ಸಿದ್ದರಾಮಯ್ಯನವರಿಗೆ ಅಸಮಾಧಾನವಿದ್ದಿದ್ದರೆ ರಾಜೀನಾಮೆಯನ್ನೇ ಕೊಡುತ್ತಿರಲಿಲ್ಲ: ಡಾ.ಜಿ.ಪರಮೇಶ್ವರ

Dr.G.Parameshwara: ಬೆಂಗಳೂರಿನಲ್ಲಿ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ ಸುದ್ದಿಗಾರರೊಂದಿಗೆ ಶುಕ್ರವಾರ ಮಾತನಾಡಿದರು.

Sep 11, 2026 - 15:23
ಸಿದ್ದರಾಮಯ್ಯನವರಿಗೆ ಅಸಮಾಧಾನವಿದ್ದಿದ್ದರೆ ರಾಜೀನಾಮೆಯನ್ನೇ ಕೊಡುತ್ತಿರಲಿಲ್ಲ: ಡಾ.ಜಿ.ಪರಮೇಶ್ವರ

ಬೆಂಗಳೂರು: ಮಾಜಿ ಸಿಎಂ ಸಿದ್ದರಾಮಯ್ಯ, ದೆಹಲಿ ಭೇಟಿ ಹಿಂದೆ ಯಾವುದೇ ಅಸಮಾಧಾನದ ಕಾರಣಗಳಿಲ್ಲ. ಹಾಗೊಂದು ವೇಳೆ ಅಸಮಾಧಾನ ಇದ್ದಿದ್ದರೆ ಅವರು, ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆಯನ್ನೇ ಕೊಡುತ್ತಿರಲಿಲ್ಲ ಎಂದು ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ (Dr.G.Pramaeshara) ಸ್ಪಷ್ಟಪಡಿಸಿದರು.

ಸದಾಶಿವನಗರದ ತಮ್ಮ ನಿವಾಸದ ಬಳಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದರು. ಹೈಕಮಾಂಡ್‌ ಹೇಳಿದಂತೆ ನಡೆದುಕೊಳ್ಳುವುದಾಗಿ ಸಿದ್ದರಾಮಯ್ಯ ಅವರು ಮೊದಲಿನಿಂದಲೂ ಹೇಳುತ್ತ ಬಂದಿದ್ದರು. ಅದರಂತೆ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿದ್ದಾರೆ. ಇದು ಮುಗಿದು ಹೋದ ಅಧ್ಯಾಯ. ಈ ವಿಚಾರವಾಗಿ ಪುನಃ ಪುನಃ ಚರ್ಚೆ ಮಾಡುವುದರಲ್ಲಿ ಅರ್ಥವಿಲ್ಲ. ಅವರು ಪ್ರಸ್ತುತ ಕಾಂಗ್ರೆಸ್‌ ಕಾರ್ಯಕಾರಿಣಿ ಸಮಿತಿ ಸದಸ್ಯರಾಗಿರುವುದರಿಂದ ದೆಹಲಿ ಭೇಟಿ ಸಹಜ ಪ್ರಕ್ರಿಯೆಯಾಗಿದೆ. ಅದಕ್ಕೆ ಬೇರೆ ಅರ್ಥಗಳನ್ನು ಕಲ್ಪಿಸಬಾರದು ಎಂದರು.

ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ನೇತೃತ್ವದ ನಮ್ಮ ಸರ್ಕಾರವು 100 ದಿನಗಳನ್ನು ಪೂರೈಸಿವೆ. ಸಾಕಷ್ಟು ಸವಾಲುಗಳು ನಮ್ಮ ಮುಂದಿವೆ. ದೃತಿಗೆಡದೆ ಎಲ್ಲವನ್ನು ನಿಭಾಯಿಸಿಕೊಂಡು ಉತ್ತಮ ಆಡಳಿತ ನೀಡುತ್ತೇವೆ ಎಂದು ಹೇಳಿದರು.

ಎಸ್‌.ರವಿ ಅವಿರೋಧ ಆಯ್ಕೆ:

ಅವಿರೋಧವಾಗಿ ಅಪೆಕ್ಸ್‌ ಬ್ಯಾಂಕ್‌ ಅಧ್ಯಕ್ಷರನ್ನು ಆಯ್ಕೆ ಮಾಡಬೇಕು, ಚುನಾವಣೆ ನಡೆಸುವುದು ಬೇಡ ಎಂಬುದು ನಮ್ಮ ಪಕ್ಷದ ನಿರ್ಧಾರವಾಗಿತ್ತು. ಹಾಗಾಗಿ, ಕೊನೆಯ ಹಂತದಲ್ಲಿ ವಿಧಾನ ಪರಿಷತ್‌ ಸದಸ್ಯ ಎಸ್‌.ರವಿ ಅವರನ್ನು ಆಯ್ಕೆ ಮಾಡಲಾಗಿದೆ. ನಿರ್ಣಾಯಕ ಸಭೆಯಲ್ಲಿ ಕೆ.ಎನ್‌.ರಾಜಣ್ಣ ಕೂಡ ಹಾಜರಿದ್ದರು. ಅವರ ಸಮ್ಮತಿ ಮೇರೆಗೆ ಅಧ್ಯಕ್ಷರ ಆಯ್ಕೆ ನಡೆದಿದೆ. ಈ ವಿಚಾರದಲ್ಲಿ ಅಸಮಾಧಾನದ ಪ್ರಶ್ನೆ ಉದ್ಭವಿಸುವುದಿಲ್ಲ ಎಂದು ತಿಳಿಸಿದರು.

ತುಮಕೂರಿಗೆ ನಕ್ಸಲ್‌ ನಿಗ್ರಹ ದಳ:

ತುಮಕೂರು ಜಿಲ್ಲೆಯ ಪಾವಗಡದಲ್ಲಿ ನಕ್ಸಲ್‌ ಚಟುವಟಿಕೆಗೆ ಸಂಬಂಧಿಸಿದ ಪೋಸ್ಟರ್‌ ಪ್ರತ್ಯಕ್ಷವಾಗಿರುವ ವಿಚಾರ ಸಂಬಂಧ ಪ್ರತಿಕ್ರಿಯಿಸಿದ ಅವರು, ನನ್ನ ಗಮನಕ್ಕೂ ಬಂದಿದೆ. ಇಂದು ತುಮಕೂರಿಗೆ ಭೇಟಿ ನೀಡುತ್ತಿದ್ದೇನೆ. ಅಲ್ಲಿಯ ಎಸ್‌ಪಿ ಅವರೊಂದಿಗೆ ಈ ಕುರಿತು ಚರ್ಚೆ ಮಾಡುತ್ತೇನೆ. ಅಂತಹ ಬೆಳವಣಿಗೆ ಕಂಡುಬಂದರೆ ಹೆಚ್ಚುವರಿ ಪಡೆಯನ್ನು ನಿಯೋಜಿಸಲಾಗುವುದು ಎಂದರು.

ನಕ್ಸಲ್‌ ಮುಕ್ತ ಕರ್ನಾಟಕ ಘೋಷಣೆ ಬಳಿಕ, ಕಾರ್ಕಳದಲ್ಲಿದ್ದ ನಕ್ಸಲ್‌ ನಿಗ್ರಹ ದಳವನ್ನು ಸಂಪೂರ್ಣವಾಗಿ ಮುಚ್ಚಿಲ್ಲ. ಅರ್ಧ ಪಡೆಯನ್ನು ಕೋಮು ಗಲಭೆ ನಿಯಂತ್ರಣಕ್ಕಾಗಿ ಸ್ಪೆಷಲ್‌ ಆ್ಯಕ್ಷನ್‌ ಫೋರ್ಸ್‌ ಆಗಿ ಪರಿವರ್ತಿಸಲಾಗಿದೆ. ಇನ್ನರ್ಧ ಪಡೆ ನಕ್ಸಲ್‌ ನಿಗ್ರಹ ದಳ ಆಗಿಯೇ ಕಾರ್ಯಾಚರಣೆ ನಡೆಸುತ್ತಿದೆ. ಪಾವಗಡದಲ್ಲಿ ನಕ್ಸಲ್‌ ಚಟುವಟಿಕೆ ಖಾತರಿಯಾದರೆ, ನಕ್ಸಲ್‌ ನಿಗ್ರಹ ಪಡೆಯನ್ನು ತುಮಕೂರಿಗೆ ಕರೆಸುತ್ತೇವೆ ಎಂದು ಹೇಳಿದರು.

ಮಾಜಿ ಯೋಧರಿಗೂ ನಿವೇಶನ:

ವಸತಿ ರಹಿತರಿಗಾಗಿ ಪ್ರತಿ ಜಿಲ್ಲೆಗೆ 30x40 ಅಡಿ ಅಳತೆಯ 50 ಸಾವಿರ ನಿವೇಶನಗಳನ್ನು ಹಂಚಿಕೆ ಮಾಡುವ ಯೋಜನೆಯಡಿ, ಮಾಜಿ ಯೋಧರಿಗೂ ನಿವೇಶನ ನೀಡಲಾಗುವುದು. ಮೊದಲ ಹಂತದಲ್ಲಿ ಮುಂದಿನ ಎರಡು ತಿಂಗಳಲ್ಲಿ ರಾಜ್ಯಾದ್ಯಂತ 5 ಲಕ್ಷ ನಿವೇಶನಗಳನ್ನು ಹಂಚಿಕೆ ಮಾಡಲಾಗುವುದು ಎಂದು ತಿಳಿಸಿದರು.

Sanjay Ambekar ವಿವಿಧ ಮಾಧ್ಯಮ ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದು, 9 ವರ್ಷ ಅನುಭವವನ್ನು ಹೊಂದಿದ್ದೇನೆ. ಸದ್ಯ 'ಡೇ2ಡೇ ನ್ಯೂಸ್'ನಲ್ಲಿ ಕೆಲಸ ಮಾಡುತ್ತಿದ್ದೇನೆ.