Phalada Pure & Sure Cafe: ದಿಗ್ಗಜ ಜಾಂಟಿ ರೋಡ್ಸ್ & ಸ್ಟಾರ್ ಶೆಫ್ ಅಭಿಜಿತ್ ಸಹಾ ಅವರಿಂದ ಫಲದ ಕೆಫೆಗೆ ಮೆರಗು
Phalada Pure & Sure Cafe: 'ಫಲದ ಪ್ಯೂರ್ ಅಂಡ್ ಶ್ಯೂರ್ ಕೆಫೆ' ಇಂದು ಕ್ರಿಕೆಟ್ ಮತ್ತು ಆಹಾರ ಪ್ರಿಯರ ಸಂಗಮಕ್ಕೆ ಸಾಕ್ಷಿಯಾಯಿತು.
ಬೆಂಗಳೂರು: ನಗರದ ಹೃದಯಭಾಗದಲ್ಲಿರುವ ಪ್ರತಿಷ್ಠಿತ 1ಎಂಜಿ ಮಾಲ್‌ನಲ್ಲಿರುವ ಸಾವಯವ ಉತ್ಪನ್ನಗಳಿಗೆ ಹೆಸರಾದ 'ಫಲದ ಪ್ಯೂರ್ ಅಂಡ್ ಶ್ಯೂರ್ ಕೆಫೆ' ಇಂದು ಕ್ರಿಕೆಟ್ ಮತ್ತು ಆಹಾರ ಪ್ರಿಯರ ಸಂಗಮಕ್ಕೆ ಸಾಕ್ಷಿಯಾಯಿತು.
ದಕ್ಷಿಣ ಆಫ್ರಿಕಾದ ಕ್ರಿಕೆಟ್ ದಂತಕಥೆ, ವಿಶ್ವದ ಶ್ರೇಷ್ಠ ಫೀಲ್ಡರ್ ಎಂದು ಖ್ಯಾತರಾಗಿರುವ ಜಾಂಟಿ ರೋಡ್ಸ್ ಅವರು ಕೆಫೆಗೆ ಭೇಟಿ ನೀಡಿದರು. ಅವರೊಂದಿಗೆ ಭಾರತದ ಖ್ಯಾತ ಬಾಣಸಿಗ, ಮೈಕೆಲಿನ್ ಸ್ಟಾರ್ ಪುರಸ್ಕೃತ ಶೆಫ್ ಅಭಿಜಿತ್ ಸಹಾ ಕೂಡ ಆಗಮಿಸಿದ್ದರು.
ಈ ಭೇಟಿಯು ವೆಸ್ಗ್ರೋ - ಕೇಪ್ ಟೌನ್ ಮತ್ತು ವೆಸ್ಟರ್ನ್ ಕೇಪ್ ಪ್ರವಾಸೋದ್ಯಮ, ಸಿಟ್ರಸ್ ಗ್ರೋವರ್ಸ್ ಅಸೋಸಿಯೇಷನ್ ಆಫ್ ಸದರ್ನ್ ಆಫ್ರಿಕಾ ಮತ್ತು ರಿಲಯನ್ಸ್ ರೀಟೇಲ್ ನ ಫ್ರೆಶ್‌ಪಿಕ್ ಸಹಯೋಗದಲ್ಲಿ ಆಯೋಜಿಸಿದ್ದ 'ಫ್ರಮ್ ಅವರ್ ಹೋಮ್ ಟು ಯುವರ್ಸ್' ವಿಶೇಷ ಉತ್ತೇಜನಾ ಕಾರ್ಯಕ್ರಮದ ಅಂಗವಾಗಿತ್ತು. ದಕ್ಷಿಣ ಆಫ್ರಿಕಾದ ಉತ್ತಮ ಗುಣಮಟ್ಟದ ಸಿಟ್ರಸ್ ಹಣ್ಣುಗಳನ್ನು ಭಾರತೀಯ ಮಾರುಕಟ್ಟೆಗೆ ಪರಿಚಯಿಸುವುದು ಈ ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿತ್ತು.

ಕಾರ್ಯಕ್ರಮದಲ್ಲಿ ಜಾಂಟಿ ರೋಡ್ಸ್ ಅವರು, ತಮ್ಮ ಸಹಜ ಲವಲವಿಕೆಯಿಂದ ಎಲ್ಲರ ಗಮನ ಸೆಳೆದರು. ಕೆಫೆಗೆ ಬಂದಿದ್ದ ಪುಟಾಣಿ ಕ್ರಿಕೆಟ್ ಪಟುಗಳೊಂದಿಗೆ ಆತ್ಮೀಯವಾಗಿ ಬೆರೆತರು. ಬಿಳಿ ಜೆರ್ಸಿ ತೊಟ್ಟಿದ್ದ ಮಕ್ಕಳಿಗೆ ಕ್ರಿಕೆಟ್ ಚೆಂಡಿಗೆ ಆಟೋಗ್ರಾಫ್ ನೀಡಿ, ಅವರೊಂದಿಗೆ ಫೀಲ್ಡಿಂಗ್ ಕುರಿತು ಮಾತನಾಡಿ ಸ್ಪೂರ್ತಿ ತುಂಬಿದರು. ಮಕ್ಕಳು ಅವರೊಂದಿಗೆ ಫೋಟೋ ತೆಗೆಸಿಕೊಳ್ಳಲು ಮುಗಿಬಿದ್ದಿದ್ದ ದೃಶ್ಯ ಎಲ್ಲರ ಮನ ಗೆದ್ದಿತು. ಫಲದ ಪ್ಯೂರ್ ಅಂಡ್ ಶ್ಯೂರ್ ಸಂಸ್ಥೆಯ ಹಸಿರು ಆಪ್ರನ್ ಧರಿಸಿದ್ದ ಸಿಬ್ಬಂದಿ ವರ್ಗ ಅತಿಥಿಗಳನ್ನು ಆತ್ಮೀಯವಾಗಿ ಸ್ವಾಗತಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಜಾಂಟಿ ರೋಡ್ಸ್, 'ಭಾರತದೊಂದಿಗಿನ ನನ್ನ ಸಂಬಂಧ ತುಂಬಾ ಆಳವಾದದ್ದು. ಬೆಂಗಳೂರು ನನಗೆ ಎರಡನೇ ಮನೆ ಇದ್ದಂತೆ. ಸಾವಯವ ಆಹಾರ ಮತ್ತು ಆರೋಗ್ಯಕರ ಜೀವನಶೈಲಿ ಇಂದಿನ ಅಗತ್ಯ. ಫಲದ ಸಂಸ್ಥೆಯು ರೈತರಿಂದ ನೇರವಾಗಿ ಗ್ರಾಹಕರಿಗೆ ಶುದ್ಧ ಉತ್ಪನ್ನಗಳನ್ನು ತಲುಪಿಸುತ್ತಿರುವುದು ಶ್ಲಾಘನೀಯ' ಎಂದರು.
ಖ್ಯಾತ ಶೆಫ್ ಅಭಿಜಿತ್ ಸಹಾ ಅವರು ಮಾತನಾಡಿ, 'ದಕ್ಷಿಣ ಆಫ್ರಿಕಾದ ಸಿಟ್ರಸ್ ಹಣ್ಣುಗಳ ರುಚಿ, ಪೌಷ್ಟಿಕಾಂಶ ಮತ್ತು ಅವುಗಳನ್ನು ಭಾರತೀಯ ಅಡುಗೆಯಲ್ಲಿ ಹೇಗೆ ನವೀನವಾಗಿ ಬಳಸಬಹುದು ಎಂಬುದರ ಕುರಿತು ಮಾಹಿತಿ ನೀಡಿದರು. “ಆರೋಗ್ಯಕರ ಪದಾರ್ಥಗಳೇ ಉತ್ತಮ ಅಡುಗೆಯ ಜೀವಾಳ. ಫಲದ ಕೆಫೆಯು ಈ ಪರಿಕಲ್ಪನೆಯನ್ನು ಅತ್ಯುತ್ತಮವಾಗಿ ಜಾರಿಗೆ ತಂದಿದೆ' ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.
ಕಾರ್ಯಕ್ರಮಕ್ಕೆ ಮಾಲ್‌ಗೆ ಬಂದಿದ್ದ ಗ್ರಾಹಕರು ಮತ್ತು ಕ್ರಿಕೆಟ್ ಅಭಿಮಾನಿಗಳಿಂದ ಅಭೂತಪೂರ್ವ ಪ್ರತಿಕ್ರಿಯೆ ವ್ಯಕ್ತವಾಯಿತು. ದಿಢೀರ್ ಆಗಿ ತಮ್ಮ ನೆಚ್ಚಿನ ಕ್ರಿಕೆಟಿಗನನ್ನು ಕಂಡು ಅಭಿಮಾನಿಗಳು ಹರ್ಷಗೊಂಡರು. ಈ ಭೇಟಿಯು ನಮ್ಮ ಬ್ರಾಂಡ್‌ನ ಸಾವಯವ ಮತ್ತು ಆರೋಗ್ಯಕರ ಆಹಾರದ ಮೌಲ್ಯಗಳನ್ನು ಜನರಿಗೆ ತಲುಪಿಸಲು ಸಹಕಾರಿಯಾಗಿದೆ ಎಂದು ಫಲದ ಪ್ಯೂರ್ ಅಂಡ್ ಶ್ಯೂರ್ ಕೆಫೆಯ ವ್ಯವಸ್ಥಾಪಕರು ತಿಳಿಸಿದರು.