ಗೇರು ಉತ್ಪಾದನೆಯಲ್ಲಿ ರಾಜ್ಯವನ್ನು ಸ್ವಾವಲಂಬಿ ಮಾಡಲಾಗುವುದು : ಸಚಿವ ಈಶ್ವರ ಖಂಡ್ರೆ ಗುಣಮಟ್ಟದ ಗೇರು ಕಸಿ ಸಸಿ ಬೆಳೆಯಲು ಒಂದು ಕೋಟಿ ರೂ. ಅನುದಾನ

ಆಸಕ್ತ ರೈತರಿಗೆ ಸಸಿಗಳನ್ನು ನಿಗಮದ ನರ್ಸರಿಗಳಲ್ಲಿಯೇ ಬೆಳೆಸಿ, ಪೂರೈಸುವುದು ಸೂಕ್ತ ಎಂದು ಪರಿಗಣಿಸಿ, ಈ ವರ್ಷದಿಂದಲೇ ಕಸಿ ಮಾಡಿದ ಗೋಡಂಬಿ ಸಸಿ ಬೆಳೆಸಲು ಸೂಚನೆ ನೀಡಲಾಗಿದೆ.  ಇದಕ್ಕಾಗಿ ಒಂದು ಕೋಟಿ ರೂ. ಅನುದಾನ ನೀಡಲಾಗುವುದು. ಒಂದು ಕೋಟಿ ರೂ. ವೆಚ್ಚದಲ್ಲಿ ಸಸಿಗಳನ್ನು ಬೆಳೆಸಿ ಮುಂದಿನ ವರ್ಷದಿಂದ ಸಬ್ಸಡಿ ದರದಲ್ಲಿ ರೈತರಿಗೆ ಈ ಸಸಿಗಳನ್ನು ಮಾರಾಟ ಮಾಡಲಾಗುವುದು ಎಂದು ತಿಳಿಸಿದರು.

May 17, 2026 - 20:01
ಗೇರು ಉತ್ಪಾದನೆಯಲ್ಲಿ ರಾಜ್ಯವನ್ನು ಸ್ವಾವಲಂಬಿ ಮಾಡಲಾಗುವುದು : ಸಚಿವ ಈಶ್ವರ ಖಂಡ್ರೆ  ಗುಣಮಟ್ಟದ ಗೇರು ಕಸಿ ಸಸಿ ಬೆಳೆಯಲು ಒಂದು ಕೋಟಿ ರೂ. ಅನುದಾನ
cashew crop exhibition

ಮಂಗಳೂರು: ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯಲ್ಲಿ ಗೇರು ಅಥವಾ ಗೋಡಂಬಿಯನ್ನು ಬೆಳೆಯಲು ವಿಪುಲ ಅವಕಾಶವಿದ್ದು, ಗೇರು ಅಭಿವೃದ್ಧಿ ನಿಗಮದ ವತಿಯಿಂದ ಗುಣಮಟ್ಟದ ಗೋಡಂಬಿ ಸಸಿಗಳನ್ನು ಬೆಳೆಸಿ, ರೈತರಿಗೆ ನೀಡಲಾಗುವುದು. ಇದಕ್ಕಾಗಿ 1 ಕೋಟಿ ರೂ. ಅನುದಾನ ನೀಡುವುದಾಗಿ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ಭರವಸೆ ನೀಡಿದರು.
ಗೇರು ಅಭಿವೃದ್ಧಿ ಮಂಡಳಿ ವತಿಯಿಂದ ಮಂಗಳೂರಿನಲ್ಲಿ ಆಯೋಜಿಸಿರುವ ಗೇರು ಮೇಳಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಎಂಡೋಸಲ್ಫಾನ್ ಅನಾಹುತದ ಬಳಿಕ ಹಲವು ರೈತರು ಗೇರು ಬೆಳೆಯುವುದರಿಂದಲೇ ವಿಮುಖರಾಗಿದ್ದಾರೆ. ಇವರಿಗೆ ಮತ್ತೆ ಉತ್ತೇಜನ ನೀಡಿ ಗತವೈಭವ ಮರಳುವಂತೆ ಮಾಡಲು ಕ್ರಮ ವಹಿಸಲಾಗುವುದು ಎಂದರು.
ಆಸಕ್ತ ರೈತರಿಗೆ ಸಸಿಗಳನ್ನು ನಿಗಮದ ನರ್ಸರಿಗಳಲ್ಲಿಯೇ ಬೆಳೆಸಿ, ಪೂರೈಸುವುದು ಸೂಕ್ತ ಎಂದು ಪರಿಗಣಿಸಿ, ಈ ವರ್ಷದಿಂದಲೇ ಕಸಿ ಮಾಡಿದ ಗೋಡಂಬಿ ಸಸಿ ಬೆಳೆಸಲು ಸೂಚನೆ ನೀಡಲಾಗಿದೆ.  ಇದಕ್ಕಾಗಿ 1 ಕೋಟಿ ರೂ. ಅನುದಾನ ನೀಡಲಾಗುವುದು ಎಂದರು.
1 ಕೋಟಿ ರೂ. ವೆಚ್ಚದಲ್ಲಿ ಸಸಿಗಳನ್ನು ಬೆಳೆಸಿ ಮುಂದಿನ ವರ್ಷದಿಂದ ಸಬ್ಸಡಿ ದರದಲ್ಲಿ ರೈತರಿಗೆ ಈ ಸಸಿಗಳನ್ನು ಮಾರಾಟ ಮಾಡಲಾಗುವುದು ಎಂದು ತಿಳಿಸಿದರು. 


ಇಂದು ಗೇರು ಮಳಿಗೆಗಳಿಗೆ ತಾವು ಭೇಟಿ ನೀಡಿದ್ದು, ಗೇರು ಮೌಲ್ಯವರ್ಧನೆಗೆ ಒತ್ತು ನೀಡಿದರೆ, ರೈತರಿಗೆ ಹೆಚ್ಚಿನ ಮಾಹಿತಿ ಪೂರೈಸಿದರೆ, ಉತ್ಪಾದನಾ ವೆಚ್ಚ ತಗ್ಗಿ, ಆದಾಯ ಹೆಚ್ಚುತ್ತದೆ ಅದರಿಂದ ಅವರಿಗೆ ಅನುಕೂಲ ಆಗುವುದರ ಜೊತೆಗೆ ಗೇರು ಉತ್ಪಾದನೆಯೂ ಹೆಚ್ಚಳವಾಗುತ್ತದೆ ಎಂದು ಹೇಳಿದರು.
ನಾವು ಇಂದು ಕಚ್ಚಾ ಗೇರು ಬೀಜವನ್ನು ಆಮದು ಮಾಡಿಕೊಂಡು ಸಂಸ್ಕರಿಸುವ ಸ್ಥಿತಿ ಬಂದಿದೆ. ಹೀಗಾಗಿ ಇಂತಹ ಮೇಳ, ಕಾರ್ಯಾಗಾರಗಳ ಮೂಲಕ ರೈತರಿಗೆ ಮಾಹಿತಿಯ ಜೊತೆಗೆ ರಿಯಾಯಿತಿ ದರದಲ್ಲಿ ಸಸಿಗಳನ್ನು ನೀಡಲಾಗುವುದು, ಕರ್ನಾಟಕವನ್ನು ಗೇರು ಕ್ಷೇತ್ರದಲ್ಲಿ ಸ್ವಾವಲಲಂಬಿಯನ್ನಾಗಿ ಮಾಡಲಾಗುವುದು ಎಂದರು.  
ಪಶ್ಚಿಮಘಟ್ಟ ಇರುವ ದಕ್ಷಿಣ ಕನ್ನಡದಲ್ಲಿ ಹುಟ್ಟಿ ಬೆಳೆದ ನೀವು ಪುಣ್ಯವಂತರು. ಪಶ್ಚಿಮ ಘಟ್ಟಗಳು ಮಳೆಯ ಮಾರುತ ತಡೆದು ದೇಶದಾದ್ಯಂತ ವ್ಯಾಪಕ ಮಳೆ ಆಗುವಂತೆ ಮಾಡುತ್ತವೆ. ಹೀಗಾಗಿ ಪಶ್ಚಿಮ ಘಟ್ಟವನ್ನು ಸಂರಕ್ಷಿಸುವ ಹೊಣೆ ಎಲ್ಲರ ಮೇಲಿದೆ ಎಂದರು.
ನಷ್ಟದಲ್ಲಿದ್ದ ಗೇರು ಅಭಿವೃದ್ಧಿ ನಿಗಮ ನಿಯಮಿತವನ್ನು ಲಾಭದತ್ತ ತೆಗೆದುಕೊಂಡು ಹೋಗುವಲ್ಲಿ ಮಮತಾ ಗಟ್ಟಿ ಅವರು ಶ್ರಮಿಸಿದ್ದು, ಅಭಿನಂದನಾರ್ಹರಾಗಿದ್ದಾರೆ ಎಂದರು.  
ಇಂದು ನಾವು ಜಾಗತಿಕ ತಾಪಮಾನ ಏರಿಕೆ ಮತ್ತು ಹವಾಮಾನ ಬದಲಾವಣೆಯ ಕಾಲಘಟ್ಟದಲ್ಲಿ ಸಾಗಿದ್ದು, ಒಂದು ತಿಂಗಳ ಮಳೆ ಒಂದು ವಾರದಲ್ಲಿ ಬೀಳುತ್ತದೆ. ಒಂದು ವಾರದ ಮಳೆ ಒಂದು ದಿನದಲ್ಲಿ ಬೀಳುತ್ತದೆ. ಇದರಿಂದ ಬೆಳೆ ನಷ್ಟ ಆಗುತ್ತಿದೆ. ವಾಡಿಕೆಯಷ್ಟೇ ಮಳೆಯಾದರೂ, ಒಂದೇ ದಿನ ವಿಪರೀತ ಮಳೆ ಬೀಳುತ್ತಿರುವುದರಿಂದ ಹಾನಿ ಹೆಚ್ಚಾಗುತ್ತಿದೆ. ಹೀಗಾಗಿ ವೃಕ್ಷ ಸಂರಕ್ಷಣೆಗೆ ನಾವೆಲ್ಲರೂ ಸಂಕಲ್ಪ ಮಾಡಬೇಕು, ಹಸಿರು ಹೊದಿಕೆ ಹೆಚ್ಚಿಸಬೇಕು ಎಂದರು.


ಮೇಳದ ಅಂಗವಾಗಿ ಮಕ್ಕಳಿಗೆ ಸ್ಥಳದಲ್ಲೇ ಚಿತ್ರ ಬರೆಯುವ ಸ್ಪರ್ಧೆ ಮತ್ತು ರಂಗೋಲಿ ಸ್ಪರ್ಧೆ ಏರ್ಪಡಿಸಲಾಗಿತ್ತು. ಚಿತ್ರ ಬರೆದ ಚಿಣ್ಣರೊಂದಿಗೆ ಕೆಲ ಸಮಯ ಕಳೆದ ಸಚಿವರು, ಮಕ್ಕಳನ್ನು ಅಭಿನಂದಿಸಿದರು.
ಇದೇ ಸಂದರ್ಭದಲ್ಲಿ 12 ಪ್ರಗತಿಪರ ರೈತರನ್ನು ಸನ್ಮಾನಸಲಾಯಿತು.
ಶಾಸಕ ವೇದವ್ಯಾಸ ಕಾಮತ್ ಅವರು ಅಧ್ಯಕ್ಷತೆ ವಹಿಸಿದ್ದ  ಕಾರ್ಯಕ್ರಮದಲ್ಲಿ ಶಾಸಕರುಗಳಾದ ರಾಜೇಗೌಡ, ಅಶೋಕ್ ಕುಮಾರ್ ರೈ, ಕರ್ನಾಟಕ ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಮಮತಾ ಡಿ.ಎಸ್. ಗಟ್ಟಿ, ಮಾಜಿ ಸಚಿವ ರಮಾನಾಥ ರೈ ಮತ್ತಿತರರು ಪಾಲ್ಗೊಂಡಿದ್ದರು.