುತಪಡಿಸಲಾಗುತ್ತದೆ.

ಡಾ.ಗಣೇಶ್ ಅವರ ಕಾವ್ಯದಲ್ಲಿರುವ ಶಾಂತತೆ, ಆಂತರಿಕ ಸೌಂದರ್ಯ ಹಾಗೂ ಕಷ್ಟಕಾಲದ ಸಂಯಮದಂತಹ ಆಳವಾದ ಮೌಲ್ಯಗಳನ್ನು ನಿರೂಪಮಾ ಅವರು, ತಮ್ಮ ಭಾವಾಭಿನಯದ ಮೂಲಕ ಪ್ರೇಕ್ಷಕರಿಗೆ ತಲುಪಿಸಲಿದ್ದಾರೆ. ಶಾಸ್ತ್ರೀಯ ಕಲೆಯು ಕೇವಲ ಪುಸ್ತಕದ ಸಾಲುಗಳಾಗಿ ಉಳಿಯದೆ, ರಂಗದ ಮೇಲೆ 'ರಸ'ವಾಗಿ ಹರಿದಾಗ ಮಾತ್ರ ಸಾರ್ಥಕತೆ ಪಡೆಯುತ್ತದೆ ಎಂಬುದಕ್ಕೆ ಈ ಕಾರ್ಯಕ್ರಮ ಸಾಕ್ಷಿಯಾಗಲಿದೆ.

ಕಾರ್ಯಕ್ರಮದ ವಿವರ:

ಕಾರ್ಯಕ್ರಮ: ರಸಾರಾಧನ (ಏಕವ್ಯಕ್ತಿ ನೃತ್ಯ ರೂಪಕ)
ಪ್ರದರ್ಶನ: ನಿರೂಪಮಾ ರಾಜೇಂದ್ರ (ಅಭಿನವ ಡ್ಯಾನ್ಸ್ ಕಂಪನಿ)
ಸಾಹಿತ್ಯ: ಪದ್ಮಭೂಷಣ ಶತಾವಧಾನಿ ಡಾ. ಆರ್. ಗಣೇಶ್
ದಿನಾಂಕ ಮತ್ತು ಸಮಯ: ಭಾನುವಾರ, ಸೆಪ್ಟೆಂಬರ್ 20, 2026, ಸಂಜೆ 5.00 ಗಂಟೆಗೆ
ಸ್ಥಳ: ಮೀನಾಕ್ಷಿ ರಂಗಮಂಚ, ದೊಡ್ಡಕಲ್ಲಸಂದ್ರ, ಬೆಂಗಳೂರು
ಪ್ರವೇಶ: ಉಚಿತ

ಡೇ2ಡೇ ನ್ಯೂಸ್ ಬ್ಯೂರೋ Day2day News ನವ ಮಾಧ್ಯಮದ ವೃತ್ತಿಪರ ಡಿಜಿಟಲ್‌ ಮಾಧ್ಯಮ ಸಂಸ್ಥೆ. ವೆಬ್‌ ನ್ಯೂಸ್‌ ಪೋರ್ಟಲ್‌ನಿಂದ ಹಿಡಿದು ಇನ್‌ಸ್ಟಾ, ಎಕ್ಸ್, ಫೇಸ್‌ಬುಕ್‌, ಯೂಟ್ಯೂಬ್‌, ನ್ಯೂಸ್‌ ಆಪ್‌ವರೆಗೆ ಎಲ್ಲ ಡಿಜಿಟಲ್‌ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ - ಮಾಹಿತಿಯನ್ನು ಸರಳ, ಸಂಕ್ಷಿಪ್ತವಾಗಿ ನೀಡುತ್ತದೆ. ಜತೆಗೆ Day2day Short News ಕರ್ನಾಟಕದ ಮೊದಲ ಶಾರ್ಟ್‌ ಆಪ್‌. Swipe ಮಾಡಿ ಸುದ್ದಿ ಓದಿ. ನಮ್ಮ ಎಲ್ಲ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ & ಜಾಹೀರಾತು ನೀಡಲು 7070708646ಗೆ ಸಂಪರ್ಕಿಸಿ.