Karnataka Weather Report: ರಾಜ್ಯ ಹವಾಮಾನ ವರದಿ.. ಮಳೆ ಯಾವಾಗ?
Karnataka Weather Report: ರಾಜ್ಯದ ವಿವಿಧ ಭಾಗಗಳಲ್ಲಿ ಮೋಡ ಕವಿದ ವಾತಾವರಣವಿರಲಿದ್ದು, ಅಲ್ಲಲ್ಲಿ ಮಳೆಯಾಗಿದೆ.
ಬೆಂಗಳೂರು: ಕರಾವಳಿ ಮಲೆನಾಡು ಉತ್ತರ ಒಳನಾಡಿನಲ್ಲಿ ನಿನ್ನೆ (ಸೋಮವಾರ) ಬಿಸಿಲಿನ ವಾತಾವರಣ ಹಾಗೂ ಬಹುತೇಕ ಒಣಹವೆ ಇತ್ತು. ದಕ್ಷಿಣ ಒಳನಾಡಿನ ಕೋಲಾರ, ಬೆಂಗಳೂರು ಗ್ರಾಮಾಂತರ, ರಾಮನಗರ, ಚಾಮರಾಜನಗರ ಜಿಲ್ಲೆಗಳ ಬಹುತೇಕ ಪ್ರದೇಶಗಳಲ್ಲಿ ಸಾಧಾರಣ ಮಳೆಯಾಗಿದೆ. ಮಂಡ್ಯ, ಬೆಂಗಳೂರು, ಚಿಕ್ಕಬಳ್ಳಾಪುರ, ದಾವಣಗೆರೆ ಜಿಲ್ಲೆಗಳ ಅಲ್ಲಲ್ಲಿ ಸಾಮಾನ್ಯ ಮಳೆಯಾಗಿದೆ.
ಇವತ್ತಿನ ಮುನ್ಸೂಚನೆ ಪ್ರಕಾರ, ಕರಾವಳಿ ಜಿಲ್ಲೆಗಳಲ್ಲಿ ಬಿಸಿಲಿನ ವಾತಾವರಣ ಮುಂದುವರೆಯಲಿದೆ. ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳ ಸುಳ್ಯ, ಪುತ್ತೂರು, ಬೆಳ್ತಂಗಡಿ, ಕಾರ್ಕಳ ಹಾಗೂ ಹೆಬ್ರಿ ತಾಲೂಕುಗಳಲ್ಲಿ ಸಂಜೆ ಅಥವಾ ನಾಳೆ ಬೆಳಗ್ಗೆ ಮೋಡದ ವಾತಾವರಣ ಇರಬಹುದು. ಸೆ.17 ರಿಂದ ದಕ್ಷಿಣ ಕನ್ನಡದ ಘಟ್ಟಪ್ರದೇಶಗಳಲ್ಲಿ ಪೂರ್ವದ ಮಳೆ ಆರಂಭವಾಗುವ ಸಾಧ್ಯತೆಯಿದೆ.
ಮಲೆನಾಡಿನ ಕೊಡಗು ಜಿಲ್ಲೆಯ ಹಲವೆಡೆ ಸಂಜೆ ಸಾಧಾರಣ ಮಳೆಯ ಮುನ್ಸೂಚನೆಯಿದೆ. ಹಾಸನ, ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಸಂಜೆ ಮೋಡದ ವಾತಾವರಣ ಇರಲಿದ್ದು, ಅಲ್ಲಲ್ಲಿ ತುಂತುರು/ ಸಾಮಾನ್ಯ ಮಳೆಯಾಗುವ ಸಾಧ್ಯತೆಯಿದೆ. ಸೆ 20 ರಿಂದ 3-4 ದಿನ ಮಲೆನಾಡಿನ ಜಿಲ್ಲೆಗಳಲ್ಲಿ ಉತ್ತಮ ಮಳೆಯ ಮುನ್ಸೂಚನೆ ಇದೆ.
ದಕ್ಷಿಣ ಒಳನಾಡಿನಲ್ಲಿ ಮೈಸೂರು, ಚಾಮರಾಜನಗರ, ರಾಮನಗರ, ಕೋಲಾರ, ಚಿಕ್ಕಬಳ್ಳಾಪುರ, ಮಂಡ್ಯ, ಬೆಂಗಳೂರು ಗ್ರಾಮಾಂತರ ಮತ್ತು ತುಮಕೂರು ಜಿಲ್ಲೆಗಳಲ್ಲಿ ಸಂಜೆ ಮೋಡದ ವಾತಾವರಣ ಇರಲಿದ್ದು, ಅಲ್ಲಲ್ಲಿ ತುಂತುರು - ಸಣ್ಣ ಮಳೆಯಾಗುವ ನಿರೀಕ್ಷೆಯಿದೆ. ಮಳೆ ಒಂದು ವಾರ ಮುಂದುವರೆಯಲಿದ್ದು, ಸೆ.19 ರಿಂದ ದಕ್ಷಿಣ ಒಳನಾಡಿನಲ್ಲಿ ಉತ್ತಮ ಮಳೆಯಾಗುವ ಸಾಧ್ಯತೆಯಿದೆ.
ಉತ್ತರ ಒಳನಾಡಿನ ಬೆಳಗಾವಿ, ಬಿಜಾಪುರ, ಕಲಬುರಗಿ ಹಾಗೂ ಬೀದರ್ ಜಿಲ್ಲೆಗಳಲ್ಲಿ ಸಂಜೆ ಮೋಡದ ವಾತಾವರಣ ಇರಬಹುದು. ಮುಂದಿನ 3-4 ದಿನ ಮಳೆ ಕಡಿಮೆಯಾಗಿದ್ದು, ಉತ್ತರ ಒಳನಾಡಿನಲ್ಲಿ ಸೆ.18 ರಿಂದ ಗುಡುಗು ಮಳೆ ಮುನ್ಸೂಚನೆಯಿದೆ.
ದಕ್ಷಿಣ ಬಂಗಾಳಕೊಲ್ಲಿಯಲ್ಲಿ ಶ್ರೀಲಂಕಾ ಆಗ್ನೇಯದ ದುರ್ಬಲ ಸೈಕ್ಲೋನಿಕ್ ಸರ್ಕ್ಯುಲೇಷನ್ ಕಾರಣದಿಂದಾಗಿ, ತಮಿಳುನಾಡು, ಕೇರಳದ ಅಲ್ಲಲ್ಲಿ ಗುಡುಗು ಮಳೆಯಾಗುತ್ತಿದ್ದು ಈ ಟ್ರಫ್ ಕರ್ನಾಟಕದ ದಕ್ಷಿಣ ಒಳನಾಡಿನ ತನಕ ಮುಂದುವರೆದಿದೆ.
ಕರ್ನಾಟಕದ ದಕ್ಷಿಣ/ ಉತ್ತರ ಒಳನಾಡು ಜಿಲ್ಲೆಗಳು ಮತ್ತು ಮಲೆನಾಡಿನಲ್ಲಿ ಸೆ.19 ರಿಂದ ಉತ್ತಮ ಮಳೆಯ ಮುನ್ಸೂಚನೆ ಇದೆ. ಆದಾಗ್ಯೂ, ಕರಾವಳಿ ಜಿಲ್ಲೆಗಳಲ್ಲಿ ಮಳೆ ಕಡಿಮೆ ಇರಲಿದ್ದು ಘಟ್ಟಪ್ರದೇಶಗಳಲ್ಲಿ 17 ರಿಂದ ಹಾಗೂ ಕರಾವಳಿ ತೀರಗಳಲ್ಲಿ ಸೆ.20 - 23 ರವರೆಗೆ ಸಾಮಾನ್ಯ ಮಳೆ ಆಗಬಹುದು.