ದ.ಕನ್ನಡಕ್ಕೆ ಐತಿಹಾಸಿಕ ಗೆಲುವು: ಕೇರಳದಿಂದ ಮಂಗಳೂರು ರೈಲು ಜಾಲವನ್ನು ಬಿಡಿಸಿ, ಕರ್ನಾಟಕಕ್ಕೆ ಸೇರಿಸುವುದು ಸುಲಭವಿರಲಿಲ್ಲ!

Dhakshina Kannada: ದಕ್ಷಿಣ ಕನ್ನಡಕ್ಕೆ ಐತಿಹಾಸಿಕ ಗೆಲುವು ಸಿಕ್ಕಿದೆ. ಕೇರಳದಿಂದ ಮಂಗಳೂರು ರೈಲು ಜಾಲವನ್ನು ಬಿಡಿಸಿ, ಕರ್ನಾಟಕಕ್ಕೆ ಸೇರ್ಪಡೆಗೊಳ್ಳಿಸುವಲ್ಲಿ ಸಂಸದ ಕ್ಯಾ.ಬ್ರಿಜೇಶ್‌ ಚೌಟ ಅವರ ಪಾತ್ರ ದೊಡ್ಡದು. ಇಲ್ಲಿದೆ ಹಿರಿಯ ಪತ್ರಕರ್ತ ಸುರೇಶ್ ಪುದುವೆಟ್ಟು ಅವರ ವಿಶೇಷ ಲೇಖನ.

Aug 21, 2026 - 21:04
Aug 21, 2026 - 21:43
ದ.ಕನ್ನಡಕ್ಕೆ ಐತಿಹಾಸಿಕ ಗೆಲುವು: ಕೇರಳದಿಂದ ಮಂಗಳೂರು ರೈಲು ಜಾಲವನ್ನು ಬಿಡಿಸಿ, ಕರ್ನಾಟಕಕ್ಕೆ ಸೇರಿಸುವುದು ಸುಲಭವಿರಲಿಲ್ಲ!

ಮಂಗಳೂರು: ಕೇರಳದ ದಕ್ಷಿಣ ರೈಲ್ವೆ ವ್ಯಾಪ್ತಿಯ ಪಾಲ್ಘಾಟ್‌ ವಿಭಾಗದಲ್ಲಿದ್ದ ಲಾಭದಾಯಕ ಮಂಗಳೂರು ರೈಲು ಜಾಲ ಅಥವಾ ಅದರ ವ್ಯಾಪ್ತಿಯನ್ನು ಬೇರ್ಪಡಿಸಿ ಕರ್ನಾಟಕದಲ್ಲಿರುವ ನೈಋತ್ಯ ರೈಲ್ವೆ ವಲಯದ ಮೈಸೂರು ವಿಭಾಗಕ್ಕೆ ಸೇರ್ಪಡೆಗೊಳಿಸುವುದಕ್ಕೆ ರೈಲ್ವೆ ಸಚಿವಾಲಯವು ಇದೀಗ ಅಧಿಕೃತ ಒಪ್ಪಿಗೆಯನ್ನು ನೀಡಿದೆ. ಆದರೆ, ಬಹು ದಶಕಗಳ ಕರಾವಳಿಗರ ಈ ಬಹುದೊಡ್ಡ ಬೇಡಿಕೆಯನ್ನು ಈಡೇರಿಸುವುದು ಅಷ್ಟೊಂದು ಸುಲಭದ ಕೆಲಸವಾಗಿರಲಿಲ್ಲ ಎನ್ನುವುದು ವಾಸ್ತವ. 

ರೈಲ್ವೆ ಸಚಿವಾಲಯದ ಈ ತೀರ್ಮಾನವು ದಕ್ಷಿಣ ಕನ್ನಡ ಜನತೆ ಪಾಲಿಗೆ ನಿಜಕ್ಕೂ ಒಂದು ಐತಿಹಾಸಿಕ ನಿರ್ಧಾರವಾಗಿದೆ. ಏಕೆಂದರೆ, ಮಂಗಳೂರನ್ನು ಪ್ರತ್ಯೇಕ ರೈಲ್ವೆ ವಿಭಾಗ ಮಾಡಬೇಕು ಅಥವಾ ಕೊಂಕಣ, ದಕ್ಷಿಣ ರೈಲ್ವೆ ಹಾಗೂ ನೈಋತ್ಯ ವಲಯದ ವ್ಯಾಪ್ತಿಯಲ್ಲಿ ಹಂಚಿ ಹೋಗಿರುವ ಮಂಗಳೂರು ಭಾಗದ ರೈಲು ಸಂಪರ್ಕ ವ್ಯವಸ್ಥೆಯನ್ನು ಒಂದೇ ಸೂರಿನಡಿ ತರಬೇಕೆಂಬುದು ಇಲ್ಲಿನ ಜನರ ಬಹುದಶಕಗಳ ಬಹುದೊಡ್ಡ ಬೇಡಿಕೆಯಾಗಿತ್ತು. ಈ ವಿಚಾರದಲ್ಲಿ ಈ ಹಿಂದೆ ರೈಲ್ವೆ ಬಳಕೆದಾರರ ಸಂಘಟನೆಗಳು, ರೈಲ್ವೆ ಪರಿಣತರು ಹಾಗೂ ಮಾಧ್ಯಮ ಕೂಡ ಸಾಕಷ್ಟು ಹೋರಾಟ-ಅಭಿಯಾನವನ್ನು ಕೈಗೊಂಡಿತ್ತು. ಈ ಹಿಂದಿನ ಜನಪ್ರತಿನಿಧಿಗಳು ಕೂಡ ಈ ನಿಟ್ಟಿನಲ್ಲಿ ಸಾಕಷ್ಟು ಹೋರಾಟಗಳನ್ನು ಮಾಡಿದ್ದರು. ಆದರೆ, ರೈಲ್ವೆ ವಿಚಾರದಲ್ಲಿ ಕೇರಳದ ಲಾಬಿಯ ಮುಂದೆ ಕನ್ನಡಿಗರ ಯಾವ ಹೋರಾಟ, ಬೇಡಿಕೆಗಳಿಗೂ ಅಷ್ಟಾಗಿ ಮನ್ನಣೆ ಸಿಕ್ಕಿರಲಿಲ್ಲ ಎನ್ನುವುದು ಸತ್ಯ.

ಇಂಥಹ ಪರಿಸ್ಥಿತಿಯಲ್ಲಿ ಮಂಗಳೂರು ರೈಲ್ವೆ ಭೂಪ್ರದೇಶವು ಕೇರಳದ ದಕ್ಷಿಣ ರೈಲ್ವೆಯ ಪಾಲ್ಘಾಟ್‌ ವಿಭಾಗದಿಂದ ಬೇರ್ಪಟ್ಟು ಮೈಸೂರು ವಿಭಾಗಕ್ಕೆ ಸೇರ್ಪಡೆಯಾಗುತ್ತಿರುವುದು ನಿಜಕ್ಕೂ ದಕ್ಷಿಣ ಕನ್ನಡ ಜನರ ಪಾಲಿಗೆ ಅತ್ಯಂತ ಸಂತೋಷದ ವಿಚಾರವಾಗಿದೆ. ಆದರೆ, ಈ ಯಶಸ್ವಿನ ಹಿಂದೆ ತೆರೆ ಮರೆಯಲ್ಲಿ ಸದ್ದಿಲ್ಲದೆ ಸತತ ಬೆನ್ನುಬಿಡದೆ ರೈಲ್ವೆ ಸಚಿವಾಲಯದ ಮೇಲೆ ಒತ್ತಡ ಹಾಕಿ ನಿರಂತರ ಶ್ರಮ ವಹಿಸಿದವರ ಸಾಲಿನಲ್ಲಿ ದಕ್ಷಿಣ ಕನ್ನಡ ಸಂಸದ ಕ್ಯಾ. ಚೌಟ ಅವರ ಪ್ರಯತ್ನ ಬಹಳ ದೊಡ್ಡದಿದೆ. ಹತ್ತಾರು ದಶಕಗಳಿಂದ ಬೇಡಿಕೆಯಾಗಿ ಉಳಿದಿದ್ದ ಮಂಗಳೂರು ರೈಲ್ವೆ ಜಾಲವನ್ನು ಕರ್ನಾಟಕದ ರೈಲ್ವೆ ವಲಯದ ವ್ಯಾಪ್ತಿಗೆ ಸೇರ್ಪಡೆಯಾಗುತ್ತಿದ್ದರೆ ಅದರ ಬಹುಪಾಲು ಶ್ರೇಯಸ್ಸು ಸಂಸದ ಕ್ಯಾ. ಬ್ರಿಜೇಶ್‌ ಚೌಟ ಅವರಿಗೆ ಸಲ್ಲಬೇಕಿದೆ. 

ಚೊಚ್ಚಲ ಅಧಿವೇಶನದಲ್ಲೇ ವಿಷಯ ಪ್ರಸ್ತಾಪಿಸಿದ್ದ ಕ್ಯಾ. ಚೌಟ:

ಚೊಚ್ಚಲ ಬಾರಿಗೆ ಸಂಸದರಾಗಿ ಆಯ್ಕೆಯಾಗಿರುವ ಕ್ಯಾ. ಬ್ರಿಜೇಶ್‌ ಚೌಟ ಅವರು 2024ರಲ್ಲಿ ತಮ್ಮ ಮೊದಲ ಅಧಿವೇಶನದಲ್ಲೇ ಮಂಗಳೂರು ಭಾಗವನ್ನು ಸೂಕ್ತ ರೈಲ್ವೆ ವ್ಯಾಪ್ತಿಗೆ ಸೇರಿಸಬೇಕೆಂದು ಲೋಕಸಭೆಯಲ್ಲಿ ಪ್ರಸ್ತಾಪಿಸಿ ರೈಲ್ವೆ ಸಚಿವರ ಗಮನಸೆಳೆದಿದ್ದರು. ಅದಾದ ಬಳಿಕ ಸುಮಾರು ಎರಡು ವರ್ಷಗಳಿಂದ ಈ ವಿಚಾರದಲ್ಲಿ ನಿರಂತರ ರೈಲ್ವೆ ಸಚಿವಾಲಯದ ಬೆನ್ನು ಹಿಡಿದಿದ್ದರು. ಮಂಗಳೂರಿಗೆ ರೈಲ್ವೆ ಖಾತೆ ರಾಜ್ಯ ಸಚಿವರಾಗಿದ್ದ ವಿ. ಸೋಮಣ್ಣ ಅವರನ್ನು ಕರೆಯಿಸಿಕೊಂಡು ಸುಧೀರ್ಘವಾದ ಸಭೆಗಳನ್ನು ನಡೆಸಿದ್ದರು. ಹಲವು ಬಾರಿ ದೆಹಲಿ ಮಟ್ಟದಲ್ಲಿ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್‌ ಅವರನ್ನು ಕೂಡ ಭೇಟಿ ಮಾಡಿ ನಿರಂತರ ಫಾಲೋಅಪ್‌ ಮಾಡುತ್ತಿದ್ದರು. ಈ ಬಾರಿ ಹೇಗಾದರೂ ಮಾಡಿ ಮಂಗಳೂರು ರೈಲ್ವೆ ಭಾಗಕ್ಕೆ ನ್ಯಾಯ ದೊರಕಿಸುವ ಮೂಲಕ ರೈಲ್ವೆ ವಿಚಾರದಲ್ಲಿನ ಪ್ರಾದೇಶಿಕ ಅಸಮಾನತೆ ದೂರ ಮಾಡುವ ಸಂಕಲ್ಪ ತೊಟ್ಟಿದ್ದರು.

ಆದರೆ, ನೂರಾರು ರೈಲುಗಳು ಓಡಾಡುವ ಜತೆಗೆ ಹೆಚ್ಚಿನ ಆದಾಯ ಬರುತ್ತಿರುವ ಮಂಗಳೂರು ಭಾಗವನ್ನು ಬಿಟ್ಟು ಕೊಡುವುದಕ್ಕೆ ದಕ್ಷಿಣ ರೈಲ್ವೆಯು ಯಾವುದೇ ಕಾರಣಕ್ಕೂ ಸಿದ್ಧವಿರಲಿಲ್ಲ. ಈ ಹಿಂದೆಯೂ ಮಂಗಳೂರು ರೈಲು ಜಾಲವನ್ನು ನೈಋತ್ಯ ವಲಯಕ್ಕೆ ಅಥವಾ ಪ್ರತ್ಯೇಕ ವಿಭಾಗ ಮಾಡಬೇಕೆಂಬ ಪ್ರಸ್ತಾವನೆಗಳು ಬಂದಾಗಲೆಲ್ಲ ಅದಕ್ಕೆ ಅಡ್ಡಗಾಲು ಹಾಕಲಾಗಿತ್ತು. ಹೀಗಿರುವಾಗ, ಕ್ಯಾ. ಚೌಟ ಅವರು ಕೇರಳದವರ ರೈಲ್ವೆ ಲಾಬಿಯನ್ನೂ ಹಿಮ್ಮೆಟ್ಟಿಸಿ ದಕ್ಷಿಣ ಕನ್ನಡದ ದೊಡ್ಡ ಬೇಡಿಕೆ ಈಡೇರಿಸುವಲ್ಲಿ ಯಶಸ್ವಿಯಾಗಿದ್ದಾರೆ. ರೈಲ್ವೆ ವಿಚಾರದಲ್ಲಿ ಕೇರಳ ವ್ಯಾಪ್ತಿಯಲ್ಲಿದ್ದ ಮಂಗಳೂರನ್ನು ಬೇರ್ಪಡಿಸುವುದು ಅಷ್ಟೊಂದು ಸುಲಭದ ಕೆಲಸವಾಗಿರಲಿಲ್ಲ ಎನ್ನುವುದು ವಾಸ್ತವ. ಆದರೆ, ಆ ಎಲ್ಲ ಸವಾಲುಗಳನ್ನು ಬಹಳ ನಾಜೂಕಾಗಿ ಬಗೆಹರಿಸುವ ಮೂಲಕ ಮಂಗಳೂರನ್ನು ಕೇರಳದ ತೆಕ್ಕೆಯಿಂದ ಬಿಡಿಸುವಲ್ಲಿ ರೈಲ್ವೆ ಮಂಡಳಿಯ ಅಧಿಕಾರಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ತಮ್ಮ ನಿರಂತರ ಪ್ರಯತ್ನದಲ್ಲಿ ಯಶಸ್ಸು ಸಾಧಿಸಿದ್ದಾರೆ.

ಹೀಗಿರುವಾಗ, ಬಹುಶಃ ಸಂಸದರಾಗಿ ಕ್ಯಾ. ಚೌಟ ಅವರ ಅಭಿವೃದ್ಧಿ ಪರ ಬದ್ಧತೆ, ಬಿಡದ ಛಲ ಹಾಗೂ ಅದಕ್ಕೆ ಸಿಕ್ಕಿರುವ ಈ ರೀತಿಯ ಐತಿಹಾಸಿಕ ಯಶಸ್ಸನ್ನು ನೋಡಿದರೆ ದಕ್ಷಿಣ ಕನ್ನಡದ ಜನತೆ ಒಬ್ಬ ಜನಪ್ರತಿನಿಧಿಯಿಂದ ಈ ರೀತಿಯ ನಿರ್ಧಾರಗಳನ್ನೇ ನಿರೀಕ್ಷಿಸುತ್ತಾರೆ ಎನ್ನುವುದರಲ್ಲಿ ಅನುಮಾನವೇ ಇಲ್ಲ. ಅವರ ಅಭಿವೃದ್ಧಿ ಪರ ಪ್ರಯತ್ನಗಳು ಹೀಗೆಯೇ ಮುಂದುವರಿಯಲಿ.

ಇದು ಇಂದು-ನಿನ್ನೆಯ ರೈಲು ಬೇಡಿಕೆಯಾಗಿರಲಿಲ್ಲ

ಮಂಗಳೂರು ರೈಲ್ವೆ ವಿಭಾಗವನ್ನು ಪ್ರತ್ಯೇಕಿಸಬೇಕೆಂಬುದು ಕರಾವಳಿ ಜನರ ಪಾಲಿಗೆ ಅದರಲ್ಲಿಯೂ ದಕ್ಷಿಣ ಕನ್ನಡದ ರೈಲ್ವೆ ಬಳಕೆದಾರರ ಪಾಲಿಗೆ ಇಂದು-ನಿನ್ನೆಯ ಬೇಡಿಕೆಯಾಗಿರಲಿಲ್ಲ. ಒಬ್ಬ ಪತ್ರಕರ್ತನಾಗಿ ನಾನು ಕೂಡ ವೈಯಕ್ತಿಕವಾಗಿ 2004ರಿಂದಲೂ ನಿರಂತರ ವಿಶೇಷ ವರದಿಗಳನ್ನು ಬರೆಯುತ್ತಿದ್ದೆ. ಮಂಗಳೂರು ರೈಲ್ವೆ ಭಾಗವು ಕೇರಳದ ಕಪಿಮುಷ್ಟಿಯಲ್ಲಿರುವ ಕಾರಣ ದಕ್ಷಿಣ ಕನ್ನಡ ಜಿಲ್ಲೆಗೆ ಯಾವೆಲ್ಲ ರೀತಿಯಲ್ಲಿ ತೊಂದರೆಯಾಗುತ್ತಿದೆ ಎಂಬುದರ ಬಗ್ಗೆ ಸರಣಿ ಲೇಖನವನ್ನೇ ಬರೆದಿದ್ದೆ. ಹೀಗಿರುವಾಗ, ಮಂಗಳೂರು ಭಾಗವು ಆಡಳಿತಾತ್ಮಕವಾಗಿ ಯಾಕೆ ಪ್ರತ್ಯೇಕ ವಿಭಾಗ ಆಗಬೇಕು ಅಥವಾ ಅದನ್ನು ಪಾಲ್ಘಾಟ್‌ ವಿಭಾಗದಿಂದ ಪ್ರತ್ಯೇಕಿಸುವ ಅಗತ್ಯತೆ-ಅನಿವಾರ್ಯತೆ ಏನು ಎಂಬುದರ ಬಗ್ಗೆ ಸಾಕಷ್ಟು ಮಾಹಿತಿ ಸಂಗ್ರಹಿಸುವ ಆ ದಿಕ್ಕಿನಲ್ಲಿ ಆಳವಾದ ಅಧ್ಯಯನ, ರೈಲ್ವೆ ಪರಿಣತರೊಂದಿಗೆ ಮಾತುಕತೆ ನಡೆಸಿದ್ದೆ. ಹೀಗಿರುವಾಗ, ಮಂಗಳೂರು ರೈಲು ಜಾಲ ಈಗ ಕರ್ನಾಟಕದ ರೈಲ್ವೆ ನೆಟ್‌ವರ್ಕ್‌ಗೆ ಸೇರಿಸಿರುವುದು ಜಿಲ್ಲೆಯ ರೈಲ್ವೆ ಮೂಲಸೌಕರ್ಯ ಅಭಿವೃದ್ಧಿಗೆ ಹೇಗೆಲ್ಲ ಭವಿಷ್ಯದಲ್ಲಿ ಪ್ರಯೋಜನವಾಗಬಹುದು ಎನ್ನುವುದರಲ್ಲಿ ಯಾವ ಅನುಮಾನವೂ ಬೇಕಾಗಿಲ್ಲ.  ಹೀಗಿರುವಾಗ, ಒಬ್ಬ ಸಂಸದನಾಗಿ ಕ್ಯಾ. ಬ್ರಿಜೇಶ್‌ ಚೌಟ ಅವರು ಈ ಬೇಡಿಕೆ ಈಡೇರಿಸುವುದಕ್ಕೆ ಎಷ್ಟೊಂದು ಪ್ರಯತ್ನಗಳನ್ನು ಮಾಡಿರಬಹುದು ಎಂಬುದನ್ನು ಈ ವಿಚಾರವಾಗಿನ ಬೆಳವಣಿಗೆಗಳನ್ನು ಸುಮಾರು ಎರಡೂವರೆ ದಶಕಗಳಿಂದ ಗಮನಿಸುತ್ತಿದ್ದ ನನಗೂ ಅರ್ಥವಾಗಿದೆ. ಹೀಗಾಗಿ, ಈ  ನಮ್ಮ ರೈಲು ಪ್ರಯಾಣಿಕರ ಪಾಲಿಗೆ ಅಸಾಧ್ಯ ಎನ್ನಲಾಗಿದ್ದ ಈ ಬೇಡಿಕೆ ಈಡೇರಿರುವುದಕ್ಕೆ ಹಾಗೂ ಅದಕ್ಕೆ ಕಾರಣಕರ್ತರಾಗಿರುವ ಕ್ಯಾ. ಚೌಟ ಅವರ ಬಗ್ಗೆ ಮತ್ತಷ್ಟು ಹೆಮ್ಮೆ, ಅಭಿಮಾನ ಮೂಡಿದೆ. ಅದಕ್ಕಿಂತಲೂ ಹೆಚ್ಚಾಗಿ ಈ ಕ್ಷೇತ್ರದ ಒಬ್ಬ ಮತದಾರರನಾಗಿ ಅವರ ಈ ರೀತಿಯ ಸದ್ದಿಲ್ಲದೆ ಮಾಡುವ ಅಭಿವೃದ್ಧಿಪರ ಕೆಲಸಗಳು ಸಾರ್ಥಕತೆಯ ಭಾವ ಮೂಡಿಸುತ್ತದೆ.

Day2Day News Bureau Day2day News ನವ ಮಾಧ್ಯಮದ ವೃತ್ತಿಪರ ಡಿಜಿಟಲ್‌ ಮಾಧ್ಯಮ ಸಂಸ್ಥೆ. ವೆಬ್‌ ನ್ಯೂಸ್‌ ಪೋರ್ಟಲ್‌ನಿಂದ ಹಿಡಿದು ಇನ್‌ಸ್ಟಾ, ಎಕ್ಸ್, ಫೇಸ್‌ಬುಕ್‌, ಯೂಟ್ಯೂಬ್‌, ನ್ಯೂಸ್‌ ಆಪ್‌ವರೆಗೆ ಎಲ್ಲ ಡಿಜಿಟಲ್‌ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ - ಮಾಹಿತಿಯನ್ನು ಸರಳ, ಸಂಕ್ಷಿಪ್ತವಾಗಿ ನೀಡುತ್ತದೆ. ಜತೆಗೆ Day2day Short News ಕರ್ನಾಟಕದ ಮೊದಲ ಶಾರ್ಟ್‌ ಆಪ್‌. Swipe ಮಾಡಿ ಸುದ್ದಿ ಓದಿ. ನಮ್ಮ ಎಲ್ಲ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ & ಜಾಹೀರಾತು ನೀಡಲು 7070708646ಗೆ ಸಂಪರ್ಕಿಸಿ.