India Sweet House: ಮುತ್ತಿನ ನಗರಿ ಹೈದರಾಬಾದ್‌ನತ್ತ ಇಂಡಿಯಾ ಸ್ವೀಟ್ ಹೌಸ್ ಪಯಣ.. 60ನೇ ಔಟ್ಲೆಟ್‌ಗೆ ಸಜ್ಜು!
India Sweet House: 'ಇಂಡಿಯಾ ಸ್ವೀಟ್ ಹೌಸ್' ಇದೀಗ ಕರ್ನಾಟಕದ ಗಡಿಯನ್ನು ದಾಟಿ ಮುತ್ತಿನ ನಗರಿ ಹೈದರಾಬಾದ್‌ನತ್ತ ಹೆಜ್ಜೆಯಿಡುತ್ತಿದೆ. ಮುಂದಿನ ತಿಂಗಳು ಅಲ್ಲಿ ಸಂಸ್ಥೆಯ 60ನೇ ಔಟ್ಲೆಟ್ ಆರಂಭಗೊಳ್ಳಲಿದೆ.
ಬೆಂಗಳೂರು: ತುಪ್ಪದ ಸುವಾಸನೆ, ದೇಸಿ ರುಚಿ ಮತ್ತು ಸಾಂಪ್ರದಾಯಿಕ ಸಿಹಿಗೆ ಆಧುನಿಕ ಸ್ಪರ್ಶ ನೀಡುವ ಮೂಲಕ ಗ್ರಾಹಕರ ಮನಗೆದ್ದಿರುವ 'ಇಂಡಿಯಾ ಸ್ವೀಟ್ ಹೌಸ್' ಇದೀಗ ಕರ್ನಾಟಕದ ಗಡಿಯನ್ನು ದಾಟಿ ಮುತ್ತಿನ ನಗರಿ ಹೈದರಾಬಾದ್‌ನತ್ತ ಹೆಜ್ಜೆಯಿಡುತ್ತಿದೆ. ಮುಂದಿನ ತಿಂಗಳು ಅಲ್ಲಿ ಸಂಸ್ಥೆಯ 60ನೇ ಔಟ್ಲೆಟ್ ಆರಂಭಗೊಳ್ಳಲಿದ್ದು, ಜುಬ್ಲಿ ಹಿಲ್ಸ್ ಸೇರಿದಂತೆ ಪ್ರಮುಖ ಪ್ರದೇಶಗಳಲ್ಲಿ ತನ್ನ ಸಿಹಿಯ ಅನುಭವವನ್ನು ಪರಿಚಯಿಸಲು ಸಂಸ್ಥೆ ಸಜ್ಜಾಗಿದೆ.
ಬೆಂಗಳೂರು ಸೇರಿದಂತೆ ಕರ್ನಾಟಕದ ವಿವಿಧ ನಗರಗಳಲ್ಲಿ ಸಿಹಿಯ ಸವಿ ಹಂಚಿಕೊಂಡಿರುವ ಇಂಡಿಯಾ ಸ್ವೀಟ್ ಹೌಸ್, ಐದು ವರ್ಷಗಳ ಪಯಣವನ್ನು ಪೂರ್ಣಗೊಳಿಸಿ, ಸದ್ಯ ಮತ್ತೊಂದು ಮಹತ್ವದ ವಿಸ್ತರಣೆಯ ಹಂತ ತಲುಪಿದೆ. ಬೆಂಗಳೂರು, ಮಂಗಳೂರು, ಮೈಸೂರು, ಸೇರಿದಂತೆ ಹಲವು ನಗರಗಳಲ್ಲಿ ಔಟ್ಲೆಟ್‌ಗಳನ್ನು ಹೊಂದಿರುವ ಸಂಸ್ಥೆ, ಹುಬ್ಬಳ್ಳಿಯಲ್ಲಿ 59ನೇ ಔಟ್ಲೆಟ್‌ನ್ನು ಅತಿ ಶೀಘ್ರದಲ್ಲಿ ಪ್ರಾರಂಭಿಸುತ್ತಿದ್ದು, ಬಳಿಕ ಹೈದರಾಬಾದ್‌ಗೆ 60ನೇ ಹೆಜ್ಜೆ ಇಡುತ್ತಿದೆ.

ಹೈನುಗಾರಿಕೆಯಿಂದ ಸಿಹಿಯ ಸಾಮ್ರಾಜ್ಯದವರೆಗೆ...
ಇಂಡಿಯಾ ಸ್ವೀಟ್ ಹೌಸ್‌ನ ಕಥೆ ಕೇವಲ ಒಂದು ಸ್ವೀಟ್ ಬ್ರ್ಯಾಂಡ್‌ನ ಯಶೋಗಾಥೆಯಲ್ಲ. ಇದರ ಹಿಂದೆ ವಿಭಿನ್ನ ಸಂದರ್ಭಗಳನ್ನು ಅವಕಾಶವಾಗಿ ಪರಿವರ್ತಿಸಿಕೊಂಡ ಉದ್ಯಮಶೀಲತೆಯ ಕಥೆಯೂ ಇದೆ.
ಬೆಂಗಳೂರಿನ ದಂಪತಿಗಳಾದ ವಿಶ್ವನಾಥ ಮೂರ್ತಿ ಮತ್ತು ಶ್ವೇತಾ ರಾಜಶೇಖರ್ ಹೈನುಗಾರಿಕೆ ಮತ್ತು ಆರ್ಗ್ಯಾನಿಕ್ ಹಾಲಿನ ಪರಿಕಲ್ಪನೆಯೊಂದಿಗೆ ತಮ್ಮ ಉದ್ಯಮ ಪಯಣ ಆರಂಭಿಸಿದ್ದರು. ಆದರೆ ಕೊರೊನಾ ಕಾಲದಲ್ಲಿ ಹಾಲಿನ ಮಾರುಕಟ್ಟೆಯಲ್ಲಿ ಉಂಟಾದ ಬದಲಾವಣೆ ಹೊಸ ಆಲೋಚನೆಗೆ ಕಾರಣವಾಯಿತು. ಪ್ರತಿದಿನ ಸಂಗ್ರಹವಾಗುತ್ತಿದ್ದ ಹಾಲನ್ನು ತುಪ್ಪವಾಗಿ ಪರಿವರ್ತಿಸುವ ಪ್ರಯತ್ನ ಆರಂಭವಾಯಿತು.
ಹೀಗೆ ತಯಾರಾದ ತುಪ್ಪವನ್ನು ಮಾರುಕಟ್ಟೆಗೆ ತಲುಪಿಸುವ ಚಿಂತನೆಯಿಂದ ಮತ್ತೊಂದು ಹೊಸ ಕಲ್ಪನೆ ಹುಟ್ಟಿಕೊಂಡಿತು. ಅದೇ ಅಪ್ಪಟ ತುಪ್ಪದ ದೇಸಿ ಮೈಸೂರ್‌ಪಾಕ್.

ಆನ್‌ಲೈನ್ ಮಾರುಕಟ್ಟೆಯನ್ನು ಕೇಂದ್ರವಾಗಿಟ್ಟುಕೊಂಡು ಆರಂಭವಾದ ಈ ಪ್ರಯತ್ನಕ್ಕೆ ಉದ್ಯಮಿ ರಾಜೇಶ್ ಮೆಹ್ತ ಅವರ ಸಹಭಾಗಿತ್ವ ದೊರೆಯಿತು. ಮೂವರ ಆಲೋಚನೆ, ಪರಿಶ್ರಮ ಮತ್ತು ಉದ್ಯಮದ ದೃಷ್ಟಿಕೋನ ಒಂದಾಗಿ ಇಂಡಿಯಾ ಸ್ವೀಟ್ ಹೌಸ್ ಎಂಬ ಹೊಸ ಬ್ರ್ಯಾಂಡ್ ರೂಪುಗೊಂಡಿತು.
ಮೈಸೂರ್‌ಪಾಕ್‌ನಿಂದ ಹಲವು ಹೊಸತನಗಳವರೆಗೆ:
ಆರಂಭದಲ್ಲಿ ತುಪ್ಪದ ದೇಸಿ ಮೈಸೂರ್‌ಪಾಕ್ ಪ್ರಮುಖ ಆಕರ್ಷಣೆಯಾಗಿದ್ದರೂ, ನಂತರ ಗ್ರಾಹಕರ ರುಚಿ ಮತ್ತು ಬದಲಾಗುತ್ತಿರುವ ಆಹಾರ ಪದ್ಧತಿಯನ್ನು ಗಮನದಲ್ಲಿಟ್ಟುಕೊಂಡು ಹಲವು ಹೊಸ ಉತ್ಪನ್ನಗಳನ್ನು ಪರಿಚಯಿಸಲಾಯಿತು.
ಬೆಲ್ಲದ ಮೈಸೂರ್‌ಪಾಕ್, ಕಾಜು ಕಟ್ಲಿ, ಡ್ರೈಪ್ರುಟ್ ಬರ್ಫಿಸ್, ಶುಗರ್‌ಫ್ರೀ ಸಿಹಿತಿನಿಸುಗಳು ಸೇರಿದಂತೆ ವಿವಿಧ ಉತ್ಪನ್ನಗಳ ಮೂಲಕ ಸಾಂಪ್ರದಾಯಿಕ ಸಿಹಿಗೆ ಹೊಸ ಆಯಾಮ ನೀಡುವ ಪ್ರಯತ್ನ ನಡೆದಿದೆ.
ಇಂಡಿಯಾ ಸ್ವೀಟ್ ಹೌಸ್‌ನ ವಿಶೇಷತೆ ಎಂದರೆ ಕೇವಲ ಸಿಹಿ ಮಾರಾಟವಲ್ಲ; ದೇಸಿ ಪದಾರ್ಥಗಳು, ತುಪ್ಪದ ಬಳಕೆ ಮತ್ತು ಸಾಂಪ್ರದಾಯಿಕ ರುಚಿಯನ್ನು ಸಮಕಾಲೀನ ಗ್ರಾಹಕರಿಗೆ ಪರಿಚಯಿಸುವ ಪ್ರಯತ್ನವೂ ಇದರ ಭಾಗವಾಗಿದೆ.
ಮಹಿಳೆಯರಿಂದ ಆರಂಭವಾದ ಔಟ್ಲೆಟ್ ಪಯಣ:
ಸಂಸ್ಥೆಯ ಆರಂಭಿಕ ದಿನಗಳ ಮತ್ತೊಂದು ವಿಶೇಷತೆ ಎಂದರೆ ಮಹಿಳಾ ಉದ್ಯಮಶೀಲತೆಗೆ ನೀಡಿದ ಆದ್ಯತೆ. ಮೊದಲ ಹಂತದ ಔಟ್ಲೆಟ್‌ಗಳ ನಿರ್ವಹಣೆಯಲ್ಲಿ ಮಹಿಳೆಯರ ಪ್ರಮುಖ ಪಾತ್ರವಿತ್ತು. ಇಂದು ಸಂಸ್ಥೆ ಮಹಿಳೆಯರು ಮತ್ತು ಪುರುಷರ ಸಹಭಾಗಿತ್ವದೊಂದಿಗೆ ಸಾವಿರಾರು ಮಂದಿಗೆ ಉದ್ಯೋಗಾವಕಾಶ ಕಲ್ಪಿಸುವ ಹಂತಕ್ಕೆ ಬೆಳೆದಿದೆ.
ಒಂದು ಸಣ್ಣ ಆಲೋಚನೆಯಿಂದ ಆರಂಭವಾದ ಉದ್ಯಮ ಇಂದು ಹಲವು ನಗರಗಳಲ್ಲಿ ತನ್ನದೇ ಆದ ಗ್ರಾಹಕ ಬಳಗವನ್ನು ನಿರ್ಮಿಸಿಕೊಂಡಿದೆ.
60ನೇ ಔಟ್ಲೆಟ್ ಹೈದರಾಬಾದ್‌ನಲ್ಲಿ..
ಹುಬ್ಬಳ್ಳಿಯಲ್ಲಿ 59ನೇ ಔಟ್ಲೆಟ್ ಆರಂಭಿಸಿರುವ ಇಂಡಿಯಾ ಸ್ವೀಟ್ ಹೌಸ್, ಮುಂದಿನ ತಿಂಗಳು ಹೈದರಾಬಾದ್‌ನಲ್ಲಿ 60ನೇ ಔಟ್ಲೆಟ್‌ಗೆ ಚಾಲನೆ ನೀಡಲಿದೆ. ಜುಬ್ಲಿ ಹಿಲ್ಸ್ ಸೇರಿದಂತೆ ನಗರದ ಐದು ಪ್ರಮುಖ ಪ್ರದೇಶಗಳನ್ನು ಗುರಿಯಾಗಿಸಿಕೊಂಡು ವಿಸ್ತರಣೆಗೆ ಸಿದ್ಧತೆ ನಡೆಯುತ್ತಿದೆ.
ಕರ್ನಾಟಕದಲ್ಲಿ ಯಶಸ್ವಿಯಾಗಿ ರೂಪಿಸಿಕೊಂಡಿರುವ ದೇಸಿ ಸಿಹಿಯ ಪರಿಕಲ್ಪನೆಯನ್ನು ತೆಲಂಗಾಣದ ಮಾರುಕಟ್ಟೆಯಲ್ಲೂ ಪರಿಚಯಿಸುವುದು ಈ ವಿಸ್ತರಣೆಯ ಉದ್ದೇಶವಾಗಿದೆ ಎನ್ನುತ್ತಾರೆ
ಸಂಸ್ಥೆಯ ಸ್ಥಾಪಕ ನಿರ್ದೇಶಕಿ ಶ್ವೇತಾ ರಾಜಶೇಖರ್, ದೀಪಾವಳಿ ನಂತರ ಚೆನ್ನೈ ಮಾರುಕಟ್ಟೆಯತ್ತಲೂ ಸಂಸ್ಥೆ ಹೆಜ್ಜೆಯಿಡುವ ಸಾಧ್ಯತೆಯ ಸುಳಿವು ನೀಡಿದ್ದಾರೆ. ಹೀಗಾಗಿ ಕರ್ನಾಟಕದಿಂದ ಆರಂಭವಾದ ಈ ಸಿಹಿಯ ಪಯಣ ದಕ್ಷಿಣ ಭಾರತದ ಮತ್ತಷ್ಟು ನಗರಗಳಿಗೆ ವಿಸ್ತರಿಸುವ ನಿರೀಕ್ಷೆ ಮೂಡಿಸಿದೆ.
ದಸರಾ–ದೀಪಾವಳಿಗೆ 25 ಲಕ್ಷ ಬಾಕ್ಸ್‌ಗಳ ಗುರಿ:
ದಸರಾ ಮತ್ತು ದೀಪಾವಳಿ ಇಂಡಿಯಾ ಸ್ವೀಟ್ ಹೌಸ್‌ಗೆ ಪ್ರಮುಖ ಮಾರಾಟದ ಅವಧಿ. ಈ ಬಾರಿ ವೈಯಕ್ತಿಕ ಗ್ರಾಹಕರ ಜೊತೆಗೆ ಇಂಡಸ್ಟ್ರಿ ಮತ್ತು ಕಾರ್ಪೊರೇಟ್ ವಿಭಾಗಗಳನ್ನೂ ಗಮನದಲ್ಲಿಟ್ಟುಕೊಂಡು ವಿಶೇಷ ಸಿದ್ಧತೆ ಮಾಡಿಕೊಳ್ಳಲಾಗಿದೆ.
ಈ ಹಬ್ಬದ ಋತುವಿನಲ್ಲಿ ಸುಮಾರು 25 ಲಕ್ಷ ಸ್ವೀಟ್ ಬಾಕ್ಸ್‌ಗಳನ್ನು ತಲುಪಿಸುವ ಗುರಿಯನ್ನು ಸಂಸ್ಥೆ ಹೊಂದಿದೆ. ಕಾರ್ಪೊರೇಟ್ ಉಡುಗೊರೆ, ಹಬ್ಬದ ಪ್ಯಾಕಿಂಗ್ ಮತ್ತು ವಿವಿಧ ಸಿಹಿ ಉತ್ಪನ್ನಗಳ ಮೂಲಕ ದೊಡ್ಡ ಪ್ರಮಾಣದ ಆರ್ಡರ್‌ಗಳನ್ನು ಪೂರೈಸಲು ಸಂಸ್ಥೆ ಸಜ್ಜಾಗಿದೆ.
ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ...
ಐದು ವರ್ಷಗಳ ಹಿಂದೆ ಆರಂಭವಾದ ಒಂದು ಉದ್ಯಮ ಇಂದು 60ನೇ ಔಟ್ಲೆಟ್‌ನ ಹಂತ ತಲುಪಿದೆ. ಹೈನುಗಾರಿಕೆಯಿಂದ ಆರಂಭವಾದ ಪಯಣ, ತುಪ್ಪ, ಮೈಸೂರ್‌ಪಾಕ್, ಆನ್‌ಲೈನ್ ಮಾರಾಟ, ಸ್ವೀಟ್ ಔಟ್ಲೆಟ್‌ಗಳು ಮತ್ತು ಇದೀಗ ರಾಜ್ಯದ ಗಡಿಯನ್ನು ದಾಟುವ ವಿಸ್ತರಣೆಯವರೆಗೆ ಬಂದಿದೆ.
ವಿಶ್ವನಾಥ ಮೂರ್ತಿ, ಶ್ವೇತಾ ರಾಜಶೇಖರ್ ಮತ್ತು ರಾಜೇಶ್ ಮೆಹ್ತ ಎಂಬ ಈ ತ್ರಿಮೂರ್ತಿಗಳ ಮುಂದಿನ ಕನಸು ಇನ್ನಷ್ಟು ದೊಡ್ಡದು-ಕರ್ನಾಟಕದ ಸಿಹಿಯ ದೇಸಿ ರುಚಿಯನ್ನು ದೇಶದಾದ್ಯಂತ ತಲುಪಿಸುವುದು. ಭಾರತದ ಸಿಹಿಯ ರುಚಿಯನ್ನು ಎಲ್ಲೆಡೆ ಎಲ್ಲರಿಗೂ ವಿಸ್ತರಿಸುವುದು.
ಹೈದರಾಬಾದ್ 60ನೇ ಮೈಲಿಗಲ್ಲಾಗುತ್ತಿದ್ದರೆ, ಚೆನ್ನೈ ಮುಂದಿನ ಹೆಜ್ಜೆಯಾಗುವ ಸಾಧ್ಯತೆ ಇದೆ. ಮುಂದೆ ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ಸಿಹಿಯ ಜಾಲ ವಿಸ್ತರಿಸುವ ಕನಸಿನೊಂದಿಗೆ ಸಾಗುತ್ತಿರುವ ಇಂಡಿಯಾ ಸ್ವೀಟ್ ಹೌಸ್‌ನ ಈ ಪಯಣ, ಸಾಂಪ್ರದಾಯಿಕ ರುಚಿ ಮತ್ತು ಹೊಸ ಉದ್ಯಮದ ಕಲ್ಪನೆಯೊಂದು ಸೇರಿದಾಗ ಹೇಗೆ ದೊಡ್ಡ ಬ್ರ್ಯಾಂಡ್ ರೂಪುಗೊಳ್ಳಬಹುದು ಎಂಬುದಕ್ಕೆ ಉತ್ತಮ ಉದಾಹರಣೆಯಾಗಿದೆ.