ಭಿಕ್ಷೆ ಬೇಡಿದ ರೂ.3,383 ಕೋಟಿ ಆಸ್ತಿ ಮಾಲೀಕ! ಮುಂಬೈನ ಶ್ರೀಮಂತ BJP ಶಾಸಕ ಇವರು.. ಮಾಡಿದ್ದೇನು?
Maharashtra: ರೂ.3000 ಕೋಟಿಗೂ ಅಧಿಕ ಆಸ್ತಿ ಒಡೆಯ.. ಮುಂಬೈನ ಬಿಜೆಪಿ ಶಾಸಕ ಪರಾಗ್ ಶಾ, ಒಂದು ದಿನವಿಡಿ ತಮ್ಮ ಆಗರ್ಭ ಶ್ರೀಮಂತಿಕೆಯ ಜೀವನವನ್ನು ಬದಿಗಿಟ್ಟು, ಫುಟ್‌ಪಾತ್‌ಗಳಲ್ಲಿ ಭಿಕ್ಷೆ ಬೇಡಿದ್ದಾರೆ.
ಮುಂಬೈ: 2018 ರಲ್ಲಿ ತೆರೆಕಂಡ ಕನ್ನಡದ 'ಅಮ್ಮಾ ಐ ಲವ್ ಯು' ಚಿತ್ರ ನೆನಪಿದೆಯಾ? ಅದರಲ್ಲಿ ನಾಯಕ ನಟನಾಗಿ ನಟಿಸಿದ್ದ ಚಿರಂಜೀವಿ ಸರ್ಜಾ, ತನ್ನ ತಾಯಿಗಾಗಿ ಐಷಾರಾಮಿ ಜೀವನವನ್ನೆಲ್ಲ ಬಿಟ್ಟು ಭಿಕ್ಷುಕನ ವೇಷ ತೊಟ್ಟು ಬೀದಿ - ಬೀದಿಗಳಲ್ಲಿ ಭಿಕ್ಷೆ ಬೇಡುತ್ತಾನೆ. ಅಂತಹದ್ದೇ ದೃಶ್ಯವೊಂದು ಈಗ ನಿಜ ಜೀವನದಲ್ಲಿ ನಡೆದಿದೆ.
ಭರ್ತಿ ರೂ.3000 ಕೋಟಿಗೂ ಅಧಿಕ ಆಸ್ತಿ ಒಡೆಯ.. ಮುಂಬೈನ ಬಿಜೆಪಿ ಶಾಸಕ ಪರಾಗ್ ಶಾ, ಒಂದು ದಿನವಿಡಿ ತಮ್ಮ ಆಗರ್ಭ ಶ್ರೀಮಂತಿಕೆಯ ಜೀವನವನ್ನು ಬದಿಗಿಟ್ಟು, ಫುಟ್‌ಪಾತ್‌ಗಳಲ್ಲಿ ಭಿಕ್ಷೆ ಬೇಡಿದ್ದಾರೆ. ಸದ್ಯ, ಆ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಫುಲ್ ವೈರಲ್ ಆಗಿದೆ.
ಯಾರು ಈ ಪರಾಗ್ ಶಾ?
ಮುಂಬೈನ ಘಾಟ್ಕೋಪರ್ ಪೂರ್ವ ಕ್ಷೇತ್ರದ ಬಿಜೆಪಿ ಶಾಸಕರಾಗಿರುವ ಪರಾಗ್ ಶಾ, ಮೂಲತಃ ಉದ್ಯಮಿಯಾಗಿ ಗುರುತಿಸಿಕೊಂಡಿದ್ದಾರೆ. 'ರಿಯಲ್ ಎಸ್ಟೇಟ್' ಮೂಲಕ ಅಪಾರ ಸಂಪತ್ತನ್ನು ಗಳಿಸಿದ್ದರು ಆ ಬಳಿಕ ರಾಜಕಾರಣವನ್ನು ಪ್ರವೇಶಿಸಿದ್ದರು. ಭಾರತದ ಅತ್ಯಂತ ಶ್ರೀಮಂತ ಶಾಸಕರ ಪಟ್ಟಿಯಲ್ಲಿಯೂ ಅಗ್ರಸ್ಥಾನದಲ್ಲಿದ್ದಾರೆ. 2024ರ ಮಹಾರಾಷ್ಟ್ರ ವಿಧಾನಸಭಾ ಚುನಾವಣೆಗೆ ಸಲ್ಲಿಸಿದ ಅಫಿಡವಿಟ್ ಪ್ರಕಾರ, ತಮ್ಮಲ್ಲಿ ರೂ.3,383 ಕೋಟಿಗೂ ಹೆಚ್ಚು ಮೌಲ್ಯದ ಆಸ್ತಿಯಿದೆ ಎಂದು ಘೋಷಿಸಿಕೊಂಡಿದ್ದಾರೆ.
ಗುರುವಿನ ಸಲಹೆ & ಜೈನ ಸಂಪ್ರದಾಯ:
ಜೈನ ಸಂಪ್ರದಾಯದಲ್ಲಿ ಚಾತುರ್ಮಾಸ ತುಂಬಾ ಮಹತ್ವ ಪಡೆದಿದೆ. ಈ ಹಿನ್ನೆಲೆ, ತಮ್ಮ ಜೈನ ಆಧ್ಯಾತ್ಮಿಕ ಗುರು ನಮ್ರಮುನಿ ಸಲಹೆಯ ಮೇರೆಗೆ, ಶಾಸಕ ಪರಾಗ್ ಶಾ ಅವರು ಐಷಾರಾಮಿ ಜೀವನವನ್ನು ತ್ಯಜಿಸಿ, ಒಂದು ದಿನದ ಮಟ್ಟಿಗೆ ಭಿಕ್ಷುಕನಂತೆ ಜೀವನ ನಡೆಸಿ, ವಿಶಿಷ್ಟವಾದ ಅನುಭವವನ್ನು ಪಡೆದುಕೊಂಡಿದ್ದಾರೆ.
ಎರಡು ಮರೆಯಲಾಗದ ಘಟನೆ:
ನಾನು ಭಿಕ್ಷುಕನ ವೇಷದಲ್ಲಿದ್ದಾಗ, ನನ್ನದೇ ಅಪಾರ್ಟ್‌ಮೆಂಟ್ ಸಮೀಪ ತೆರಳಿದೆ. ಅಲ್ಲಿನ ಸೆಕ್ಯುರಿಟಿ ಗಾರ್ಡ್ ನನ್ನನ್ನು ಗುರುತಿಸಲಿಲ್ಲ. ನಿಜವಾದ ಭಿಕ್ಷುಕನೆಂದು ಭಾವಿಸಿ ನನ್ನನ್ನು ದೂರ ತಳ್ಳಿದನು.
ಮತ್ತೊಂದು ಘಟನೆಯಲ್ಲಿ, ನನ್ನ ಆತ್ಮೀಯ ಸ್ನೇಹಿತನ ಬಳಿ ಹೋದೆ. ಆತ ಸಾಮಾನ್ಯವಾಗಿ ಬಡವರು ಹಾಗೂ ಕಷ್ಟದಲ್ಲಿರುವವರಿಗೆ ಸಹಾಯ ಮಾಡುವ ವ್ಯಕ್ತಿ. ಆದರೆ, ಭಿಕ್ಷುಕನ ವೇಷದಲ್ಲಿದ್ದ ನನ್ನನ್ನು ಬೇರೆ ಕಡೆ ಹೋಗುವಂತೆ ಹೇಳಿದನು. ಆ ಕ್ಷಣದಲ್ಲಿ ಸಮಾಜದಲ್ಲಿ ಭಿಕ್ಷುಕರನ್ನು ಯಾವ ದೃಷ್ಟಿಕೋನದಲ್ಲಿ ನೋಡಲಾಗುತ್ತದೆ ಎಂಬುದು ನನಗೆ ತಿಳಿಯಿತು ಎಂದು ಅವರು ಹೇಳಿದ್ದಾರೆ.