Mangaluru: ಹೆಚ್ಚುತ್ತಿರುವ ರೋಗಗಳಿಂದ ರಕ್ತದ ಬೇಡಿಕೆ ಹೆಚ್ಚಳ.. ರಾಜು ಕೆ ಹೇಳಿಕೆ
Mangaluru: ಜಿಲ್ಲಾಧಿಕಾರಿ ಕಚೇರಿಯಲ್ಲಿ ಗುರುವಾರ ನಡೆದ ರಾಷ್ಟ್ರೀಯ ಸ್ವಯಂಪ್ರೇರಿತ ರಕ್ತದಾನ ದಿನಾಚರಣೆ-2026, ಸ್ವಯಂ ಪ್ರೇರಿತ ರಕ್ತದಾನ ಶಿಬಿರ ಮತ್ತು ದಾನಿಗಳಿಗೆ ಸನ್ಮಾನ ಕಾರ್ಯಕ್ರಮ ನಡೆಯಿತು.
ಮಂಗಳೂರು: ಇತ್ತೀಚಿನ ದಿನಗಳಲ್ಲಿ ವಿವಿಧ ರೀತಿಯ ಖಾಯಿಲೆಗಳು ಮತ್ತು ಮಾರಕ ರೋಗಗಳ ಪ್ರಮಾಣ ಹೆಚ್ಚುತ್ತಿದೆ. ಇದರಿಂದ ಚಿಕಿತ್ಸೆಗೆ ರಕ್ತದ ಅಗತ್ಯತೆ ಉಂಟಾಗಿ ರಕ್ತದ ಬೇಡಿಕೆಯು ಹೆಚ್ಚಳವಾಗಿದೆ ಎಂದು ಅಪರ ಜಿಲ್ಲಾಧಿಕಾರಿ ರಾಜು ಕೆ ಹೇಳಿದರು.
ಜಿಲ್ಲಾಧಿಕಾರಿ ಕಚೇರಿಯಲ್ಲಿ ಗುರುವಾರ ನಡೆದ ರಾಷ್ಟ್ರೀಯ ಸ್ವಯಂಪ್ರೇರಿತ ರಕ್ತದಾನ ದಿನಾಚರಣೆ-2026, ಸ್ವಯಂ ಪ್ರೇರಿತ ರಕ್ತದಾನ ಶಿಬಿರ ಮತ್ತು ದಾನಿಗಳಿಗೆ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ, ಅವರು ಮಾತನಾಡಿದರು.

ರೋಗಿಗಳ ಚಿಕಿತ್ಸೆ ಸಂದರ್ಭದಲ್ಲಿ ರಕ್ತದ ಅಗತ್ಯತೆ ಕಂಡುಬರುತ್ತಿವೆ. ಇದರಿಂದಾಗಿ ರಕ್ತದಾನಕ್ಕೆ ಹೆಚ್ಚಿನ ಬೇಡಿಕೆಯಿದ್ದು, ರಕ್ತದಾನಿಗಳು ಇದನ್ನು ಪೂರೈಸಲು ಮುಂದೆ ಬರಬೇಕಿದೆ. ರಕ್ತದಾನದಿಂದ ಆರೋಗ್ಯಕರ ಜೀವನ ಸಾಧ್ಯ ಎಂದು ತಿಳಿಸಿದರು.
ವೆನ್‍ಲಾಕ್ ಆಸ್ಪತ್ರೆಯ ಅಧೀಕ್ಷಕ ಡಾ.ಶಿವಪ್ರಕಾಶ್ ಮಾತನಾಡಿ, ರೋಗಿಯ ಜೀವ ಉಳಿಸಲು ವೈದ್ಯರು ಶ್ರಮ ಪಡುವಂತೆ, ರಕ್ತದಾನಿಗಳು ಕೂಡ ರಕ್ತ ಒದಗಿಸುವ ಮೂಲಕ ರೋಗಿಗಳ ಜೀವ ಉಳಿಸುತ್ತಿದ್ದಾರೆ ಎಂದು ಹೇಳಿದರು.

ರಕ್ತ ಕೊಡುವಾಗ ದಾನಿ ವ್ಯಕ್ತಿಯ ವಿವಿಧ ಪರೀಕ್ಷೆ ಮಾಡಲಾಗುತ್ತಿದ್ದು, ಇದರಿಂದ ದಾನಿಗೆ ಗೊತ್ತಿಲ್ಲದೆ ಇರುವ ಸಮಸ್ಯೆಗಳು ಆ ಸಂದರ್ಭದಲ್ಲಿ ತಿಳಿದು ಬರುತ್ತದೆ. ಇದಕ್ಕೆ ಸಕಾಲ ಚಿಕಿತ್ಸೆ ಕೊಡುವ ಮೂಲಕ ದಾನಿಯ ಆರೋಗ್ಯಕರ ಜೀವನಕ್ಕೆ ರಕ್ತದಾನ ಸಹಾಯವಾಗುತ್ತಿದೆ ಎಂದರು.
ವೆನ್‍ಲಾಕ್ ಪ್ರಾದೇಶಿಕ ರಕ್ತಪೂರಣ ಘಟಕ ವೈದ್ಯಾಧಿಕಾರಿ ಡಾ.ಶರತ್ ಕುಮಾರ್ ಮಾತನಾಡಿ, ರಕ್ತದಾನದಿಂದ ದೇಹದ ಕೊಲೆಸ್ಟ್ರಾಲ್ ಪ್ರಮಾಣ ತಗ್ಗಲಿದೆ. ಅಲ್ಲದೆ ದೇಹದಲ್ಲಿ ಹೊಸ ರಕ್ತದ ಸೃಷ್ಟಿಯು ಆರೋಗ್ಯಕರ ಜೀವನಕ್ಕೆ ಪೂರಕವಾಗಿದೆ ಎಂದು ಹೇಳಿದರು.
ಜಿಲ್ಲಾ ಆರೋಗ್ಯ ಶಿಕ್ಷಣ ಅಧಿಕಾರಿ ಜ್ಯೋತಿ ಕೆ ಉಳೆಪಾಡಿ ಸ್ವಾಗತಿಸಿದರು. ಜಿಲ್ಲಾ ಏಡ್ಸ್ ನಿಯಂತ್ರಣಾಧಿಕಾರಿ ಡಾ.ಖತೀಜ ದಿಲ್ ಶಾದ್ ವಂದಿಸಿದರು. ಐಸಿಟಿಸಿ ಕೌನ್ಸಿಲರ್ ಪ್ರಮೀಳಾ ನಿರೂಪಿಸಿದರು.
ರಕ್ತದಾನ: ಶತಕ ವೀರರಿಗೆ ಸನ್ಮಾನ
ಇದೇ ವೇಳೆ 100 ಕ್ಕೂ ಅಧಿಕ ಬಾರಿ ರಕ್ತದಾನ ಮಾಡಿದ ಕೃತಿನ್ ಕುಮಾರ್ (101 ಸಲ), ಫಿರೋಜ್ (100 ಸಲ), ವಿಶ್ವನಾಥ್ ಕಾಮತ್ (90 ಸಲ), ದೀಪಕ್ ನಾಯಕ್ (72 ಸಲ), ಗಣೇಶ್ ಪ್ರಸಾದ್ (64 ಸಲ) ಹಾಗೂ ಸತೀಶ್ (51 ಸಲ) ಅವರಿಗೆ ಶಾಲು ಹೊದಿಸಿ ಪ್ರಮಾಣ ಪತ್ರ ನೀಡಿ ಸನ್ಮಾನಿಸಲಾಯಿತು.
ಜಿಲ್ಲಾಧಿಕಾರಿ ರಕ್ತದಾನ: ಕಾರ್ಯಕ್ರಮದ ಅಂಗವಾಗಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ರಕ್ತದಾನ ನಡೆಯಿತು. ಜಿಲ್ಲಾಧಿಕಾರಿ ದರ್ಶನ್ ಹೆಚ್.ವಿ ಸ್ವತಃ ರಕ್ತದಾನ ಮಾಡುವ ಮೂಲಕ ಕಚೇರಿಯ ಇತರ ಸಿಬ್ಬಂದಿಗಳಿಗೆ ಮಾದರಿಯಾದರು.