ಡಾ.ಎಂ.ಎನ್.ರಾಜೇಂದ್ರ ಕುಮಾರ್ ಆರೋಗ್ಯ ವಿಚಾರಿಸಿದ ಸಚಿವ ಖಾದರ್: ಶೀಘ್ರ ಗುಣಮುಖರಾಗುವಂತೆ ಹಾರೈಕೆ
U.T.Khader: ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳದ ಅಧ್ಯಕ್ಷ, ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಅಧ್ಯಕ್ಷ ಡಾ.ಎಂ.ಎನ್.ರಾಜೇಂದ್ರ ಕುಮಾರ್ ಅನಾರೋಗ್ಯದ ಹಿನ್ನೆಲೆ, ಆಸ್ಪತ್ರೆಗೆ ದಾಖಲಾಗಿದ್ದಾರೆ. ಆರೋಗ್ಯ ಸಚಿವ ಯು.ಟಿ.ಖಾದರ್, ಬುಧವಾರ ಭೇಟಿ ಮಾಡಿ ಅವರ ಆರೋಗ್ಯ ವಿಚಾರಿಸಿದರು.
ಬೆಂಗಳೂರು: ಅನಾರೋಗ್ಯದಿಂದಾಗಿ ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳ & ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಅಧ್ಯಕ್ಷ ಡಾ.ಎಂ.ಎನ್.ರಾಜೇಂದ್ರ ಕುಮಾರ್, ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿನ ಆಸ್ಟರ್ ಸಿಎಂಐ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ಆರೋಗ್ಯ ಸಚಿವ ಯು.ಟಿ.ಖಾದರ್, ಬುಧವಾರ ಭೇಟಿ ಮಾಡಿ, ಅವರ ಆರೋಗ್ಯ ವಿಚಾರಿಸಿದರು.
ಆಸ್ಪತ್ರೆಗೆ ಭೇಟಿ ನೀಡಿದ ಸಚಿವರು, ರಾಜೇಂದ್ರ ಕುಮಾರ್ ಅವರೊಂದಿಗೆ ಕೆಲಕಾಲ ಆತ್ಮೀಯವಾಗಿ ಮಾತುಕತೆ ನಡೆಸಿ ಆರೋಗ್ಯದ ಮಾಹಿತಿ ಪಡೆದುಕೊಂಡರು. ಅವರ ಚಿಕಿತ್ಸೆಯ ಬಗ್ಗೆ ಕುಟುಂಬಸ್ಥರು ಮತ್ತು ವೈದ್ಯಕೀಯ ಸಿಬ್ಬಂದಿಯಿಂದಲೂ ವಿವರಗಳನ್ನು ಪಡೆದು, ಶೀಘ್ರ ಗುಣವಾಗುವಂತೆ ಹಾರೈಸಿದರು.

ಸಾರ್ವಜನಿಕ ಜೀವನದಲ್ಲಿ ದೀರ್ಘಕಾಲದಿಂದ ಸಕ್ರಿಯರಾಗಿರುವ ರಾಜೇಂದ್ರ ಕುಮಾರ್ ಅವರು, ರಾಜ್ಯದ ಸಹಕಾರ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿದ್ದು, ಪ್ರಮುಖ ಸಹಕಾರಿ ನಾಯಕರಾಗಿ ಹೊರಹೊಮ್ಮಿದ್ದಾರೆ. ಅದರಲ್ಲೂ ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನ ಅಧ್ಯಕ್ಷರಾಗಿದ್ದು, ಸುಮಾರು 32 ವರ್ಷಗಳ ಸುದೀರ್ಘ ಸೇವೆ ಸಲ್ಲಿಸಿದ್ದಾರೆ. ಸಹಕಾರಿ ಬ್ಯಾಂಕಿಂಗ್ ಹಾಗೂ ಸ್ವಸಹಾಯ ಸಂಘಗಳ ಮೂಲಕ, ಗ್ರಾಮೀಣ ಮತ್ತು ಮಹಿಳಾ ಆರ್ಥಿಕ ಸಬಲೀಕರಣಕ್ಕೆ ಸಂಬಂಧಿಸಿದ ಹಲವು ವಿಶೇಷ ಕಾರ್ಯಕ್ರಮಗಳೊಂದಿಗೆ ಗುರುತಿಸಿಕೊಂಡಿದ್ದಾರೆ.
ಆರೋಗ್ಯ ಸ್ಥಿರ: ರಾಜೇಂದ್ರ ಕುಮಾರ್ ಆರೋಗ್ಯವು ಸ್ಥಿರವಾಗಿದೆ ಎಂದು ಆಸ್ಪತ್ರೆಯ ವೈದ್ಯರು ದೃಢಪಡಿಸಿದ್ದಾರೆ.
ಡಾ.ಎಂ.ಎನ್.ರಾಜೇಂದ್ರ ಕುಮಾರ್ ಅವರು, ಶೀಘ್ರ ಗುಣವಾಗಿ ಆರೋಗ್ಯದಿಂದ ಮರಳಲಿ ಎಂದು ಅವರ ಕುಟುಂಬ, ಸ್ನೇಹಿತರು, ಸಹಕಾರ ಕ್ಷೇತ್ರದ ಸಹೋದ್ಯೋಗಿಗಳು ಹಾಗೂ ಹಿತೈಷಿಗಳು ಹಾರೈಸಿದ್ದಾರೆ.
ಈ ವೇಳೆ ವೈದ್ಯರಾದ ಡಾ.ಕಿಶೋರ್, ಸುಧೀಂದ್ರ ಜಿ.ಭಟ್, ಪುತ್ತು ಮೇಘರಾಜ್ ಜೈನ್, ಎಸ್‌ಸಿಡಿಸಿಸಿ ಬ್ಯಾಂಕ್ ನಿರ್ದೇಶಕರಾದ ದೇವಿಪ್ರಸಾದ್ ಶೆಟ್ಟಿ ಬೆಳಪು, ಶಶಿಕುಮಾರ್ ರೈ ಬಾಲ್ಯೊಟ್ಟು, ಉದ್ಯಮಿ ಜಯಪ್ರಕಾಶ್ ತುಂಬೆ, ಆಸಿಫ್ ಮತ್ತು ಸುನಿಲ್ ಕುಮಾರ್ ಬಜಗೋಳಿ, ರಾಮಪ್ರಸಾದ್, ರಾಜೇಶ್ ಪೂಜಾರಿ, ರವಿ ಕುಮಾರ್, ಕೀತ್ ಸಲಿನ್ಸ್ ಹಾಗೂ ಬಾಲಕೃಷ್ಣ ಇದ್ದರು.