Karnataka: ಐಎನ್‌ಕ್ಯೂ ಇನ್ನೊವೇಷನ್ ಗ್ಲೋಬಲ್‌ನೊಂದಿಗೆ ರಾಜ್ಯ ಸರ್ಕಾರ ಒಪ್ಪಂದ
Karnataka: ರಾಜ್ಯ ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಇಲಾಖೆಯು, ಆಸ್ಟ್ರೇಲಿಯಾದ 'ಐಎನ್‌ಕ್ಯೂ ಇನ್ನೊವೇಷನ್ ಗ್ಲೋಬಲ್ ಪ್ರೈವೇಟ್ ಲಿಮಿಟೆಡ್'ನೊಂದಿಗೆ ಒಡಂಬಡಿಕೆ ಮಾಡಿಕೊಂಡಿದೆ.
ಬೆಂಗಳೂರು: ತಂತ್ರಜ್ಞಾನ, ನವೋದ್ಯಮ, ಸಂಶೋಧನೆ & ಹೂಡಿಕೆ ಕ್ಷೇತ್ರಗಳಲ್ಲಿ ಸಹಕಾರ ಬಲಪಡಿಸಲು ರಾಜ್ಯ ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಇಲಾಖೆಯು, ಆಸ್ಟ್ರೇಲಿಯಾದ 'ಐಎನ್‌ಕ್ಯೂ ಇನ್ನೊವೇಷನ್ ಗ್ಲೋಬಲ್ ಪ್ರೈವೇಟ್ ಲಿಮಿಟೆಡ್'ನೊಂದಿಗೆ ಇಂದು ಒಡಂಬಡಿಕೆ ಮಾಡಿಕೊಂಡಿದೆ.
ಕರ್ನಾಟಕ ಹಾಗೂ ನ್ಯೂಸೌತ್ ವೇಲ್ಸ್‌ನ ನವೋದ್ಯಮ ವ್ಯವಸ್ಥೆಗಳ ಮಧ್ಯೆ ಸಂಪರ್ಕವನ್ನು ಮತ್ತಷ್ಟು ಗಟ್ಟಿಗೊಳಿಸಲು, ಈ ಒಪ್ಪಂದವು ವಿಶೇಷವಾಗಿ ಗಮನಹರಿಸಲಿದೆ. ಈ ಸಹಭಾಗಿತ್ವದ ಮೂಲಕ ರಾಜ್ಯದ ನವೋದ್ಯಮಗಳು ಮತ್ತು ತಂತ್ರಜ್ಞಾನ ಕಂಪನಿಗಳಿಗೆ ಆಸ್ಟ್ರೇಲಿಯಾದ ಜಾಗತಿಕ ಮಾರುಕಟ್ಟೆಯನ್ನು ಪ್ರವೇಶಿಸಲು ಅತ್ಯುತ್ತಮವಾದ ಅವಕಾಶವು ದೊರೆಯಲಿದೆ.
ಆಸ್ಟ್ರೇಲಿಯಾ ಮೂಲದ 'ಐಎನ್‌ಕ್ಯೂ ಇನ್ನೋವೇಷನ್ ಗ್ಲೋಬಲ್ ಪ್ರೈವೇಟ್ ಲಿಮಿಟೆಡ್' ನವೋದ್ಯಮಗಳಿಗೆ ನೆರವು ನೀಡುವ ಸಂಸ್ಥೆಯಾಗಿದೆ. ನವೋದ್ಯಮ, ತಂತ್ರಜ್ಞಾನ, ಹೂಡಿಕೆದಾರರು, ಶೈಕ್ಷಣಿಕ ಸಂಸ್ಥೆಗಳು, ಸಂಶೋಧನೆ, ಉದ್ಯಮ ಹಾಗೂ ಸರ್ಕಾರದ ವಿವಿಧ ಪರಿಸರ ವ್ಯವಸ್ಥೆಗಳ ನಡುವೆ ಸಂಪರ್ಕ ಕಲ್ಪಿಸುವುದರೊಂದಿಗೆ, ಬೆಳವಣಿಗೆ ಹಂತದ ಕಾರ್ಯಕ್ರಮಗಳಿಗೆ ಬೆಂಬಲ ನೀಡುತ್ತಿದೆ. ಉದ್ದೇಶಿತ ಆಸ್ಟ್ರೇಲಿಯಾ-ಭಾರತ ಟೆಕ್ ಇನ್ನೊವೇಷನ್ ಬ್ರಿಡ್ಜ್ ಉಪಕ್ರಮದ ಮೂಲಕವು ಈ ಸಂಸ್ಥೆ ಸಹಕಾರ ನೀಡುತ್ತಿದೆ.
ಈ ಸಹಭಾಗಿತ್ವದ ಕುರಿತು ಐಟಿ ಮತ್ತು ಜೈವಿಕ ತಂತ್ರಜ್ಞಾನ ಸಚಿವ ಪ್ರಿಯಾಂಕ್ ಖರ್ಗೆ ಅವರು ಪ್ರತಿಕ್ರಿಯೆ ನೀಡಿದ್ದಾರೆ. ರಾಜ್ಯದಲ್ಲಿನ ನವೋದ್ಯಮ ವ್ಯವಸ್ಥೆಯು ದೇಶದಲ್ಲೇ ಅತ್ಯುತ್ತಮವಾಗಿದೆ. ಜಾಗತಿಕ ಮಟ್ಟದ ಪ್ರಮುಖ ನವೋದ್ಯಮಗಳೊಂದಿಗೆ, ಗಟ್ಟಿ ಸಂಪರ್ಕವನ್ನು ಹೊಂದಬೇಕೆಂಬುದು ನಮ್ಮ ಉದ್ದೇಶವಾಗಿದೆ. ಈ ಸಹಭಾಗಿತ್ವದಿಂದ ಸ್ಟಾರ್ಟ್‌ಅಪ್‌ಗಳಿಗೆ ವಾಸ್ತವಿಕ ಅವಕಾಶಗಳು ಸೃಷ್ಟಿಯಾಗಬೇಕು' ಎಂದು ಹೇಳಿದರು.