Vande Bharat Express: ಬೆಂಗಳೂರು-ಮಂಗಳೂರು ವಂದೇ ಭಾರತ್ ಎಕ್ಸ್‌ಪ್ರೆಸ್ ಪ್ರಾಯೋಗಿಕ ಸಂಚಾರ ಯಶಸ್ವಿ
Vande Bharat Express: ಎರಡನೇ ಬಾರಿಗೆ ಬೆಂಗಳೂರು - ಮಂಗಳೂರು ನಡುವೆ 'ವಂದೇ ಭಾರತ್ ಎಕ್ಸ್‌ಪ್ರೆಸ್' ಪ್ರಾಯೋಗಿಕ ಸಂಚಾರ ನಡೆಸಿದೆ.
ಮಂಗಳೂರು: ಕರಾವಳಿ & ರಾಜಧಾನಿ ನಡುವೆ ಸೆಮಿ-ಹೈಸ್ಪೀಡ್ ರೈಲು, ಸಂಚಾರಕ್ಕೆ ಕಾಲ ಕೂಡಿ ಬಂದಿದೆ. ಅತಿ ಶೀಘ್ರದಲ್ಲೇ ಬೆಂಗಳೂರು - ಮಂಗಳೂರು ನಡುವೆ ವಂದೇ ಭಾರತ್ ಎಕ್ಸ್‌ಪ್ರೆಸ್ (Vande Bharat Express) ಕಾರ್ಯಾಚರಣೆ ಶುರುವಾಲಿದೆ.
ಶನಿವಾರದಂದು (ಸೆ.5) ಎರಡನೇ ಬಾರಿಗೆ 16 ಬೋಗಿಗಳ ಈ ರೈಲು ಪ್ರಾಯೋಗಿಕ ಓಡಾಟ ನಡೆಸಿದೆ. ಬೆಳಗ್ಗೆ 6.30ಕ್ಕೆ ಬೆಂಗಳೂರಿನಿಂದ ಹೊರಟು, ಮಧ್ಯಾಹ್ನ 4.30ರ ಹೊತ್ತಿಗೆ ಮಂಗಳೂರು ಸೆಂಟ್ರಲ್ ನಿಲ್ದಾಣವನ್ನು ತಲುಪಿತು. ಆದಾಗ್ಯೂ ನಿಗದಿತ ಸಮಯಕ್ಕಿಂತ ತಡವಾಗಿ ಆಗಮಿಸಿತು. ನಂತರ ಬೆಂಗಳೂರಿಗೆ ಹಿಂದಿರುಗಿತು.
ಈ ವೇಳೆ, ರೈಲ್ವೆ ಇಲಾಖೆಯ ಹಿರಿಯ ಅಧಿಕಾರಿಗಳು & ತಾಂತ್ರಿಕ ಸಿಬ್ಬಂದಿಗಳು ಇದೇ ರೈಲಿನಲ್ಲಿ ಸಂಚರಿಸಿದರು. ಜೊತೆಗೆ ಸಮಗ್ರ ಪರಿಶೀಲನೆ ನಡೆಸಿದರು. ಈ ಅಧಿಕಾರಿಗಳ ವರದಿ ಆಧರಿಸಿ, ಕೆಲವೇ ದಿನಗಳಲ್ಲಿ ವಾಣಿಜ್ಯ ಕಾರ್ಯಾಚರಣೆಗಾಗಿ ಅಂತಿಮ ವೇಳಾಪಟ್ಟಿಯನ್ನು ಸಿದ್ಧಪಡಿಸಲಾಗುತ್ತದೆ.
ಇದೇ. ಆ.12 ರಂದು ಕೂಡ 'ವಂದೇ ಭಾರತ್ ಎಕ್ಸ್‌ಪ್ರೆಸ್' ಪ್ರಾಯೋಗಿಕ ಸಂಚಾರ ನಡೆಸಿತ್ತು. ಬೆಳಗ್ಗೆ 6.42ಕ್ಕೆ ಸಕಲೇಶಪುರದಿಂದ ಹೊರಟ ಈ ರೈಲು, 10.55ಕ್ಕೆ ಸುಬ್ರಹ್ಮಣ್ಯ ರಸ್ತೆ ರೈಲು ನಿಲ್ದಾಣಕ್ಕೆ ಬಂದಿತ್ತು.
ಘಾಟಿ ಪ್ರದೇಶದಲ್ಲಿ 'ವಂದೇ ಭಾರತ್' ರೈಲು, ಸುರಕ್ಷಿತವಾಗಿ ಓಡಾಟ ನಡೆಸಲು ಆಟೋಮೆಟಿಕ್ ಎಮರ್ಜೆನ್ಸಿ ಬ್ರೇಕಿಂಗ್ (ಎಇಬಿ) ಸಿಸ್ಟಮ್‌ನ್ನು ಅಳವಡಿಸಲಾಗಿದೆ. 'ನೈಋತ್ಯ ರೈಲ್ವೆ' ಮೈಸೂರು ವಿಭಾಗವು ಈ 'ವಂದೇ ಭಾರತ್ ಎಕ್ಸ್‌ಪ್ರೆಸ್'ನ ನಿರ್ವಹಣಾ ಜವಾಬ್ದಾರಿ ಹೊತ್ತಿದೆ.
ವಂದೇ ಭಾರತ್ ಎಕ್ಸ್‌ಪ್ರೆಸ್ ವಿಶೇಷತೆಗಳೇನು:
ಇದು ದೇಶದ ಅತಿವೇಗದ ರೈಲು ಎಂದು ಹೆಸರಾಗಿದೆ. ಅತ್ಯಾಧುನಿಕ ಸೌಲಭ್ಯವನ್ನು ಒಳಗೊಂಡಿದೆ. ಆರಾಮದಾಯಕ ಸೀಟುಗಳು, ಸಂಪೂರ್ಣ ಹವಾ ನಿಯಂತ್ರಣ (ಎಸಿ) ಬೋಗಿಗಳು, ವೈಫೈ ವ್ಯವಸ್ಥೆ, ಸ್ವಯಂಚಾಲಿತ ಬಾಗಿಲು, ಅಗ್ನಿ ನಿರೋಧಕ ಸಾಧನ, ಜೈವಿಕ ಶೌಚಾಲಯವನ್ನು ಹೊಂದಿದೆ.