ನದಿ ನೀರನ್ನು ತಡೆಯುವುದು ಅನರ್ಥಕ್ಕೆ ಕಾರಣ: ರಾಘವೇಶ್ವರ ಶ್ರೀ
Annabrahma Chaturmasya Dharmasabha: ಅಶೋಕೆಯ ಮೂಲಮಠದಲ್ಲಿ ನಡೆಯುತ್ತಿರುವ 'ಅನ್ನಬ್ರಹ್ಮ ಚಾತುರ್ಮಾಸ್ಯ'ದ ಧರ್ಮಸಭೆಯಲ್ಲಿ ಮಂಗಳವಾರ 'ಅನ್ನಂ ಬ್ರಹ್ಮ' ಮಾಲಿಕೆಯಲ್ಲಿ ನದಿ ನೀರಿನ ಕುರಿತಾಗಿ ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿ ಪ್ರವಚನ ನೀಡಿದರು.
ಗೋಕರ್ಣ: ಗಂಗೆಯನ್ನು ಸೇವಿಸಿದರೆ ನರಕದ ವೈತರಣಿ ನದಿಯಿಂದ ತಪ್ಪಿಸಿಕೊಳ್ಳಬಹುದು ಎಂಬ ಮಾತಿದೆ. ನಾವಿಂದು ನಾಗರೀಕತೆಯ ಹೆಸರಿನಲ್ಲಿ ಗಂಗಾ ನದಿಯನ್ನೇ ವೈತರಣಿ ನದಿಯಾಗಿ ಪರಿವರ್ತಿಸಿದ್ದೇವೆ. ಗಂಗೆಯನ್ನು ಅಶುದ್ಧಗೊಳಿಸಿರುವುದು ಔರಂಗಜೇಬನ ಹೇಯ ಕೃತ್ಯಗಳಿಗಿಂತಲೂ ಹೀನ ಕೃತ್ಯ ಎಂದು ಶ್ರೀರಾಮಚಂದ್ರಾಪುರ ಮಠದ ಜಗದ್ಗುರು ಶಂಕರಾಚಾರ್ಯ ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿ ಹೇಳಿದರು.
ಅಶೋಕೆಯ ಮೂಲಮಠದಲ್ಲಿ ನಡೆಯುತ್ತಿರುವ 'ಅನ್ನಬ್ರಹ್ಮ ಚಾತುರ್ಮಾಸ್ಯ'ದ ಧರ್ಮಸಭೆಯಲ್ಲಿ ಮಂಗಳವಾರ 'ಅನ್ನಂ ಬ್ರಹ್ಮ' ಮಾಲಿಕೆಯಲ್ಲಿ ನದಿ ನೀರಿನ ಕುರಿತಾಗಿ ಪ್ರವಚನ ನೀಡಿದರು.

ಹರಿದ್ವಾರದ ನಂತರ, ಗಂಗಾ ನದಿಯ ಸ್ವರೂಪವೇ ಬದಲಾಗಿದೆ. ಮನುಷ್ಯನ ಮಲಮೂತ್ರಗಳ ಕಾಲುವೆಗಳನ್ನು ನದಿಗೆ ಸೇರಿಸಿ, ಗಂಗೆಯನ್ನು ಅಶುದ್ಧಗೊಳಿಸಲಾಗಿದೆ. ಇದು ದೇಶಕ್ಕೆ, ಸೃಷ್ಟಿಗೆ ಹಾಗೂ ಮುಂದಿನ ಪೀಳಿಗೆಗೆ ಮಾಡಿದ ಅಪಚಾರ. ಚರಿತ್ರೆಯಲ್ಲಿ ಮುಂದಿನ ಪೀಳಿಗೆ ಈ ತಪ್ಪನ್ನು ಕ್ಷಮಿಸುವುದಿಲ್ಲ. ಇದು ಗಂಗೆಯ ಮೂಲಕ ಸೃಷ್ಟಿಯ ಚಕ್ರಕ್ಕಾಗುತ್ತಿರುವ ಅನ್ಯಾಯ ಎಂದು ಬೇಸರ ವ್ಯಕ್ತಪಡಿಸಿದರು.
ಗಂಗೆಯ ನೀರು ದೇಹವನ್ನು ಒಮ್ಮೆ ಪ್ರವೇಶಿಸಿದರೆ, ಅದು ಒಂದು ವರ್ಷಗಳ ಕಾಲ ದೇಹದಲ್ಲಿ ಇರುತ್ತದೆ ಎಂಬ ಮಾತಿದೆ. ಗಂಗೆಗೆ ತ್ರಿದೋಷಗಳ ಏರುಪೇರುಗಳನ್ನು ನಿವಾರಿಸುವ ಶಕ್ತಿಯಿದ್ದು, ಮಂದಾಗ್ನಿಯನ್ನು ಪರಿಹರಿಸಿ, ಅಗ್ನಿ ಪ್ರಜ್ವಾಲನೆಯನ್ನು ಮಾಡುತ್ತದೆ ಎಂದು ಆಯುರ್ವೇದ ಆಚಾರ್ಯರು ಪ್ರತಿಪಾದಿಸಿದ್ದಾರೆ.

ಈ ಹಿಂದೆ ರಾಜ ಮಹಾರಾಜರು ದೊಡ್ದ ದೊಡ್ದ ಬೆಳ್ಳಿಯ ಪಾತ್ರೆಗಳಲ್ಲಿ ಗಂಗೆಯನ್ನು ಸಂಗ್ರಹಿಸಿ ಇಟ್ಟುಕೊಳ್ಳುತ್ತಿದ್ದರು. ಸರಿಯಾಗಿ ಸಂಗ್ರಹಿಸಿಟ್ಟಾಗ ಗಂಗಾ ಜಲ ನೂರು ವರ್ಷವಾದರೂ ಏನೂ ಆಗದು. ನಮ್ಮ ಸಂಸ್ಕೃತಿಯಲ್ಲಿ ಗಂಗಾ ನದಿಗೆ ವಿಶೇಷ ಸ್ಥಾನವಿದೆ ಎಂದು ಗಂಗೆಯ ಮಹತ್ವವನ್ನು ವಿವರಿಸಿದರು.
ಗಂಗೆಯ ಕುರಿತಾಗಿ ಅನೇಕ ಆಧುನಿಕ ಸಂಶೋಧನೆಗಳು ನಡೆದಿದ್ದು, ಗಂಗೆಯಲ್ಲಿ ವಿಶೇಷ ಸೂಕ್ಷ್ಮಾಣುಗಳಿವೆ. ಗಂಗಾ ನದಿಯ ನೀರಿಗೆ ಹಾನಿಕಾರಕ ಸೂಕ್ಷ್ಮಾಣುಗಳನ್ನು ನಾಶಪಡಿಸುವ ಶಕ್ತಿಯಿದೆ ಎಂದು ಸಂಶೋಧನೆಗಳು ದೃಢಪಡಿಸಿವೆ. ಗಂಗೆ ಸ್ವಯಂ ಶುದ್ಧೀಕರಣ ಗುಣವಿದ್ದು, ತನ್ನನ್ನು ತಾನು ಶುದ್ಧೀ ಕರಿಸಿಕೊಳ್ಳುತ್ತದೆ. ಗಂಗಾ ಜಲವು ದೇಹವನ್ನು ಪ್ರವೇಶಿಸಿದಾಗ ದೇಹದಲ್ಲಿರುವ ಹಾನಿಕಾರಕ ಸೂಕ್ಷ್ಮಾಣುಗಳನ್ನು ನಾಶಪಡಿಸಿ, ಕರುಳಿನಲ್ಲಿರುವ ಒಳ್ಳೆಯ ಸೂಕ್ಷ್ಮಾಣುಗಳನ್ನು ರಕ್ಷಿಸುತ್ತದೆ ಎಂದು ಆಧುನಿಕ ಸಂಶೋಧನೆಗಳು ದೃಢೀಕರಿಸಿದ್ದು, ಆಯುರ್ವೇದದ ಮಾತುಗಳನ್ನು ಇವು ಸಮರ್ಥಿಸುತ್ತದೆ ಎಂದು ಎಂದರು.
ಶ್ರೀಕಂಠ ಶರ್ಮಾ ಮಡೋಡಿ ಕುಟುಂಬದವರು ಗುರುಭಿಕ್ಷಾ ಸೇವೆ ಸಮರ್ಪಿಸಿದರು. ದಿನಪ್ರಧಾನರಾಗಿ ನಿಡುವಾಜೆ ರಾಮ ಭಟ್ ಉಪಸ್ಥಿತರಿದ್ದರು.