D.K.Shivakumar: ಸಾಲ ಮನ್ನಾಕ್ಕೆ ನೆರವು ಕೋರಿ ದೆಹಲಿಗೆ ಸರ್ವಪಕ್ಷ ನಿಯೋಗ: ಸಿಎಂ ಡಿ.ಕೆ.ಶಿವಕುಮಾರ್

D.K.Shivakumar: ಸಾಲ ಮನ್ನಾಕ್ಕೆ ನೆರವು ಕೋರಿ, ದೆಹಲಿಗೆ ಸರ್ವಪಕ್ಷ ನಿಯೋಗ ಕರೆದೊಯ್ಯಲಾಗುವುದು ಎಂದು ಸಿಎಂ ಡಿ.ಕೆ.ಶಿವಕುಮಾರ್ ಹೇಳಿದರು.

Sep 4, 2026 - 18:23
Sep 4, 2026 - 18:30
D.K.Shivakumar: ಸಾಲ ಮನ್ನಾಕ್ಕೆ ನೆರವು ಕೋರಿ ದೆಹಲಿಗೆ ಸರ್ವಪಕ್ಷ ನಿಯೋಗ: ಸಿಎಂ ಡಿ.ಕೆ.ಶಿವಕುಮಾರ್

ಬೆಂಗಳೂರು: ಸಾಲ ಮನ್ನಾಕ್ಕೆ ನೆರವು ಕೋರಿ, ದೆಹಲಿಗೆ ಸರ್ವಪಕ್ಷ ನಿಯೋಗ ಕರೆದೊಯ್ಯಲಾಗುವುದು ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ (D.K.Shivakumar) ತಿಳಿಸಿದರು.

ಸದಾಶಿವನಗರದ ನಿವಾಸದ ಬಳಿ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.

'ಬರಗಾಲ ಎಂದು ಪ್ರಧಾನಮಂತ್ರಿಗಳೇ ಹೇಳಿದ್ದು, ಕೇಂದ್ರ ಸರ್ಕಾರ ಸಾಲಮನ್ನಾ ಮಾಡಿಸುವ ಜವಾಬ್ದಾರಿ ಹೊರಬೇಕು. ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ, ವಿಪಕ್ಷ ನಾಯಕ ಆರ್.ಅಶೋಕ್ ಹಾಗೂ ಇತರೆ ನಾಯಕರು ತಮ್ಮೊಂದಿಗೆ, ದೆಹಲಿಗೆ ಬಂ ದು ಕೇಂದ್ರ ಸರ್ಕಾರದಿಂದ ಅನುದಾನ ಮತ್ತು ರೈತರ ಸಾಲ ಮನ್ನಾಕ್ಕೆ ಒತ್ತಾಯಿಸಬೇಕು' ಎಂದರು.    

ಬರಗಾಲ: ವಿಪಕ್ಷಗಳಿಂದ ರಾಜಕಾರಣ:

'ಬರ ಪರಿಸ್ಥಿತಿ ಕುರಿತಂತೆ ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಲಾಗಿದೆ. ವಿಪಕ್ಷಗಳಿಗೆ ರೈತರು ಹಾಗೂ ಬರ ಪರಿಸ್ಥಿತಿಯ ಬಗ್ಗೆ ಅಧ್ಯಯನ ಮಾಡಲು, ಚರ್ಚಿಸಲು ಕಿಂಚಿತ್ತೂ ಆಸಕ್ತಿಯಿಲ್ಲ. ಬರ ಪರಿಸ್ಥಿತಿ ಚರ್ಚೆ ಬಗ್ಗೆ ಜನತಾ ದಳ ಹಾಗೂ ಬಿಜೆಪಿ ಶಾಸಕರೇ ನನ್ನ ಬಳಿ ಬಂದು ಬೇಸರ ತೋಡಿಕೊಂಡಿದ್ದಾರೆ. ಅದಕ್ಕಾಗಿಯೇ ಪ್ರತ್ಯೇಕವಾಗಿ ವಿಶೇಷ ಅಧಿವೇಶನ ನಡೆಸಲಿದ್ದೇವೆ. ಆಯಾ ಕ್ಷೇತ್ರಗಳ ಭಾವನೆ, ಪರಿಸ್ಥಿತಿ ಅರ್ಥಮಾಡಿಕೊಂಡು ನಾನು ಅವರಿಗೆ ಸಹಾಯ ಮಾಡಬೇಕು. ನೈಜ ಪರಿಸ್ಥಿತಿಯನ್ನು ಅಧ್ಯಯನ ಮಾಡುವ ಬದಲು ವಿಪಕ್ಷಗಳು ರಾಜಕಾರಣ ಮಾಡುತ್ತಿವೆ' ಎಂದು ಅಸಮಾಧಾನ ವ್ಯಕ್ತಪಡಿಸಿದರು.

3 ದಿನಗಳ ವಿಶೇಷ ಅಧಿವೇಶನ:

'ರೈತರ ಸಮಸ್ಯೆಗಳ ಬಗ್ಗೆ ಸುದೀರ್ಘವಾಗಿ ಚರ್ಚಿಸಲು ರಾಜ್ಯ ಸರ್ಕಾರವು ಮೂರು ದಿನಗಳ ವಿಶೇಷ ಅಧಿವೇಶನ ಕರೆದಿದೆ. ಈ ಅಧಿವೇಶನದಲ್ಲಿ ಸಂಪೂರ್ಣವಾಗಿ ರಾಜ್ಯದ ಬರ ಪರಿಸ್ಥಿತಿ, ರೈತರ ತೊಂದರೆಗಳು ಹಾಗೂ ಪಶ್ಚಿಮ ಘಟ್ಟಗಳ ಕುರಿತಾದ ಕಸ್ತೂರಿರಂಗನ್ ವರದಿಗೆ ರಾಜ್ಯ ಸಲ್ಲಿಸಬೇಕಾದ ಆಕ್ಷೇಪಣೆಗಳ ಬಗ್ಗೆ ಮಾತ್ರ ಚರ್ಚಿಸಲಾಗುವುದು' ಎಂದು ಸ್ಪಷ್ಟಪಡಿಸಿದರು.

ಅಧಿವೇಶನವನ್ನು 7 ದಿನಗಳಿಗೆ ವಿಸ್ತರಿಸಬೇಕೆಂಬ ವಿಪಕ್ಷಗಳ ಬೇಡಿಕೆಯ ಬಗ್ಗೆ ಕೇಳಿದಾಗ, 'ಎಲ್ಲರ ಅಭಿಪ್ರಾಯವನ್ನು ನಾವು ಕೇಳುತ್ತೇವೆ. ಕೆಲವು ನಾಯಕರು ಮಾತ್ರ ತಕರಾರು ಮಾಡುತ್ತಾರೆ ಎಂದರೆ, ಉಳಿದ ಶಾಸಕರು ಏನು ಮಾಡಬೇಕು. ಎಲ್ಲರೂ ಜನ ಪ್ರತಿನಿಧಿಗಳೇ, ಚರ್ಚೆಗಳಾಗಲಿ' ಎಂದು ಹೇಳಿದರು.  

ಬೆಂಗಳೂರು ದಟ್ಟಣೆ ತಪ್ಪಿಸಬೇಕು:

ನೀತಿ ಆಯೋಗದ ಜೊತೆಗಿನ ಸಭೆಯಲ್ಲಿ ರಾಜ್ಯಕ್ಕೆ ಅನುದಾನ ಹಂಚಿಕೆ ಸರಿಯಾಗಿ ಆಗಬೇಕು ಎಂದು ಆಗ್ರಹಿಸಿದ್ದೀರಿ ಎಂದು ಪ್ರಶ್ನಿಸಿದಾಗ, 'ಹೊಸ ಬೆಂಗಳೂರು ನಿರ್ಮಾಣ ಮಾಡಬೇಕೆಂದು ನೀತಿ ಆಯೋಗದ ಉಪಾಧ್ಯಕ್ಷರ ಬಳಿ ಚರ್ಚಿಸಲಾಗಿದೆ. ಅದಕ್ಕೆ ಅಗತ್ಯವಿರುವ ನೆರವನ್ನು ಸರ್ಕಾರ ನೀಡಲಿದೆ ಎಂದರು. 

ಬಿಜೆಪಿಯವರು ಅಭಿವೃದ್ದಿಯ ವಿರೋಧಿಗಳು:

ಕರ್ನಾಟಕ ಸರ್ಕಾರಿ ಉದ್ಯಾನವನಗಳ (ಸಂರಕ್ಷಣೆ) ತಿದ್ದುಪಡಿ ವಿಧೇಯಕವನ್ನು ವಾಪಸ್ ಪಡೆದಿರುವ ಕುರಿತು ಸಿಎಂ 'ಯು-ಟರ್ನ್' ಹೊಡೆದಿದ್ದಾರೆ ಎಂಬ ಆರೋಪಗಳ ಬಗ್ಗೆ ಕೇಳಿದಾಗ, 'ನಾನು ಯೂಟರ್ನ್ ಏಕೆ ಮಾಡಬೇಕು. ಜನರ ಭಾವನೆಗಳಿಗೆ ಬೆಲೆ ನೀಡಲಾಗಿದೆ. ಯಡಿಯೂರಪ್ಪ, ಬೊಮ್ಮಾಯಿ  ಅವರ ಕಾಲದಲ್ಲಿ ಏನಾಗಿದೆ ಎಂಬ ಪಟ್ಟಿ ಬಿಡುಗಡೆ ಮಾಡುತ್ತೇವೆ. ಈ ಬಗ್ಗೆ ಚರ್ಚೆಯಾಗಬೇಕು. ಲಾಲ್‌ಬಾಗ್‌ನಲ್ಲಿಯೇ ಟನಲ್ ಮಾಡಬೇಕೆಂಬ ಉದ್ದೇಶವಿಲ್ಲ. ಇದಕ್ಕೆ ಪರ್ಯಾಯ ಮಾರ್ಗವನ್ನು ಪರಿಶೀಲಿಸಲಾಗುವುದು. ಈ ಹಿಂದೆ ಸಿದ್ದರಾಮಯ್ಯ ಅವರು ಸ್ಟೀಲ್ ಬ್ರಿಡ್ಜ್ ಮಾಡಲು ಹೊರಟಾಗಲು ಬಿಜೆಪಿ ವಿರೋಧಿಸಿತ್ತು. ಬಿಜೆಪಿ ಅಭಿವೃದ್ದಿಯ ವಿರೋಧಿಗಳು. ಬೆಂಗಳೂರಿಗೆ ಏನಾದರೂ ಶಾಪವಿದ್ದರೆ ಅದು ಬಿಜೆಪಿಯವರದ್ದು. ಅವರ ಕಾಲದಲ್ಲಿ ಒಂದು ಯಾವುದಾದರೂ ಈ ರೀತಿಯ ಗುರುತರ  ಯೋಜನೆ ಪಾರಂಭಿಸಿದ್ದರೆ ತಿಳಿಸಲಿ. ಬೆಂಗಳೂರಿನ ಸಂಚಾರ ದಟ್ಟಣೆ ನಿಯಂತ್ರಣಕ್ಕೆ ಟನಲ್ ರಸ್ತೆ, ಡಬಲ್ ಡೆಕ್ಕರ್ ಮಾರ್ಗಗಳು, ಯೋಜನೆಗಳು ಅತ್ಯಗತ್ಯ. ಟನಲ್ ರಸ್ತೆ ಬೇಡ ಎನ್ನುವವರು ಅದಕ್ಕೆ ಪರ್ಯಾಯ ಏನು ಎಂಬುದನ್ನು ಹೇಳಬೇಕಲ್ಲವೇ' ಎಂದು ಸವಾಲು ಹಾಕಿದರು. 

ಉದ್ಯಾನವನವನ್ನು ಮಾರುತ್ತಿಲ್ಲ:

'ಚರ್ಚೆ ಮಾಡಬೇಕೆನ್ನುವ  ಕಾರಣದಿಂದ ವಿಧೇಯಕವನ್ನು ಹಿಂಪಡೆಯಲಾಗಿದೆ. 16.5 ಕಿಮೀ ಟನಲ್ ರಸ್ತೆ ಯೋಜನೆಗಾಗಿ ಲಾಲ್‌ಬಾಗ್ ಜಾಗವನ್ನು ಕಬಳಿಸುವ ಯಾವುದೇ ಉದ್ದೇಶ ಸರ್ಕಾರಕ್ಕಿಲ್ಲ. ನಾವು ಉದ್ಯಾನವನಗಳನ್ನು ಮಾರಾಟ ಮಾಡುತ್ತಿಲ್ಲ. ಮೆಟ್ರೋಗೆ ಜಾಗ ಕೊಡಲು ಭೂಮಿಯನ್ನು ವರ್ಗಾಯಿಸಬೇಕು' ಎಂದು ಸ್ಪಷ್ಟಪಡಿಸಿದರು.

'ನಾವು ಪ್ರಮುಖ ವಿಚಾರಗಳ ಬಗ್ಗೆ ಚರ್ಚೆ ಮಾಡುತ್ತೇವೆ, ಅದರಿಂದ ಅವರ ವೈಫಲಯಗಳು ಬಯಲಾಗುತ್ತವೆ ಎಂದು ತಿಳಿದೇ ಅಧಿವೇಶನವನ್ನು ನಡೆಸಲು ವಿರೋಧ ಪಕ್ಷದವರು ಬಿಡಲಿಲ್ಲ' ಎಂದು ತಿಳಿಸಿದರು.

'ನಾನು ಅವರಷ್ಟು ವಿದ್ಯಾವಂತರಲ್ಲದಿದ್ದರೂ, ನನಗೂ ದೇವರು ಅಷ್ಟೋ ಇಷ್ಟೋ ಸಾಮಾನ್ಯ ಜ್ಞಾನ ಕೊಟ್ಟಿದ್ದಾರೆ. ಜೆಪಿ ಪಾರ್ಕ್ ಸೇರಿದಂತೆ ಎಲ್ಲಾ ಸ್ಥಳಗಳ ಬಗ್ಗೆ ದಾಖಲೆಗಳನ್ನು ಬಿಡುಗಡೆ ಮಾಡುತ್ತೇನೆ. ಅನಾವಶ್ಯಕವಾಗಿ ನನ್ನನ್ನು ಕೆಣಕುವುದು ಬೇಡ' ಎಂದು ತಿರುಗೇಟು ನೀಡಿದರು. 

ಮೈಸೂರು ದಸರಾ ಸಂಭ್ರಮಕ್ಕೆ ಹೊಸ ಮೆರುಗು:

'ಮೈಸೂರು ದಸರಾ ಸಿದ್ದತೆಗಳ ಬಗ್ಗೆ ಪ್ರಶ್ನಿಸಿದಾಗ, 'ದಸರಾ ಸಿದ್ಧತೆಗಳ ಕುರಿತು ಉನ್ನತ ಮಟ್ಟದ ಸಭೆ ನಡೆಸಲಾಗಿದ್ದು, ಹೊಸ ಚಿಂತನೆ, ಆಲೋಚನೆಗಳು, ಹೊಸ ಆವಿಷ್ಕಾರಗಳನ್ನು ದಸರಾದಲ್ಲಿ ತರಲಾಗುವುದು. ಭಾರತೀಯ ವಾಯುಪಡೆ ಹಾಗೂ ರಕ್ಷಣಾ ಸಚಿವಾಲಯದೊಂದಿಗೆ ಮಾತುಕತೆ ನಡೆಸಲಾಗಿದ್ದು, ವಾಯುಪಡೆಯ ತುಕಡಿಯನ್ನು ಒಳಗೊಳ್ಳಲು ಹಾಗೂ ಬೀದರ್, ಗುಲ್ಬರ್ಗ ಸೇರಿದಂತೆ ದಕ್ಷಿಣ ಭಾರತದ ವಿವಿಧ ಸಾಂಸ್ಕೃತಿಕ ಕಲೆಗಳನ್ನು ಪ್ರದರ್ಶಿಸಲು ನಿರ್ಧರಿಸಲಾಗಿದೆ. ದಸರಾ ಆಚರಣೆ ಕುರಿತು ಅನೇಕ ಸಲಹೆಗಳನ್ನು ಸ್ವೀಕರಿಸಲಾಗಿದೆ' ಎಂದು ತಿಳಿಸಿದರು.

Day2day News ನವ ಮಾಧ್ಯಮದ ವೃತ್ತಿಪರ ಡಿಜಿಟಲ್‌ ಮಾಧ್ಯಮ ಸಂಸ್ಥೆ. ವೆಬ್‌ ನ್ಯೂಸ್‌ ಪೋರ್ಟಲ್‌ನಿಂದ ಹಿಡಿದು ಇನ್‌ಸ್ಟಾ, ಎಕ್ಸ್, ಫೇಸ್‌ಬುಕ್‌, ಯೂಟ್ಯೂಬ್‌, ನ್ಯೂಸ್‌ ಆಪ್‌ವರೆಗೆ ಎಲ್ಲ ಡಿಜಿಟಲ್‌ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ - ಮಾಹಿತಿಯನ್ನು ಸರಳ, ಸಂಕ್ಷಿಪ್ತವಾಗಿ ನೀಡುತ್ತದೆ. ಜತೆಗೆ Day2day Short News ಕರ್ನಾಟಕದ ಮೊದಲ ಶಾರ್ಟ್‌ ಆಪ್‌. Swipe ಮಾಡಿ ಸುದ್ದಿ ಓದಿ. ನಮ್ಮ ಎಲ್ಲ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ & ಜಾಹೀರಾತು ನೀಡಲು 7070708646ಗೆ ಸಂಪರ್ಕಿಸಿ.

Sanjay Ambekar ವಿವಿಧ ಮಾಧ್ಯಮ ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದು, 9 ವರ್ಷ ಅನುಭವವನ್ನು ಹೊಂದಿದ್ದೇನೆ. ಸದ್ಯ 'ಡೇ2ಡೇ ನ್ಯೂಸ್'ನಲ್ಲಿ ಕೆಲಸ ಮಾಡುತ್ತಿದ್ದೇನೆ.