ಅಶ್ವತ್ಥ ವೃಕ್ಷ: ಪವಿತ್ರತೆ & ಔಷಧೀಯ ಮಹತ್ವ

Ashwattha Tree: ಅಶ್ವತ್ಥ ವೃಕ್ಷ ಭಾರತದ ಅತ್ಯಂತ ಪವಿತ್ರ, ಪುರಾತನ ಹಾಗೂ ದೀರ್ಘಾಯುಷಿ ವೃಕ್ಷಗಳಲ್ಲಿ ಒಂದಾಗಿದ್ದು, ಜನರ ಆರೋಗ್ಯವನ್ನು ವೃದ್ಧಿಸುತ್ತದೆ.

Aug 19, 2026 - 10:12
ಅಶ್ವತ್ಥ ವೃಕ್ಷ: ಪವಿತ್ರತೆ & ಔಷಧೀಯ ಮಹತ್ವ

ಅಶ್ವತ್ಥ ವೃಕ್ಷವನ್ನು ಸಂಸ್ಕೃತದಲ್ಲಿ ಅಶ್ವತ್ಥ, ಕನ್ನಡದಲ್ಲಿ ಅರಳಿ ಮರ ಎಂದು ಕರೆಯುತ್ತಾರೆ. ಇದರ ಸಸ್ಯಶಾಸ್ತ್ರೀಯ ಹೆಸರು ಫೈಕಸ್ ರಿಲಿಜಿಯೋಸಾ. ಭಾರತದ ಅತ್ಯಂತ ಪವಿತ್ರ, ಪುರಾತನ ಹಾಗೂ ದೀರ್ಘಾಯುಷಿ ವೃಕ್ಷಗಳಲ್ಲಿ ಒಂದಾಗಿದೆ. ಈ ಮರವು ನೂರಾರು ವರ್ಷಗಳ ಕಾಲ ಬದುಕಬಲ್ಲದು. ಜೊತೆಗೆ ಬಹಳ ದೊಡ್ಡದಾಗಿ ಬೆಳೆಯುತ್ತದೆ.
 
ಧಾರ್ಮಿಕ ಮಹತ್ವ:
 
ಹಿಂದೂ ಧರ್ಮದಲ್ಲಿ ಅಶ್ವತ್ಥಕ್ಕೆ ವಿಶೇಷ ಸ್ಥಾನವಿದೆ. ಬ್ರಹ್ಮ, ವಿಷ್ಣು ಹಾಗೂ ಮಹೇಶ್ವರರು ಈ ಮರದಲ್ಲಿ ನೆಲೆಸಿದ್ದಾರೆ ಎಂದು ನಂಬಲಾಗಿದೆ. ಶ್ರೀಕೃಷ್ಣನು ಭಗವದ್ಗೀತೆಯಲ್ಲಿ 'ಅಶ್ವತ್ಥಃ ಸರ್ವವೃಕ್ಷಾಣಾಂ' ಅಂದರೆ ಎಲ್ಲಾ ವೃಕ್ಷಗಳಲ್ಲಿ ನಾನು ಅಶ್ವತ್ಥನಾಗಿದ್ದೇನೆ ಎಂದು ಹೇಳಿದ್ದಾನೆ. ಈ ಮರದ ಕೆಳಗೆ ಪೂಜೆ ಮಾಡಿದರೆ, ಸಂತಾನ ಭಾಗ್ಯ, ದೀರ್ಘಾಯುಷ್ಯ ಸಿಗುತ್ತದೆ ಎಂಬ ನಂಬಿಕೆಯೂ ಇದೆ. ಬೌದ್ಧ ಧರ್ಮದಲ್ಲಿಯೂ ಇದಕ್ಕೆ ಬೋಧಿವೃಕ್ಷ ಎನ್ನುವರು. ಏಕೆಂದರೆ, ಗೌತಮ ಬುದ್ಧನು ಇದರಡಿ ಜ್ಞಾನೋದಯ ಪಡೆದನು. ಪ್ರತಿದಿನ ಬೆಳಗ್ಗೆ ಅಶ್ವತ್ಥಕ್ಕೆ ಪ್ರದಕ್ಷಿಣೆ ಹಾಕುವುದು ಮತ್ತು ನೀರು ಹಾಕುವುದು ಬಹಳ ಪುಣ್ಯದ ಕೆಲಸವೆಂದು ಪರಿಗಣಿಸಲಾಗಿದೆ.
 
ಆಯುರ್ವೇದದಲ್ಲಿ ಅಶ್ವತ್ಥದ ಔಷಧೀಯ ಗುಣಗಳು:
 
ಆಯುರ್ವೇದದ ಪ್ರಕಾರ ಅಶ್ವತ್ಥದ ಪ್ರತಿಯೊಂದು ಭಾಗವು ಔಷಧೀಯವಾಗಿದೆ. ಇದರ ತೊಗಟೆ, ಎಲೆ, ಮೊಗ್ಗು, ಬೀಜ, ಹಣ್ಣು ಹಾಗೂ ಹಾಲು ಎಲ್ಲವನ್ನು ಔಷಧವಾಗಿ ಬಳಸಲಾಗುತ್ತದೆ.
 
* ತೊಗಟೆ: ಅಶ್ವತ್ಥದ ತೊಗಟೆಯ ಕಷಾಯವು ಮಧುಮೇಹಕ್ಕೆ ಅತ್ಯುತ್ತಮ ಔಷಧಿ. ಇದು ರಕ್ತದಲ್ಲಿನ ಸಕ್ಕರೆ ಪ್ರಮಾಣವನ್ನು ನಿಯಂತ್ರಿಸುತ್ತದೆ. ಚರ್ಮರೋಗ, ತುರಿಕೆ, ಹುಣ್ಣು, ಅತಿಸಾರ ಮತ್ತು ಭೇದಿಗೆ ತೊಗಟೆಯ ಪುಡಿ ಅಥವಾ ಕಷಾಯವನ್ನು ನೀಡಲಾಗುತ್ತದೆ. ಬಾಯಿ ಹುಣ್ಣಿಗೆ ಇದರ ತೊಗಟೆಯಿಂದ ಬಾಯಿ ಮುಕ್ಕಳಿಸಿದರೆ ಗುಣವಾಗುತ್ತದೆ. 
 
* ಎಲೆಗಳು: ಇದರ ಎಲೆಗಳು ಹೃದಯಕ್ಕೆ ತುಂಬಾ ಹಿತಕರ. ಎಲೆಗಳ ರಸವು ಹೃದಯದ ಬಡಿತವನ್ನು ನಿಯಂತ್ರಿಸುತ್ತದೆ. ಎಲೆಗಳನ್ನು ಅರೆದು ಹಚ್ಚುವುದರಿಂದ ಗಾಯಗಳು ಬೇಗ ಗುಣವಾಗುತ್ತವೆ. ಎಲೆಗಳ ಚೂರ್ಣ ಮಲಬದ್ಧತೆಯನ್ನು ನಿವಾರಿಸುತ್ತದೆ.  
 
* ಹಣ್ಣು & ಬೀಜ: ಈ ಮರದ ಹಣ್ಣುಗಳು ಜೀರ್ಣಶಕ್ತಿಯನ್ನು ಹೆಚ್ಚಿಸುತ್ತವೆ. ಅಸ್ತಮಾ, ಕೆಮ್ಮು ಹಾಗೂ ಉಸಿರಾಟದ ತೊಂದರೆಗಳಿಗೆ ಇದರ ಹಣ್ಣಿನ ಪುಡಿ ಉಪಯುಕ್ತ. ಸ್ತ್ರೀಯರಲ್ಲಿ ಬಂಜೆತನ ನಿವಾರಣೆಗೆ ಅಶ್ವತ್ಥದ ಬೀಜ ಮತ್ತು ಹಣ್ಣನ್ನು ಉಪಯೋಗಿಸುತ್ತಾರೆ.  
 
* ಇತರೆ ಉಪಯೋಗಗಳು: ಅಶ್ವತ್ಥ ಮರವು 24 ಗಂಟೆಯೂ ಆಮ್ಲಜನಕವನ್ನು ನೀಡುವ ಅಪರೂಪದ ಮರವಾಗಿದೆ. ಇದರ ದಟ್ಟವಾದ ನೆರಳು ದಣಿದವರಿಗೆ ಆಶ್ರಯ ನೀಡುತ್ತದೆ. ಇದರ ಬೇರುಗಳು ಮಣ್ಣಿನ ಸವಕಳಿಯನ್ನು ತಡೆಯುತ್ತವೆ. ಹಾಗೆಯೇ ಹಣ್ಣುಗಳು ಹಕ್ಕಿಗಳಿಗೆ ಮತ್ತು ಅಳಿಲುಗಳಿಗೆ ಮುಖ್ಯ ಆಹಾರವಾಗಿದೆ.

Day2Day News Bureau Day2day News ನವ ಮಾಧ್ಯಮದ ವೃತ್ತಿಪರ ಡಿಜಿಟಲ್‌ ಮಾಧ್ಯಮ ಸಂಸ್ಥೆ. ವೆಬ್‌ ನ್ಯೂಸ್‌ ಪೋರ್ಟಲ್‌ನಿಂದ ಹಿಡಿದು ಇನ್‌ಸ್ಟಾ, ಎಕ್ಸ್, ಫೇಸ್‌ಬುಕ್‌, ಯೂಟ್ಯೂಬ್‌, ನ್ಯೂಸ್‌ ಆಪ್‌ವರೆಗೆ ಎಲ್ಲ ಡಿಜಿಟಲ್‌ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ - ಮಾಹಿತಿಯನ್ನು ಸರಳ, ಸಂಕ್ಷಿಪ್ತವಾಗಿ ನೀಡುತ್ತದೆ. ಜತೆಗೆ Day2day Short News ಕರ್ನಾಟಕದ ಮೊದಲ ಶಾರ್ಟ್‌ ಆಪ್‌. Swipe ಮಾಡಿ ಸುದ್ದಿ ಓದಿ. ನಮ್ಮ ಎಲ್ಲ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ & ಜಾಹೀರಾತು ನೀಡಲು 7070708646ಗೆ ಸಂಪರ್ಕಿಸಿ.