ಮೂಡಬಿದರೆ: ಬಿಜೆಪಿ ಯುವ ಮುಖಂಡ ಪ್ರತೀಕ್ ಶೆಟ್ಟಿ ಇನ್ನಿಲ್ಲ
Moodabidri: : ಬಿಜೆಪಿ ಯುವ ಮುಖಂಡ ಪ್ರತೀಕ್ ಶೆಟ್ಟಿ ಮೃತಪಟ್ಟಿದ್ದಾರೆ.
ಮೂಡಬಿದರೆ: ಬಿಜೆಪಿ ಯುವ ಮೋರ್ಚಾದಲ್ಲಿ ಗುರುತಿಸಿಕೊಂಡಿದ್ದ ಪ್ರತೀಕ್ ಶೆಟ್ಟಿ (39) ಅನಾರೋಗ್ಯದಿಂದ ಸೋಮವಾರ ತಡರಾತ್ರಿ ನಿಧನರಾಗಿದ್ದಾರೆ.
ಎಕ್ಕಾರು ನಿವಾಸಿಯಾಗಿದ್ದ ಅವರು, ಉದ್ಯಮಿಯಾಗಿದ್ದರು. ಸಾಮಾಜಿಕ ಹಾಗೂ ಧಾರ್ಮಿಕ ಚಟುವಟಿಕೆಯಲ್ಲಿ ಸಕ್ರಿಯರಾಗಿದ್ದರು. ಈ ಹಿಂದೆ, ಮಂಡಲ ಯುವ ಮೋರ್ಚಾ ಕಾರ್ಯದರ್ಶಿಯಾಗಿ ಪಕ್ಷ ಸಂಘಟನೆಯಲ್ಲಿ ತೊಡಗಿದ್ದರು.
ಮೃತ ಪ್ರತೀಕ್ ಶೆಟ್ಟಿ ಪತ್ನಿ ಮತ್ತು ಪುತ್ರಿಯನ್ನು ಅಗಲಿದ್ದಾರೆ.
ಅವರ ಸಾವಿಗೆ 'ಬಿಜೆಪಿ ದಕ್ಷಿಣ ಕನ್ನಡ' ಸಂತಾಪ ಸೂಚಿಸಿದೆ. ಈ ಬಗ್ಗೆ 'ಎಕ್ಸ್'ನಲ್ಲಿ ಪೋಸ್ಟ್ ಮಾಡಿದೆ. ಮುಂಚೂಣಿ ಕಾರ್ಯಕರ್ತರಾಗಿ, ಅನೇಕ ಸಮಾಜಮುಖಿ ಕೆಲಸಕಾರ್ಯಗಳಲ್ಲಿ ತೊಡಗಿಸಿಕೊಂಡು ಎಲ್ಲರ ಪ್ರೀತಿ ಹಾಗೂ ವಿಶ್ವಾಸಕ್ಕೆ ಪಾತ್ರರಾಗಿದ್ದ ಪ್ರತೀಕ್ ಶೆಟ್ಟಿ ಕಿನ್ನಿಗೋಳಿ ಅಗಲಿಕೆ ಅತ್ಯಂತ ದುಃಖಕರವಾಗಿದೆ. ಅವರ ಆತ್ಮಕ್ಕೆ ದೇವರು ಚಿರಶಾಂತಿಯನ್ನು ನೀಡಲಿ, ಆತ್ಮೀಯರಿಗೆ ದುಃಖವನ್ನು ಭರಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸುತ್ತೇವೆ ಎಂದು ಹೇಳಿದೆ.
ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್ ಕೂಡ ಸಂತಾಪ ವ್ಯಕ್ತಪಡಿಸಿದ್ದಾರೆ. 'ಎಕ್ಸ್'ನಲ್ಲಿ ಪೋಸ್ಟ್ ಮಾಡಿರುವ ಅವರು, ನಮ್ಮ ಪಕ್ಷದ ನಿಷ್ಠಾವಂತ ಕಾರ್ಯಕರ್ತನಾಗಿ, ಸಮಾಜಮುಖಿ ಕಾರ್ಯಗಳಿಂದ ಜನಾನುರಾಗಿದ್ದ ಯುವ ಮುಂದಾಳು, ಪ್ರತೀಕ್ ಶೆಟ್ಟಿ ಕಿನ್ನಿಗೋಳಿ ಅವರ ಆತ್ಮಕ್ಕೆ ಸದ್ಗತಿ ಕೋರುತ್ತಾ, ಅವರ ಹಠಾತ್ ಅಗಲುವಿಕೆಯ ದುಃಖವನ್ನು ಸಹಿಸುವ ಶಕ್ತಿಯನ್ನು ಅವರ ಕುಟುಂಬಕ್ಕೆ, ಬಂಧು ಮಿತ್ರರಿಗೆ, ಹಿತೈಷಿಗಳಿಗೆ ಭಗವಂತ ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಬರೆದುಕೊಂಡಿದ್ದಾರೆ.