ಜಾತಿ, ಧರ್ಮವ ಮೀರಿ ನಿಂತಿರುವ ಜೆನ್‌ಜಿಗಳು ಸಮಾಜಕ್ಕೆ ಮಾದರಿ: ಡಾ.ಜಿ.ಪರಮೇಶ್ವರ
Dr.G.Parameshwara: ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ಇಂದು (ಗುರುವಾರ) ನಡೆದ ಮಾಜಿ ಮುಖ್ಯಮಂತ್ರಿ ಡಿ.ದೇವರಾಜ ಅರಸು ಅವರ 111ನೇ ಜನ್ಮದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ, ಡಿಸಿಎಂ ಡಾ.ಜಿ.ಪರಮೇಶ್ವರ ಮಾತನಾಡಿದರು.
ಬೆಂಗಳೂರು: ಜೆನ್‌ಜಿಗಳು ಇಂದು ಎಲ್ಲೆಡೆ ಸದ್ದು ಮಾಡುತ್ತಿದ್ದಾರೆ. ಅವರ ಆಸೆ ಆಕಾಂಕ್ಷೆಗಳು ಬೇರೆಯಿವೆ. ಅವರಿಗೆ ಜಾತಿ, ಧರ್ಮಗಳ ವ್ಯತ್ಯಾಸ ಬೇಕಿಲ್ಲ. ಜೀವನ ಕಟ್ಟಿಕೊಳ್ಳುವುದೇ ಅವರಿಗೆ ಮುಖ್ಯ. ಇಂತದ್ದೊಂದು ಆಲೋಚನೆ ಕಡೆಗೆ ಅವರು, ಇಡೀ ಸಮಾಜವನ್ನು ಕೊಂಡೊಯ್ಯುತ್ತಿರುವುದು ಗಮನಾರ್ಹವಾಗಿದೆ ಎಂದು ಡಿಸಿಎಂ ಡಾ.ಜಿ.ಪರಮೇಶ್ವರ ಹೇಳಿದರು.
ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ಇಂದು (ಗುರುವಾರ) ನಡೆದ ಮಾಜಿ ಮುಖ್ಯಮಂತ್ರಿ ಡಿ.ದೇವರಾಜ ಅರಸು ಅವರ 111ನೇ ಜನ್ಮದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ, ಮಾತನಾಡಿದರು.

ಇಂದು ಮಾಜಿ ಮುಖ್ಯಮಂತ್ರಿ ದೇವರಾಜ ಅರಸು ಹಾಗೂ ಮಾಜಿ ಪ್ರಧಾನಿ ರಾಜೀವ್ ಗಾಂಧಿಯವರ ಜನ್ಮದಿನ. ಇಬ್ಬರು ದೇಶದಲ್ಲಿ ಬದಲಾವಣೆಗೆ ಅಡಿಗಲ್ಲು ಹಾಕಿದ ಮಹಾನ್ ನಾಯಕರು. ಸಮಾಜದ ಒಳಿತಿನ ದೃಷ್ಟಿಯಿಂದ ತಮ್ಮ ಅಧಿಕಾರಾವಧಿಯಲ್ಲಿ ಹಲವು ಬದಲಾವಣೆ ತಂದಿದ್ದಾರೆ. ದೇವರಾಜ ಅರಸು ಶ್ರೇಣೀಕೃತ ವ್ಯವಸ್ಥೆಯನ್ನು ಅರ್ಥ ಮಾಡಿಕೊಂಡವರು. ಸಮಾಜದಲ್ಲಿ ಪ್ರತಿಯೊಬ್ಬರಿಗೂ ಗೌರವ, ಸ್ವಾಭಿಮಾನದ ಬದುಕು ಸಿಗಬೇಕು ಎಂದು ಅನೇಕ ಕಾರ್ಯಕ್ರಮಗಳನ್ನು ಕೊಟ್ಟಿದ್ದಾರೆ. ಅವುಗಳಿಂದ ಅನೇಕ ಧನಾತ್ಮಕ ಬದಲಾವಣೆಯನ್ನು ನಾವು ಕಾಣುತ್ತಿದ್ದೇವೆ ಎಂದರು.
ಪ್ರಪಂಚದ ಯಾವುದು ರಾಷ್ಟ್ರದಲ್ಲೂ ಶ್ರೇಣಿಕೃತ ವ್ಯವಸ್ಥೆಯಿಲ್ಲ. ನಾನಂತು ಯಾವ ದೇಶದಲ್ಲೂ ಜಾತಿ ವ್ಯವಸ್ಥೆ ನೋಡಿಲ್ಲ. ಭಾರತದಲ್ಲಿ ಯಾಕೆ ಬಂತು ಎನ್ನುವುದಕ್ಕೆ ಉತ್ತರ ಎಲ್ಲರಿಗೂ ಗೊತ್ತಿದೆ. ಮನುಷ್ಯನನ್ನು ಮನುಷ್ಯನನ್ನಾಗಿ ಕಾಣಬೇಕು ಎಂಬುದೇ ದೇವರಾಜ ಅರಸು ಅವರ ಕನಸಾಗಿತ್ತು. ಅದನ್ನು ಸಾಕಾರಗೊಳಿಸಲು ಶ್ರಮಿಸಿದರು ಎಂದು ತಿಳಿಸಿದರು.

ಭಗವಾನ್ ಬುದ್ಧರು ಸಮಾನತೆಯನ್ನು ಪ್ರತಿಪಾದನೆ ಮಾಡಿದರು. ಬಸವೇಶ್ವರರು ಸಮಾಜದ ಪರಿವರ್ತನೆಗೆ ನಾಂದಿ ಹಾಡಿದರು. ಹೀಗೆ ಅನೇಕ ಧೀಮಂತ ನಾಯಕರು ತಮ್ಮ ಜೀವಿತಕಾಲದಲ್ಲಿ ಸಮಾಜಕ್ಕಾಗಿ ಕೊಡುಗೆಗಳನ್ನು ನೀಡಿದ್ದಾರೆ. ದೇವರಾಜ ಅರಸು ಸ್ವಾಭಿಮಾನದ ಬದುಕು ಕಲ್ಪಿಸುವ ಪ್ರಾಮಾಣಿಕ ಪ್ರಯತ್ನ ನಡೆಸಿದರು. ಸಾಮಾಜಿಕವಾಗಿ ಹಿಂದುಳಿದವರು, ದಲಿತರು, ಅಲ್ಪಸಂಖ್ಯಾತ ಸಮುದಾಯಗಳನ್ನು ಸಮಾಜದ ಮುಖ್ಯವಾಹಿನಿಗೆ ತರಲು ಅನೇಕ ರೀತಿಯ ಪ್ರಯತ್ನಗಳನ್ನು ಮಾಡಿದರು ಎಂದು ಹೇಳಿದರು.
ಮಲ ಹೊರುವ ಪದ್ಧತಿ ಜಗತ್ತಿನ ಯಾವ ದೇಶದಲ್ಲೂ ಇರಲಿಲ್ಲ. ನಾವು 21 ಶತಮಾನಕ್ಕೆ ಕಾಲಿಟ್ಟಿದ್ದೇವೆ. ಎಲ್ಲೆಡೆ ಆಧುನಿಕತೆಯ ಗಾಳಿ ಬೀಸುತ್ತಿದೆ. ಹೀಗಿದ್ದರೂ ಇಂದಿಗೂ ಈ ಅನಿಷ್ಟ ಪದ್ಧತಿ ಅನೇಕ ರಾಜ್ಯಗಳಲ್ಲೂ ಇದೆ ಎನ್ನುವುದು ನೋವಿನ ವಿಚಾರ. ಮಲಹೊರುವ ಪದ್ಧತಿಯನ್ನು ನಿಷೇಧ ಮಾಡಿ, ಆ ಸಮುದಾಯಗಳಿಗೆ ಗೌರವ ತರುವ ಕೆಲಸ ಮಾಡಿರುವುದೇ ದೇಶದಲ್ಲಿ ಮೊದಲ ದೊಡ್ಡ ಬದಲಾವಣೆ. ಈ ಬದಲಾವಣೆಗೆ ಮುನ್ನುಡಿ ಬರೆದವರು ದೇವರಾಜ ಅರಸು ಎಂದರು.
ಮನುಷ್ಯನಿಗೆ ಭೂಮಿ ಆಸ್ತಿಯಷ್ಟೇ ಅಲ್ಲ ಶಕ್ತಿಯೂ ಆಗಿದೆ. ಕಷ್ಟಪಟ್ಟು ಭೂಮಿಯ ಉಳುಮೆ ಮಾಡುವವರನ್ನೇ ಭೂಸುಧಾರಣಾ ಕಾಯ್ದೆಯ ಮೂಲಕ ಭೂಮಿಯ ಒಡೆಯನನ್ನಾಗಿ ಮಾಡಿದರು. ಉತ್ತರ ಕರ್ನಾಟಕ ಭಾಗದಲ್ಲಿ ಕೆಲವೇ ಕೆಲವು ಭೂಮಾಲೀಕರು ಎರಡು ಸಾವಿರ, ಮೂರು ಸಾವಿರ ಎಕರೆ ಜಮೀನು ಹೊಂದಿದ್ದರು. ಅಂತವರ ಭೂಮಿಯನ್ನು ಬಡವರಿಗೆ ಹಂಚಿದರು. ಇದು ಸಾಮಾನ್ಯ ಕೆಲಸವಲ್ಲ. ಸಂವಿಧಾನದಲ್ಲಿ ಪ್ರತಿಪಾದಿಸಿರುವ ಸಮಾನತೆಯನ್ನು ಅಕ್ಷರಶಃ ಜೀವನದಲ್ಲಿ ಅಳವಡಿಸಿಕೊಂಡವರು ದೇವರಾಜ ಅರಸು ಎಂದು ತಿಳಿಸಿದರು.
ದೂರದೃಷ್ಟಿ ಹೊಂದಿದ್ದ ದೇವರಾಜ ಅರಸು, ಕ್ಯಾಲಿಫೋರ್ನಿಯಾದಲ್ಲಿರುವ ಎಲೆಕ್ಟ್ರಾನಿಕ್ ಸಿಟಿ ಮಾದರಿಯಲ್ಲಿ ಬೆಂಗಳೂರಿನಲ್ಲಿ ಎಲೆಕ್ಟ್ರಾನಿಕ್ ಸಿಟಿಯನ್ನು ನಿರ್ಮಿಸಿದರು. ಲಕ್ಷಾಂತರ ಯುವಕರಿಗೆ ಉದ್ಯೋಗ ನೀಡುವ ಮೂಲಕ ಭವಿಷ್ಯದ ಆರ್ಥಿಕ ಚಟುವಟಿಕೆಗಳಿಗೆ ಅಡಿಗಲ್ಲು ಹಾಕಿದರು. ಸಾಮಾಜಿಕ ನ್ಯಾಯ ಮತ್ತು ಅಭಿವೃದ್ಧಿ ದೃಷ್ಟಿಯಲ್ಲಿ ಕರ್ನಾಟಕವನ್ನು ದೇಶದಲ್ಲೇ ಮಾದರಿ ರಾಜ್ಯವನ್ನಾಗಿ ಮಾಡಿದರು. ರಾಜ್ಯದ ಮುಖ್ಯಮಂತ್ರಿಯಾಗಿ ಅಮೋಘ ಸೇವೆ ಸಲ್ಲಿಸಿ ಇತಿಹಾಸವನ್ನು ಬಿಟ್ಟು ಹೋಗಿದ್ದಾರೆ ಎಂದು ದೇವರಾಜ ಅರಸು ಸಾಧನೆಯನ್ನು ಕೊಂಡಾಡಿದರು.
ಕರ್ನಾಟಕ ಪ್ರಪಂಚದಲ್ಲೇ ಮಾದರಿಯಾಗಿದೆ. ಲಕ್ಷಾಂತರ ಮಕ್ಕಳು ವಿದೇಶ ಹಾಗೂ ಬೇರೆ ರಾಜ್ಯಗಳ ಮಕ್ಕಳು ಉನ್ನತ ಶಿಕ್ಷಣ ಪಡೆಯಲು ಬರುತ್ತಿದ್ದಾರೆ. ಗುಣಮಟ್ಟದ ಶಿಕ್ಷಣ ರಾಜ್ಯದಲ್ಲಿ ಸಿಗುತ್ತಿದೆ. ಇದಕ್ಕೆ ಅಡಿಗಲ್ಲು ಹಾಕಿದವರು ದೇವರಾಜ ಅರಸು ಎಂದರು.
ವಿಧಾನಸೌಧದ ಕಾರಿಡಾರ್‌ನಲ್ಲಿ ಬರುವ ನಮ್ಮ ತಂದೆಯವರನ್ನು ಸಿಬ್ಬಂದಿಗಳು ಪಕ್ಕಕ್ಕೆ ಸರಿಸಿದ್ದರು. ಇದನ್ನು ಗಮನಿಸಿದ್ದ ದೇವರಾಜ ಅರಸು ತಮ್ಮ ಕಚೇರಿಗೆ ಕರೆದೊಯ್ದು ಮಾತನಾಡಿಸಿದ್ದರು. ಸಿದ್ಧಾರ್ಥ ಎಂಜಿಯರಿಂಗ್ ಕಾಲೇಜಿಗೆ ಅನುಮತಿ ನೀಡಿಸಿದ್ದರು. ಉನ್ನತ ಶಿಕ್ಷಣಕ್ಕೆ ಅಡಿಗಲ್ಲು ಹಾಕಿದವರು ಎಂದು ನೆನಪಿಸಿಕೊಂಡರು.
ನಮ್ಮ ರಾಜ್ಯದ ಮಕ್ಕಳು ಪ್ರಪಂಚದ ಎಲ್ಲ ಕಡೆ ಉದ್ಯೋಗ ನಿಮಿತ್ತ ವಾಸಿಸುತ್ತಿದ್ದಾರೆ. ಕರ್ನಾಟಕವು ಶಿಕ್ಷಣದಲ್ಲಿ ಶಕ್ತಿ ಪಡೆದುಕೊಂಡಿದ್ದರೆ ಅದು ದೇವರಾಜ ಅರಸು ಕೊಡುಗೆ ಎಂದು ಭಾವಿಸುತ್ತೇನೆ. ಸ್ವಾತಂತ್ರ್ಯ ಬಂದಾಗ ಮಹಾತ್ಮ ಗಾಂಧಿ ಅವರು ಡೆಮಾಕ್ರಟಿಕ್ ರಿಪಬ್ಲಿಕ್ ಬಯಸಿದ್ದರು. ಇದನ್ನು ಮಾಡಿ ತೋರಿಸಿದವರು ದೇವರಾಜ ಅರಸು ಎನ್ನುವುದು ನಮಗೆ ಹೆಮ್ಮೆಯ ವಿಷಯ ಎಂದು ತಿಳಿಸಿದರು.
ಇವೆ ವೇಳೆ ಪ್ರೊ. ಪಿ.ವಿ.ನಂಜರಾಜ ಅರಸು ಅವರಿಗೆ 'ಡಿ.ದೇವರಾಜ ಅರಸು ಪ್ರಶಸ್ತಿ'ಯನ್ನು ಪ್ರದಾನ ಮಾಡಲಾಯಿತು.
ವಿಧಾನ ಪರಿಷತ್ ಸಭಾಪತಿ ಸಲೀಂ ಅಹ್ಮದ್, ಸಚಿವ ಶಿವರಾಜ್ ಎಸ್.ತಂಗಡಗಿ, ಬಸವಂತಪ್ಪ, ಡಾ.ಯತೀಂದ್ರ ಸಿದ್ದರಾಮಯ್ಯ, ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಟಾನ ಪ್ರಾಧಿಕಾರದ ಅಧ್ಯಕ್ಷ ಹೆಚ್.ಎಂ.ರೇವಣ್ಣ, ಶಾಸಕ ಅಲ್ಲಮಪ್ರಭು ಪಾಟೀಲ್, ಪ್ರದೀಪ್ ಈಶ್ವರ್, ಭೀಮಣ್ಣ ಚಿಮ್ಮನಕಟ್ಟಿ, ವಿಧಾನ ಪರಿಷತ್ ಸದಸ್ಯ ಎಫ್.ಹೆಚ್.ಜಕ್ಕಪ್ಪನವರ್ ಹಾಗೂ ಗಾಯತ್ರಿ ಶಾಂತನಗೌಡ ಇದ್ದರು.
Day2day News ನವ ಮಾಧ್ಯಮದ ವೃತ್ತಿಪರ ಡಿಜಿಟಲ್ ಮಾಧ್ಯಮ ಸಂಸ್ಥೆ. ವೆಬ್ ನ್ಯೂಸ್ ಪೋರ್ಟಲ್‌ನಿಂದ ಹಿಡಿದು ಇನ್‌ಸ್ಟಾ, ಎಕ್ಸ್, ಫೇಸ್‌ಬುಕ್, ಯೂಟ್ಯೂಬ್, ನ್ಯೂಸ್ ಆಪ್‌ವರೆಗೆ ಎಲ್ಲ ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ - ಮಾಹಿತಿಯನ್ನು ಸರಳ, ಸಂಕ್ಷಿಪ್ತವಾಗಿ ನೀಡುತ್ತದೆ. ಜತೆಗೆ Day2day Short News ಕರ್ನಾಟಕದ ಮೊದಲ ಶಾರ್ಟ್ ಆಪ್. Swipe ಮಾಡಿ ಸುದ್ದಿ ಓದಿ. ನಮ್ಮ ಎಲ್ಲ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ & ಜಾಹೀರಾತು ನೀಡಲು 7070708646ಗೆ ಸಂಪರ್ಕಿಸಿ.