Vivekananda Law College: ಕಾನೂನು ಶಿಕ್ಷಣದಿಂದ ಸಮಾಜ ಸುಧಾರಣೆ.. ಶಿವಪ್ರಸಾದ್ ಶೆಟ್ಟಿ
Vivekananda Law College: ಇಲ್ಲಿ 2026-27ನೇ ಸಾಲಿನ ಪ್ರಥಮ ಬಿಎ ಎಲ್‌ಎಲ್‌ಬಿ ಹಾಗೂ ಪ್ರಥಮ ಬಿಬಿಎ ಎಲ್‌ಎಲ್‌ಬಿ ವಿದ್ಯಾರ್ಥಿಗಳಿಗೆ 5 ದಿನಗಳ ಓರಿಯಂಟೇಶನ್ ಕಾರ್ಯಕ್ರಮ 'ಜ್ಯೋತಿರ್ಗಮಯ' ಆಯೋಜಿಸಲಾಗಿತ್ತು.
ಪುತ್ತೂರು: ಕಾನೂನು ಶಿಕ್ಷಣವು ಕೇವಲ ವಕೀಲರು ಅಥವಾ ನ್ಯಾಯಾಧೀಶರನ್ನು ಸೃಷ್ಟಿಸುವ ಪ್ರಕ್ರಿಯೆಯಲ್ಲ. ಅದು ಇಡೀ ಸಮಾಜವನ್ನು ಪ್ರಗತಿಯತ್ತ ಮುನ್ನಡೆಸುವ ಒಂದು ಶಕ್ತಿಶಾಲಿ ಮಾಧ್ಯಮವಾಗಿದೆ ಎಂದು ವಿವೇಕಾನಂದ ಕಾನೂನು ಮಹಾವಿದ್ಯಾಲಯದ ಶಿಕ್ಷಕ-ರಕ್ಷಕ ಸಂಘದ ಅಧ್ಯಕ್ಷ ಎಂ.ಶಿವಪ್ರಸಾದ್ ಶೆಟ್ಟಿ ಹೇಳಿದರು.
ಕಾಲೇಜಿನಲ್ಲಿ ಪ್ರಥಮ ಬಿಎ ಎಲ್‌ಎಲ್‌ಬಿ ಹಾಗೂ ಪ್ರಥಮ ಬಿಬಿಎ ಎಲ್‌ಎಲ್‌ಬಿ ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ್ದ 5 ದಿನಗಳ ಓರಿಯಂಟೇಶನ್ ಕಾರ್ಯಕ್ರಮ 'ಜ್ಯೋತಿರ್ಗಮಯ'ಕ್ಕೆ ಚಾಲನೆ ನೀಡಿ, ಅವರು ಮಾತನಾಡಿದರು.
ಕಾನೂನು ಶಿಕ್ಷಣವು ಸಮಾಜದಲ್ಲಿ ಸಮಾನತೆ, ನ್ಯಾಯ ಹಾಗೂ ಶಾಂತಿಯನ್ನು ಸ್ಥಾಪಿಸಲು ಮಹತ್ವದ ಪಾತ್ರ ವಹಿಸುತ್ತದೆ. ಅಂತಹ ಕಾನೂನು ಅಭ್ಯಾಸಕ್ಕಾಗಿ, ನೀವು 'ವಿವೇಕಾನಂದ ಕಾನೂನು ಮಹಾವಿದ್ಯಾಲಯ'ವನ್ನು ಆಯ್ಕೆ ಮಾಡಿಕೊಂಡಿದ್ದೀರಿ. ಕಾನೂನು ವಿದ್ಯೆಯ ಜೊತೆಗೆ ಮೌಲ್ಯಗಳನ್ನು ಕಲಿತು ಸಮಾಜದ ಆಸ್ತಿಯಾಗಬೇಕು ಎಂದು ತಿಳಿಸಿದರು.

ವಿವೇಕಾನಂದ ಕಾನೂನು ಮಹಾವಿದ್ಯಾಲಯದ ಆಡಳಿತ ಮಂಡಳಿ ಅಧ್ಯಕ್ಷ ಸುರೇಂದ್ರ ಕಿಣಿ ಜಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ವಿದ್ಯೆಯೊಂದಿಗೆ ಸಂಸ್ಕಾರ ಇದ್ದರೇ ಮಾತ್ರ, ವಿದ್ಯಾವಂತನಿಗೆ ಸಮಾಜದಲ್ಲಿ ಬೆಲೆ ಇರುತ್ತದೆ. ಬಲಿಷ್ಠವಾದ ವಿದ್ಯಾರ್ಥಿ ಸಮೂಹವನ್ನು ಸಮಾಜಕ್ಕೆ ಬೇಕಾದ ರೀತಿಯಲ್ಲಿ ಸಂಸ್ಕಾರವಂತರನ್ನಾಗಿ ರೂಪಿಸುವ ಕೆಲಸ ಮತ್ತು ಗುಣಮಟ್ಟದ ಸಂಸ್ಕಾರಯುತ ಕಾನೂನು ಶಿಕ್ಷಣ ನೀಡುವ ಗುರಿಯನ್ನು ವಿವೇಕಾನಂದ ಕಾನೂನು ಮಹಾವಿದ್ಯಾಲಯ ಇಟ್ಟುಕೊಂಡಿದೆ ಎಂದರು.
ವಿವೇಕಾನಂದ ಕಾನೂನು ಮಹಾವಿದ್ಯಾಲಯದ ಕಾನೂನು ಅಧ್ಯಯನ ವಿಭಾಗದ ನಿರ್ದೇಶಕ ಡಾ.ಬಿ.ಕೆ.ರವೀಂದ್ರ ಮಾತನಾಡಿ, ಕಾನೂನು ವಿದ್ಯಾರ್ಥಿಗಳನ್ನು ಸ್ಪರ್ಧಾತ್ಮಕ ಯುಗದ ಸವಾಲುಗಳನ್ನು ಎದುರಿಸಲು ಬೇಕಾದ ಎಲ್ಲಾ ರೀತಿಯ ಸೌಕರ್ಯಗಳನ್ನು ನಿಮಗೆ ಒದಗಿಸಲಾಗುತ್ತಿದೆ. ನೀವು ಮುಂದಿನ 5 ವರ್ಷಗಳ ಕಾಲ ಇಲ್ಲಿಗೆ ನಿಮ್ಮನ್ನು ಸಮರ್ಪಿಸಿಕೊಂಡು ವಿದ್ಯಾಭ್ಯಾಸ ಮಾಡಿದರೆ, ಖಂಡಿತ ಅದ್ಭುತ ಭವಿಷ್ಯ ನಿಮ್ಮದಾಗಲಿದೆ ಎಂದು ಹೇಳಿದರು.
ವಿವೇಕಾನಂದ ಕಾನೂನು ಮಹಾವಿದ್ಯಾಲಯದ ಪ್ರಾಂಶುಪಾಲ ಡಾ.ಅಕ್ಷತಾ ಎ.ಪಿ ಪ್ರಾಸ್ತಾವಿಕ ಮಾತುಗಳೊಂದಿಗೆ, ಸ್ವಾಗತಿಸಿದರು. ರಾಜ್ಯಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕ ಲಕ್ಷ್ಮೀಕಾಂತ ರೈ ಅನಿಕೂಟೇಲ್ ವಂದಿಸಿದರು. ವಿದ್ಯಾರ್ಥಿನಿ ವರ್ಷಾ ಕಾರ್ಯಕ್ರಮ ನಿರೂಪಿಸಿದರು.
ಈ ಕಾರ್ಯಕ್ರಮದಲ್ಲಿ ಆಡಳಿತ ಮಂಡಳಿ ಸದಸ್ಯರು, ಪೋಷಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಉದ್ಘಾಟನಾ ಕಾರ್ಯಕ್ರಮದ ನಂತರ ವಿದ್ಯಾರ್ಥಿಗಳಿಗೆ ವಿಶೇಷ ಮಾರ್ಗದರ್ಶಕ ತರಗತಿಗಳನ್ನು ನಡೆಸಲಾಯಿತು.
ಮೊದಲ ಅವಧಿಯಲ್ಲಿ ಪುತ್ತೂರಿನ ಖ್ಯಾತ ನ್ಯಾಯವಾದಿ ಹಾಗೂ ವಿವೇಕಾನಂದ ಕಾನೂನು ಮಹಾವಿದ್ಯಾಲಯದ ಹಿರಿಯ ವಿದ್ಯಾರ್ಥಿ ಸೂರ್ಯನಾರಾಯಣ ಎನ್.ಕೆ 'ನ್ಯಾಯ ಎತ್ತಿಹಿಡಿಯುವಲ್ಲಿ ಕಾನೂನು ವೃತ್ತಿಯ ಪಾತ್ರ' ಎಂಬ ವಿಷಯದ ಕುರಿತು ವಿಶೇಷ ಉಪನ್ಯಾಸ ನೀಡಿದರು.
ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾನಿಲಯದ ಸಹಾಯಕ ಪ್ರಾಧ್ಯಾಪಕ ಗಿರೀಶ್ ಕೆ.ಸಿ, 'ಕಾನೂನು ಶಿಕ್ಷಣದಲ್ಲಿ ಉತ್ಕೃಷ್ಟತೆಯನ್ನು ಸಾಧಿಸುವ ವಿಧಾನಗಳು' ಎಂಬ ವಿಷಯದ ಕುರಿತು ವಿಶೇಷ ಉಪನ್ಯಾಸ ಕೊಟ್ಟರು.
Day2day News ನವ ಮಾಧ್ಯಮದ ವೃತ್ತಿಪರ ಡಿಜಿಟಲ್ ಮಾಧ್ಯಮ ಸಂಸ್ಥೆ. ವೆಬ್ ನ್ಯೂಸ್ ಪೋರ್ಟಲ್‌ನಿಂದ ಹಿಡಿದು ಇನ್‌ಸ್ಟಾ, ಎಕ್ಸ್, ಫೇಸ್‌ಬುಕ್, ಯೂಟ್ಯೂಬ್, ನ್ಯೂಸ್ ಆಪ್‌ವರೆಗೆ ಎಲ್ಲ ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ - ಮಾಹಿತಿಯನ್ನು ಸರಳ, ಸಂಕ್ಷಿಪ್ತವಾಗಿ ನೀಡುತ್ತದೆ. ಜತೆಗೆ Day2day Short News ಕರ್ನಾಟಕದ ಮೊದಲ ಶಾರ್ಟ್ ಆಪ್. Swipe ಮಾಡಿ ಸುದ್ದಿ ಓದಿ. ನಮ್ಮ ಎಲ್ಲ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ & ಜಾಹೀರಾತು ನೀಡಲು 7070708646ಗೆ ಸಂಪರ್ಕಿಸಿ.