ಸಿಂಹದಂತ: ಇದರ ಪ್ರಯೋಜನಗಳೇನು?

Dandelion: ಸಿಂಹದಂತ ಸಾಕಷ್ಟು ಆರೋಗ್ಯಕಾರಿ ಪ್ರಯೋಜನಗಳನ್ನು ಹೊಂದಿದೆ.

Sep 8, 2026 - 10:39
Sep 8, 2026 - 10:40
ಸಿಂಹದಂತ: ಇದರ ಪ್ರಯೋಜನಗಳೇನು?

ಡ್ಯಾಂಡೆಲಿಯನ್.. ಇದರ ವೈಜ್ಞಾನಿಕ ಹೆಸರು 'Taraxacum Officinale'. ಕನ್ನಡದಲ್ಲಿ ಇದನ್ನು ಸಿಂಹದಂತ ಎಂದು ಕರೆಯಲಾಗುತ್ತದೆ. ಏಕೆಂದರೆ ಇದರ ಎಲೆಗಳ ಅಂಚು ಸಿಂಹದ ಹಲ್ಲಿನಂತೆ ಇರುತ್ತದೆ. ಇದು ಆಸ್ಟರೇಸಿ ಕುಟುಂಬಕ್ಕೆ ಸೇರಿದ ಬಹುವಾರ್ಷಿಕ ಮೂಲಿಕೆ ಸಸ್ಯವಾಗಿದೆ.

ಲಕ್ಷಣಗಳೇನು:

ಡ್ಯಾಂಡೆಲಿಯನ್ ಗಿಡ ಸುಮಾರು 5 ರಿಂದ 30 ಸೆ.ಮೀ ಎತ್ತರ ಬೆಳೆಯುತ್ತದೆ. ಆರಂಭದಲ್ಲಿ ಪ್ರಕಾಶಮಾನವಾದ ಹಳದಿ ಬಣ್ಣದ ಹೂವು ಅರಳುತ್ತದೆ. ಹೂವು ಬಾಡಿದ ನಂತರ, ಚಿತ್ರದಲ್ಲಿ ಕಾಣುವಂತೆ ಬಿಳಿ ಬಣ್ಣದ ದುಂಡಗಿನ ಪ್ಯಾರಾಚೂಟ್ ರೀತಿಯ ಬೀಜದ ಗುಚ್ಛವಾಗುತ್ತದೆ. ಇದನ್ನು ಊದಿದರೆ ಬೀಜಗಳು ಗಾಳಿಯಲ್ಲಿ ಹಾರಿ ದೂರದವರೆಗೆ ಹರಡುತ್ತವೆ. ಇದರ ಎಲೆಗಳು ಉದ್ದವಾಗಿದ್ದು. ಹಸಿರು ಬಣ್ಣದಲ್ಲಿರುತ್ತವೆ. ನೆಲಕ್ಕೆ ಅಂಟಿಕೊಂಡಂತೆ ಬೆಳೆಯುತ್ತವೆ. ಬೇರು ಉದ್ದವಾಗಿ, ದಪ್ಪವಾಗಿ, ಕಂದು ಬಣ್ಣದಲ್ಲಿರುತ್ತದೆ. ಕಾಂಡವನ್ನು ಮುರಿದರೆ ಬಿಳಿ ಬಣ್ಣದ ಹಾಲಿನಂತಹ ರಸ ಬರುತ್ತದೆ.

ಬೆಳೆಯುವ ಪ್ರದೇಶ:

ಇದು ಮೂಲತಃ ಯುರೋಪ್ ಹಾಗೂ ಏಷ್ಯಾ ಖಂಡದ ಸಮಶೀತೋಷ್ಣ ಪ್ರದೇಶದ ಸಸ್ಯವಾಗಿದೆ. ಆದರೆ, ಈಗ ಪ್ರಪಂಚದಾದ್ಯಂತ ಹೊಲ, ಗದ್ದೆ, ಹುಲ್ಲುಗಾವಲು, ಉದ್ಯಾನವನ ಹಾಗೂ ರಸ್ತೆ ಬದಿಗಳಲ್ಲಿ ಕಳೆ ಗಿಡದಂತೆ ಹೇರಳವಾಗಿ ಬೆಳೆಯುತ್ತದೆ. ಇದು ಯಾವುದೇ ವಿಶೇಷ ಆರೈಕೆ ಇಲ್ಲದೆ ಎಲ್ಲಾ ರೀತಿಯ ಮಣ್ಣಿನಲ್ಲಿ ಸುಲಭವಾಗಿ ಬೆಳೆಯುವ ಶಕ್ತಿ ಹೊಂದಿದೆ.

ಪೌಷ್ಟಿಕಾಂಶ ಮತ್ತು ಔಷಧೀಯ ಗುಣಗಳು:

ಡ್ಯಾಂಡೆಲಿಯನ್ ಕೇವಲ ಕಳೆ ಗಿಡವಲ್ಲ. ಇದೊಂದು ಅಮೂಲ್ಯ ಔಷಧೀಯ ಮೂಲಿಕೆಯಾಗಿದೆ. ಇದರ ಎಲೆ, ಹೂವು, ಬೇರು ಸಹ ಉಪಯುಕ್ತವಾಗಿದೆ. ಇದರಲ್ಲಿ ವಿಟಮಿನ್ ಎ, ಸಿ, ಕೆ, ಇ, ಕಬ್ಬಿಣ, ಕ್ಯಾಲ್ಸಿಯಂ, ಪೊಟ್ಯಾಸಿಯಮ್ ಮತ್ತು ಫೈಬರ್ ಹೇರಳವಾಗಿದೆ. 

ಆಯುರ್ವೇದ & ಸಾಂಪ್ರದಾಯಿಕ ವೈದ್ಯ ಪದ್ಧತಿಯಲ್ಲಿ ಇದಕ್ಕೆ ವಿಶೇಷ ಸ್ಥಾನವಿದೆ: 

ಜೀರ್ಣಕ್ರಿಯೆಗೂ ಅತ್ಯುತ್ತಮ: ಇದು ಹಸಿವನ್ನು ಹೆಚ್ಚಿಸುತ್ತದೆ. ಮಲಬದ್ಧತೆ ನಿವಾರಿಸುತ್ತದೆ ಹಾಗೂ ಜೀರ್ಣಶಕ್ತಿಯನ್ನು ಸುಧಾರಿಸುತ್ತದೆ. 

ಯಕೃತ್ತು & ಮೂತ್ರಪಿಂಡದ ಆರೋಗ್ಯಕ್ಕೂ ಸಹಕಾರಿಯಾಗಿದೆ: ಇದರ ಬೇರಿನ ಕಷಾಯ ಯಕೃತ್ತನ್ನು ಶುದ್ಧೀಕರಿಸುತ್ತದೆ. ದೇಹದಲ್ಲಿನ ವಿಷವನ್ನು ಹೊರಹಾಕುತ್ತದೆ. ಮೂತ್ರಪಿಂಡದ ಕಲ್ಲು ಹಾಗೂ ಮೂತ್ರದ ಸೋಂಕಿಗೆ ಇದು ಉತ್ತಮ ಪರಿಹಾರವಾಗಿದೆ. 

ಮಧುಮೇಹಕ್ಕೂ ಒಳ್ಳೆದು: ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. 

ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ: ಉರಿಯೂತ ನಿವಾರಕ ಹಾಗೂ ಉತ್ಕರ್ಷಣ ನಿರೋಧಕ ಗುಣಗಳನ್ನು ಒಳಗೊಂಡಿದೆ. ಚರ್ಮದ ಕಾಂತಿಯನ್ನು ಹೆಚ್ಚಿಸುತ್ತದೆ.
 
ಬಳಕೆ ಮತ್ತು ಮುನ್ನೆಚ್ಚರಿಕೆ:

ಇದರ ಎಳೆಯ ಎಲೆಗಳನ್ನು ಸಲಾಡ್, ಸೂಪ್, ಪರೋಟದಲ್ಲಿ ಬಳಸಬಹುದು. ಹೂವಿನಿಂದ ವೈನ್ ತಯಾರಿಸುತ್ತಾರೆ. ಬೇರನ್ನು ಒಣಗಿಸಿ ಪುಡಿ ಮಾಡಿ ಕಾಫಿಗೆ ಬದಲಿಯಾಗಿ, ಚಹಾದಂತೆ ಕುಡಿಯುತ್ತಾರೆ. ಜೇನುನೊಣಗಳಿಗೆ ಇದು ಉತ್ತಮ ಆಹಾರದ ಮೂಲವಾಗಿದೆ.

ಆದರೂ ಇದನ್ನು ಅತಿಯಾಗಿ ಸೇವಿಸಬಾರದು. ಗರ್ಭಿಣಿಯರು, ಹಾಲುಣಿಸುವ ತಾಯಂದಿರು ಹಾಗೂ ಯಾವುದೇ ಔಷಧಿ ಸೇವಿಸುತ್ತಿರುವವರು ವೈದ್ಯರ ಸಲಹೆ ಪಡೆದು ಬಳಸುವುದು ಉತ್ತಮವಾಗಿದೆ. ಪ್ರಕೃತಿಯಲ್ಲಿ ಸುಲಭವಾಗಿ ಸಿಗುವ ಈ ಸಣ್ಣ ಗಿಡ ನಿಜಕ್ಕೂ ಮನುಕುಲಕ್ಕೆ ದೊರೆತ ದೊಡ್ಡ ವರದಾನವಾಗಿದೆ. 

Day2Day News Bureau Day2day News ನವ ಮಾಧ್ಯಮದ ವೃತ್ತಿಪರ ಡಿಜಿಟಲ್‌ ಮಾಧ್ಯಮ ಸಂಸ್ಥೆ. ವೆಬ್‌ ನ್ಯೂಸ್‌ ಪೋರ್ಟಲ್‌ನಿಂದ ಹಿಡಿದು ಇನ್‌ಸ್ಟಾ, ಎಕ್ಸ್, ಫೇಸ್‌ಬುಕ್‌, ಯೂಟ್ಯೂಬ್‌, ನ್ಯೂಸ್‌ ಆಪ್‌ವರೆಗೆ ಎಲ್ಲ ಡಿಜಿಟಲ್‌ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ - ಮಾಹಿತಿಯನ್ನು ಸರಳ, ಸಂಕ್ಷಿಪ್ತವಾಗಿ ನೀಡುತ್ತದೆ. ಜತೆಗೆ Day2day Short News ಕರ್ನಾಟಕದ ಮೊದಲ ಶಾರ್ಟ್‌ ಆಪ್‌. Swipe ಮಾಡಿ ಸುದ್ದಿ ಓದಿ. ನಮ್ಮ ಎಲ್ಲ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ & ಜಾಹೀರಾತು ನೀಡಲು 7070708646ಗೆ ಸಂಪರ್ಕಿಸಿ.