ಸುವರ್ಣಗಡ್ಡೆ: ಆರೋಗ್ಯಕಾರಿ ಪ್ರಯೋಜನಗಳೇನು?

Elephant Yam: ಸುವರ್ಣಗೆಡ್ಡೆ ಹಲವು ಆರೋಗ್ಯಕಾರಿ ಪ್ರಯೋಜನವನ್ನು ಹೊಂದಿದೆ.

Sep 17, 2026 - 12:40
ಸುವರ್ಣಗಡ್ಡೆ: ಆರೋಗ್ಯಕಾರಿ  ಪ್ರಯೋಜನಗಳೇನು?

ಕನ್ನಡದಲ್ಲಿ ಚೇನಗೆಡ್ಡೆ, ಕಾಡುಗೆಣಸು ಎಂದು. ಸಂಸ್ಕೃತದಲ್ಲಿ ಸೂರಣ, ಹಿಂದಿಯಲ್ಲಿ ಜಿಮಿಕಂದ್ ಹಾಗೂ ಇಂಗ್ಲಿಷ್‌ನಲ್ಲಿ Elephant Yam ಎಂದು ಕರೆಯಲ್ಪಡುವ ಸುವರ್ಣಗಡ್ಡೆಯ ಸಸ್ಯಶಾಸ್ತ್ರೀಯ ಹೆಸರು Amorphophallus paeoniifolius. ಇದು ಆಯುರ್ವೇದದಲ್ಲಿ ಅತ್ಯಂತ ಪ್ರಮುಖವಾದ ಗೆಡ್ಡೆ ಮೂಲಿಕೆಯಾಗಿದೆ.

ಆಯುರ್ವೇದ ಗುಣಗಳು:

ಆಯುರ್ವೇದದ ಪ್ರಕಾರ, ಇದರ ರಸ ಕಟು-ಕಷಾಯ, ಗುಣ ಲಘು-ತೀಕ್ಷ್ಣ-ರೂಕ್ಷ, ವೀರ್ಯ ಉಷ್ಣ ಮತ್ತು ವಿಪಾಕ ಕಟು. ಇದು ಮುಖ್ಯವಾಗಿ ವಾತ ಹಾಗೂ ಕಫ ದೋಷಗಳನ್ನು ಶಮನಗೊಳಿಸುತ್ತದೆ. ಜಠರಾಗ್ನಿಯನ್ನು ಅತ್ಯಂತ ಚೆನ್ನಾಗಿ ಪ್ರದೀಪಿಸುತ್ತದೆ. ಆದ್ದರಿಂದ ಅರ್ಶೋಘ್ನ ಅಂದರೆ, ಮೂಲವ್ಯಾಧಿಯನ್ನು ನಾಶಮಾಡುವ ಶ್ರೇಷ್ಠ ಔಷಧ ಎಂದು ಪರಿಗಣಿಸಲಾಗಿದೆ.

ಪ್ರಮುಖ ಆರೋಗ್ಯ ಲಾಭಗಳು:

ಮೂಲವ್ಯಾಧಿ ಮತ್ತು ಜೀರ್ಣಕ್ರಿಯೆಗೆ ಔಷಧ: ಇದರಲ್ಲಿರುವ ಹೆಚ್ಚಿನ ನಾರಿನಂಶ ಮತ್ತು ಉಷ್ಣ ಗುಣವು ಮಲಬದ್ಧತೆ, ಹೊಟ್ಟೆ ಉಬ್ಬರ, ಅಜೀರ್ಣ & ಮೂಲವ್ಯಾಧಿ, ಭಗಂದರದ ರಕ್ತಸ್ರಾವ ಹಾಗೂ ನೋವನ್ನು ಕಡಿಮೆ ಮಾಡಲು ಅದ್ಭುತವಾಗಿ ಕೆಲಸ ಮಾಡುತ್ತದೆ.

ಮಧುಮೇಹ ಮತ್ತು ತೂಕ ನಿಯಂತ್ರಣಕ್ಕೆ ಸಹಕಾರಿಯಾಗಿದೆ: ಇದರಲ್ಲಿ ಗ್ಲೈಸೆಮಿಕ್ ಇಂಡೆಕ್ಸ್ ತುಂಬಾ ಕಡಿಮೆಯಿದ್ದು, ನಾರು ಹೆಚ್ಚಿರುವುದರಿಂದ ಹೊಟ್ಟೆ ಬೇಗ ತುಂಬಿದ ಅನುಭವ ನೀಡಿ, ಹಸಿವನ್ನು ನಿಯಂತ್ರಿಸುತ್ತದೆ. ರಕ್ತದಲ್ಲಿನ ಸಕ್ಕರೆ ಹಾಗೂ ಕೆಟ್ಟ ಕೊಲೆಸ್ಟ್ರಾಲ್ ಅನ್ನು ಹತೋಟಿಗೆ ತರುತ್ತದೆ.

ಉರಿಯೂತ ಮತ್ತು ಕೃಮಿ ನಿವಾರಕ: ಇದರಲ್ಲಿರುವ ಪೊಟ್ಯಾಸಿಯಂ, ಕಬ್ಬಿಣ, ಫಾಸ್ಫರಸ್, ವಿಟಮಿನ್ ಬಿ6, ಒಮೆಗಾ-3 ಕೊಬ್ಬಿನಾಮ್ಲಗಳು ದೇಹದ ಉರಿಯೂತವನ್ನು ನಿಯಂತ್ರಿಸುತ್ತದೆ. ರಕ್ತದೊತ್ತಡವನ್ನು ಸಮತೋಲನದಲ್ಲಿಡುತ್ತವೆ. ಹೊಟ್ಟೆಯ ಹುಳಗಳನ್ನು ನಿವಾರಿಸುತ್ತವೆ.

ಬಳಸುವ ವಿಧಾನ:

ಗೆಡ್ಡೆಯನ್ನು ನೇರವಾಗಿ ಬಳಸುವಾಗ ತುರಿಕೆ ಹಾಗೂ ಕಜ್ಜಿ ಬರಬಹುದು. ಹಾಗಾಗಿ ಚೆನ್ನಾಗಿ ತೊಳೆದು, ನಿಂಬೆರಸ, ಹುಣಸೆಹುಳಿ ಅಥವಾ ಮೊಸರಿನೊಂದಿಗೆ ಚೆನ್ನಾಗಿ ಬೇಯಿಸಬೇಕು. ಆಯುರ್ವೇದದಲ್ಲಿ ಇದನ್ನು ಒಣಗಿಸಿ ಮಾಡಿದ ಸೂರಣ ಚೂರ್ಣ, ಸೂರಣ ಲೇಹ್ಯ, ಸೂರಣ ವಟಕ ಮತ್ತು ಅರ್ಶಕುಠಾರ ರಸದಂತಹ ಔಷಧಿಗಳಲ್ಲಿ ಬಳಸುತ್ತಾರೆ. ಮನೆಯಲ್ಲಿ ವಾರಕ್ಕೆ ಒಂದು ಅಥವಾ ಎರಡು ಬಾರಿ ಪಲ್ಯ, ಸಾಂಬಾರ್, ಗೊಜ್ಜು ರೂಪದಲ್ಲಿ ಸೇವಿಸಬಹುದು.

ಮುನ್ನೆಚ್ಚರಿಕೆ:

ಇದು ಉಷ್ಣ ಗುಣದ್ದಾಗಿರುವುದರಿಂದ ಪಿತ್ತ ಪ್ರಕೃತಿಯವರು, ಬಾಯಿ ಹುಣ್ಣು, ಅತಿಸಾರ ಇರುವವರು, ಗರ್ಭಿಣಿಯರು ಮತ್ತು ಹಾಲುಣಿಸುವ ತಾಯಂದಿರು ವೈದ್ಯರ ಸಲಹೆ ಇಲ್ಲದೆ ಹೆಚ್ಚು ಸೇವಿಸಬಾರದು. ಮಿತ ಪ್ರಮಾಣದಲ್ಲಿ, ಸರಿಯಾದ ವಿಧಾನದಲ್ಲಿ ಸೇವಿಸಿದರೆ ಸುವರ್ಣಗೆಡ್ಡೆ ನಿಜಕ್ಕೂ ಅಡುಗೆಮನೆಯಲ್ಲಿರುವ ನೈಸರ್ಗಿಕ ವರದಾನವೆಂದೆ ಹೇಳಬಹುದು.

ಡೇ2ಡೇ ನ್ಯೂಸ್ ಬ್ಯೂರೋ Day2day News ನವ ಮಾಧ್ಯಮದ ವೃತ್ತಿಪರ ಡಿಜಿಟಲ್‌ ಮಾಧ್ಯಮ ಸಂಸ್ಥೆ. ವೆಬ್‌ ನ್ಯೂಸ್‌ ಪೋರ್ಟಲ್‌ನಿಂದ ಹಿಡಿದು ಇನ್‌ಸ್ಟಾ, ಎಕ್ಸ್, ಫೇಸ್‌ಬುಕ್‌, ಯೂಟ್ಯೂಬ್‌, ನ್ಯೂಸ್‌ ಆಪ್‌ವರೆಗೆ ಎಲ್ಲ ಡಿಜಿಟಲ್‌ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ - ಮಾಹಿತಿಯನ್ನು ಸರಳ, ಸಂಕ್ಷಿಪ್ತವಾಗಿ ನೀಡುತ್ತದೆ. ಜತೆಗೆ Day2day Short News ಕರ್ನಾಟಕದ ಮೊದಲ ಶಾರ್ಟ್‌ ಆಪ್‌. Swipe ಮಾಡಿ ಸುದ್ದಿ ಓದಿ. ನಮ್ಮ ಎಲ್ಲ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ & ಜಾಹೀರಾತು ನೀಡಲು 7070708646ಗೆ ಸಂಪರ್ಕಿಸಿ.